ಬೆಂಗಳೂರಿನಲ್ಲೊಂದು ಬೆಂಗಳೂರು; ‘ಕೆಡಿ – ದಿ ಡೆವಿಲ್’ ಚಿತ್ರಕ್ಕೆ 18 ಎಕರೆ ಪ್ರದೇಶದಲ್ಲಿ ವಿಶೇಷ ಸೆಟ್
ಆದರೆ, ಸದ್ಯಕ್ಕೆ ಈ ಸೆಟ್‍ನ್ನು ಚಿತ್ರತಂಡದವರನ್ನು ಬಿಟ್ಟು ಯಾರಿಗೂ ಪ್ರೇಮ್ ತೋರಿಸಿಲ್ಲ. ಸೆಟ್ ಹೇಗಿದೆ ಎಂಬುದನ್ನು ಅವರು ರಹಸ್ಯವಾಗಿಯೇ ಇಟ್ಟಿದ್ದು, ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾದ ನಂತರ ಸೆಟ್ ಸ್ಥಳ ತೋರಿಸುವ ಸಾಧ್ಯತೆ ಇದೆ.;
ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್’ ಚಿತ್ರದ ‘ಶಿವನೇ ನಿನ್ನಾಟ ಬಲ್ಲವರ್ಯಾರೋ …’ ಎಂಬ ಹಾಡು ಇತ್ತೀಚೆಗೆ ಬಿಡುಡೆಯಾಗಿದೆ. ಈ ಹಾಡಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ನೃತ್ಯಗಾರರು ಹೆಜ್ಜೆ ಹಾಕಿದ್ದಾರೆ ಎಂದು ಪ್ರೇಮ್ ಹೇಳಿಕೊಂಡಿದ್ದಾರೆ. ಇನ್ನು, ಈ ಹಾಡನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಪೈಕಿ ಕನ್ನಡ ಹಾಡನ್ನು ಪ್ರೇಮ್ ಮತ್ತು ಕೈಲಾಶ್ ಖೇರ್ ಹಾಡಿದ್ದಾರೆ.
ಈ ಹಾಡಿನ ವಿಶೇಷತೆಯೆಂದರೆ, ಈ ಹಾಡಿನಲ್ಲಿ ಟೌನ್ ಹಾಲ್, ಕೆ.ಆರ್. ಮಾರುಕಟ್ಟೆ, ಧರ್ಮರಾಯನ ದೇವಸ್ಥಾನದ ಎದುರು ಧ್ರುವ ಸರ್ಜಾ ಮತ್ತು ಸಂಗಡಿಗರು ಹೆಜ್ಜೆ ಹಾಕಿದ್ದಾರೆ. ಅಂಥ ಜನಜಂಗುಳಿಯ ಪ್ರದೇಶದಲ್ಲಿ ಅಷ್ಟೊಂದು ಜನರನ್ನಿಟ್ಟುಕೊಂಡು ಪ್ರೇಮ್, ಅದ್ಯಾವಾಗ ಚಿತ್ರೀಕರಣ ಮಾಡಿದರು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಏಕೆಂದರೆ, ಬೆಂಗಳೂರಿನ ಮಧ್ಯಭಾಗದಲ್ಲಿರುವ ಈ ಪ್ರದೇಶಗಳಲ್ಲಿ ಜನರು ಸದಾ ಗಿಜುಗುಡುತ್ತಿರುತ್ತಾರೆ. ಅವರ ಮಧ್ಯೆ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಹಾಗಿರುವಾಗ, ಪ್ರೇಮ್ ಯಾವಾಗ ಇಂಥದ್ದೊಂದು ಪ್ರಯತ್ನ ಮಾಡಿದರು?
