ರಜನಿಕಾಂತ್ 'ಕೂಲಿ' vs ಅಮಿತಾಬ್ 'ಕೂಲಿ': ನಾಲ್ಕು ದಶಕಗಳ ನಂತರವೂ ಕಾರ್ಮಿಕರ ಹೋರಾಟದ ಕಥೆ
ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಇಬ್ಬರೂ ಪರಸ್ಪರ ಗೌರವಿಸುವ ಕಲಾವಿದರು. ಅಮಿತಾಬ್ ಅವರ 'ಕೂಲಿ' ಬಿಡುಗಡೆಯಾದ ವರ್ಷವೇ, ಇಬ್ಬರೂ 'ಅಂಧಾ ಕಾನೂನ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.;
ಅಮಿತಾಭ್ ಬಚ್ಚನ್ ಹಾಗೂ ರಜನೀಕಾಂತ್
ಸೂಪರ್‌ಸ್ಟಾರ್ ರಜನಿಕಾಂತ್ ಹೊಸ ಸಿನಿಮಾ 'ಕೂಲಿ' (Kooli: The Powerhouse) ಚಿತ್ರ ಬಿಡುಗಡೆಗೆ ದಿನಾಂಕ ಘೋಷಣೆಯಾಗಿದೆ. ಇದು ಆಗಸ್ಟ್ 14 ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ. ಸಹಜವಾಗಿ ಈ ಸಿನಿಮಾದ ಹೆಸರು 1983ರಲ್ಲಿ ಬಿಡುಗಡೆಯಾದ ಅಮಿತಾಬ್ ಬಚ್ಚನ್ ಅವರ ಸೂಪರ್‌ಹಿಟ್ ಸಿನಿಮಾ 'ಕೂಲಿ'ಯನ್ನು ನೆನಪಿಸುತ್ತಿದೆ. ಈ ಎರಡೂ ಸಿನಿಮಾಗಳ ಶೀರ್ಷಿಕೆ ಒಂದೇ ಇದೆ. ರಜನಿಕಾಂತ್ ಅವರ ಕೂಲಿ ಚಿತ್ರದ ಕಥೆಯು ಅಮಿತಾಬ್ ಬಚ್ಚನ್ ಅವರ ಕೂಲಿಯ ನೆನಪುಗಳ ಕಿಟಕಿ ತೆರೆಯುವಂತಿದೆ.
ಅಮಿತಾಬ್ ಬಚ್ಚನ್ ಅವರ 'ಕೂಲಿ' ಸಿನಿಮಾ ಹೇಗಿತ್ತು?
1983ರಲ್ಲಿ ಬಿಡುಗಡೆಯಾದ ಅಮಿತಾಬ್ ಬಚ್ಚನ್ ಅವರ 'ಕೂಲಿ' ಸಿನಿಮಾವು ನಿರ್ದೇಶಕ ಮನಮೋಹನ್ ದೇಸಾಯಿ ಜನಪ್ರಿಯ ಸಿನಿಮಾಗಳಲ್ಲಿ ಒಂದು. ರೈಲ್ವೆ ನಿಲ್ದಾಣಗಳಲ್ಲಿ ಕೆಂಪು ಸಮವಸ್ತ್ರ ಧರಿಸಿ, ಭಾರವಾದ ಲಗೇಜ್ ಹೊತ್ತು ಓಡಾಡುವ ಕೂಲಿಗಳ ಕಥೆಯನ್ನು ಈ ಚಿತ್ರ ಹೇಳುತ್ತದೆ.
ಈ ಸಿನಿಮಾದಲ್ಲಿ ಅಮಿತಾಬ್ ಅವರ "ಸಾರಿ ದುನಿಯಾ ಕಾ ಬೋಜ್ ಹಮ್ ಉಠಾ ಹೈ..." ಹಾಡು ದೇಶಾದ್ಯಂತ ಕೂಲಿಗಳ ಗೀತೆಯಾಗಿತ್ತು. ಈ ಚಿತ್ರದ ಯಶಸ್ಸು ಕೇವಲ ಮನರಂಜನೆಗೆ ಸೀಮಿತವಾಗಿರದೇ, ರೈಲ್ವೆ ಕೂಲಿಗಳ ಗೌರವ ಮತ್ತು ಸ್ವಾಭಿಮಾನ ಹೆಚ್ಚಿಸಿತು. ಈ ಚಿತ್ರೀಕರಣದ ಸಮಯದಲ್ಲಿ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದು, ಅವರ ಚೇತರಿಕೆಗಾಗಿ ದೇಶಾದ್ಯಂತ ಜನರು ಪ್ರಾರ್ಥಿಸಿದ್ದರು.
ರಜನಿಕಾಂತ್ ಅವರ 'ಕೂಲಿʼ ಕಥೆಯೇನು?
