War 2 Vs Coolie| 39 ವರ್ಷಗಳ ಹಿಂದೆ ಯಾರ ಚಿತ್ರದಲ್ಲಿ ಬಾಲನಟನಾಗಿದ್ದರೋ, ಅವರಿಗೇ ಸವಾಲೆಸೆದ ಹೃತಿಕ್ !

39 ವರ್ಷಗಳ ಹಿಂದೆ1986 ರಲ್ಲಿ ಬಿಡುಗಡೆಯಾದ 'ಭಗವಾನ್ ದಾದಾ' ಚಿತ್ರದಲ್ಲಿ ರಜನಿಕಾಂತ್ ಜೊತೆ ಹೃತಿಕ್ ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ಹೃತಿಕ್‌ಗೆ ಕೇವಲ 12 ವರ್ಷ ವಯಸ್ಸಾಗಿತ್ತು.;

Update: 2025-08-09 11:48 GMT

War 2 Vs Coolie

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತಿದೊಡ್ಡ ಬಾಕ್ಸಾಫೀಸ್ ಕದನವೊಂದಕ್ಕೆ ವೇದಿಕೆ ಸಿದ್ಧವಾಗಿದೆ. ಇದೇ ಆಗಸ್ಟ್ 14ರಂದು, ಬಾಲಿವುಡ್ ಸೂಪರ್​ಸ್ಟಾರ್​ ಹೃತಿಕ್ ರೋಷನ್ ಅಭಿನಯದ 'ವಾರ್ 2' ಮತ್ತು ದಕ್ಷಿಣದ ಮೆಗಾಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಚಿತ್ರಗಳು ಒಂದೇ ದಿನ ತೆರೆಗೆ ಅಪ್ಪಳಿಸುತ್ತಿದ್ದು, ಸುಮಾರು 750 ಕೋಟಿ ರೂಪಾಯಿ ಬಂಡವಾಳವುಳ್ಳ ಈ ಮಹಾಘರ್ಷಣೆಯು ತೀವ್ರ ಕುತೂಹಲ ಕೆರಳಿಸಿದೆ.

ಈ ಸಮರದ ಹಿಂದೆ ಒಂದು ಸ್ವಾರಸ್ಯಕರವಾದ, 39 ವರ್ಷಗಳ ಹಿಂದಿನ ಇತಿಹಾಸವಿದೆ. ಇಂದು ತಮ್ಮಗಿಂತ 23 ವರ್ಷ ಹಿರಿಯರಾದ ರಜನಿಕಾಂತ್ ಅವರಿಗೆ ಸವಾಲು ಹಾಕುತ್ತಿರುವ ಹೃತಿಕ್, ಅಂದು ಅದೇ ರಜನಿಕಾಂತ್ ಅವರ ಚಿತ್ರದಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದರು!

ಹೌದು, 1986ರಲ್ಲಿ, ಅಂದರೆ 39 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ 'ಭಗವಾನ್ ದಾದಾ' ಚಿತ್ರದಲ್ಲಿ ಹೃತಿಕ್ ರೋಷನ್ ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ಆಗ ಅವರಿಗೆ ಕೇವಲ 12 ವರ್ಷ ವಯಸ್ಸು. ಆ ಚಿತ್ರದ ನಾಯಕ ನಟ ರಜನಿಕಾಂತ್. ಈ ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಹೃತಿಕ್ ಅವರಿಗೆ ಕೆಲವು ದೃಶ್ಯಗಳೂ ಇದ್ದವು. ವಿಶೇಷವೆಂದರೆ, ಈ ಚಿತ್ರವನ್ನು ಹೃತಿಕ್ ಅವರ ತಾತ (ತಾಯಿಯ ತಂದೆ) ಜೆ. ಓಂ ಪ್ರಕಾಶ್ ಅವರೇ ನಿರ್ದೇಶಿಸಿದ್ದರು. ಚಿತ್ರದಲ್ಲಿ ಶ್ರೀದೇವಿ, ರಾಕೇಶ್ ರೋಷನ್, ಡ್ಯಾನಿ ಡೆಂಝೋಂಗ್ಪಾ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಇತ್ತು.

ಇದೀಗ ಕಾಲಚಕ್ರ ಉರುಳಿದ್ದು, ಅಂದಿನ ಬಾಲನಟ ಹೃತಿಕ್, ಇಂದು ಬಾಲಿವುಡ್​ನ ಗ್ರೀಕ್ ಗಾಡ್ ಆಗಿ ಬೆಳೆದು, ಅಂದಿನ ತಮ್ಮ ಹೀರೋ ರಜನಿಕಾಂತ್ ಅವರ ಚಿತ್ರದ ಮುಂದೆಯೇ ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. 'ಕೂಲಿ' ಚಿತ್ರವನ್ನು ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದರೆ, 'ವಾರ್ 2' ಚಿತ್ರದ ಬಜೆಟ್ ಬರೋಬ್ಬರಿ 400 ಕೋಟಿ ರೂಪಾಯಿ. ಎರಡೂ ಚಿತ್ರಗಳ ಮೇಲೆ ಒಟ್ಟು 750 ಕೋಟಿ ರೂಪಾಯಿ ಹಣ ಹೂಡಿಕೆಯಾಗಿದೆ.

'ವಾರ್ 2' ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆಗೆ ಮತ್ತೊಬ್ಬ ದಕ್ಷಿಣದ ಸೂಪರ್​ಸ್ಟಾರ್​ ತೆಲುಗಿನ ಜೂನಿಯರ್ ಎನ್ಟಿಆರ್ ಅವರು ಪ್ರಮುಖ ಖಳನಾಯಕನಾಗಿ ನಟಿಸುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಇದು ಅವರ ಮೊದಲ ಬಾಲಿವುಡ್ ಚಿತ್ರವಾಗಿದೆ. ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಒಟ್ಟಿನಲ್ಲಿ, 2025ರ ಈ ಅತಿದೊಡ್ಡ ಬಾಕ್ಸಾಫೀಸ್ ಹಣಾಹಣಿಯಲ್ಲಿ, ಅಂದಿನ ಗುರು-ಶಿಷ್ಯರಂತಿದ್ದ ಈ ಇಬ್ಬರು ದೈತ್ಯರಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Tags:    

Similar News