ಇದು ಅಪ್ಪು ಹಾಕಿದ ಭಿಕ್ಷೆ: ʼಯುವʼ ಹವಾದ ಕುರಿತು ರಾಘಣ್ಣ ಭಾವುಕ ನುಡಿ
ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ಯುವ' ಸಿನಿಮಾ ಮಾರ್ಚ್ 29ಕ್ಕೆ ತೆರೆಕಂಡಿದ್ದು, ಚಿತ್ರದ ಬಗ್ಗೆ ಭಾರೀ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿರುವ ಚಿತ್ರದ ಕುರಿತು ಪ್ರೇಕ್ಷಕರು ಅತ್ಯುತ್ಸಾಹದ ಪ್ರತಿಕ್ರಿಯೆ ನೀಡುತ್ತಿದ್ದಾರೆ.;
ನಟ ಡಾ.ರಾಜ್‌ಕುಮಾರ್ ಮನೆತನದ ಮೂರನೇ ತಲೆಮಾರಿನ ಕುಡಿ ಯುವ ರಾಜ್‌ಕುಮಾರ್ 'ಯುವ' ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ಯುವ' ಸಿನಿಮಾ ಮಾರ್ಚ್ 29ಕ್ಕೆ ತೆರೆಕಂಡಿದ್ದು, ಚಿತ್ರದ ಬಗ್ಗೆ ಭಾರೀ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿರುವ ಚಿತ್ರದ ಕುರಿತು ಪ್ರೇಕ್ಷಕರು ಅತ್ಯುತ್ಸಾಹದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಯುವ ಅವರ ನಟನೆ ಮತ್ತು ಸಂತೋಷ್ ಆನಂದ್‌ರಾಮ್ ನಿರ್ದೇಶನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಜನರ ನಡುವೆ ಚಿತ್ರ ವೀಕ್ಷಿಸಿದ ರಾಜ್ ಕುಟುಂಬ
ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನವನ್ನು ಕಟುಂಬ ಸಮೇತರಾಗಿ ಪ್ರೇಕ್ಷಕರ ನಡುವೆ ಕುಳಿತು ನೋಡಿದ ಯುವ ರಾಜ್‌ಕುಮಾರ್ ತಂದೆ ಹಾಗೂ ನಟ ರಾಘವೇಂದ್ರ ರಾಜ್‌ಕುಮಾರ್ ಈ ಚಿತ್ರದ ಕುರಿತು ಮಾಧ್ಯಮದವರೊಂದಿಗೆ ಅನಿಸಿಕೆ ಹಂಚಿಕೊಂಡಿದ್ದು, "ಒಟ್ಟಾರೆ ಸಿನಿಮಾ ಬಗ್ಗೆ ಹೇಳಬೇಕು ಎಂದರೆ, ನನ್ನ ಮಗನನ್ನು ಪರಿಚಯಿಸಲು ಈ ಸಿನಿಮಾ ಮಾಡಿಲ್ಲ. ಒಂದು ಒಳ್ಳೆಯ ಸಿನಿಮಾ ಮಾಡಿ, ಅದರಲ್ಲಿ ನನ್ನ ಮಗನನ್ನು ಪರಿಚಯಿಸಿದ್ದೇವೆ. ಅದು ನನಗೆ ಇಷ್ಟ ಆಗಿದೆ" ಎಂದು ಹೇಳಿದ್ದಾರೆ.
ನನ್ನ ಮಗ ಅನಾಥ ಆದನಲ್ಲ ಎಂಬ ಚಿಂತೆ ಕಾಡಿತ್ತು!