ಇದೀಗ ಬಿಡುಗಡೆಗೆ ಸಿದ್ದಗೊಂಡಿರುವ ರಜನಿಕಾಂತ್ ಅವರ 'ಕೂಲಿ' ಸಿನಿಮಾವು ಅದೇ ರೀತಿಯ ಕಥೆಯನ್ನು ಹೊಸ ಹಿನ್ನೆಲೆಯಲ್ಲಿ ಹೇಳಲು ಹೊರಟಿದೆ. ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್, ಅಮಿತಾಬ್ ಅವರ ಚಿತ್ರದ ಮೂಲ ಕಥೆಯಾದ ಕಾರ್ಮಿಕರ ಶೋಷಣೆಯನ್ನೇ ಆಧರಿಸಿ ಅದನ್ನು ಆಧುನಿಕ ಸಂದರ್ಭಕ್ಕೆ ತಕ್ಕಂತೆ ಹೆಣೆದಿದ್ದಾರೆ.
ರಜನಿಕಾಂತ್ ಈ ಚಿತ್ರದಲ್ಲಿ 'ದೇವ' ಎಂಬ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರು ಬಂದರಿನಲ್ಲಿ ಕೆಲಸ ಮಾಡುವ 14,400 ಕೂಲಿಗಳ ರಕ್ಷಕನಾಗಿದ್ದು, ಅವರ ಮೇಲಾಗುವ ಅನ್ಯಾಯದ ವಿರುದ್ಧ ಹೋರಾಡುತ್ತಾರೆ. ಈ ಚಿತ್ರವು ರಜನಿಕಾಂತ್ ಅವರ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ.
1983ರಲ್ಲಿ 25 ಪೈಸೆ ನಾಣ್ಯ, ಪೋಸ್ಟ್‌ಕಾರ್ಡ್‌ಗಳು, ಟೆಲಿಗ್ರಾಮ್‌ಗಳು ಬಳಕೆಯಲ್ಲಿದ್ದವು. ಈಗ ನಾವು 4G ಮತ್ತು 5G ಯುಗದಲ್ಲಿದ್ದೇವೆ. ಆದರೆ ಆ ಕಾಲದ ಕೂಲಿಯ ಕಥೆಯು ಶೋಷಣೆಯ ವಿರುದ್ಧ ಧ್ವನಿ ಎತ್ತಿದರೆ, ಇಂದಿನ ಕೂಲಿಯ ಕಥೆಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರಜ್ಞೆಯ ಕುರಿತು ಮಾತನಾಡುತ್ತದೆ. ನಾಲ್ಕು ದಶಕಗಳ ನಂತರವೂ ಕಾರ್ಮಿಕರ ಮೇಲಾಗುವ ಅನ್ಯಾಯ ಮುಂದುವರಿದಿವೆ ಎಂಬುದನ್ನು ಈ ಸಿನಿಮಾ ತೋರಿಸಲು ಹೊರಟಿದೆ.
ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಇಬ್ಬರೂ ಪರಸ್ಪರ ಗೌರವಿಸುವ ಕಲಾವಿದರು. ಅಮಿತಾಬ್ ಅವರ 'ಕೂಲಿ' ಬಿಡುಗಡೆಯಾದ ವರ್ಷವೇ, ಇಬ್ಬರೂ 'ಅಂಧಾ ಕಾನೂನ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈಗ ಮತ್ತೊಮ್ಮೆ ಇಬ್ಬರೂ ಒಂದೇ ರೀತಿಯ ಕಥಾ ಹಂದರ ಹೊಂದಿರುವ ಚಿತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನಟಿಸುತ್ತಿರುವುದು ಅಭಿಮಾನಿಗಳಿಗೆ ರೋಚಕ ಅನುಭವ ನೀಡಿದೆ.
'ಕೂಲಿ: ದಿ ಪವರ್‌ಹೌಸ್' ಸಿನಿಮಾ 'ವಾರ್ -2' ಚಿತ್ರದ ಜೊತೆ ಬಾಕ್ಸ್ ಆಫೀಸ್‌ನಲ್ಲಿ ಸ್ಪರ್ಧೆಗೆ ಇಳಿಯಲಿದೆ. 'ವಾರ್ -2' ಉತ್ತರ ಮತ್ತು ದಕ್ಷಿಣದ ಕಲಾವಿದರನ್ನು ಒಳಗೊಂಡಿರುವಂತೆಯೇ, 'ಕೂಲಿ' ಸಹ ಇಡೀ ಭಾರತದ ಅಭಿಮಾನಿಗಳನ್ನು ಸೆಳೆಯುವ ಸಾಮರ್ಥ್ಯ ಹೊಂದಿದೆ.
1983ರ ಇಕ್ಬಾಲ್ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಕಾರ್ಮಿಕರ ಹೋರಾಟಕ್ಕೆ ಸಾಕ್ಷಿಯಾದರೆ, ಇಂದಿನ 'ಕೂಲಿ' ಚಿತ್ರದಲ್ಲಿ ರಜನಿಕಾಂತ್ ಅವರ 'ದೇವ' ಪಾತ್ರವು ಇಂದಿನ ಸಮಾಜದಲ್ಲಿನ ಶೋಷಣೆ ವಿರುದ್ಧ ಹೇಗೆ ಹೋರಾಡುತ್ತದೆ ಎಂಬುದನ್ನು ನೋಡಲು ಸಿನಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.