ಕನ್ನಡ ಚಿತ್ರರಂಗಕ್ಕೀಗ ಲೋಕಸಭಾ ಚುನಾವಣೆಯ ಜ್ವರದ ಬಾಧೆ

ಕನ್ನಡ ಚಿತ್ರರಂಗದಲ್ಲಿ ಒಟ್ಟೊಟ್ಟಾಗಿ ಬಿಡುಗಡೆ ಮಾಡುತ್ತಿರುವುದೇಕೆ? ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಖ ಮಾಡುವುದಿಲ್ಲ ಎಂಬ ನಂಬಿಕೆಯಿಂದಾಗಿ ಧಾವಂತದಿಂದ ಚಿತ್ರಗಳನ್ನು ಬಿಡುಗಡೆ ಮಾಡುತ್ತುದ್ದಾರೆಯೇ?;

Update: 2024-04-06 01:40 GMT

ತೊಂಭತ್ತರ ಹರೆಯದ ಕನ್ನಡ ಚಿತ್ರರಂಗ, ಇತ್ತೀಚಿನ ವರ್ಷಗಳಲ್ಲಿ ಹಲವಾರು ಸಮಸ್ಯೆಗಳಿಂದ ನರಳುತ್ತಿದೆ. ನಿರ್ಮಾಣ, ಬಿಡುಗಡೆ, ಚಿತ್ರಮಂದಿರಗಳ ಕೊರತೆ, ಜೊತೆಗೆ ಇತರ ಭಾಷಾ ಚಿತ್ರಗಳೊಂದಿಗೆ ಪೈಪೋಟಿ ನಡೆಸಲಾಗದೆ ಬಳಲುತ್ತಿರುವ ಕನ್ನಡ ಚಿತ್ರರಂಗವನ್ನು ಸದ್ಯಕ್ಕೆ ಚುನಾವಣಾ ಕಾವು ಕಾಡುತ್ತಿದೆ ಎನ್ನಿಸುತ್ತಿದೆ.

ಈ ವಾರ ಕನ್ನಡದ ಐದು ಚಿತ್ರಗಳು ಬಿಡುಗಡೆಗೊಂಡಿವೆ. ಶರಣ್‌ ಅಭಿನಯದ ʼಅವತಾರ ಪುರುಷ-೨ʼ, ನೀನಾಸಂ ಸತೀಶ್‌ ಅಭಿನಯದ ʼಮ್ಯಾಟ್ನಿʼ, ದಿಗಂತ್‌ ಮತ್ತು ಸಂಗೀತ ಶೃಂಗೇರಿ ಅಭಿನಯದ ʼಮಾರಿಗೊಲ್ಡ್‌ʼ, ಹಾಗೂ ಕಿರಣ್‌ ರಾಜ್‌ ಅಭಿನಯದ ʼಭರ್ಜರಿ ಗಂಡುʼ, ಬಿಡುಗಡೆಯಾಗಿ ಕನ್ನಡದ ಪ್ರೇಕ್ಷಕರನ್ನು ʼರಂಜಿಸುತ್ತಿವೆʼ.

ಕನ್ನಡ ಚಿತ್ರರಂಗದಲ್ಲಿ ವಾರಕ್ಕೆ ಏಳೆಂಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ನಿರ್ಮಾಪಕರು ನಿಧಾನವಾಗಿ ಯೋಚಿಸಿ, ಯೋಜಿತ ಕ್ರಮದಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವ ಬದಲು ಒಟ್ಟೊಟ್ಟಾಗಿ ಬಿಡುಗಡೆ ಮಾಡುತ್ತಿರುವುದೇಕೆ? ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಖ ಮಾಡುವುದಿಲ್ಲ ಎಂಬ ನಂಬಿಕೆಯಿಂದಾಗಿ ಧಾವಂತದಿಂದ ಚಿತ್ರಗಳನ್ನು ಬಿಡುಗಡೆ ಮಾಡುತ್ತುದ್ದಾರೆಯೇ? ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತಿದೆ.

