Kannada Film Review | ಮನ ಮುಟ್ಟುವ ಭಟ್ಟರ ಕಡಲು

ಮುಂಗಾರು ಮಳೆ ಚಿತ್ರದ ಟ್ರೆಂಡನ್ನೇ 19 ವರ್ಷಗಳ ನಂತರ ಮರು ಸೃಷ್ಟಿ ಮಾಡಿರುವ ನಿರ್ದೇಶಕ ಯೋಗರಾಜ ಭಟ್ಟರು ಮಳೆಯ ಜೊತೆಗೆ ಕಡಲಿನ ಮೊರೆ ಹೋಗಿದ್ದಾರೆ. ಇಡೀ ಚಿತ್ರ ಹಸಿರು, ಕಾಡು, ಕೋಟೆ, ಸಮುದ್ರವೇ ತುಂಬಿಕೊಂಡಿರುವುದರಿಂದ ಕಣ್ಣಿಗೆ ತಂಪಾದ ಅನುಭವ ನೀಡುತ್ತದೆ.;

Update: 2025-03-30 07:30 GMT

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕನ್ನಡ ಚಿತರಂಗದಲ್ಲಿ ಮುಂಗಾರು ಮಳೆ ಚಿತ್ರದ ಮೂಲಕ ಹೊಸ ಟೆಂಡ್ ಸೆಟ್ ಮಾಡಿದ್ದ ನಿರ್ದೇಶಕ ಯೋಗರಾಜ್ ಭಟ್ ಅವರು ಈಗ ಅದೇ ಜಾನರಿನ ಮನದ ಕಡಲಿನ ಮೂಲಕ ಕನ್ನಡದ ಪ್ರೇಕ್ಷಕರ ಮುಂದೆ ತಂದಿದ್ದಾರೆ.

ಕಡಲ ತಡಿಯಲ್ಲಿಯೇ ಮನದ ಭಾವನೆಗಳನ್ನು ಮಳೆಯ ಜೊತೆಗೆ ಹೇಳಲು ಭಟ್ಟರು ತ್ರಿಕೋನ ಪ್ರೇಮದ ಮಾರ್ಗವನ್ನು ಆಯ್ದುಕೊಂಡಿದ್ದಾರೆ. ಹೊಸ ಜನರೇಷನ್‌ಗೆ ತಮ್ಮ ಮನದ ಕಡಲಿನ ಒಡಲೊಳಗಿರುವ ಭಾವನೆಗಳನ್ನು ತಲುಪಿಸಲು ಪ್ರೀತಿಯ ಜೊತೆಗೆ ಬದುಕಿನ ಪಾಠ ಮಾಡಿದ್ದಾರೆ.

21ನೇ ಶತಮಾನದ ಆರಂಭದ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಮ್ಯುಜಿಕಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಚಿತ್ರಗಳು ಯಶಸ್ವಿಯಾಗಿ ಜನಮನ್ನಣೆ ಗಳಿಸಿದ್ದವು. ಅದೇ ಅವಧಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಬಂದ ಮುಂಗಾರು ಮಳೆ ಹೊಸ ದಾಖಲೆಯನ್ನೇ ಸೃಷ್ಟಿಸಿತು. ಅಷ್ಟೇ ಅಲ್ಲದೇ, ಗಣೇಶ್ ಹಾಗೂ ಪೂಜಾ ಗಾಂಧಿಯನ್ನು ಸ್ಟಾರ್ ನಟರನ್ನಾಗಿಸಿತು. ಸಾಹಿತ್ಯ ಬರೆದ ಜಯಂತ್ ಕಾಯ್ಕಿಣಿ, ಸಂಗೀತ ನೀಡಿದ್ದ ಮನೋಮೂರ್ತಿ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುವಂತಾಯಿತು.

