ಕನ್ನಡ ಸಿನಿಮಾ ಪುಕ್ಕಟೆ ತೋರಿಸಿದ್ದಾಯ್ತು! ಆದರೂ ಜನ ಬರ್ತಿಲ್ಲ... ಏನ್ಮಾಡೋದು?
ಹೇಗಿದ್ದರೂ ಬಾಡಿಗೆ ಕಟ್ಟಿರುತ್ತೇವೆ, ಚಿತ್ರಮಂದಿಗಳು ಖಾಲಿ ಹೊಡೆಯುವ ಬದಲು ಜನರಾದರೂ ನೋಡಲಿ ಎನ್ನುವ ಕಾರಣಕ್ಕೆ ಉಚಿತವಾಗಿಯೇ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಆದರೂ, ಜನ ಬರುತ್ತಿಲ್ಲ!;
ಸಿನಿಮಾ ಪುಕ್ಕಟೆ ತೋರಿಸ್ತೀನಿ ಎಂದರೂ ಜನ ಬರ್ತಿಲ್ಲ ಯಾಕೆ?
ಇತ್ತೀಚಿನ ದಿನಗಳಲ್ಲಿ ಜನ ಯಾಕೆ ಚಿತ್ರಮಂದಿರಗಳಿಗೆ ಬರುತ್ತಿಲ್ಲ? ಎಂಬ ಪ್ರಶ್ನೆಗೆ, ಹಲವು ಕಾರಣಗಳನ್ನು ನೀಡಲಾಗುತ್ತದೆ. ಈ ಪೈಕಿ ದುಬಾರಿ ಟಿಕೆಟ್ ಬೆಲೆ ಎಂಬದೂ ಒಂದು. ಇವತ್ತು ಚಿತ್ರವೀಕ್ಷಣೆ ದುಬಾರಿಯಾಗಿದೆ, ನಾಲ್ಕು ಜನರ ಕುಟುಂಬ ಒಂದು ಚಿತ್ರವನ್ನು ಮಲ್ಟಿಪ್ಲೆಕ್ಸ್‌ನಲ್ಲಿ ನೋಡಬೇಕು ಎಂದು ಕಡಿಮೆ ಎಂದರೂ ಎರಡು ಸಾವಿರ ಎತ್ತಿಡಬೇಕು, ಇದೇ ಕಾರಣಕ್ಕೆ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ, ಚಿತ್ರದ ಟಿಕೆಟ್ ದರ ಕಡಿಮೆ ಮಾಡಿದರೆ ಜನ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುತ್ತಾರಾ?
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ದುಬಾರಿ ಟಿಕೆಟ್ ಬೆಲೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಮಲ್ಟಿಪ್ಲೆಕ್ಸ್‌ನಲ್ಲಿ ಟಿಕೆಟ್ ಬೆಲೆ ಹೆಚ್ಚಾಗಿರುವ ಕಾರಣ, ಅಲ್ಲಿಗೆ ಬಂದು ಚಿತ್ರ ನೋಡುವುದು ಕಷ್ಟವಾಗುತ್ತದೆ. ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡುಗಳ ತರಹ ಏಕರೂಪ ಟಿಕೆಟ್ ಬೆಲೆ ಇದ್ದರೆ ಮತ್ತು ಅಗ್ಗದ ಬೆಲೆ ನಿಗದಿಪಡಿಸಿದರೆ, ಆಗ ಸಹಜವಾಗಿಯೇ ಪ್ರೇಕ್ಷಕರು ಬಂದು ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾರೆ ಎಂಬ ಮಾತು ಸಹಜವಾಗಿಯೇ ಕೇಳಿಬರುತ್ತದೆ. ಹಾಗಾದರೆ, ಟಿಕೆಟ್ ಬೆಲೆ ಕಡಿಮೆ ಮಾಡಿದರೆ ಜನ ನಿಜಕ್ಕೂ ಚಿತ್ರಮಂದರಿಗಳಿಗೆ ಬರುತ್ತಾರಾ?