ವಿಷಯವೇನೆಂದರೆ, ಪ್ರೇಮ್ ಈ ಪ್ರದೇಶಗಳಲ್ಲಿ ಚಿತ್ರೀಕರಣವೇ ಮಾಡಿಲ್ಲ. ಅದರ ಬದಲು, ಈ ಕಟ್ಟಡಗಳನ್ನು ಹೋಲುವ ಸೆಟ್‍ಗಳನ್ನು ನಿರ್ಮಾಣ ಮಾಡಿ, ಅದರ ಎದುರು ಚಿತ್ರೀಕರಣ ಮಾಡಲಾಗಿದೆ. ಹೌದು, ‘ಕೆಡಿ – ದಿ ಡೆವಿಲ್’ ಚಿತ್ರಕ್ಕೆ ಮಾಗಡಿ ರಸ್ತೆ ಬಳಿ ಟಿ.ಜಿ. ಹಳ್ಳಿ ಬಳಿಯ 18 ಎಕರೆ ಪ್ರದೇಶದಲ್ಲಿ ವಿಶೇಷವಾದ ಸೆಟ್‍ಗಳನ್ನು ನಿರ್ಮಾಣ ಮಾಡಿ ಚಿತ್ರೀಕರಣ ಮಾಡಲಾಗಿದೆ. ಈ ಸೆಟ್‍ಗಳನ್ನು ನಿರ್ಮಾಣ ಮಾಡಿರುವುದು ಕಲಾ ನಿರ್ದೇಶಕ ಮೋಹನ್ ಬಿ. ಕೆರೆ. ತುಮಕೂರು ರಸ್ತೆ ಬಳಿ ಮೋಹನ್ ಬಿ. ಕೆರೆ ಸ್ಟುಡಿಯೋ ಇದ್ದು, ಅಲ್ಲಿ ನಿರಂತರವಾಗಿ ಒಂದಿಲ್ಲೊಂದು ಕನ್ನಡ ಚಿತ್ರಗಳ ಚಿತ್ರೀಕರಣ ಆಗುತ್ತಲೇ ಇರುತ್ತದೆ. ಅದರ ಹೊರತಾಗಿಯೂ ಮೋಹನ್ ಬಿ ಕೆರೆ, ಬೇರೆ ಚಿತ್ರಗಳಿಗಾಗಿ ಸ್ಟುಡಿಯೋಗಳಲ್ಲಿ ಸೆಟ್‍ಗಳನ್ನು ನಿರ್ಮಿಸುತ್ತಲೇ ಇರುತ್ತಾರೆ. ‘ಕೆಡಿ – ದಿ ಡೆವಿಲ್’ ಚಿತ್ರಕ್ಕೆ 18 ಎಕರೆ ಪ್ರದೇಶದಲ್ಲಿ ಹೊಸ ಸೆಟ್ ನಿರ್ಮಿಸುವ ಮೂಲಕ ಹೊಸದೊಂದು ದಾಖಲೆಯನ್ನೇ ಅವರು ಮಾಡಿದ್ದಾರೆ.
ಈ ಕುರಿತು ಮಾತನಾಡುವ ಮೋಹನ್, ‘ಚಿತ್ರದ ಕಥೆ 1970ರ ಕಾಲಘಟ್ಟದ್ದು. ಇಡೀ ಚಿತ್ರ ಬೆಂಗಳೂರಲ್ಲಿ ನಡೆಯುತ್ತದೆ. ಅದರಲ್ಲೂ ಟೌನ್ ಹಾಲ್ ಸುತ್ತಮುತ್ತ ಕಥೆ ನಡೆಯುತ್ತದೆ. ಹಾಗಾಗಿ, ಕೆ.ಆರ್. ಮಾರುಕಟ್ಟೆ, ಟೌನ್ ಹಾಲ್, ತಿಗಳರ ಪೇಟೆ, ಧರ್ಮರಾಯನ ದೇವಸ್ಥಾನ ಮುಂತಾದ ಸೆಟ್‍ಗಳ ಅವಶ್ಯಕತೆ ಇತ್ತು. ಇಷ್ಟೊಂದು ಸೆಟ್‍ಗಳನ್ನು ನಿರ್ಮಿಸುವುದಕ್ಕೆ ದೊಡ್ಡ ಜಾಗವೂ ಬೇಕಿತ್ತು. ಹಾಗಿರುವಾಗಲೇ, ಪ್ರೇಮ್ ಅವರು 18 ಎಕರೆ ಜಾಗ ತೋರಿಸಿ, ಅಲ್ಲಿ ಚಿತ್ರೀಕರಣ ಮಾಡಬಹುದಿತ್ತು ಎಂದರು. ಅಷ್ಟೇ ಅಲ್ಲ, ಸೆಟ್ ನಿರ್ಮಾಣಕ್ಕೆ ಎಷ್ಟು ಬೇಕಾದರೂ ಖರ್ಚಾಗಲಿ, ನೈಜವಾಗಿರಲಿ ಎಂದು ಹೇಳಿದ್ದರು. ಅದರಂತೆ ಸೆಟ್ ನಿರ್ಮಾಣ ಮಾಡಲಾಯಿತು’ ಎನ್ನುತ್ತಾರೆ ಮೋಹನ್ ಬಿ. ಕೆರೆ.
