ಖ್ಯಾತ ನಿರ್ದೇಶಕ ಮೃಣಾಲ್ ಸೇನ್ ಮುಡಿಗೆ ಕೊಲ್ಕತ್ತಾ ಚಲನಚಿತ್ರೋತ್ಸವ ಗೌರವದ ಗರಿ
29ನೇ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಮೃಣಾಲ್ ಸೇನ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ 'ಮೃಣಾಲ್ ಸೇನ್: ದಿ ಮೇವರಿಕ್' ಎಂಬ ಪ್ರದರ್ಶನ ನಡೆಯುತ್ತಿದೆ.
ಕೊಲ್ಕತ್ತಾ: 29ನೇ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಮೃಣಾಲ್ ಸೇನ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ 'ಮೃಣಾಲ್ ಸೇನ್: ದಿ ಮೇವರಿಕ್' ಎಂಬ ಪ್ರದರ್ಶನದಡಿಯಲ್ಲಿ, ಮೃಣಾಲ್ ಸೇನ್ ಅವರು ಬಳಸುತ್ತಿದ್ದ ಲ್ಯಾಂಡ್‌ಲೈನ್ ಟೆಲಿಫೋನ್, ಅವರ ನೆಚ್ಚಿನ ಕುರ್ಚಿ, ಅವರು ಸ್ಕ್ರಿಪ್ಟ್‌ಗಳನ್ನು ಬರೆಯಲು ಬಳಸುತ್ತಿದ್ದ ಫೌಂಟೇನ್ ಪೆನ್ ಮತ್ತು ಚಲನಚಿತ್ರ ಪೋಸ್ಟರ್‌ಗಳನ್ನು ಪ್ರದರ್ಶನದಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುತ್ತಿದೆ.
ಚಿತ್ರನಿರ್ಮಾಪಕರಾಗಿ ಸೇನ್ ಅವರ ವೃತ್ತಿಜೀವನದ ವಿವಿಧ ಅಂಶಗಳನ್ನು ಪ್ರದರ್ಶಿಸುವ ಹಂತಗಳನ್ನು ಈ ಪ್ರದರ್ಶನ ಒಳಗೊಂಡಿದ್ದು, ಈ ವಿಭಾಗಗಳಲ್ಲಿ 'ಮಿರರಿಂಗ್ ದಿ ಮಿಡಲ್ ಕ್ಲಾಸ್', ರೆಬೆಲ್ ರೂಟ್ಸ್, ಮತ್ತು 1955 ರಲ್ಲಿ ಸೇನ್ ಅವರ ಮೊದಲ ಚಿತ್ರ 'ರಾತ್ ಭೋರ್' (ದಿ ಡಾನ್) ನಿಂದ ಅವರ ಕೊನೆಯ ಚಿತ್ರ 'ಅಮರ್ ಭುಬನ್' (ದಿಸ್ ಮೈ ಲ್ಯಾಂಡ್) ವರೆಗಿನ ಚಿತ್ರಕಥೆಗಳು ಸೇರಿವೆ.
