ಮನೋವೈದ್ಯೆಯಾಗಿ ರಂಜನಿ ರಾಘವನ್
ಆದಿತ್ಯ ನಾಯಕರಾಗಿ ನಟಿಸಿರುವ ಹಾಗೂ ಕಿಶೋರ್ ಮೇಗಳಮನೆ ನಿರ್ದೇಶನದ “ಕಾಂಗರೂ” ಚಿತ್ರದ ಟ್ರೇಲರ್ A2 music ಮೂಲಕ ಬಿಡುಗಡೆಯಾಗಿದೆ.;
ಬೆಂಗಳೂರು: ಡೆಲ್ಲಿ ಸೋಮ ಖ್ಯಾತಿಯ ಆದಿತ್ಯ ನಾಯಕ ನಟನಾಗಿ ನಟಿಸಿರುವ “ಕಾಂಗರೂ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಕಿಶೋರ್ ಮೇಗಳಮನೆ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಆದಿತ್ಯ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದು, ಮನೋವೈದ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೇ 3 ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ.
ಕಾಂಗರೂ ಸಿನಿಮಾದ ಕುರಿತು ಮಾತನಾಡಿರುವ ನಟ ಆದಿತ್ಯ, "ನಿರ್ದೇಶಕ ಕಿಶೋರ್ ಕಥೆಯನ್ನು ಹಂಚಿಕೊಂಡರು, ಮತ್ತು ನಾನು ತಕ್ಷಣ ಒಪ್ಪಿಕೊಂಡೆ. ನಾನು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದೇನೆ ಮತ್ತು ಚಿತ್ರವು ಉತ್ತಮವಾಗಿ ಮೂಡಿಬಂದಿದೆ" ಎಂದು ಹೇಳಿದ್ದಾರೆ. "ಕಾಂಗರೂ ರಂಜನಿ ರಾಘವನ್ ಅವರ 5 ನೇ ಸಾಹಸವನ್ನು ಗುರುತಿಸುತ್ತದೆ, ಅಲ್ಲಿ ಅವರು ಮನೋವೈದ್ಯರಾಗಿ ನಟಿಸಿದ್ದಾರೆ ಎಂದವರು ತಿಳಿಸಿದರು.
ಸಿನಿಮಾದ ಕುರಿತು ಮಾತನಾಡಿರುವ ನಿರ್ದೇಶಕ ಕಿಶೋರ್ ಮೇಗಳಮನೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆಯಾದರೂ, ನಮ್ಮ ಚಿತ್ರ ಸ್ವಲ್ಪ ವಿಭಿನ್ನ. ಫ್ಯಾಮಿಲಿ ಆಡಿಯನ್ಸ್ ಗಾಗಿಯೇ ಮಾಡಿರುವ ಕಥೆ ಇದು. ಕಾಂಗರೂ ಮೃದುಸ್ವಭಾವದ ಪ್ರಾಣಿ. ಯಾರ ತಂಟೆಗೂ ಹೋಗುವುದಿಲ್ಲ. ಆದರೆ ತನ್ನ ಮಕ್ಕಳ ತಂಟೆಗೆ ಬಂದರೆ ಅದು ಯಾರನ್ನು ಬಿಡುವುದಿಲ್ಲ. ಇದೇ ಚಿತ್ರದ ಕಥಾಸಾರಾಂಶನ ಎಂದರು.
ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ಕುಣಿಗಲ್, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ಆರ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಧುಕೋಕಿಲರ ಸಂಗೀತ ನಿರ್ದೇಶನ ಹಾಗೂ ಉದಯಲೀಲಾ ಅವರ ಛಾಯಾಗ್ರಹಣವಿದೆ. ಸಿನಿಮಾದಲ್ಲಿ ಶಿವಮಣಿ, ಕರಿಸುಬ್ಬು, ನಾಗೇಂದ್ರ ಅರಸ್, ಅಶ್ವಿನ್ ಹಾಸನ್, ಶುಭಲಕ್ಷ್ಮೀ, ಗೌತಮ್ ಮುಂತಾದವರ ತಾರಾಬಳಗವಿದೆ.
ಕಾಂಗರೂ ಚಿತ್ರದ ಟ್ರೇಲರ್ ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಗಿದ್ದು, ಹಿರಿಯ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.