ಶೇ. 3ಕ್ಕೆ ಕುಸಿದ ಗೆಲುವಿನ ಪ್ರಮಾಣ; ಏನಾಗುತ್ತಿದೆ ಕನ್ನಡ ಚಿತ್ರರಂಗಕ್ಕೆ?
ಈ ಬಾರಿ ಕನ್ನಡ ಚಿತ್ರರಂಗದಲ್ಲಿ ಗೆಲುವಿನ ಪ್ರಮಾಣ ಸಾಕಷ್ಟು ಕುಸಿದಿದ್ದು, ಬಿಡುಗಡೆಯಾದ 190 ಚಿತ್ರಗಳ ಪೈಕಿ ಶೇ.3ರಷ್ಟು ಯಶಸ್ಸು ಕಂಡಿವೆ. ಮುಂದಿನ ವರ್ಷ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ.
ಅನಾದಿ ಕಾಲದಿಂದಲೂ ಚಿತ್ರರಂಗದಲ್ಲಿ (ಬರೀ ಕನ್ನಡವಷ್ಟೇ ಅಲ್ಲ, ಜಾಗತಿಕವಾಗಿ) ಒಂದು ನಂಬಿಕೆ ಇದೆ. ವರ್ಷಕ್ಕೆ ಅದೆಷ್ಟೇ ಚಿತ್ರಗಳು ಬಿಡುಗಡೆಯಾದರೂ, ಅದರಲ್ಲಿ ಗೆಲುವಿನ ಪ್ರಮಾಣ ಶೇ.10ರಿಂದ ಮಾತ್ರ. ಮಿಕ್ಕಂತೆ, ಮೇಲ್ನೋಟಕ್ಕೆ ಕೆಲವು ಚಿತ್ರಗಳು ಗೆದ್ದಿವೆ ಎಂದು ಬಿಂಬಿಸಲಾಗುತ್ತದಾದರೂ, ಅವು ನಿಜವಾಗಿಯೂ ನಿರೀಕ್ಷಿತ ಹಣ ಮಾಡಿರುವುದಿಲ್ಲ. ಹಾಗಾಗಿ, ಎಷ್ಟೇ ಚಿತ್ರಗಳು ಬಿಡುಗಡೆಯಾದರೂ ಒಂದಿಷ್ಟು ಚಿತ್ರಗಳು ಮಾತ್ರ ಲಾಭ ಮಾಡುತ್ತವೆ. ಇನ್ನೊಂದಿಷ್ಟು ಚಿತ್ರಗಳು ಹಾಕಿದ ದುಡ್ಡು ಮರಳಿ ಪಡೆಯುತ್ತವೆ. ಮಿಕ್ಕ ಚಿತ್ರಗಳು ನಷ್ಟ ಅನುಭವಿಸುತ್ತವೆ. ಇದೊಂದು ಸಹಜ ಪ್ರಕ್ರಿಯೆ. ಕನ್ನಡದಲ್ಲಿ ಇತ್ತೀಚಿನ ವರ್ಷಗಳವರೆಗೂ ಗೆಲುವಿನ ಪ್ರಮಾಣ ಶೇ. 10ರಷ್ಟು ಇತ್ತು. ಆದರೆ, ಈ ಬಾರಿ ಕನ್ನಡ ಚಿತ್ರರಂಗದಲ್ಲಿ ಗೆಲುವಿನ ಪ್ರಮಾಣ ಸಾಕಷ್ಟು ಕುಸಿದಿದ್ದು, ಬಿಡುಗಡೆಯಾದ 190 ಚಿತ್ರಗಳ ಪೈಕಿ ಶೇ.3ರಷ್ಟು ಯಶಸ್ಸು ಕಂಡಿವೆ.
ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರವು ಅಕ್ಟೋಬರ್ 31ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಚಿತ್ರ ಜನರ ಮನಸ್ಸು ಗೆದ್ದಿದೆ ಎಂದು ಚಿತ್ರತಂಡ ಸಂಭ್ರಮಿಸುತ್ತಿದೆ. ಆದರೆ, ಈ ಚಿತ್ರದ ಗಳಿಕೆ ಎಷ್ಟು? ಎಂಬುದರ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಳ್ಳುವುದಿಲ್ಲ. ಬಾಕ್ಸ್ಆಫೀಸ್ ಟ್ರಾಕರ್ ಸಕ್ನಿಕ್.ಕಾಮ್ ಪ್ರಕಾರ ಚಿತ್ರವು ಭಾನುವಾರದವರೆಗೂ 19.3 ಕೋಟಿ ರೂ. ಸಂಗ್ರಹಿಸಿದೆ (ಕನ್ನಡ ಮತ್ತು ತೆಲುಗು ಸೇರಿ). ಈ ಪೈಕಿ ಚಿತ್ರಮಂದಿರದ ಬಾಡಿಗೆ, ಶೇಕಡಾವಾರು ಪದ್ಧತಿ ಎಂದು ಕಳೆದರೆ ನಿರ್ಮಾಕರಿಗೆ 10 ಕೋಟಿ ಶೇರ್ ಸಿಗಬಹುದು.
ಹಾಗೆ ನೋಡಿದರೆ, ಇದು ದೊಡ್ಡ ಲಾಭವೇನಲ್ಲ. ಮೂಲಗಳ ಪ್ರಕಾರ, ಚಿತ್ರದ ಬಜೆಟ್ 20 ಕೋಟಿ ರೂ.ಗಳಿಗೂ ಹೆಚ್ಚಾಗಿದೆ. ಹಾಕಿದ ಬಂಡವಾಳದಲ್ಲಿ ಚಿತ್ರಮಂದಿರಗಳಿಂದ ಅರ್ಧ ಮಾತ್ರ ಬಂದಿದೆ. ಹಾಗಿರುವಾಗ, ಲಾಭ ಹೇಗಾಯಿತು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಚಿತ್ರದ ಡಿಜಿಟಲ್ ಹಕ್ಕುಗಳು ನೆಟ್‌ಫ್ಲಿಕ್ಸ್ ಓಟಿಟಿಗೆ ಮಾರಾಟವಾಗಿದೆ. ಸ್ಯಾಟಲೈಟ್ ಹಕ್ಕುಗಳೂ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿರುವ ನಿರೀಕ್ಷೆ ಇದೆ. ಹಾಗಾಗಿ, ಚಿತ್ರಮಂದಿರ ಮತ್ತು ಬೇರೆ ಹಕ್ಕುಗಳಿಂದ ಸೇರಿ ನಿರ್ಮಾಪಕರಿಗೆ ಐದರಿಂದ 10 ಕೋಟಿ ರೂ. ಲಾಭ ಬರಬಹುದು ಎಂದು ಹೇಳಲಾಗುತ್ತಿದೆ.
190 ಚಿತ್ರಗಳಲ್ಲಿ ಬೆರಳಣಿಕೆಯಷ್ಟು ಗೆಲುವು
ಬೇರೆ ಭಾಷೆಯ ಚಿತ್ರರಂಗಗಳಲ್ಲಿ ಆಗುತ್ತಿರುವ ವ್ಯಾಪಾರ ಮತ್ತು ಲಾಭ ನೋಡಿದರೆ, ಇದು ಕಡಿಮೆಯೇ. ಆದರೆ, ಈ ಹೊತ್ತಿಗೆ ಇದೇ ದೊಡ್ಡ ವಿಷಯ ಎಂದರೆ ತಪ್ಪಿಲ್ಲ. ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಇಲ್ಲಿಯವರೆಗೂ 190 ಚಿತ್ರಗಳು ಬಿಡುಗಡೆಯಾಗಿವೆ. ಇದರಲ್ಲಿ ಲಾಭ ಮಾಡಿದ ಚಿತ್ರಗಳೆಂದರೆ, ಬೆರಳಣಿಕೆ ಮಾತ್ರ. ‘ಉಪಾಧ್ಯಕ್ಷ’, ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’ ಮತ್ತು ‘ಬಘೀರ’ ಚಿತ್ರಗಳೂ ಚಿತ್ರಮಂದಿರಗಳಲ್ಲಿ ಒಂದಿಷ್ಟು ಹಣ ನೋಡಿವೆ. ಹಾಗಂತ ಈ ಚಿತ್ರಗಳಿಗೆ ಚಿತ್ರಮಂದಿರಗಳಿಂದಲೇ ದೊಡ್ಡ ಲಾಭ ಬಂದಿದೆ ಎಂದರ್ಥವಲ್ಲ. ಚಿತ್ರಮಂದಿಗಳ ಜೊತೆಗೆ ಬೇರೆ ಹಕ್ಕುಗಳಿಂದಲೂ ಹಣ ಬಂದಿರುವುದರಿಂದ ಈ ಚಿತ್ರಗಳು ಗೆದ್ದಿವೆ. ಇದಲ್ಲದೆ ಇನ್ನೂ ಎರಡು ಚಿತ್ರಗಳು ಚಿತ್ರಮಂದಿರಗಳಲ್ಲಿ ಸೋತರೂ, ಬೇರೆ ಹಕ್ಕುಗಳಿಂದ ಹಾಕಿದ ದುಡ್ಡನ್ನು ಪಡೆದುಕೊಂಡಿವೆ ಎಂದು ಹೇಳಲಾಗುತ್ತಿವೆ. ಎಷ್ಟೇ ಲೆಕ್ಕ ಹಾಕಿದರೂ, ಬಿಡುಗಡೆಯಾದ 190 ಚಿತ್ರಗಳಲ್ಲಿ ಆರು ಚಿತ್ರಗಳು ಮಾತ್ರ ಈ ವರ್ಷ ಸೇಫ್ ಆಗಿದೆ ಎಂಬುದು ಗಾಂಧಿನಗರದ ಲೆಕ್ಕಾಚಾರ. ಏನೇ ಗುಣಾಕಾರ ಭಾಗಾಕಾರ ಮಾಡಿದರೂ, ಗೆಲುವಿನ ಪ್ರಮಾಣ ಶೇ. 3ಕ್ಕೆ ಬಂದು ನಿಲ್ಲುತ್ತದೆ.
ಇವಿಷ್ಟೇ ಅಲ್ಲದೆ ಇನ್ನೊಂದಿಷ್ಟು ಚಿತ್ರಗಳು ಸಹ ಈ ವರ್ಷ ಸುದ್ದಿಯಲ್ಲಿದ್ದವು. ಆದರೆ, ಲಾಭ ನೋಡುವುದಕ್ಕೆ ಸಾಧ್ಯವಾಗಲಿಲ್ಲ. ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ಬ್ಲಿಂಕ್’ ಚಿತ್ರವು ಚಿತ್ರಮಂದಿರಗಳಲ್ಲಿ 50 ದಿನ ಪ್ರದರ್ಶನ ಕಂಡಿತ್ತು. ಆದರೆ, 50 ದಿನಗಳಲ್ಲಿ ಚಿತ್ರಮಂದಿರಗಳಿಂದ ಚಿತ್ರ ಎಷ್ಟು ದುಡಿದಿದೆ ಎಂಬ ಪ್ರಶ್ನೆಯನ್ನು ನಿರ್ಮಾಪಕ ರವಿಚಂದ್ರ ಅವರ ಎದುರು 50ನೇ ದಿನದ ಸಮಾರಂಭದಲ್ಲಿ ಇಟ್ಟಾಗ, 88 ಲಕ್ಷ ರೂ ಎಂದು ಅವರು ಉತ್ತರಿಸಿದ್ದರು. ಇದರಲ್ಲಿ ಚಿತ್ರಮಂದಿರದ ಶೇರ್ ಕಳೆದು 35ರಿಂದ 40 ಲಕ್ಷ ಸಿಗಬಹುದು ಅಷ್ಟೇ. ಇದಲ್ಲದೆ, ‘ಶಾಖಾಹಾರಿ’, ‘ಕೆರೆಬೇಟೆ’ ಸೇರಿದಂತೆ ಒಂದಿಷ್ಟು ಚಿತ್ರಗಳು ಜನರಿಂದ ಮೆಚ್ಚುಗೆ ಪಡೆದವಾದರೂ, ಲಾಭ ಮಾಡಲಿಲ್ಲ. ಲಾಭವಿರಲಿ, ಈ ಪೈಕಿ ಕೆಲವು ಚಿತ್ರಗಳು ಹಾಕಿದ ದುಡ್ಡನ್ನೂ ವಾಪಸು ಮರಳಿ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಕೆಲವು ಚಿತ್ರತಂಡಗಳು ತಮ್ಮ ಚಿತ್ರಗಳು 25, 50 