ಅದೇ ಟ್ರೆಂಡನ್ನೇ 19 ವರ್ಷಗಳ ನಂತರ ಮರು ಸೃಷ್ಟಿ ಮಾಡಲು ನಿರ್ದೇಶಕ ಯೋಗರಾಜ ಭಟ್ಟರು ಮಳೆಯ ಜೊತೆಗೆ ಕಡಲಿನ ಮೊರೆ ಹೋಗಿದ್ದಾರೆ. ಇಡೀ ಚಿತ್ರ ಹಸಿರು, ಕಾಡು, ಕೋಟೆ, ಸಮುದ್ರವೇ ತುಂಬಿಕೊಂಡಿರುವುದರಿಂದ ಕಣ್ಣಿಗೆ ತಂಪಾದ ಅನುಭವ ನೀಡುತ್ತದೆ.

ವೈದ್ಯ ವಿದ್ಯಾರ್ಥಿಯಾಗಿರುವ ಸುಮುಖ ತನ್ನ ಎದುರಿನಲ್ಲಿಯೇ ಕಾಲೇಜಿನ ಪ್ಯೂನ್ ಹಾರ್ಟ್ ಆಟ್ಯಾಕ್‌ನಿಂದ ಸಾವಿಗೀಡಾಗಿದ್ದನ್ನು ಕಂಡು ಅಷ್ಟೊಂದು ಜನ ವೈದ್ಯರಿದ್ದರೂ ಒಬ್ಬ ವ್ಯಕ್ತಿಯನ್ನು ಉಳಿಸಲಾಗದಿದ್ದರೆ ಈ ವೈದ್ಯಕೀಯ ವೃತ್ತಿ ಯಾಕೆ ಬೇಕು ಎಂದು ಅರ್ಧಕ್ಕೆ ಬಿಟ್ಟು ತಾನು ನೋಡಿದ ಹುಡುಗಿಯ ಪ್ರೀತಿಸಲು ಮುಂದಾಗಿ ಅವಳ ಹಿಂದೆ ಬೀಳುತ್ತಾನೆ. ಕ್ರಿಕೆಟರ್ ಆಗಬೇಕೆಂಬ ಕನಸು ಹೊತ್ತ ರಾಶಿಕಾ ಪ್ರೀತಿಗಿಂತ ಗುರಿ ಮುಖ್ಯ ಎಂದು ತನ್ನ ಗುರಿ ಮುಟ್ಟಲು ಆರು ತಿಂಗಳು ಸಮಯ ಕೇಳಿ ದೂರ ಹೋಗುತ್ತಾಳೆ. ಅವಳ ಸ್ನೇಹಿತಿ ಅಂಜಲಿ ಪುರಾತತ್ವ ಸಂಶೋಧಕಿಯಾಗಿ ಕರಾವಳಿಯ ಕೋಟೆಯಲ್ಲಿ ಪಶ್ಚಿಮ ರಾಜನ ಇತಿಹಾಸ ಸಂಶೋಧನೆ ನಡೆಸಿರುತ್ತಾಳೆ. ಮೂವರೂ ಹೋಗಿ ಪಶ್ಚಿಮ ರಾಜನ ಕೋಟೆಯಲ್ಲಿ ಸೇರಿಕೊಂಡು ಅಲ್ಲಿ ನಡೆಯುವ ಮೂವರ ನಡುವಿನ ಪ್ರೇಮ ಪಯಣ, ಆಧುನಿಕ ವೈದ್ಯಲೋಕದಿಂದ ಸಾಧ್ಯವಾಗದಿರುವುದನ್ನು ಸಾಧ್ಯ ಮಾಡಿ ತೋರಿಸುವ ಆಯುರ್ವೇದದ ಮಹತ್ವ ಹೇಳುತ್ತ ಭಟ್ಟರು ಸಾಗರದಲ್ಲಿ ಮುಳಿಗೆಬ್ಬಿಸಿ ಇಂದಿನ ಜನರೇಷನ್‌ಗೆ ಯಾವುದು ಮುಖ್ಯ, ಪ್ರೀತಿಯೋ ಅಥವಾ ಬದುಕು ಮುಖ್ಯವೋ ಎನ್ನುವ ಸಂದೇಶವನ್ನು ನೀಡುವ ಪ್ರಯತ್ನ ಮಾಡಿದ್ದಾರೆ.

