'ಜಾಸ್ತಿ ಪ್ರೀತಿ' ಟ್ರೇಲರ್ ಬಿಡುಗಡೆ
ಧರ್ಮ ಕೀರ್ತಿರಾಜ್, ಕೃಷಿ ತಾಪಂಡ ಜೋಡಿಯಾಗಿ ನಟಿಸಿರುವ 'ಜಾಸ್ತಿ ಪ್ರೀತಿ' ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.;
ಧರ್ಮ ಕೀರ್ತಿರಾಜ್, ಕೃಷಿ ತಾಪಂಡ ಜೋಡಿಯಾಗಿ ನಟಿಸಿರುವ 'ಜಾಸ್ತಿ ಪ್ರೀತಿ' ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಪೂರ್ಣಶ್ರೀ ಎಂಟರ್‌ಪ್ರೈಸಸ್ ಮೂಲಕ ಉದ್ಯಮಿ ಶಿವರಾಂ ಕೊಡತಿ ಬಂಡವಾಳ ಹೂಡಿದ್ದು, ಅರುಣ್ ಮಾನವ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
'ಪ್ರೀತಿಯ ಅವ್ಯಕ್ತ ಭಾವವೇ 'ಜಾಸ್ತಿ ಪ್ರೀತಿ'ಯಾಗಿದೆ. ಫೇಸ್‌ಬುಕ್ ಪೇಜೊಂದು ಈ ಸಿನಿಮಾ ಹುಟ್ಟಲು ಕಾರಣ. ಯಾವುದೇ ವ್ಯಕ್ತಿಗೆ ಸಂಬಂಧಿತ ಕಥೆಯಲ್ಲ. ದೃಶ್ಯಗಳು ಹೊಸತಾಗಿವೆ. ಬೆಂಗಳೂರು, ಬಂಗಾರಪೇಟೆ ಮೊದಲಾದೆಡೆ ಚಿತ್ರೀಕರಣ ನಡೆಸಿದ್ದೇವೆ. ಆದಷ್ಟು ಬೇಗನೆ ತೆರೆಗೆ ತರಲು ಯತ್ನ ನಡೆದಿದೆ' ಎಂದರು ನಿರ್ದೇಶಕರು.
'ಇಂದು ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ ಇದೆ. ಸಿನಿಮಾ ನೋಡಲು ಜನ ಬರುತ್ತಿಲ್ಲ. ಆದರೂ ನಿರ್ಮಾಪಕರು ಧೈರ್ಯ ಮಾಡಿ, ನಂಬಿಕೆಯಿಂದ ಹಣ ಹೂಡಿದ್ದಾರೆ. ಒಳ್ಳೆಯ ಅಂಶಗಳು ಇರುವುದರಿಂದ ಚಿತ್ರ ನೋಡಲು ಜನ ಬರುತ್ತಾರೆಂಬ ವಿಶ್ವಾಸವಿದೆ. ನನ್ನ ಅಭಿನಯದ ಕೆಲವು ಚಿತ್ರಗಳು ಬಿಡುಗಡೆಯಾಗಬೇಕಿದೆ. ನನಗೂ ಒಂದೆ ಕಡೆ ಬ್ರೇಕ್ ಸಿಗಬೇಕೆಂಬ ಹಂಬಲವಿದೆ. ಈ ಚಿತ್ರದಿಂದ ಸಿಗಬಹುದು. ಅದಕ್ಕಾಗಿ ಕಾಯುತ್ತಿದ್ದೇನೆ' ಎಂದರು ನಾಯಕ ಧರ್ಮ ಕೀರ್ತಿರಾಜ್.
ಮುರಳಿರಾಮ್, ಶೋಭರಾಣಿ, ಬ್ಯಾಂಕ್ ಜನಾರ್ದನ, ಸುಚೇಂದ್ರಪ್ರಸಾದ್, ಮೈಸೂರು ರಮಾನಂದ್, ಎಂ.ಎನ್.ಲಕ್ಷ್ಮೀದೇವಿ ಮುಂತಾದವರು ತಾರಾಗಣದಲ್ಲಿದ್ದಾರೆ. ವಿನೀತ್ ರಾಜ್ ಮೆನನ್ ಸಂಗೀತ, ಸತೀಶ್.ಸಿ.ಎಸ್. ಬಿ.ಆರ್.ಮಲ್ಲಿಕಾರ್ಜುನ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.