ನಾನಿನ್ನೂ ವಿದ್ಯಾರ್ಥಿ, ಕಲಿಯೋಕೆ ಸಾಕಷ್ಟಿದೆ ಎಂದ ಶಿವರಾಜಕುಮಾರ್

ಕ್ಯಾನ್ಸರ್‌ ಗೆದ್ದು ಬಂದಿರುವ ಶಿವರಾಜಕುಮಾರ್, ಈಗ ಮೊದಲಿನಂತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ರಾಮ್‍ಚರಣ್‍ ತೇಜ ಅಭಿನಯದ ‘ಪೆದ್ದಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ 131 ಚಿತ್ರದಲ್ಲೂ ನಟಿಸುತ್ತಿದ್ದಾರೆ.;

Update: 2025-03-31 05:12 GMT

ನಟ ಡಾ. ಶಿವರಾಜ್‌ಕುಮಾರ್‌

ಕ್ಯಾನ್ಸರ್‌ ಗೆದ್ದು ಬಂದಿರುವ ಶಿವರಾಜಕುಮಾರ್, ಈಗ ಮೊದಲಿನಂತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ರಾಮ್‍ಚರಣ್‍ ತೇಜ ಅಭಿನಯದ ‘ಪೆದ್ದಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ 131 ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಮಧ್ಯೆ, ಶಿವರಾಜಕುಮಾರ್ ಅಭಿನಯದ ‘45’ ಚಿತ್ರದ ಟೀಸರ್ ಯುಗಾದಿ ಹಬ್ಬದಂದು ಬಿಡುಗಡೆಯಾಗಲಿದೆ.

ಈ ಸಂದರ್ಭದಲ್ಲಿ ಶಿವರಾಜಕುಮಾರ್ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದು ತಾವು ಹೇಳಿ ಮಾಡಿಸಿದ ಚಿತ್ರವಾದ್ದರಿಂದ, ಯಾವುದೇ ತೊಂದರೆ ಇಲ್ಲದೆ ಮುಗಿಸಬೇಕು ಎಂಬ ಆಸೆ ಇತ್ತು ಎಂದು ಹೇಳಿಕೊಂಡಿದ್ದಾರೆ.

‘ನನಗೊಂದು ಭಯ ಇತ್ತು. ಈ ಚಿತ್ರವನ್ನು ಹೇಗಾದರೂ ಮುಗಿಸಲೇಬೇಕು, ಡಬ್ಬಿಂಗ್‍ ಸಹ ಮುಗಿಸಬೇಕು ಎಂಬ ಯೋಚನೆ ಇತ್ತು. ಏಕೆಂದರೆ ಇದು ನಾನು ಹೇಳಿ ಮಾಡಿಸಿದ ಸಿನಿಮಾ. ಅರ್ಜುನ್‍ ಜನ್ಯ ಕಥೆ ಹೇಳಿದಾಗ, ಈ ಚಿತ್ರವನ್ನು ನೀವೇ ನಿರ್ದೇಶನ ಮಾಡಿ ಎಂದು ಹೇಳಿದೆ. ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ರಮೇಶ್ ರೆಡ್ಡಿ ಬಹಳ ಆಸಕ್ತಿಯಿಂದ ಚಿತ್ರ ನಿರ್ಮಿಸುತ್ತಿದ್ದಾರೆ. ಹಾಗಾಗಿ, ಚೆನ್ನಾಗಿ ಮುಗಿಸಬೇಕು ಎಂಬ ಆಸೆ ಇತ್ತು. ಚಿತ್ರೀಕರಣ ಸಂದರ್ಭದಲ್ಲಿ ನನಗೆ ಕೀಮೋ ಮಾಡಬೇಕಿದೆ ಎಂದಾಗ ಅರ್ಜುನ್‍ ಮಕ್ಕಳಂತೆ ಅತ್ತುಬಿಟ್ಟರು. ಬೇಕಾದರೆ ಚಿತ್ರೀಕರಣ ಕ್ಯಾನ್ಸಲ್‍ ಮಾಡೋಣ ಎಂದರು. ನಾನು ಚಿತ್ರ ಮುಗಿಸಬೇಕು ಎಂದು ವೈದ್ಯರಿಗೂ ಹೇಳಿದೆ. ಸ್ವಲ್ಪ ಸುಸ್ತಾಗುತ್ತಿತ್ತು. ಆದರೂ ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮುಗಿಯಿತು. ಇವತ್ತು ಟೀಸರ್ ನೋಡಿದಾಗ ಬಹಳ ಖುಷಿಯಾಯಿತು. ಈಗ ಡಬಲ್​ ಎನರ್ಜಿ ಬಂದಿದೆ ಎನಿಸುತ್ತದೆ. ಕ್ಯಾನ್ಸರ್​ ಹೇಗೆ ಬಂತು, ಹೇಗೆ ಹೋಯಿತು ಗೊತ್ತಿಲ್ಲ. ಕಳೆದ ಏಪ್ರಿಲ್‍ನಿಂದ ಈ ಮಾರ್ಚ್‍ವರೆಗೆ ಇದನ್ನೆಲ್ಲಾ ಮುಗಿಸಿ, ವಾಪಸ್​  ಬಂದಿದ್ದೇನೆ’ ಎಂದರು.

