ಕಿಚ್ಚ ಸುದೀಪ್ ಭಾಮೈದನ ಮಗ ಸಂಚಿತ್ ಸಂಜೀವ್‌'ಮ್ಯಾಂಗೋ ಪಚ್ಚ' ಹಾಡು ಬಿಡುಗಡೆ

ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಸಂಕ್ರಾಂತಿಗೆ ತೆರೆಗೆ ಬರಲು ಸಜ್ಜಾಗಿದೆ.

Update: 2025-11-26 10:52 GMT

'ಮ್ಯಾಂಗೋ ಪಚ್ಚʼ ಸಿನಿಮಾದ ಹಾಡು ಬಿಡುಗಡೆಯಾಗಿದೆ. 

ನಟ ಕಿಚ್ಚ ಸುದೀಪ್‌ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಅಕ್ಕನ ಮಗ ಸಂಚಿತ್ ಸಂಜೀವ್ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದರು. ಇದೀಗ ಸಂಚಿತ್ ನಾಯಕನಾಗಿ ನಟಿಸಿರುವ ಚೊಚ್ಚಲ ಚಿತ್ರ 'ಮ್ಯಾಂಗೋ ಪಚ್ಚ' ಬಿಡುಗಡೆಯ ಸನಿಹದಲ್ಲಿದ್ದು, ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದೆ.

ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಸಂಕ್ರಾಂತಿಗೆ  ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಮೊದಲ ಹಾಡು 'ಹಸ್ರವ್ವ' ಇಂದು ಸರಿಗಮ ಯೂಟ್ಯೂಬ್ ಚಾನೆಲ್‌ನಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದೆ.

'ಹಸ್ರವ್ವ' ಶೀರ್ಷಿಕೆಯ ಈ ಹಾಡಿಗೆ ವಿವೇಕ್ ಮತ್ತು ಶರತ್ ವಸಿಷ್ಠ ಅವರು ಸಾಹಿತ್ಯ ಒದಗಿಸಿದ್ದಾರೆ. ಚರಣ್ ರಾಜ್ ಅವರು ಸಂಗೀತ ಸಂಯೋಜಿಸುವುದರ ಜೊತೆಗೆ ಮೋಹನ್ ಕುಮಾರ್ ಅವರೊಂದಿಗೆ ಧ್ವನಿಯಾಗಿದ್ದಾರೆ. ಚರಣ್ ಅವರ ಬಿಜಿಎಂ ಹಾಡಿನ‌ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ.

Full View

 ಮೈಸೂರಿನ ನೈಜ ಘಟನೆ ಆಧರಿತ ಸಿನಿಮಾ

ನಿರ್ದೇಶಕ ವಿವೇಕ್ ಅವರು ಈ ಚಿತ್ರವನ್ನು ಮೈಸೂರಿನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಟ್ಟಿಕೊಟ್ಟಿದ್ದಾರೆ. 'ಮ್ಯಾಂಗೋ ಪಚ್ಚ' ವಿವೇಕ್ ಅವರ ಪೂರ್ಣ ಪ್ರಮಾಣದ ಮೊದಲ ನಿರ್ದೇಶನದ ಚಿತ್ರವಾಗಿದೆ. ಈ ಹಿಂದೆ ಅವರು ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರು ಮೂಲದವರೇ ಆದ ವಿವೇಕ್ ಅವರು 2001ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ.

ಸಂಚಿತ್ ಅವರ ಮೊದಲ ಚಿತ್ರಕ್ಕೆ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಜೊತೆಗೆ ಮಯೂರ್‌ ಪಟೇಲ್‌, ಭಾವನಾ, ಹಂಸ, ಹರಿಣಿ ಶ್ರೀಕಾಂತ್‌, ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್‌, ಪ್ರಶಾಂತ್‌ ಹಿರೇಮಠ್‌ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

ಸರಿಗಮ ಪಾಲಾದ ಆಡಿಯೋ ಹಕ್ಕುಗಳು

ಚಿತ್ರದ ಮೂಲಗಳ ಪ್ರಕಾರ, ಪ್ರಸಿದ್ಧ ಆಡಿಯೋ ಸಂಸ್ಥೆ ಸರಿಗಮ ಒಂದು ಕೋಟಿ ರೂ.ಗೂ ಅಧಿಕ ಮೊತ್ತ ನೀಡಿ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ.

ಈ ಕುರಿತು ಸಂತಸ ಹಂಚಿಕೊಂಡಿದ್ದ ನಿರ್ಮಾಪಕಿ ಪ್ರಿಯಾ ಸುದೀಪ್ "ಸರಿಗಮ ಸಂಸ್ಥೆ 'ಮ್ಯಾಂಗೋ ಪಚ್ಚ' ಆಡಿಯೋ ಹಕ್ಕುಗಳನ್ನು ಖರೀದಿಸಿರುವುದು ನಮಗೆ ಸಂತಸ ತಂದಿದೆ. ಚರಣ್ ರಾಜ್ ಅವರು ಸಂಯೋಜಿಸಿದ ಸಂಗೀತ ಖಂಡಿತವಾಗಿ ಪ್ರೇಕ್ಷಕರನ್ನು ತಲುಪುತ್ತದೆ ಎಂಬ ವಿಶ್ವಾಸವಿದೆ. ಅವರ ಸಂಗೀತದ ಸಾಮರ್ಥ್ಯದ ಮೇಲೆ‌‌ ನಮಗೆ ನಂಬಿಕೆಯಿದೆ. ಹಾಡುಗಳನ್ನು ಕೇಳಲು ನಾವು ಉತ್ಸುಕರಾಗಿದ್ದೇವೆ" ಎಂದು ತಿಳಿಸಿದ್ದರು.

ಈಗಾಗಲೇ ಚಿತ್ರೀಕರಣ ಮುಗಿಸಿರುವ 'ಮ್ಯಾಂಗೋ ಪಚ್ಚ' ಚಿತ್ರಮಂದಿರಕ್ಕೆ ಪ್ರವೇಶಿಸಲು ಸಿದ್ಧತೆ ನಡೆಸಿದ್ದು, ಕೆಆರ್‌ಜಿ ಪ್ರೊಡಕ್ಷನ್ಸ್ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.

Tags:    

Similar News