ಫಿಲ್ಮ್ ಫೆಸ್ಟಿವಲ್‌ನ ಎರಡನೇ ದಿನ ಬುಧವಾರ ಸೇನ್ ಅವರ ನೆಚ್ಚಿನ ನಟ-ನಿರ್ದೇಶಕ ಅಂಜನ್ ದತ್, ಅವರ ನೆಚ್ಚಿನ ನಟಿ ಮಮತಾ ಶಂಕರ್ ಮತ್ತು ಬಂಗಾಳಿ ಚಲನಚಿತ್ರದ ಸೂಪರ್‌ಸ್ಟಾರ್ ಪ್ರೊಸೆನ್‌ಜಿತ್ ಚಟರ್ಜಿ ಅವರು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
1984 ರ ಲಂಡನ್ ಫಿಲ್ಮ್ ಫೆಸ್ಟಿವಲ್ ಖಂಡಹಾರ್‌ನ ಪೋಸ್ಟರ್, ಚಲಚಿತ್ರದ ಪೋಸ್ಟರ್, ಏಕ್ ದಿನ್ ಅಚಾನಕ್ ಮತ್ತು ಅಂತರೀನ್ (ದಿ ಕಾನ್ಫೈನ್ಡ್ - 1993 ರಲ್ಲಿ ಮಾಡಿದ) ಪೋಸ್ಟರ್ ಅನ್ನು ಕೂಡ ಈ ಪ್ರದರ್ಶನ ಒಳಗೊಂಡಿದೆ. ಈ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವ ವಸ್ತುಗಳನ್ನು ಮೃಣಾಲ್ ಸೇನ್ ಅವರ ಮಗ ಕುನಾಲ್ ಸೇನ್, ನಟ ರಂಜಿತ್ ಮಲ್ಲಿಕ್ ಮತ್ತು ಅಂಜನ್ ದತ್ ಸೇರಿದಂತೆ ನೇರವಾಗಿ ಸಂಬಂಧ ಹೊಂದಿರುವವರಿಂದ ಪಡೆಯಲಾಗಿದೆ ಎಂದು ಕೆಐಎಫ್‌ಎಫ್ ಸಂಘಟನಾ ಸಮಿತಿ ಸದಸ್ಯೆ ಮತ್ತು ಪ್ರದರ್ಶನ ಮೇಲ್ವಿಚಾರಕ ಸುದೇಷ್ನಾ ರಾಯ್ ಪಿಟಿಐಗೆ ತಿಳಿಸಿದ್ದಾರೆ.
ನಾವು ಅವರ ವೃತ್ತಿಜೀವನದ ವಿವಿಧ ಹಂತಗಳನ್ನು ನೋಡಿದ್ದೇವೆ. 1950 ರ ದಶಕದಲ್ಲಿ ಅವರು ಜನರ ಭಾವನೆಗಳು ಮತ್ತು ಸಂಬಂಧಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲು ಪ್ರಾರಂಭಿಸಿದರು. 1970 ಮತ್ತು 1980 ರ ದಶಕದಲ್ಲಿ ಸಾಮಾಜಿಕ ಮತ್ತು ರಾಜಕೀಯ ಅಶಾಂತಿಯನ್ನು ಚಿತ್ರಿಸಿದ ಚಿತ್ರಗಳನ್ನು ಕಾಣಬಹುದಾಗಿದೆ. ದಿಪಂಕರ್ ಮುಖೋಪಾಧ್ಯಾಯ ಅವರ "ಮೃಣಾಲ್ ಸೇನ್: ಸಿಕ್ಸ್ಟಿ ಇಯರ್ಸ್ ಇನ್ ಸರ್ಚ್ ಆಫ್ ಸಿನೆಮಾ" ಮತ್ತು ಕುನಾಲ್ ಸೇನ್ ಅವರ "ಬೊಂಡು: ಮೈ ಫಾದರ್ ಮೈ ಫ್ರೆಂಡ್" ಮತ್ತು ಇತರ ಪ್ರಕಟಿತ ಸಾಮಗ್ರಿಗಳು ಸೇರಿದಂತೆ ಹಲವು ಮೂಲಗಳಿಂದ ಅವರ ಉಲ್ಲೇಖಗಳನ್ನು ಪಡೆಯಲಾಗಿದೆ ಎಂದು ರಾಯ್ ಈ ಸಂದರ್ಭ ತಿಳಿಸಿದರು.
