‘ಹಮಾರೆ ಬಾರಹ್’ ಸಿನಿಮಾ ಬ್ಯಾನ್‌ ಮಾಡಿದ ಕರ್ನಾಟಕ ಸರ್ಕಾರ

ಹಮ್ ದೋ, ಹಮಾರೆ ಬಾರಹ್’ ಚಲನಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Update: 2024-06-07 13:57 GMT
ʼಹಮ್ ದೋ, ಹಮಾರೆ ಬಾರಹ್‌’ ಸಿನಿಮಾವನ್ನು ಕರ್ನಾಟಕ ಸರಕಾರ ಬ್ಯಾನ್‌ ಮಾಡಿದೆ.
Click the Play button to listen to article

ಹಮ್ ದೋ, ಹಮಾರೆ ಬಾರಹ್‌ ಚಲನಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಈ ಸಿನಿಮಾವನ್ನು ಕರ್ನಾಟಕ ಸರ್ಕಾರವು 1964 ರ ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎರಡು ವಾರಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ನಿಷೇಧ ಮಾಡಿ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ರಾಜ್ಯ ಸರಕಾರ ಹೊರಡಿಸಿರುವ ಆದೇಶದ ಪ್ರಕಾರ, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಚಿತ್ರಮಂದಿರಗಳು, ಖಾಸಗಿ ದೂರದರ್ಶನ ಚಾನೆಲ್‌ಗಳು ಮತ್ತು ಇತರ ಮಾಧ್ಯಮಗಳಲ್ಲಿ ಚಲನಚಿತ್ರ ಮತ್ತು ಟ್ರೈಲರ್‌ ಪ್ರಸಾರವನ್ನು ಸರ್ಕಾರ ನಿಷೇಧಿಸಿದೆ. ಸಿನಿಮಾ ಇದೇ ಜೂನ್ 7ಕ್ಕೆ ಬಿಡುಗಡೆ ಆಗಬೇಕಿತ್ತು. ನಾವಿಬ್ಬರು, ನಮಗೆ ಹನ್ನೆರಡು ಮಂದಿ ಮಕ್ಕಳು ಎನ್ನುವುದು ಈ ಚಿತ್ರದ ಸಾರವಾಗಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ತಾಲ್ಲೂಕುಗಳ ಮುಸ್ಲಿಂ ಸಂಘಗಳಿಂದ ರಾಜ್ಯ ಸರ್ಕಾರ ಮನವಿ ಕೂಡ ಸ್ವೀಕರಿಸಿತ್ತು. “ಇಂತಹ ಚಿತ್ರಗಳಿಗೆ ಅವಕಾಶ ನೀಡಿದರೆ ಧರ್ಮ, ಜಾತಿಗಳ ನಡುವೆ ದ್ವೇಷ ಸೃಷ್ಟಿಯಾಗುತ್ತದೆ. ದೇಶದಲ್ಲಿ ಉದ್ದೇಶಪೂರ್ವಕವಾಗಿ ಒಂದು ಧರ್ಮವನ್ನು ಗುರಿಯಾಗಿಸಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವ, ದೇಶದಲ್ಲಿ ಅಶಾಂತಿ ಉಂಟುಮಾಡುವ, ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಷಡ್ಯಂತ್ರ ಇದಾಗಿದೆ. ಸಮಾಜದಲ್ಲಿ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟುಹಾಕಿರುವಂತಿದೆ ಈ ಸಿನಿಮಾ. ಜೂನ್ 07 ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ ವಿವಾದಾತ್ಮಕ ಚಲನಚಿತ್ರ “ಹಮಾರೆ ಬಾರಾ” ಅನ್ನು ಬಿಡುಗಡೆ ಮಾಡದಿರಿʼʼ ಎಂದು ಮನವಿ ಮಾಡಿದ್ದರು. ಧಾರ್ಮಿಕ ಸಮುದಾಯದ ಕಾರ್ಯಕರ್ತರು ಚಿತ್ರದ ಬಿಡುಗಡೆಯ ವಿರುದ್ಧ ಮುಂಬೈ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಬಾಂಬೆ ಹೈಕೋರ್ಟ್‌ನಲ್ಲೂ ತಡೆಯಾಜ್ಞೆ