ಇತ್ತೀಚೆಗೆ ಆ ಪ್ರಯತ್ನಗಳೂ ಕನ್ನಡದಲ್ಲಾಗುತ್ತಿದೆ. ಚಿತ್ರಮಂದಿರಗಳಿಗೆ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಕಳೆದ ಶುಕ್ರವಾರ (ನ.22) ಬಿಡುಗಡೆಯಾದ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರತಂಡದವರು ಒಂದು ಆಫರ್ ನೀಡಿದ್ದರು. ಅದರ ಪ್ರಕಾರ, ಚಿತ್ರಕ್ಕೆ ರಾಜ್ಯದ ಎಲ್ಲಾ ಚಿತ್ರಂದಿರಗಳಲ್ಲಿ ಕೇವಲ 99 ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿತ್ತು. ಈ ಅವಕಾಶ ಮೊದಲ ಮೂರು ದಿನಗಳ ಕಾಲ ಮಾತ್ರ. ಸೋಮವಾರದಿಂದ ಯಥಾಪ್ರಕಾರ, ಚಿತ್ರಮಂದಿರಗಳಲ್ಲಿ ಎಷ್ಟು ಟಿಕೆಟ್ ನಿಗದಿಯಾಗಿದೆಯೋ, ಅಷ್ಟಕ್ಕೇ ಚಿತ್ರವನ್ನು ತೋರಿಸಲಾಗುತ್ತಿದೆ.
ಈ ವಿಷಯವನ್ನು ಪ್ರಚಾರ ಮಾಡುವ ಮತ್ತು ಹೆಚ್ಚು ಜನರಿಗೆ ತಲುಪಿಸುವ ದೃಷ್ಟಿಯಿಂದ ‘ಆರಾಮ್ ಅರವಿಂದ ಸ್ವಾಮಿ’ ನಾಯಕ ಅನೀಶ್, ನಿರ್ದೇಶಕ ಅವಿನಾಶ್ ಶೆಟ್ಟಿ ಮತ್ತು ನಿರ್ಮಾಪಕರು, ಅಶ್ವಿನಿ ಪುನೀತ್ ರಾಜಕುಮಾರ್, ನಿರ್ಮಾಪಕ ಕಂ ವಿತರಕರಾದ ಜಯಣ್ಣ , ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ತರುಣ್ ಸುಧೀರ್, ಯುವ ರಾಜಕುಮಾರ್ ಮುಂತಾದವರನ್ನು ಭೇಟಿ ಮಾಡಿ, 99 ರೂಪಾಯಿ ಮುಖಬೆಲೆಯ ಟಿಕೆಟ್ ಮಾರಾಟ ಮಾಡಿದ್ದಾರೆ.
ಬೆಲೆ ಕಡಿಮೆ ಮಾಡುವುದಷ್ಟೇ ಮುಖ್ಯವಲ್ಲ …
ಇದರಿಂದ ಚಿತ್ರಕ್ಕೆ ಏನಾದರೂ ಸಹಾಯವಾಯಿತಾ? ಎಂಬ ಪ್ರಶ್ನೆಯನ್ನು ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರ ಮುಂದಿಟ್ಟರೆ, ‘ಮೊದಲ ದಿನ ಗಳಿಕೆ ಸುಮಾರಾಗಿತ್ತು. ಎರಡನೇ ದಿನ ಸ್ವಲ್ಪ ಪಿಕಪ್ ಆಯಿತು. ಮೂರನೇ ದಿನ, ಕೆಲವು ಕಡೆ ಹೌಸ್‍ಫುಲ್ ಪ್ರದರ್ಶನಗಳೂ ಆದವು. ಒಟ್ಟಾರೆ ಹೇಳಬೇಕೆಂದರೆ, ಜನ ತುಂಬಿ ತುಳುಕದಿದ್ದರೂ, ಕಲೆಕ್ಷನ್ ಅದ್ಭುತವಲ್ಲದಿದ್ದರೂ, ಈ ಪ್ರಯೋಗ ಸ್ವಲ್ಪ ಮಟ್ಟಿಗೆ ಯಶಸ್ವಿಯಾಯಿತು. ಇಲ್ಲಿ ದುಡ್ಡು ಮುಖ್ಯವಲ್ಲ, ಪ್ರೇಕ್ಷಕರು ಬಿಡುವಾಗಿರಬೇಕು. ಟಿಕೆಟ್ ದರ ಕಡಿಮೆ ಇದೆ ಅಂತ ಅವರು ಕೆಲಸ ಬಿಟ್ಟು ಬರುವುದಿಲ್ಲ’ ಎನ್ನುತ್ತಾರೆ.