ಮೂರು ತಿಂಗಳಲ್ಲಿ ೭೫ ಚಿತ್ರಗಳ ಬಿಡುಗಡೆ

ಹೊಸ ವರ್ಷ ಆರಂಭವಾಗಿ ಮೂರು ತಿಂಗಳಲ್ಲಿ ಒಂದು ಅಂದಾಜಿನ ಪ್ರಕಾರ ೭೫ ಚಿತ್ರಗಳು ಬಿಡುಗಡೆಯಾಗಿವೆ. ಕಳೆದ ೨೦೨೩ ಕ್ಕೆ ಹೋಲಿಸಿದರೆ, ಒಂದಾದ ಮೇಲೆ ಒಂದರಂತೆ ಕನ್ನಡ ಚಿತ್ರಗಳು ತೆರೆಗಪ್ಪಳಿಸುತ್ತಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೀಡಿರುವ ಮಾಹಿತಿಯನ್ನು ಆಧರಿಸಿ ನೋಡಿದರೆ, ಫೆಬ್ರುವರಿ ತಿಂಗಳ ಅಂತ್ಯದ ವೇಳೆಗೆ ೩೫ಕ್ಕೂ ಹೆಚ್ಚು ಚಿತ್ರಗಳು ತೆರೆಗಂಡು, ಬಂದಷ್ಟೇ ವೇಗವಾಗಿ ಚಿತ್ರಮಂದಿರಗಳಿಂದ ಮರೆಯಾಗಿವೆ. “ಚಿತ್ರಗಳ ಬಿಡುಗಡೆ ಇದೇ ಪ್ರಮಾಣದಲ್ಲಿ ಮುಂದುವರೆದರೆ, ಜೂನ್‌ ತಿಂಗಳ ವೇಳೆಗೆ ಕನ್ನಡ ಚಿತ್ರಗಳ ಬಿಡುಗಡೆ ಶತಕದ ಗಡಿ ದಾಟುವ ಎಲ್ಲ ಸಾಧ್ಯತೆಗಳಿವೆ. ಆದರೆ ಈ ರೀತಿ ಚಿತ್ರಗಳ ಬಿಡುಗಡೆಯಿಂದ ಯಾರಿಗೆ ಲಾಭ?”, ಎನ್ನುವ ಪ್ರಶ್ನೆಯನ್ನು ಖ್ಯಾತ ಚಲನಚಿತ್ರ ವಿಮರ್ಶಕ ಮತ್ತು ಬರಹಗಾರ ಚೇತನ್‌ ನಾಡಿಗೇರ್ ಎತ್ತಿ, ಹೊಸ ಚರ್ಚೆಯೊಂದಕ್ಕೆ ನಾಂದಿ ಹಾಡಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೂಲಗಳ ಪ್ರಕಾರ; ಕನ್ನಡ ಚಿತ್ರಗಳ ಈ ಭರಾಟೆಯ ಬಿಡುಗಡೆಗೆ ಕಾರಣ; ಸದ್ಯದಲ್ಲಿಯೇ ನಡೆಯಲಿರುವ ಲೋಕಸಭಾ ಚುನಾವಣೆ. “ಚುನಾವಣೆ ಘೋಷಣೆಯಾಗಿ, ಚುನಾವಣಾ ದಿನಾಂಕ ಹೊರಬಿದ್ದು, ನೀತಿ ಸಂಹಿತೆ ಜಾರಿಯಾಗುವವರೆಗೆ ಚಿತ್ರಗಳ ಬಿಡುಗಡೆಯ ಸಂಖ್ಯೆ ಹೆಚ್ಚಿತ್ತು. ಮಾರ್ಚಿ ತಿಂಗಳ ಮಧ್ಯ ಭಾಗದವರೆಗೂ ವಾರಕ್ಕೆ ಕನಿಷ್ಠ ಹತ್ತು ಚಿತ್ರಗಳು ಬಿಡುಗಡೆಯಾಗಿವೆ” ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ. ಎನ್‌ ಸುರೇಶ್.