‘ನನ್ನನ್ನು, ಶಿವಣ್ಣನನ್ನು ಹಾಗೂ ನನ್ನ ತಮ್ಮನನ್ನು ಸಿನಿಮಾ ಜಗತ್ತಿಗೆ ಪರಿಚಯ ಮಾಡುವಾಗ ನಮ್ಮ ಜೊತೆ ಮೂರು ಶಕ್ತಿ ಇತ್ತು. ತಂದೆ, ತಾಯಿ ಹಾಗೂ ಚಿಕ್ಕಪ್ಪ ಇದ್ದರು. ಆದರೆ ಯುವ ಬಂದಾಗ ಯಾರೂ ಇಲ್ಲ. ನನ್ನ ಮಗ ಒಂದು ರೀತಿಯಲ್ಲಿ ಅನಾಥ ಆದನಲ್ಲ, ನನಗೂ ಹುಷಾರು ತಪ್ಪಿತು ಎಂಬ ಚಿಂತೆ ಕಾಡಿತ್ತು. ಅಂಥ ಸಮಯದಲ್ಲಿ ದೇವರು ಎರಡು ವ್ಯಕ್ತಿಗಳನ್ನು ಕಳಿಸಿಕೊಡುತ್ತಾನೆ. ತಂದೆಯ ರೀತಿ ಹೊಂಬಾಳೆಯ ವಿಜಯ್ ಬರುತ್ತಾರೆ. ತಾಯಿ ರೀತಿ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಬರುತ್ತಾರೆ. ಅವರು ಬಂದು ನಮ್ಮ ಜಾಗವನ್ನು ತುಂಬಿಕೊಂಡರು’ ಎಂದು ಹೇಳಿದರು.
‘ಇದರಲ್ಲಿ ತಂದೆ-ಮಗನ ನೋಡಿದಾಗ ನಾನು-ನನ್ನ ಮಗ ಅಂತ ಅನಿಸಲಿಲ್ಲ. ನನ್ನ ತಮ್ಮ ಹಾಗೂ ನನ್ನ ಮಗ ಅನಿಸಿತು. ಎಲ್ಲ ಕಡೆ ಅವನ(ಪುನೀತ್) ಛಾಯೆ ಬಂದು ಬಂದು ಹೋಗುತ್ತದೆ. ಕೊನೆವರೆಗೂ ನನ್ನ ಮಗನಿಗೆ ಆಶೀರ್ವಾದ ಮಾಡುತ್ತಾ ಹೋಗಿದ್ದಾನೆ.
ಇದು ಅಪ್ಪು ಹಾಕಿದ ಭಿಕ್ಷೆ
ಗುರು(ಯುವ) ಸಿನಿಮಾ ನೀವು ಮಾಡಬೇಕು ಅಂತ ಹೊಂಬಾಳೆ ಅವರ ಬಳಿ ಅಶ್ವಿನಿ ಮತ್ತು ಅಪ್ಪು ಕೇಳಿಕೊಂಡಿದ್ದರು. ಏನೇ ಬಂದರೂ ಅವರಿಬ್ಬರಿಗೆ ಇದನ್ನು ಅರ್ಪಿಸುತ್ತೇನೆ. ಇದನ್ನು ಅಪ್ಪು ಹಾಕಿದ ಭಿಕ್ಷೆ ಎಂದುಕೊಳ್ಳುತ್ತೇನೆ. ನಾನು ಮಾಡಬೇಕಾದ ಕೆಲಸವನ್ನು ಅವರು ಮಾಡಿದ್ದಾರೆ.
ಈಗ ಮಗನ ಜರ್ನಿ ಶುರುವಾಗಿದೆ. ಒಂದೇ ಸಿನಿಮಾದಲ್ಲಿ ಜೀವನವನ್ನು ಸಾಬೀತು ಮಾಡೋಕೆ ಆಗಲ್ಲ. ಒಂದೊಂದಾಗಿಯೇ ಬರುತ್ತದೆ. ಒಳ್ಳೆಯ ಗೆಲುವು ನೀಡಿದ್ದಾರೆ. ಅಭಿಮಾನಿಗಳು ಅವನನ್ನು ಬರೀ ಬೆಳೆಸಿ ಅಂತ ನಾನು ಹೇಳಲ್ಲ. ಕಲಿಸಿ, ಕಲಿಸಿ, ಕಲಿಸಿ. ಆಮೇಲೆ ಬೆಳೆಸಿ’ ಎಂದು ಕೇಳಿಕೊಳ್ಳುತ್ತೇನೆ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.