‘45’ ತಮಗೆ ಬಹಳ ಇಷ್ಟವಾದ ಸಿನಿಮಾ ಎನ್ನುವ ಅವರು, ‘ಇದರಲ್ಲಿ ಹಲವು ವಿಷಯಗಳಿವೆ. ಈ ಚಿತ್ರದಲ್ಲಿ ಅವರು ಹೈಲೈಟು, ಇವರು ಹೈಲೈಟ್ ಅಂತಿಲ್ಲ. ಇಡೀ ಚಿತ್ರವೇ ಹೈಲೈಟ್‍. ನಮ್ಮ ಮೂವರು ಪಾತ್ರಗಳಿಗೂ ಪ್ರೀತಿ ಇದೆ, ಅಹಂಕಾರವಿಲ್ಲ. ಪಾತ್ರ ನೋಡಿದಾಗ ಅಹಂಕಾರ ಅಂತೆನಿಸಿದರೂ ಪ್ರೀತಿ ಜಾಸ್ತಿ ಇದೆ. ಈ ಚಿತ್ರ ಇನ್ನೊಂದು ಪ್ರಪಂಚಕ್ಕೆ ತೆಗೆದುಕೊಂಡು ಹೋಗುತ್ತದೆ. ಈ ಚಿತ್ರವನ್ನು ಅರ್ಜುನ್‍ ಜನ್ಯ ಮಾಡದಿದ್ದರೆ, ಒಬ್ಬ ಒಳ್ಳೆಯ ನಿರ್ದೇಶಕರನ್ನು ಮಿಸ್‍ ಮಾಡಿಕೊಳ್ಳುತ್ತಿದ್ದೆವು. ಬರೀ ಕನ್ನಡಕ್ಕಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗ ಹೆಮ್ಮೆಪಡುವಂತಹ ನಿರ್ದೇಶಕರಾಗುತ್ತಾರೆ’ ಎಂದು ಭವಿಷ್ಯ ನುಡಿದರು.

‘ಓಂ’ ಚಿತ್ರ ಮಾಡುವಾಗ, ಉಪೇಂದ್ರ ಅವರಿಗೂ ಈ ಮಾತು ಹೇಳಿದ್ದರಂತೆ. ‘ಉಪೇಂದ್ರ ಅವರಿಗೂ ಈ ಮಾತು ಹೇಳಿದ್ದೆ. ನನಗೂ ನಿರ್ದೇಶನ ಮಾಡಬೇಕು ಅಂತನಿಸಿದ್ದು ಅವರ ಜೊತೆಗೆ ಕೆಲಸ ಮಾಡಿದಾಗಲೇ. ಊಟಕ್ಕೂ ಸಮಯ ಇಡುತ್ತಿರಲಿಲ್ಲ. ಅನ್ನ, ರಸಂ, ಸಾಂಬರ್, ಮೊಸರು ಎಲ್ಲವನ್ನೂ ಒಟ್ಟಿಗೆ ಕಲಿಸಿಕೊಂಡು ಪಾಯಸದ ತರಹದ ಕುಡಿಯುತ್ತಿದ್ದರು. ಅಷ್ಟು ವೇಗವಾಗಿ ತಿನ್ನುತ್ತಿದ್ದರು. ನಾನೇ ಫಾಸ್ಟ್ ಎಂದರೆ, ಅವರು ನನಗಿಂತ ಫಾಸ್ಟ್. ಅವರಿಗೆ ಕೆಲಸದ ಹಸಿವು. ಏನೋ ವಿಭಿನ್ನವಾಗಿ ತೋರಿಸಬೇಕು ಎಂಬ ಹಸಿವಿತ್ತು. ಇವತ್ತು ಅಂಡರ್‍ವವರ್ಲ್ಡ್ ಸಿನಿಮಾ ಯಾರೇ ಮಾಡಲಿ, ಅದಕ್ಕೆ ಓಂಕಾರ ಹಾಕಿದ್ದೇ ಅವರು. ಆ ಸಿನಿಮಾ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಆ ಸಿನಿಮಾ ದಾಖಲೆ ಮಾಡಿದ್ದರೆ, ನನಗೆ ಹೆಸರು ತಂದುಕೊಟ್ಟಿದ್ದರೆ, ಇಂತಹ ಮಹನೀಯರಿಂದಲೇ ಅದು ಸಾಧ್ಯವಾಗಿದ್ದು’ ಎಂದರು.