ಚುನಾವಣೆಯ ಕಾವಿಗೆ ಚಿತ್ರರಂಗದ ಕನಲಿಕೆ

ಮಾರ್ಚಿ ೧೭ರಿಂದ ಚಿತ್ರಗಳ ಬಿಡುಗಡೆಯ ಭರಾಟೆ ಕಡಿಮೆಯಾಗಿದೆ. ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಜನರು, ವಿಶೇಷವಾಗಿ ಪ್ರೇಕ್ಷಕರು ಚಿತ್ರಗಳನ್ನು ನೋಡಲು ಚಿತ್ರಮಂದಿರಗಳಿಗೆ ಬರುವುದಿಲ್ಲ, ಎಂಬ ನಂಬಿಕೆ ಹಾಗೂ ಭಯದಿಂದ ನಿರ್ಮಾಕರು ಒಂದರ ಹಿಂದೊಂದು ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಕಳೆದ ವರ್ಷ ವಿಧಾನ ಸಭೆಗೆ ಚುನಾವಣೆ ನಡೆದ ಸಂದರ್ಭದಲ್ಲಿಯೂ ಪರಿಸ್ಥಿತಿ ಹೆಚ್ಚುಕಡಿಮೆ ಹೀಗೇ ಇತ್ತು ಎನ್ನುವುದು ಚಿತ್ರರಂಗದವರ ಅಭಿಪ್ರಾಯ.

ಸ್ಟಾರ್‌ ಚಿತ್ರಗಳ ಕೊರತೆ

“ಹೀಗೆ ಪರಿಸ್ಥಿತಿ ಮುಂದುವರೆದರೆ, ಜುಲೈ ತಿಂಗಳ ಅರಂಭದವರೆಗೂ ಸ್ಟಾರ್‌ ಚಿತ್ರಗಳು ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುವುದು ಕನ್ನಡ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ. ವಿ ಚಂದ್ರಶೇಖರ್‌ ಅವರ ಅಭಿಪ್ರಾಯ. ನೀನಾಸಂ ಸತೀಶ್‌ ಅವರ ʼ ಮ್ಯಾಟ್ನಿʼ ಚಿತ್ರ ಇಂದು ಬಿಡುಗಡೆಯಾಗಿದೆ. ದುನಿಯಾ ವಿಜಯ್‌ ಅವರ ʼಭೀಮʼ ಚಿತ್ರವೂ ಬಿಡುಗಡೆಗೆ ಕಾದು, ಚುನಾವಣಾ ಕಾರಣದಿಂದ ಮೀನಾಮೇಷ ಎಣಿಸುತ್ತಿದೆ ಎನ್ನಲಾಗುತ್ರಿದೆ. ಉಪೇಂದ್ರ ಅವರ ʼಯುಐʼ, ಧೃವ ಸರ್ಜಾ ಅವರ ʼಮಾರ್ಟಿನ್‌ʼ, ಡಾಲಿ ಧನಂಜಯ ಅವರ ́ಅಣ್ಣಾ ಫ್ರಮ್‌ ಮೆಕ್ಸಿಕೋʼ, ಸುದೀಪ್‌ ಅವರ ʼಮ್ಯಾಕ್ಸ್‌ʼ ಚಿತ್ರಗಳು ಬಿಡುಗಡೆ ನಿಧಾನವಾಗುವ ಲಕ್ಚಣಗಳಿವೆ ಎನ್ನಲಾಗುತ್ತಿದೆ.

ಆದರೆ ಚುನಾವಣೆಯ ಕಾಲದಲ್ಲಿ ಚಿತ್ರ ಬಿಡುಗಡೆಗೆ ನಿರ್ಮಾಪಕರು ಹಿಂದೇಟು ಹಾಕುತ್ತಾರೆ ಎನ್ನುವುದನ್ನು ಚಂದ್ರಶೇಖರ್‌ ಒಪ್ಪುತ್ತಾರೆ. “ಚುನಾವಣೆಯ ಸಂದರ್ಭದಲ್ಲಿ ಜನರು ಚಿತ್ರಮಂದಿರಗಳಿಗೆ ಬರುವ ಬದಲು, ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯಕ್ರಮಗಳಿಗೆ ಆದ್ಯತೆ ಕೊಡುತ್ತಾರೆ. ಇದರಿಂದ ದಿನವೊಂದಕ್ಕೆ ಅವರಿಗೆ ಒಂದು ಸಾವಿರ ರೂಪಾಯಿ ಲಾಭವಾಗುತ್ತದೆ. ಅವರು ಚಿತ್ರಮಂದಿರಗಳತ್ತ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಇದರ ಬಗ್ಗೆ ತಿಳಿದಿರುವ ಅನೇಕ ನಿರ್ಮಾಪಕರು ಚುನಾವಣೆಯ ವೇಳೆ ಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲ” ಎನ್ನುತ್ತಾರೆ ಚಂದ್ರಶೇಖರ್.