ಈ ಸಿನಿಮಾದ ವಿರುದ್ಧ ಅಜರ್ ತಂಬೋಲ್ ಎಂಬುವರು, ಸಿನಿಮಾದ ಟೀಸರ್ ಅನ್ನು ಆಧರಿಸಿ ಸಿನಿಮಾದ ವಿರುದ್ಧ ಬಾಂಬೆ ಹೈಕೋರ್ಟ್​ನಲ್ಲಿ ಮೊಕದ್ದಮೆ ಹೂಡಿದ್ದರು. ಅರ್ಜಿ ವಿಚಾರಣೆ ಮಾಡಿದ ಬಾಂಬೆ ಹೈಕೋರ್ಟ್, ಜೂನ್ 14 ರವರೆಗೆ ಸಿನಿಮಾದ ಬಿಡುಗಡೆಗೆ ತಡೆ ನೀಡಿದ್ದು, ಅಂದು ಮರು ವಿಚಾರಣೆ ನಡೆಯಲಿದೆ.

ಇತ್ತೀಚೆಗೆ ಪುಣೆಯ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದು, ಎರಡೂ ಕಡೆಯ ಅಭಿಪ್ರಾಯಗಳನ್ನು ಆಲಿಸಿದ ಬಾಂಬೆ ಹೈಕೋರ್ಟ್, ‘ಹಮಾರಾ ಬರಾ’ ಚಿತ್ರದ ಬಿಡುಗಡೆ ದಿನಾಂಕವನ್ನು ಜೂನ್ 14ಕ್ಕೆ ಮುಂದೂಡಿದೆ.‘ಹಮಾರಾ ಬಾರಾಹ್’ ಚಿತ್ರದ ಕೆಲವು ಡೈಲಾಗ್‌ಗಳ ಮೇಲೂ ಆಕ್ಷೇಪ ವ್ಯಕ್ತವಾಗಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಆ ಬಗ್ಗೆ ಪ್ರಶ್ನೆಗಳೂ ಎದ್ದಿವೆ.

“ನಮ್ಮ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಕ್ಕಿದೆ. ನಾವು ಕಷ್ಟಪಟ್ಟು ದುಡಿದ ಕೋಟಿಗಟ್ಟಲೆ ಹಣವನ್ನು ಸಿನಿಮಾಗೆ ಹಾಕಿ, ಕಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ನಮ್ಮ ಸಿನಿಮಾವನ್ನು ನೋಡದೆ ತಡೆಯಾಜ್ಞೆ ತಂದಿರುವುದರಿಂದ ನಮಗೆ ಆಘಾತ ಮತ್ತು ನಿರಾಶೆಯಾಗಿದೆʼʼ ಎಂದು ಚಿತ್ರತಂಡ ಕೂಡ ಹೇಳಿಕೊಂಡಿದೆ.

ಚಿತ್ರದ ಬಗ್ಗೆ

ಈ ಚಲನಚಿತ್ರದ ಕಥಾಹಂದರವು ಅಧಿಕ ಜನಸಂಖ್ಯೆಯ ಸುತ್ತ ಸುತ್ತುತ್ತದೆ. ಇದು ದಿಟ್ಟ ನಿರೂಪಣೆ ಮತ್ತು ಚಿಂತನೆ-ಪ್ರಚೋದಕ ವಿಷಯಗಳೊಂದಿಗೆ ಸುತ್ತುವರಿಯಲ್ಪಟ್ಟಿದೆ. ತಾರಾಗಣದಲ್ಲಿ ಅಣ್ಣು ಕಪೂರ್, ಮನೋಜ್ ಜೋಶಿ ಮತ್ತು ಪರಿತೋಷ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಮಲ್ ಚಂದ್ರ ಅವರ ನಿರ್ದೇಶನದ 'ಹಮಾರೆ ಬಾರಾ'ವನ್ನು ಬಿರೇಂದರ್ ಭಗತ್, ರವಿ ಎಸ್ ಗುಪ್ತಾ, ಸಂಜಯ್ ನಾಗ್ಪಾಲ್ ಮತ್ತು ಶೀಯೋ ಬಾಲಕ್ ಸಿಂಗ್ ಜಂಟಿಯಾಗಿ ನಿರ್ಮಿಸಿದ್ದಾರೆ.

Tags:    

Similar News