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿವೆ ಎಂದು ಹೇಳಿಕೊಂಡರೂ, ಒಟ್ಟಾರೆ ಚಿತ್ರದ ಗಳಿಕೆಯ ಮಾಹಿತಿ ಕೊಡಲಿಲ್ಲ. ಏಕೆಂದರೆ, ಚಿತ್ರ ಕೆಲವು ಚಿತ್ರಮಂದಿರಗಳಲ್ಲಿ 25, 50 ದಿನ ಪ್ರದರ್ಶನ ಕಂಡರೂ, ಒಟ್ಟಾರೆ ಗಳಿಕೆ ಅಷ್ಟಕ್ಕಷ್ಟೇ ಆಗಿದ್ದವು.
ಗೆದ್ದವೆಲ್ಲ ಸ್ಟಾರ್ ಚಿತ್ರಗಳೇ
ಇಲ್ಲೊಂದು ವಿಷಯವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಈ ವರ್ಷ ಲಾಭ ಮಾಡಿರುವ ಅಥವಾ ಹಾಕಿದ ಬಂಡವಾಳವನ್ನು ವಾಪಸ್ಸು ಪಡೆದಿರುವ ಚಿತ್ರಗಳೆಲ್ಲವೂ ಸ್ಟಾರ್ ಅಥವಾ ಜನಪ್ರಿಯ ನಟರ ಚಿತ್ರಗಳೇ. ಮಿಕ್ಕಂತೆ ಹೊಸಬರ ಚಿತ್ರಗಳು ಗಮನಸೆಳೆದಿರಬಹುದು, ಗಳಿಕೆ ಮಾಡಿಲ್ಲ ಎನ್ನುವುದು ಸತ್ಯ. ಹಾಗೆ ನೋಡಿದರೆ, ಈ ವರ್ಷ ಹೆಚ್ಚು ಸ್ಟಾರ್ ಚಿತ್ರಗಳು ಬಿಡುಗಡೆಯಾಗಿಲ್ಲ. ಶಿವರಾಜಕುಮಾರ್, ‘ದುನಿಯಾ’ ವಿಜಯ್, ಗಣೇಶ್, ಶ್ರೀಮುರಳಿ, ವಿಜಯ್ ರಾಘವೇಂದ್ರ, ಶರಣ್, ದಿಗಂತ್ ಸೇರಿದಂತೆ ಕೆಲವರ ಚಿತ್ರಗಳು ಮಾತ್ರ ಬಿಡುಗಡೆಯಾಗಿವೆ. ಈ ಪೈಕಿ ‘ದುನಿಯಾ’ ವಿಜಯ್, ಗಣೇಶ್ ಮತ್ತು ಶ್ರೀಮುರಳಿ ಮಾತ್ರ ಗೆದ್ದಿದ್ದಾರೆ. ಮಿಕ್ಕವರು ಗೆಲುವು ನೋಡುವುದಕ್ಕೆ ಸಾಧ್ಯವಾಗಿಲ್ಲ. ಇನ್ನು, ಈ ವರ್ಷ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’ ಮತ್ತು ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ’ಯು/ಐ’ ಚಿತ್ರಗಳು ಬಿಡುಗಡೆಯಾಗಲಿಕ್ಕಿವೆ. ಆ ಚಿತ್ರಗಳೂ ಒಂದು ಮಟ್ಟಕ್ಕೆ ಹಣ ಮಾಡುವುದು ನಿಶ್ಚಿತ. ಮಿಕ್ಕಂತೆ ಬಿಡುಗಡೆಯಾಗಿದ್ದೇ ಹೊಸಬರ ಚಿತ್ರಗಳು. ಈ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಶೇ. 90ರಷ್ಟು ಹೊಸಬರ ಚಿತ್ರಗಳೂ ಬಿಡುಗಡೆಯಾಗಿವೆ. ಈ ಚಿತ್ರಗಳು ಚಿತ್ರಮಂದಿರಗಳಲ್ಲೂ ಓಡಲಿಲ್ಲ. ಓಟಿಟಿ ಮತ್ತು ಟಿವಿ ಚಾನಲ್ಗಳಿಗೂ ಮಾರಾಟವಾಗಲಿಲ್ಲ. ಒಟ್ಟಾರೆ, ಈ ಚಿತ್ರಗಳಿಂದ ನಿರ್ಮಾಪಕರಿಗೆ ಹಾಕಿದ ಬಂಡವಾಳವೂ ವಾಪಸ್ಸಾಗಲಿಲ್ಲ.