ಇದಕ್ಕೂ ಮುನ್ನ, ಮೇ ತಿಂಗಳಲ್ಲಿ ರಿಷಿ ಅಭಿನಯದ ‘ರಾಮನ ಅವತಾರ’ ಚಿತ್ರ ಬಿಡುಗಡೆಯಾಯಿತು. ಈ ಚಿತ್ರಕ್ಕೂ ಸಿಂಗಲ್ ಸ್ಕ್ರೀನ್ ಜೊತೆಗೆ ಮಲ್ಟಿಫ್ಲೆಕ್ಸ್ ಗಳಲ್ಲಿ ಟಿಕೆಟ್ ದರ ತಗ್ಗಿಸಲಾಗಿದ್ದು, ಕೇವಲ 99 ರೂಪಾಯಿಗಳಲ್ಲಿ ಮೊದಲ ಎರಡು ದಿನಗಳ ಕಾಲ ಚಿತ್ರ ತೋರಿಸಲಾಗಿತ್ತು. ಆದರೆ, ಈ ಆಫರ್‌ನಿಂದ ದೊಡ್ಡ ಪ್ರಯೋಜನವಾಗಲಿಲ್ಲ. ಚಿತ್ರಕ್ಕೆ ಹೆಚ್ಚು ಜನರೂ ಬರಲಿಲ್ಲ, ಚಿತ್ರ ಸದ್ದೂ ಮಾಡಲಿಲ್ಲ.
ಮೊದಲಾರ್ಧ ಉಚಿತವಾಗಿ ತೋರಿಸುವ ಪ್ರಯೋಗ
ಅದಾಗಿ ಕೆಲವು ದಿನಗಳ ನಂತರ, ಅಂದರೆ ಜುಲೈ 19ರಂದು ‘ನಾಟ್ ಔಟ್’ ಚಿತ್ರ ಬಿಡುಗಡೆಯಾಯಿತು. ಅಜಯ್ ಪೃಥ್ವಿ ನಟನೆಯ, ‘ಹೋಪ್’ ಮತ್ತು ‘ಜ್ವಲಂತಂ’ ಚಿತ್ರಗಳನ್ನು ನಿರ್ದೇಶಿಸಿದ್ದ ಅಂಬರೀಶ್ ಬಿ.ಎಂ ನಿರ್ದೇಶನದ ಈ ಚಿತ್ರವನ್ನು ಮೊದಲಾರ್ಧ ಪ್ರೇಕ್ಷಕರಿಗೆ ಫ್ರೀಯಾಗಿ ತೋರಿಸುವ ಪ್ರಯೋಗವಾಯಿತು. ಮೊದಲಾರ್ಧ ಉಚಿತ. ಚಿತ್ರ ಇಷ್ಟವಾದರೆ ಮತ್ತು ದ್ವಿತೀಯಾರ್ಧ ನೋಡಬೇಕೆಂದೆನಿಸಿದರೆ ಮಾತ್ರ ಟಿಕೆಟ್ ಪಡೆಯಬೇಕು. ಇಲ್ಲವಾದರೆ ಸಾಕು ಎಂದನಿಸಿ ಹೊರ ನಡೆಯಬಹುದಾಗಿತ್ತು.
ಈ ಕುರಿತು ಮಾತನಾಡಿದ್ದ ಅಂಬರೀಶ್, ‘ಚಿತ್ರದ ಮೊದಲಾರ್ಧ ಬೋರ್ ಹೊಡೆಯುತ್ತಿದೆ, ಅರ್ಧಕ್ಕೆ ಎದ್ದು ಬಂದೆ ಅಂತ ಬಹಳಷ್ಟು ಜನ ಹೇಳುವುದನ್ನು ಕೇಳಿರುತ್ತೇವೆ. ಹಾಗಾಗಿ, ಮೊದಲಾರ್ಧವನ್ನು ಉಚಿತವಾಗಿ ತೋರಿಸುತ್ತೇವೆ. ಪ್ರೇಕ್ಷಕರಿಗೆ ಇಷ್ಟವಾಗದಿದ್ದರೆ, ವಾಪಸ್ಸು ಹೋಗಬಹುದು. ಚಿತ್ರ ಆಸಕ್ತಿಕರವಾಗಿದೆ ಮತ್ತು ದ್ವಿತೀಯಾರ್ಧ ನೋಡಬೇಕು ಎಂದನಿಸಿದರೆ, ದುಡ್ಡು ಕೊಟ್ಟು ಟಿಕೆಟ್ ಕೊಳ್ಳಬಹುದು. ಇದು ಬರೀ ಒಂದು ದಿನ ಅಥವಾ ಒಂದು ಶೋಗೆ ಸೀಮಿತವಲ್ಲ. ಚಿತ್ರ ಬಿಡುಗಡೆಯಾದ ದಿನದಿಂದ ಹಲವು ಚಿತ್ರಮಂದಿರಗಳಲ್ಲಿ ಈ ಆಫರ್ ನೀಡಲಾಗಿದೆ’ ಎಂದು ಹೇಳಿದ್ದರು. ಈ ಪ್ರಯೋಗವೂ ಅಷ್ಟೇನೂ ಯಶಸ್ವಿಯಾಗಲಿಲ್ಲ. ಚಿತ್ರ ಬಿಡುಗಡೆಯಾಗಿದ್ದಷ್ಟೇ ಸುದ್ದಿಯಾಯಿತು. ಆದರೆ, ಆ ನಂತರ ಏನಾಯಿತು ಎಂಬುದು ಗೊತ್ತಾಗಲಿಲ್ಲ