ಹೊಸ ಮುಖಗಳ ಮೂಲಕವೇ ಹೊಸ ಜನರೇಷನ್‌ಗೆ ಭಟ್ಟರು ಬದುಕಿನ ಪಾಠ ಹೇಳಿದ್ದು, ನಾಯಕ ಸುಮುಖ ಚಿತ್ರದ ತುಂಬ ಲವಲವಿಕೆಯಿಂದ ನಟಿಸಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್ ಪಡಿಯಚ್ಚಿನಂತೆ ಕಾಣುವ ಸುಮುಖ ಲವರ್ ಬಾಯ್ ಆಗಿ ಲೀಲಾಜಾಲವಾಗಿ ಅಭಿನಯಿಸಿದ್ದು, ಕನ್ನಡಕ್ಕೆ ಭಟ್ಟರು ಮತ್ತೊಬ್ಬ ಭರವಸೆಯ ಲವ್ವ‌ರ್ ಪಾಯ್ ನನ್ನು ನೀಡಿದ್ದಾರೆ. ಪಶ್ಚಿಮದ ರಾಜನಾಗಿ ಐತಿಹಾಸಿಕ ಪಾತ್ರಕ್ಕೂ ಸೈ ಎನ್ನುವ ಭರವಸೆ ಮೂಡಿಸಿದ್ದಾರೆ. ಸದಾ ವಾಟ್ಸ್ ಪ್ಪು, ಟ್ವಿಟ್ಟರು, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಅಂತೆಲ್ಲ ಸೋಸಿಯಲ್ ಮಿಡಿಯಾದಲ್ಲಿಯೇ ಬದುಕಿನ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವ ಈಗಿನ ಜನರೇಷನ್‌ಗೆ ಭಟ್ಟರ ಮನದ ಕಡಲಿನ ಫಿಲಾಸಫಿ ಅವರ ಮನಕ್ಕೆ ತಲುಪುತ್ತದೆಯೋ ಇಲ್ಲವೋ ಗೊತ್ತಿಲ್ಲ.

ಮುಂಗಾರು ಮಳೆಯ ರೊಮ್ಯಾಂಟಿಕ್ ಮೆಲೋಡಿ ಫೀಲ್ ಮಾಡಿದ್ದ ಜನರೇಷನ್‌ಗೂ ಈಗಿನ ಜನರೇಷನ್ ಭಾವನೆಗಳಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಮುಂಗಾರು ಮಳೆಯ ಸಂದರ್ಭದಲ್ಲಿ ಪಡ್ಡೆಗಳಾಗಿದ್ದವರು. ಈಗಿನ ಭಟ್ಟರ ಮನದ ಕಡಲು ನೋಡಿದರೆ, ಮೂರು ಗಂಟೆ ತಮ್ಮ ಆಯಸ್ಸಿನ ಇಪ್ಪತ್ತು ವರ್ಷ ಹಿಂದೆ ಹೋಗಿ ತಮ್ಮ ಹರೆಯದ ವಯಸ್ಸಿನ ಮುದ ಪಡೆಯಬಹುದು.