ಇಲ್ಲಿ, ಬೇರೆ ಚಿತ್ರಗಳ ಸೋಲು ಒಂದು ತೂಕದ್ದಾದರೆ, ‘ಮಾರ್ಟಿನ್’ ಸೋಲು ಮತ್ತು ನಷ್ಟವೇ ಇನ್ನೊಂದು ತೂಕ ಎನ್ನುತ್ತದೆ ಚಿತ್ರರಂಗ. ಚಿತ್ರರಂಗವೆಂದರೆ, ಸೋಲು-ಗೆಲುವು, ಲಾಭ-ನಷ್ಟ ಸಹಜ. ಆದರೆ, ‘ಮಾರ್ಟಿನ್’ ಚಿತ್ರದ ಸೋಲು ಮತ್ತು ನಷ್ಟ ಮಾತ್ರ ಕನ್ನಡ ಚಿತ್ರರಂಗದಲ್ಲಿ ದಾಖಲೆಯಾಗಿ ಉಳಿಯಲಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ, ‘ಮಾರ್ಟಿನ್’ ಚಿತ್ರತಂಡದವರೇ ಹೇಳಿಕೊಂಡಂತೆ, ಅದು ಕನ್ನಡ ಚಿತ್ರರಂಗದ ಅತ್ಯಂತ ದುಬಾರಿ ಬಜೆಟ್ನ ಚಿತ್ರ. ಚಿತ್ರಕ್ಕೆ 240 ದಿನಗಳ ಚಿತ್ರೀಕರಣ ಮಾಡಲಾಗಿತ್ತು. ಬಜೆಟ್ 80ರಿಂದ 100 ಕೋಟಿಯಷ್ಟಾಗಿತ್ತು. ಆದರೆ, ಚಿತ್ರಮಂದಿರಗಳಿಂದ 20 ಕೋಟಿ ರೂ ಗಳಿಕೆ ಸಹ ಸರಿಯಾಗಿ ಆಗಲಿಲ್ಲ ಎಂದು ಹೇಳಲಾಗುತ್ತಿದೆ. ಇದೆಲ್ಲದರಿಂದ ಸ್ಪಷ್ಟವಾಗುವ ಒಂದು ವಿಷಯವೆಂದರೆ, ಬರೀ ಸ್ಟಾರ್ ಚಿತ್ರಗಳೆಂದ ಮಾತ್ರಕ್ಕೆ ಗೆಲ್ಲುವುದಿಲ್ಲ. ಚಿತ್ರ ನಿಜಕ್ಕೂ ಇಷ್ಟವಾದರೆ ಮಾತ್ರ ಗೆಲ್ಲಿಸುತ್ತೇವೆ, ಮಿಕ್ಕಂತೆ ಯಾವುದೇ ಗಿಮಿಕ್‌ಗಳು ನಡೆಯುವುದಿಲ್ಲ ಎಂಬ ವಿಷಯವನ್ನು ಪ್ರೇಕ್ಷಕರು ಈ ವರ್ಷ ಸ್ಪಷ್ಟವಾಗಿ ರವಾನಿಸಿದ್ದಾರೆ.
