ಕರ್ನಾಟಕ ಪೊಲೀಸ್ ಮತ್ತು ಲಾಫಿಂಗ್ ಬುದ್ಧ
‘ಲಾಫಿಂಗ್ ಬುದ್ಧ’ ಸಿನಿಮಾದ ತಂಡದಿಂದ ‘ಕರ್ನಾಟಕ ಪೊಲೀಸ್ ಇಲಾಖೆ’ಗೆ ಶುಭಾಶಯ ತಿಳಿಸಲಾಗಿದೆ.;
ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಅವರು ನಿರ್ಮಾಣ ಮಾಡುತ್ತಿರುವ ‘ಲಾಫಿಂಗ್ ಬುದ್ಧ’ ಸಿನಿಮಾದ ಚಿತ್ರೀಕರಣ ಕೆಲಸಗಳು ಈಗಾಗಲೇ ಪೂರ್ಣ ಆಗಿವೆ. ಈಗ ಇದೇ ಸಿನಿಮಾ ತಂಡದಿಂದ ‘ಕರ್ನಾಟಕ ಪೊಲೀಸ್ ಇಲಾಖೆ’ಗೆ ಶುಭಾಶಯ ತಿಳಿಸಲಾಗಿದೆ. ‘ಪೊಲೀಸ್ ಧ್ವಜ ದಿನ’ದ ಪ್ರಯುಕ್ತ ಕರ್ನಾಟಕ ಪೊಲೀಸ್ ಇಲಾಖೆಗೆ ಹೃದಯಪೂರ್ವಕ ಶುಭಾಶಯಗಳನ್ನು ತಿಳಿಸಲಾಗಿದೆ.
‘ಧೈರ್ಯದ ಮತ್ತೊಂದು ಹೆಸರು ಹಾಗೂ ಪ್ರತೀಕವಾಗಿರುವ ಕೆಚ್ಚೆದೆಯ ಕರ್ನಾಟಕ ಪೊಲೀಸರಿಗೆ ನಮ್ಮ ಲಾಫಿಂಗ್ ಬುದ್ಧ ಚಿತ್ರತಂಡದಿಂದ ಅಭಿನಂದನೆಗಳು’ ಎಂದು ಶುಭ ಕೋರಲಾಗಿದೆ. ರಿಷಬ್ ಶೆಟ್ಟಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ನಮ್ಮ ಧೀರ ಪೊಲೀಸರ ನಿಸ್ವಾರ್ಥ ಸೇವೆ, ಧೈರ್ಯ, ಶೌರ್ಯ ಹಾಗು ಕರ್ತವ್ಯ ನಿಷ್ಠೆಯನ್ನು ಗೌರವಿಸುವ ಸುದಿನವಾದ ಪೊಲೀಸ್ ಧ್ವಜ ದಿನಾಚರಣೆಯ ಶುಭಾಶಯಗಳು’ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.
‘ಲಾಫಿಂಗ್ ಬುದ್ಧ’ ಚಿತ್ರವು ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿದೆ. ಭರತ್ ರಾಜ್ ಎಂ. ಅವರು ಈ ಸಿನಿಮಾಗೆ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಅವರು ನಾಯಕನಾಗಿ ನಟಿಸುತ್ತಿದ್ದಾರೆ ಎಂಬುದು ವಿಶೇಷ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಅವರ ಪಾಲಿಗೆ ‘ಲಾಫಿಂಗ್ ಬುದ್ಧ’ ಸಿನಿಮಾ ಸ್ಪೆಷಲ್ ಆಗಿರಲಿದೆ.
ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ತೇಜು ಬೆಳವಾಡಿ, ಸುಂದರ್ ರಾಜ್ ಸೇರಿ ಇನ್ನೂ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.
ಶೂಟಿಂಗ್ ವಿಚಾರಕ್ಕೆ ಬಂದರೆ, ಭದ್ರಾವತಿ, ಜೋಗ, ಸಾಗರ, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ಮಾಡಲಾಗಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಮುಗಿದಿದ್ದು, ಶೀಘ್ರದಲ್ಲಿಯೇ ಲಾಫಿಂಗ್ ಬುದ್ಧ ಚಿತ್ರಮಂದಿರಕ್ಕೆ ಬರಲಿದೆ.