ಇಬ್ಬರೂ ನಾಯಕಿಯರು ಒಬ್ಬನೇ ಹುಡುಗನ ಪೀತಿ ಪಡೆಯಲು ಮುಕ್ತವಾಗಿಯೇ ಭಾವನೆಗಳನ್ನು ಹಂಚಿಕೊಳ್ಳಲುವ ಮೂಲಕ ಈಗಿನ ಜನರೇಷನ್‌ನ ಬೋಲ್ಡ್‌ನೆಸ್ತನ್ನು ಬಿಂಬಿಸಿದ್ದಾರೆ. ನಾಯಕಿ ರಾಶಿಕ ಮುಗ್ಧ ಹುಡುಗಿಯಾಗಿ ಮುದ್ದಾಗಿ ಕಾಣಿಸುತ್ತಾರೆ. ಅಷ್ಟೇ ಅಲ್ಲದೇ ಆಪ್ತವಾಗುತ್ತಾರೆ. ಬೋಲ್ಡ್ ಹುಡುಗಿಯಾಗಿ ಅಂಜಲಿಯೂ ಇಷ್ಟವಾಗುತ್ತಾರೆ. ಈಗಿನ ಜನರೇಷನ್ ಭಾವನೆಗಳಿಗೆ ನಾಯಕಿಯರಿಬ್ಬರಿಗೂ ಮಾಡ್ ಬಟ್ಟೆಗಳನ್ನು ತೊಡಿಸುವ ಮೂಲಕ ಸ್ಪಂದಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಸುರಿವ ಮಳೆಯಲ್ಲಿಯೂ ಮುತ್ತಿನ ಮಳೆ ಸುರಿಸಲು ಮುಕ್ತ ಅವಕಾಶ ಕಲ್ಪಿಸಿ ಮನದ ಭಾವನೆಗಳನ್ನು ಬಡಿದೆಬ್ಬಿಸಿದ್ದಾರೆ.

ಪ್ರಮುಖವಾಗಿ ಚಿತ್ರದಲ್ಲಿ ಇಬ್ಬರು ಹಿರಿಯ ನಟರಾದ ರಂಗಾಯಣ ರಘು ಮತ್ತು ದತ್ತಣ್ಣ ತಮ್ಮ ಮನೋಜ್ಞ ಅಭಿನಯದ ಮೂಲಕ ಚಿತದ ತೂಕವನ್ನು ಹೆಚ್ಚಿಸಿದ್ದಾರೆ. ಜಯಂತ ಕಾಯ್ಕಿಣಿ ಅವರ ಎರಡು ಹಾಡು ಮನ ಮುಟ್ಟುತ್ತವೆ. ಸಂತೋಷ್ ರೈ ಪತಾಜೆ ತಮ್ಮ ಕ್ಯಾಮಾರಾ ಕಣ್ಣಿನ ಮೂಲಕ ಪಶ್ಚಿಮ ರಾಜನ ಕೋಟೆ ಹಾಗೂ ಜಲಪಾತವನ್ನು ಅದ್ಭುತವಾಗಿ ಸರೆ ಹಿಡಿದಿದ್ದು, ಪ್ರೇಕ್ಷಕರಿಗೆ ಮತ್ತೊಂದು ಲೋಕ ತೆರೆದಿಟ್ಟಿದ್ದಾರೆ. ಆ ಮೂಲಕ ಮತ್ತೊಂದು ಪ್ರವಾಸಿ ತಾಣವನ್ನು ಪರಿಚಯಿಸಿದ್ದಾರೆ.‌

ಯೋಗರಾಜ ಭಟ್ಟರು ಹತ್ತೊಂಭತ್ತು ವರ್ಷಗಳ ನಂತರ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಮಳೆ ಸುರಿಸಿದ್ದು ಈಗಿನ ಜನರೇಷನ್ ಜೊತೆಗೆ ತಮ್ಮ ಯಂಗ್ ಏಜ್‌ನ ರೊಮ್ಯಾಂಟಿಕ್ ಮೆಲೊಡಿ ಫೀಲ್ ಮಾಡಿಕೊಳ್ಳಲು ಭಟ್ಟರ ಜನರೇಷನ್ ಕೂಡ ಥೆಟರ್ ಗೆ ಹೋಗಿ ಮನದ ಕಡಲು ನೋಡಿ ಮನ ತಣಿಸಿಕೊಳ್ಳಬಹುದು.

Tags:    

Similar News