ತಾನಿನ್ನೂ ವಿದ್ಯಾರ್ಥಿ, ಕಲಿಯೋದು ಸಾಕಷ್ಟಿದೆ ಎಂದ ಶಿವಣ್ಣ, ‘ನಾನೇನು ಮಾಡಿಲ್ಲ. ಅವರು ಹೇಳಿದ್ದನ್ನು ಮಾಡಿದ್ದೇನೆ. ಅವರು ಆ ಪಾತ್ರ ಸೃಷ್ಟಿ ಮಾಡಲಿಲ್ಲ ಎಂದಿದ್ದರೆ, ನಾನೇನು ಮಾಡೋಕೆ ಸಾಧ್ಯ? ನಾನು ಶಿವಣ್ಣನಾಗಿರಬಹುದು ಅಷ್ಟೇ. ನಾನು ಇನ್ನೊಬ್ಬ ವ್ಯಕ್ತಿ, ವ್ಯಕ್ತಿತ್ವ ಆಗೋಕೆ ಸಾಧ್ಯವಿಲ್ಲ. ಮನೆಯಲ್ಲಿ ಹೇಗಿರುತ್ತೀನೋ ಹಾಗೆಯೇ ಇರುತ್ತೇನೆ. ಆದರೆ, ಇವನಿಂದ ಸಾಧ್ಯ ಎಂದು ನನಗಾಗಿ ಪಾತ್ರ ಸೃಷ್ಟಿ ಮಾಡಿ ನನ್ನಿಂದ ಮಾಡಿಸಿದರು. ಒಂದು ಪಾತ್ರ ಒಬ್ಬನಿಂದ ಸಾಧ್ಯವಿಲ್ಲ. ಮೇಕಪ್‍, ಕಾಸ್ಟ್ಯೂಮ್‍, ಸಂಗೀತ, ಸಂಕಲನ ಎಲ್ಲಾ ವಿಭಾಗಗಳೂ ಚೆನ್ನಾಗಿ ಕೆಲಸ ಮಾಡಿದರೆ ಮಾಡಿದರೆ, ಒಂದು ಪಾತ್ರ ಜನರ ಮನಸ್ಸಿನಲ್ಲಿ ನಿಲ್ಲೋಕೆ ಸಾಧ್ಯ. ನಾನೊಬ್ಬ ನಟ ಅಷ್ಟೇ. ನಾನಿನ್ನೂ ವಿದ್ಯಾರ್ಥಿ. ಕಲಿಯೋಕೆ ಸಾಕಷ್ಟಿದೆ. ಎಲ್ಲಿಯವರೆಗೂ ಸಾಧ್ಯವೋ, ಅಲ್ಲಿಯವರೆಗೂ ಕಲಿಯುತ್ತೇನೆ’ ಎಂದರು.

‘45’ ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್‍ ಬಿ. ಶೆಟ್ಟಿ ನಟಿಸಿದ್ದು, ಚಿತ್ರದ ಮೂಲಕ ಸಂಗೀತ ನಿರ್ದೇಶಕ ಅರ್ಜುನ್‍ ಜನ್ಯ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಚಿತ್ರವು ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ.

Tags:    

Similar News