ಹೊಸಬರ ಚಿತ್ರಗಳ ತರಾತುರಿ ಬಿಡುಗಡೆ

“ತರಾತುರಿಯಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳೆಲ್ಲ ಹೊಸ ನಿರ್ದೇಶಕರು ಮತ್ತು ಹೊಸ ನಟರದ್ದು. ಸ್ಟಾರ್‌ ಚಿತ್ರಗಳ ಗೈರು ಹಾಜರಿಯಲ್ಲಿ ತಮ್ಮ ಚಿತ್ರಗಳು ಬಿಡುಗಡೆಯಾದರೆ ಚಿತ್ರವು ಚಿತ್ರಮಂದಿರಗಳಲ್ಲಿ ಕೆಲವು ಕಾಲ ನಿಲ್ಲಬಹುದೆಂಬ ನಂಬಿಕೆಯಿಂದ ತಮ್ಮ ಚಿತ್ರಗಳ ಬಿಡುಗಡೆಗೆ ಧಾವಂತ ಮಾಡುತ್ತಿದ್ದಾರೆ” ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕರ್‌ ಹೇಳುತ್ತಾರೆ.

ಆದರೆ, ಕೆ.ವಿ. ಚಂದ್ರಶೇಖರ್‌ ಅವರು, ಬಿಡುಗಡೆಯಾಗುತ್ತಿರುವ ಚಿತ್ರಗಳ ಬಗ್ಗೆ ನೀಡುವ ಪ್ರತಿಕ್ರಿಯೆಯೇ ಬೇರೆ. “ಈಗ ಬಿಡುಗಡೆಯಾಗುತ್ತಿರುವ ಚಿತ್ರಗಳೆಲ್ಲ. ನಿನ್ನೆ ಮೊನ್ನೆ ಸಿದ್ಧವಾದದ್ದಲ್ಲ. ಒಂದು ವರ್ಷದ ಹಿಂದೆಯೇ ಬಿಡುಗಡೆಗೆ ಸಿದ್ಧವಾಗಿದ್ದು, ಸೆನ್ಸಾರ್‌ ಸರ್ಟಿಫಿಕೇಟ್‌ ಪಡೆದುಕೊಂಡಿದ್ದಂಥವು. ಅನಿವಾರ್ಯ ಕಾರಣಗಳಿಂದ ಬಿಡುಗಡೆಯಾಗದೇ, ಓಟಿಟಿ ಹಕ್ಕಿನ ಮಾರಾಟಕ್ಕಾಗಿ ಕಾದಿದ್ದಂಥವು. ಹಾಕಿದ ಹಣ ಹಿಂದೆ ಪಡೆಯಲು, ಮಾಡಿದ ಸಾಲವನ್ನು ತೀರಿಸಲು ಬೇರೆ ದಾರಿ ಕಾಣದೆ ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದಕ್ಕೂ, ಲೋಕಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ” ಎನ್ನುವುದು ಅವರ ವಾದ.