ಮೃಣಾಲ್ ದಾ ಅವರ ಜನ್ಮ ಶತಮಾನೋತ್ಸವದ ಗೌರವಾರ್ಥವಾಗಿ ಆಯೋಜಿಸಲಾದ ಪ್ರದರ್ಶನದ ಕುರಿತು ದತ್ ಹರ್ಷ ವ್ಯಕ್ತಪಡಿಸಿದರು. ಅವರು 1981ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ 40 ವರ್ಷಗಳಿಗೂ ಹೆಚ್ಚು ಕಾಲ ಮೃಣಾಲ್ ದಾ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಅವರೊಂದಿಗೆ ನಡೆಸಿದ ಶೂಟಿಂಗ್ ದೃಶ್ಯಗಳ ಕೆಲವು ಫೋಟೋಗಳು ಹಲವು ನೆನಪುಗಳನ್ನು ತರುತ್ತವೆ. ದಿಗ್ಗಜ ನಿರ್ದೇಶಕರನ್ನು ಕೇಂದ್ರೀಕರಿಸಿ ಇಂತಹ ಪ್ರದರ್ಶನವನ್ನು ಆಯೋಜಿಸುವ ಮೂಲಕ KIFF ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಅವರ ಕುರಿತಾದ ನನ್ನ ಜೀವನಾಧಾರಿತ ಚಿತ್ರ - 'ಚಲ್ ಚಿತ್ರೋ ಎಖೋನ್' ಸಹ ಉತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶಿಸಲ್ಪಡುತ್ತಿದೆ ಮತ್ತು ನಮ್ಮ ನೆಚ್ಚಿನ ನಗರದಲ್ಲಿ ಅದರ ವಿಶ್ವ ಪ್ರೀಮಿಯರ್ ನಡೆಯುವುದು ನನಗೆ ಬಹಳ ಸಂತೋಷವಾಗಿದೆ ಎಂದು ಅವರು ಹೇಳಿದರು.
ಸೇನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದ ಚಲನಚಿತ್ರ ನಿರ್ಮಾಪಕ ಅಶೋಕ್ ವಿಶ್ವನಾಥನ್ ಮಾತನಾಡಿ, ಚಲನಚಿತ್ರ ಚಿತ್ರೀಕರಣ, ಸಂದರ್ಶನಗಳು ಮತ್ತು ಮನೆಯಲ್ಲಿ ಅವರ ಪತ್ನಿ ಗೀತಾ ಸೇನ್ ಮತ್ತು ಸ್ನೇಹಿತರೊಂದಿಗೆ ಕಳೆದ ಸಮಯದ ವಿವಿಧ ಮುಖಗಳನ್ನು ಪ್ರದರ್ಶನವು ತೋರಿಸಿದೆ ಎಂದು ಹೇಳಿದರು. ಆದರೂ ನಿಜವಾದ ಮೃಣಾಲ್ ದಾ ಭಾಗವನ್ನು ಮಾತ್ರ ತೋರಿಸುತ್ತದೆ. ಏಕೆಂದರೆ ನಮ್ಮಂತಹ ಜನರಿಂದ ಹೆಚ್ಚಿನ ವಸ್ತುಗಳು ಮತ್ತು ಇನ್‌ಪುಟ್ ಇರಬೇಕಿತ್ತು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ರಾಯ್ ಅವರು, "ಮೃಣಾಲ್ ದಾ ಅವರಿಗೆ ನಿಕಟವಾಗಿರುವ ಜನರೊಂದಿಗೆ ನಾವು ಮಾಹಿತಿಯನ್ನು ಸಂಗ್ರಹಿಸಿದ್ದೇವೆ ಮತ್ತು ಸಂಪೂರ್ಣ ಸಂಶೋಧನೆ ನಡೆಸಿದ್ದೇವೆ" ಎಂದು ಹೇಳಿದರು. ಯಾರೂ ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಮತ್ತು ಅವರು ಹೊಂದಿರುವ ಯಾವುದೇ ವಿಚಾರಗಳಿಗೆ ನಾವು ಮುಕ್ತರಾಗಿದ್ದೇವೆ ಎಂದರು.
ಮೃಣಾಲ್ ಸೇನ್ ಅವರು ಡಿಸೆಂಬರ್ 30, 2018 ರಂದು ದಕ್ಷಿಣ ಕೋಲ್ಕತ್ತಾದ ಅವರ ಮನೆಯಲ್ಲಿ ನಿಧನರಾದರು. ಅವರ ಅಂತಿಮಯಾತ್ರೆಯ ಫೋಟೋಗಳನ್ನು ಕೂಡ ಈ ಪ್ರದರ್ಶನದಲ್ಲಿ ಕಾಣಬಹುದು.