ಟಿಕೆಟ್ ಇಲ್ಲದೆ ಉಚಿತವಾಗಿ ತೋರಿಸುವ ಪ್ರಯತ್ನ
ಇವಿಷ್ಟೇ ಚಿತ್ರಗಳಲ್ಲ, ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಚಿತ್ರ ತೋರಿಸುವ ಪರಿಪಾಠ ಹೆಚ್ಚಾಗುತ್ತಿದೆ. ಕಡಿಮೆ ತೋರಿಸುವುದಷ್ಟೇ ಅಲ್ಲ, ಇತ್ತೀಚೆಗೆ ಕೆಲವು ಚಿತ್ರಗಳನ್ನು ಉಚಿತವಾಗಿಯೂ ತೋರಿಸಿದ್ದಿದೆ. ಹೇಗೂ ಏಕಪರದೆಯ ಚಿತ್ರಮಂದಿರಗಳಿಗೆ ವಾರದ ಬಾಡಿಗೆ ಇದೆ. ಆ ಬಾಡಿಗೆಯನ್ನು ನಿರ್ಮಾಪಕರು ಮತ್ತು ವಿತರಕರೇ ಕಟ್ಟಬೇಕು. ಅದನ್ನು ಮೀರಿದ ಗಳಿಕೆಯಾದರೆ ಅವರ ಪಾಲಿಗೆ ಬರುತ್ತದೆ. ಎಷ್ಟೋ ಬಾರಿ, ಬಾಡಿಗೆಗಿಂತ ಹೆಚ್ಚು ಗಳಿಕೆ ಕಾಣುವುದು ಕಷ್ಟ. ಹೇಗಿದ್ದರೂ ಬಾಡಿಗೆ ಕಟ್ಟಿರುತ್ತೇವೆ, ಚಿತ್ರಮಂದಿಗಳು ಖಾಲಿ ಹೊಡೆಯುವ ಬದಲು ಜನರಾದರೂ ನೋಡಲಿ ಎನ್ನುವ ಕಾರಣಕ್ಕೆ ಉಚಿತವಾಗಿಯೇ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಹೀಗೆ ಚಿತ್ರವನ್ನು ಪುಕ್ಕಟ್ಟೆಯಾಗಿ ತೋರಿಸಲಾಗುತ್ತಿದ್ದರೂ, ಜನ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳತ್ತ ನಡೆದುಬರುತ್ತಿಲ್ಲ.
ಹಾಗೆ ನೋಡಿದರೆ, ಟಿಕೆಟ್ ದರ ದೊಡ್ಡ ವಿಷಯವೇ ಅಲ್ಲ ಎನ್ನುತ್ತಾರೆ ಕೆಲವು ನಿರ್ಮಾಪಕರು. ಪರಭಾಷೆಗಳಿಗೆ ಹೋಲಿಸಿದರೆ, ಕನ್ನಡ ಚಿತ್ರಗಳ ಟಿಕೆಟ್ ದರ ಕಡಿಮೆಯೇ. ಕೆಲವು ನಿರೀಕ್ಷಿತ ಪರಭಾಷಾ ಚಿತ್ರಗಳ (ಉದಾಹರಣೆಗೆ ರಜನಿಕಾಂತ್ ಅಥವಾ ವಿಜಯ್ ಅಭಿನಯದ) ಟಿಕೆಟ್ ದರ ಬೆಂಗಳೂರಿನಲ್ಲಿ ಹೆಚ್ಚಾಗುವುದು ಬಿಟ್ಟರೆ, ಮಿಕ್ಕಂತೆ ಕನ್ನಡ ಚಿತ್ರಗಳ ಬೆಲೆ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ 200 ರೂ.ಗಳಿಗಿಂತ ಒಳಗೇ ಇರುತ್ತದೆ. ಇವತ್ತಿನ ದಿನಗಳಲ್ಲಿ 200 ರೂ.