ಹಲ್ಲು ಕಿತ್ತ ಹಾವಾದ KFCC

ಆದರೆ ಒಂದು ಸಂಗತಿಯಂತೂ ಸ್ಪಷ್ಟ. ಪ್ರತಿವಾರ ಏಳೆಂಟು ಸಿನಿಮಾಗಳನ್ನು ಬಿಡುಗಡೆ ಮಾಡಿ ಸೋಲಿನ ಸುಳಿಗೆ ಸಿಲುಕಿಕೊಳ್ಳುತ್ತಿರುವವರಲ್ಲಿ ಹೊಸಬರೇ ಹೆಚ್ಚು. ಎಷ್ಟೋ ಒಳ್ಳೆ ಚಿತ್ರಗಳು ಸರಿಯಾದ ಬಿಡುಗಡೆಯ ಮಾದರಿ ಇಲ್ಲದೆ ಸೋಲುತ್ತಿವೆ. ಬಿಡುಗಡೆಯಾಗುತ್ತಿರುವ ಹತ್ತಾರು ಚಿತ್ರಗಳ ನಡುವೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿಕೊಂಡು ಸೋತು, ನಂತರ ಚಿತ್ರರಂಗ ಸರಿಯಿಲ್ಲ. ಹಾಕಿದ ಬಂಡವಾಳ ಕೂಡ ಹಿಂದಕ್ಕೆ ಬರುತ್ತಿಲ್ಲ ಎಂದು ದೂರುತ್ತಿರುತ್ತಾರೆ. ಹಾಗಾಗಿ ಚಿತ್ರಗಳ ಬಿಡುಗಡೆಗೆ ಸರಿಯಾದ ಕ್ರಮವಿರಬೇಕು. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಒಂದು ವಾರಕ್ಕೆ ಇಂತಿಷ್ಟೇ ಚಿತ್ರಗಳು ಬಿಡುಗಡೆಯಾಗಬೇಕು. ಅವುಗಳು ಸೆನ್ಸಾರ್‌ ಸರ್ಟಿಫಿಕೇಟ್‌ ಪಡೆದ ದಿನದ ಆಧಾರದ ಮೇಲೆ ಯಾವ ಚಿತ್ರ ಮೊದಲು ಬಿಡುಗಡೆಯಾಗಬೇಕು, ನೆಗೆಟೀವ್‌ ಇದ್ದ ಕಾಲದಲ್ಲಿ, ಇಂತಿಷ್ಟೇ ಪ್ರಿಂಟ್ ಗಳು ನಿರ್ದಿಷ್ಟ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕು ಎಂಬ ನಿಯಮವಿತ್ತು. ಆಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಇದೆಲ್ಲವನ್ನೂ ನಿಯಂತ್ರಿಸುತ್ತಿತ್ತು. ಈಗ ಮಂಡಳಿ ಹಲ್ಲು ಕಿತ್ತ ಹಾವಿನಂತಾಗಿದೆ. ಎಂದು ಹೆಸರು ಬಹಿರಂಗ ಪಡಿಸಲು ಬಯಸದ ನಿರ್ಮಾಪಕರೊಬ್ಬರು ಅಲವೊತ್ತಿಕೊಳ್ಳುತ್ತಾರೆ.

ಅವರ ಮಾತಿನಲ್ಲಿ ಸತ್ಯವಿದೆ. ಹೀಗೆ ಜೊತೆಜೊತೆಯಾಗಿ ಬಿಡುಗಡೆಯಾಗುತ್ತಿರುವ ಒಳ್ಳೆಯ ವಸ್ತುಗಳನ್ನಾಧರಿಸಿದ ಚಿತ್ರಗಳಲ್ಲಿ ʼಕೆರೆಬೇಟೆʼ, ʼಬ್ಲಿಂಕ್‌ʼ, ʼಫೋಟೋʼ, ʼರವಿಕೆ ಪ್ರಸಂಗʼ, ʼಕೋಳಿ ಎಸ್ರುʼ , ಶಾಖಾಹಾರಿʼ ಯಂಥ ಚಿತ್ರಗಳು ಇನ್ನಷ್ಟು ಗಟ್ಟಿಯಾಗಿ ನಿಲ್ಲುತ್ತಿದ್ದವೇನೋ, ಎಂದು ಚಿತ್ರರಂಗದ ಬಹುಮಂದಿಗೆ ಅನ್ನಿಸಿದ್ದಿದೆ. ಇದಕ್ಕೆ ನಿದರ್ಶನವೆಂದರೆ ʼಒಂದು ಸರಳ ಪ್ರೇಮ ಕಥೆʼ ಯಂಥ ಚಿತ್ರವನ್ನು ಚಿತ್ರಮಂದಿರದಲ್ಲಿ ಉಳಿಸಿಕೊಳ್ಳಲು ಚಿತ್ರ ತಂಡ ಪಟ್ಟ ಕಷ್ಟ. ಈ ಹಿನ್ನೆಲೆಯಲ್ಲಿ “ಎಲ್ಲಿ ಹೋದಿರಿ ಕನ್ನಡದ ಪ್ರೇಕ್ಷಕರೇ” ಎಂದು ಹಲವು ಚಿತ್ರತಂಡಗಳು ಕೇಳುತ್ತಿವೆ ಎನ್ನುತ್ತಾರೆ ಚಿತ್ರ ವಿಮರ್ಶಕ ಹರೀಶ್‌ ಬಸವರಾಜ್.

Tags:    

Similar News