ಮುಂದಿನ ವರ್ಷ ಇನ್ನೂ ಚಿಂತಾಜನಕ
ಇದು ಈ ವರ್ಷದ ಕಥೆಯಾದರೆ, ಮುಂದಿನ ವರ್ಷ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಏಕೆಂದರೆ, ಈ ವರ್ಷವಾದರೂ ಒಂದಿಷ್ಟು ಜನಪ್ರಿಯ ನಟರ ಚಿತ್ರಗಳು ಬಿಡುಗಡೆಯಾಗಿವೆ. ಮುಂದಿನ ವರ್ಷ ಆ ಪ್ರಮಾಣ ಇನ್ನೂ ಗಣನೀಯವಾಗಿ ಕಡಿಮೆಯಾಗಲಿವೆ. ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಶೆಟ್ಟಿ ಅಭಿನಯದ ‘45’, ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’, ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್’ ಮುಂತಾದ ಬೆರಳಣಿಕೆಯಷ್ಟು ಚಿತ್ರಗಳನ್ನು ಹೊರತುಪಡಿಸಿದರೆ, ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವಂತಹ ಚಿತ್ರಗಳು ಇಲ್ಲ. ಇನ್ನೊಂದು ಕಡೆ ಹೊಸಬರ ಸಾಕಷ್ಟು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದರೂ, ಆ ಚಿತ್ರಗಳನ್ನು ಕೇಳುವವರಿಲ್ಲ. ಹಾಗಿರುವಾಗ ಮುಂದೇನು? ಎಂಬ ಪ್ರಶ್ನೆ ಚಿತ್ರರಂಗವನ್ನು ಕಾಡುತ್ತಿದೆ.
ಪ್ರಮುಖವಾಗಿ, ಇದರಿಂದ ಚಿತ್ರಮಂದಿರಗಳಿಗೆ ದೊಡ್ಡ ಏಟು ಬೀಳಲಿದೆ. ಈಗಲೇ ಜನ ಚಿತ್ರಮಂದಿರಗಳಿಗೆ ಬರದೆ, ಹಲವು ಚಿತ್ರಮಂದಿರಗಳು ಮುಚ್ಚಲ್ಪಟ್ಟಿವೆ. ಆಗಾಗ ಸ್ಟಾರ್ ಚಿತ್ರಗಳು ಬಿಡುಗಡೆಯಾಗುವುದರಿಂದ ಮಿಕ್ಕ ಏಕಪರದೆಯ ಚಿತ್ರಮಂದಿರಗಳು ಬಿಟ್ಟುಬಿಟ್ಟು ಉಸಿರಾಡುತ್ತಿವೆ. ಈಗ ಪ್ರೇಕ್ಷಕರನ್ನು ಸೆಳೆಯುವಂತಹ ಚಿತ್ರಗಳೇ ಕಡಿಮೆಯಾದರೆ, ಮುಂದಿನ ವರ್ಷ ಇನ್ನಷ್ಟು ಚಿತ್ರಮಂದಿರಗಳು ನೆನಪಿನ ಪುಟಗಳಿಗೆ ಸೇರಿದರೆ ಆಶ್ಚರ್ಯವಿಲ್ಲ. ಇದೆಲ್ಲದರಿಂದ ಹೊರಬರುವುದಕ್ಕೆ ಚಿತ್ರರಂಗ ಒಗ್ಗಟ್ಟಾಗಬೇಕು. ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವತ್ತ ಹೆಜ್ಜೆ ಇಡಬೇಕು. ಇಲ್ಲವಾದರೆ, ಮುಂದಿನ ವರ್ಷ ಗೆಲುವಿನ ಪ್ರಮಾಣ ಇನ್ನಷ್ಟು ಕುಸಿದರೆ ಆಶ್ಚರ್ಯವಿಲ್ಲ.