ಗಳನ್ನು ಕೊಟ್ಟು ಚಿತ್ರಮಂದಿರಕ್ಕೆ ಹೋಗಲಾರದಷ್ಟೇನೂ ದುಬಾರಿಯಲ್ಲ. ಆದರೂ ಪ್ರೇಕ್ಷಕರಲ್ಲಿ ಚಿತ್ರಮಂದಿರಕ್ಕೆ ಹೋಗುವ ನಿರಾಸಕ್ತಿ ಎದ್ದು ಕಾಣುತ್ತಿದೆ. ಇದಕ್ಕೆ ಬೇರೆ ಕಾರಣಗಳೂ ಇರಬಹುದು. ಚಿತ್ರ ಹೇಗಿದ್ದರೂ ಓಟಿಟಿಯಲ್ಲಿ ಬರುತ್ತದೆ ಎಂಬ ನಂಬಿಕೆ ಇರುವುದರಿಂದ, ಹೆಚ್ಚು ಜನ ಚಿತ್ರಮಂದಿರಗಳಿಗೆ ಚಿತ್ರ ನೋಡುವುದಕ್ಕೆ ಬರುತ್ತಿಲ್ಲ. ಇದಲ್ಲದೆ ಟ್ರಾಫಿಕ್ ಸಮಸ್ಯೆ, ಮೊಬೈಲ್‍ನಲ್ಲೇ ಉಚಿತ ಮನರಂಜನೆ, ಚಿತ್ರಗಳಲ್ಲಿ ಗುಣಮಟ್ಟದ ಕೊರತೆ ಕೊರತೆ, ನಿರೀಕ್ಷಿತ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿರುವುದು, ಪ್ರೇಕ್ಷಕರ ಕಾರ್ಯದೊತ್ತಡ ಮುಂತಾದ ಕಾರಣಗಳೂ ಇರಬಹುದು.
ಚಿತ್ರಮಂದಿರಗಳಲ್ಲಿ ಚಿತ್ರ ನೋಡುವವರು ಶೇ. 10ರಷ್ಟು ಮಾತ್ರ
ಇದೆಲ್ಲದರಿಂದ ಚಿತ್ರಮಂದಿರಕ್ಕೆ ಹೋಗಿ ಚಿತ್ರ ವೀಕ್ಷಿಸುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ, ಚಿತ್ರಗಳನ್ನು ನೋಡುವವರ ಸಂಖ್ಯೆ ಅದರ ಶೇ. 10 ಮಾತ್ರ. ಅಂದರೆ ಸಿನಿಮಾ ನೋಡುವವರೆ ಸಂಖ್ಯೆ, 10ರಿಂದ 14 ಕೋಟಿ ಅಷ್ಟೇ. ಈ ಸಮಸ್ಯೆ ಬರೀ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ ಅಥವಾ ಕನ್ನಡ ಚಿತ್ರಗಳನ್ನು ಮಾತ್ರ ಜನ ನೋಡುತ್ತಿಲ್ಲ ಎಂದಲ್ಲ. ಬೇರೆ ಭಾಷೆಗಳಿಗೂ ಈ ಬಿಸಿ ಮುಟ್ಟಿದೆ. ಆದರೆ, ಕನ್ನಡದಲ್ಲಿ ಈ ಸಮಸ್ಯೆ ಜಾಸ್ತಿಯೇ ಇದೆ. ಅದಕ್ಕೆ ಪೂರಕವಾಗಿ ಈ ವರ್ಷ ಬಿಡುಗಡೆಯಾದ 190 ಪ್ಲಸ್ ಚಿತ್ರಗಳಲ್ಲಿ ಬೆರಳಣಿಕೆಯಷ್ಟು ಚಿತ್ರಗಳನ್ನು ಮಾತ್ರ ಜನ ಚಿತ್ರಮಂದಿರಗಳಲ್ಲಿ ನೋಡಿದ್ದರಿಂದ, ಕೆಲವು ಚಿತ್ರಗಳು ಮಾತ್ರ ಹಾಕಿದ ಬಂಡವಾಳ ವಾಪಸ್ಸು ಪಡೆದು ಸ್ವಲ್ಪ ಲಾಭ ನೋಡಿವೆ. ಮಿಕ್ಕಂತೆ ಅದೆಷ್ಟೋ ಚಿತ್ರಗಳಿಗೆ ಪ್ರೇಕ್ಷಕರ ಅಭಾವ ಎದುರಾಗಿ ಪ್ರದರ್ಶನ ರದ್ದಾದ ಹಲವು ಉದಾಹರಣೆಗಳಿವೆ. ಈ ಸಮಸ್ಯೆಗೆ ಪರಿಹಾರ ಗೊತ್ತಾಗದೆ, ಚಿತ್ರರಂಗ ಸದ್ಯದ ಮಟ್ಟಿಗೆ ಕೈಚೆಲ್ಲಿ ಕುಳಿತಿದೆ.