ನಾಗ ಚೈತನ್ಯ ಹುಟ್ಟುಹಬ್ಬ: ಬಹುನಿರೀಕ್ಷಿತ ಚಿತ್ರಕ್ಕೆ 'ವೃಷಕರ್ಮ' ಶೀರ್ಷಿಕೆ ಘೋಷಣೆ
ಫಸ್ಟ್ ಲುಕ್ ಪೋಸ್ಟರ್‌ನಲ್ಲಿ, ನಾಗ ಚೈತನ್ಯ ಅವರು ಸಂಪೂರ್ಣ ಮೇಕೋವರ್‌ಗೆ ಒಳಗಾಗಿದ್ದಾರೆ. ಹರಿದ ಟಿ-ಶರ್ಟ್‌ನಲ್ಲಿ ತಮ್ಮ ಸಿಕ್ಸ್ ಪ್ಯಾಕ್ ಎಬ್ಸ್‌ಗಳನ್ನು ಪ್ರದರ್ಶಿಸಿ, ಹೊಸ ಸ್ಟೈಲಿಶ್ ಕೇಶ ವಿನ್ಯಾಸದೊಂದಿಗೆ ಬಹಳ ಪೌರುಷಭರಿತರಾಗಿ ಕಾಣುತ್ತಿದ್ದಾರೆ.
'ವೃಷಕರ್ಮ' ಫಸ್ಟ್ ಲುಕ್
ಟಾಲಿವುಡ್‌ನ ‘ಯುವ ಸಾಮ್ರಾಟ್’ ಅಕ್ಕಿನೇನಿ ನಾಗ ಚೈತನ್ಯ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಇಂದು ಚಿತ್ರರಂಗದಿಂದ ಒಂದು ಬಿಗ್ ಸರ್ಪ್ರೈಸ್ ಸಿಕ್ಕಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್, #NC24 ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.
ವಿಶೇಷವೆಂದರೆ, ಟಾಲಿವುಡ್ ಪ್ರಿನ್ಸ್, ಸೂಪರ್‌ಸ್ಟಾರ್ ಮಹೇಶ್ ಬಾಬು ಅವರು ಖುದ್ದು ಈ ಪೋಸ್ಟರ್ ಅನ್ನು ಅನಾವರಣಗೊಳಿಸಿ, ನಾಗ ಚೈತನ್ಯ ಮತ್ತು ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮಹೇಶ್ ಬಾಬು ಅವರ ಈ ಬೆಂಬಲ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
'ವಿರೂಪಾಕ್ಷ'ದಂತಹ ಮಿಸ್ಟರಿ ಥ್ರಿಲ್ಲರ್ ಮೂಲಕ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸಿದ್ದ ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ದಂಡು, ಈ ಬಾರಿ ನಾಗ ಚೈತನ್ಯಗಾಗಿ ಆಕ್ಷನ್ ಪ್ಯಾಕ್ಡ್ ಕಥೆಯನ್ನು ಸಿದ್ಧಪಡಿಸಿದ್ದಾರೆ. ತಮ್ಮ ಹಿಂದಿನ ಚಿತ್ರದಂತೆಯೇ, ಈ ಬಾರಿ ಕೂಡ ನಿರ್ದೇಶಕರು 'V' ಅಕ್ಷರದ ಸೆಂಟಿಮೆಂಟ್ ಮುಂದುವರಿಸಿದ್ದು, ಚಿತ್ರಕ್ಕೆ 'ವೃಷಕರ್ಮ' ಎಂಬ ಪವರ್‌ಫುಲ್ ಶೀರ್ಷಿಕೆಯನ್ನು ಇಟ್ಟಿದ್ದಾರೆ. ಸಂಸ್ಕೃತ ಮೂಲದ ಈ ಪದಕ್ಕೆ 'ಧರ್ಮಯುತ ಕಾರ್ಯಗಳನ್ನು ಮಾಡುವವನು' ಅಥವಾ 'ಧರ್ಮಕ್ಕಾಗಿ ಹೋರಾಡುವವನು' ಎಂಬ ಅರ್ಥಪೂರ್ಣ ಹಿನ್ನೆಲೆಯಿದೆ.
ರಗಡ್ ಲುಕ್
ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ನಾಗ ಚೈತನ್ಯ ಅವರು ಹಿಂದೆಂದೂ ಕಾಣದ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಲವರ್ ಬಾಯ್ ಇಮೇಜ್ ಬಿಟ್ಟು, ಸಂಪೂರ್ಣ ಮಾಸ್ ಹೀರೋ ಆಗಿ ಬದಲಾಗಿರುವ ಅವರು, ಹರಿದ ಟಿ-ಶರ್ಟ್‌ನಲ್ಲಿ ತಮ್ಮ ಹುರಿಗಟ್ಟಿದ ಸಿಕ್ಸ್ ಪ್ಯಾಕ್ ಆ್ಯಬ್ಸ್ (Six-pack Abs) ಪ್ರದರ್ಶಿಸಿದ್ದಾರೆ. ಹೊಸದಾದ ಸ್ಟೈಲಿಶ್ ಕೇಶ ವಿನ್ಯಾಸ ಮತ್ತು ಅವರ ಕಣ್ಣಲ್ಲಿರುವ ತೀಕ್ಷ್ಣತೆ, ಚಿತ್ರದಲ್ಲಿನ ಅವರ ಪಾತ್ರದ ಗಟ್ಟಿತನವನ್ನು ಸಾರಿ ಹೇಳುತ್ತಿದೆ.
ಅದ್ದೂರಿ ನಿರ್ಮಾಣ ಮತ್ತು ತಾರಾಗಣ
ಈ ಪ್ಯಾನ್ ಇಂಡಿಯಾ ಮಟ್ಟದ ಚಿತ್ರಕ್ಕೆ ಟಾಲಿವುಡ್‌ನ ದಿಗ್ಗಜ ನಿರ್ಮಾಣ ಸಂಸ್ಥೆಗಳು ಕೈಜೋಡಿಸಿವೆ. ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ಅವರ 'ಸುಕುಮಾರ್ ರೈಟಿಂಗ್ಸ್' ಹಾಗೂ ಬಿ.ವಿ.ಎಸ್.ಎನ್ ಪ್ರಸಾದ್ ಅವರ 'SVCC' ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಬಾಪಿನೀಡು ಅವರು ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.
ನಾಗ ಚೈತನ್ಯಗೆ ಜೋಡಿಯಾಗಿ ಸೌತ್ ಸಿನಿ ದುನಿಯಾದ ಸೆನ್ಸೇಷನ್ ಮೀನಾಕ್ಷಿ ಚೌಧರಿ ನಟಿಸುತ್ತಿದ್ದು, ತೆರೆಯ ಮೇಲೆ ಈ ಹೊಸ ಜೋಡಿಯ ಕೆಮಿಸ್ಟ್ರಿ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಪ್ರಸ್ತುತ ಹೈದರಾಬಾದ್‌ನಲ್ಲಿ ನಿರ್ಮಿಸಲಾಗಿರುವ ಬೃಹತ್ ಸೆಟ್‌ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಒಟ್ಟಿನಲ್ಲಿ, ಹುಟ್ಟುಹಬ್ಬದ ದಿನವೇ 'ವೃಷಕರ್ಮ'ನ ದರ್ಶನ ಮಾಡಿಸುವ ಮೂಲಕ ನಾಗ ಚೈತನ್ಯ, ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಅಲೆ ಎಬ್ಬಿಸುವ ಮುನ್ಸೂಚನೆ ನೀಡಿದ್ದಾರೆ.