ಟೌನ್ ಹಾಲ್ ಸೆಟ್ ಸೃಷ್ಟಿಸುವುದು ನಿಜಕ್ಕೂ ಸವಲಾನಿದ್ದಾಗಿತ್ತು ಎನ್ನುವ ಅವರು, ‘ಟೌನ್ ಹಾಲ್, ಬೆಂಗಳೂರಿನ ಹೃದಯ ಭಾಗದಲ್ಲಿರುವ ಒಂದು ಐತಿಹಾಸಿಕ ಮತ್ತು ಚಿರಪರಿತ ಕಟ್ಟಡ. ಅದನ್ನು ಎಲ್ಲರೂ ನೋಡಿರುತ್ತಾರೆ. ಟೌನ್ ಹಾಲ್ ಸೃಷ್ಟಿಸುವುದು ಸುಲಭದ ಕೆಲಸವಾಗಿರಲಿಲ್ಲ. ಒಂದು ವಾರ ಕಾಲ ಅದರ ಸುತ್ತಳತೆ ತೆಗೆದುಕೊಂಡು, ಎತ್ತರ, ಅಗಲ, ಟೋನ್ ಎಲ್ಲವೂ ಅದೇ ತರಹ ಸೃಷ್ಟಿಸುವ ಸವಾಲಿತ್ತು. ಟೌನ್ ಹಾಲ್ ಬಳಿ ಫೋಟೋ ತೆಗೆಸಿಕೊಂಡು, ಆ ನಂತರ ಈ ಸೆಟ್‍ನಲ್ಲಿ ತೆಗೆಸಿಕೊಂಡರೆ, ಮೂಲ ಯಾವುದು? ಸೆಟ್ ಯಾವುದು ಗೊತ್ತಾಗುವುದಿಲ್ಲ. ಅಷ್ಟೊಂದು ನೈಜವಾಗಿ ಬಂದಿದೆ’ ಎನ್ನುತ್ತಾರೆ.
ಬರೀ ಟೌನ್ ಹಾಲ್ ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಬೇರೆ ಪ್ರಯೋಗಗಳು ಸಹ ಸಾಕಷ್ಟಾಗಿವೆ ಎನ್ನುವ ಮೋಹನ್, ‘ನಾನು ಇದುವರೆಗೂ ಹಲವು ಚಿತ್ರಗಳಿಗೆ ಸೆಟ್‍ಗಳನ್ನು ನಿರ್ಮಿಸಿದ್ದೇನೆ. ಆದರೆ, ಈ ಕೆಲಸ ಬೇರೆ. ಚಿಕ್ಕಪೇಟೆ ಮತ್ತು ಕಬ್ಬನ್ ಪೇಟೆ ರಸ್ತೆಗಳನ್ನು ಯಥಾವತ್ತಾಗಿ ನಿರ್ಮಿಸುವ ಕೆಲಸ ಮಾಡಿದ್ದೇವೆ. ಅಲ್ಲಿ ಓಡಾಡುತ್ತಿದ್ದರೆ, ನಿಜವಾದ ಕಬ್ಬನ್ ಪೇಟೆ ಮತ್ತು ಚಿಕ್ಕಪೇಟೆಗಳಲ್ಲ ಓಡಾಡಿದ ಅನುಭವವಾಗುತ್ತದೆ. ಬರೀ ಅಷ್ಟೇ ಅಲ್ಲ, ಆಗಿನ ಕಾಲಕ್ಕೆ ಬೆಂಗಳೂರಿನಲ್ಲಿ ಡಬ್ಬಲ್ ಡೆಕ್ಕರ್ ಬಸ್‍ಗಳು ಓಡಾಡುತ್ತಿದ್ದವು. ಆದರೆ, ಈಗ ಅವನ್ನು ನೋಡುವುದಕ್ಕೆ ಸಾಧ್ಯವಿಲ್ಲ. ಡಬ್ಬಲ್ ಡೆಕ್ಕರ್ ಬಸ್ ನಮಗೆ ಎಲ್ಲೂ ಲಭ್ಯವಿರಲಿಲ್ಲ. ಮಂಗಳೂರಿನಿಂದ ಒಂದು ಸ್ಕೂಲ್ ಬಸ್ ತರಿಸಿ, ನಮಗೆ ಬೇಕಾದ ಹಾಗೆ ಸೃಷ್ಟಿ ಮಾಡಿದ್ದೇವೆ. ಒಟ್ಟಾರೆ, ಎಲ್ಲವೂ 1970ರಲ್ಲಿ ಇದ್ದ ಹಾಗೇ ಇರುತ್ತದೆ. ಆ ಕಾಲಘಟ್ಟವನ್ನು ಮರುಸೃಷ್ಟಿ ಮಾಡುವುದು ಸುಲಭವಲ್ಲ. ಅದಕ್ಕೆ ಸಾಕಷ್ಟು ಖರ್ಚಾಗುತ್ತದೆ. ಆದರೆ, ಪ್ರೇಮ್ ಯಾವತ್ತೂ ಬಜೆಟ್ ಕೇಳಲಿಲ್ಲ. ತಮ್ಮ ಕಲ್ಪನೆಯ ಬೆಂಗಳೂರು ಬೇಕು ಎಂಬುದಷ್ಟೇ ತಮ್ಮ ಯೋಚನೆ ಆಗಿತ್ತು’ ಎನ್ನುತ್ತಾರೆ ಮೋಹನ್.
ಈ ಸೆಟ್‍ಗಳ ಕುರಿತು ಕುರಿತು ಮಾತನಾಡುವ ಪ್ರೇಮ್, ‘ಇಲ್ಲಿ ‘ಕೆಡಿ’ ಎಂದರೆ ಕಾಳಿದಾಸ ಎಂದರ್ಥ. ಕಾಳಿದಾಸ ಎಂಬ ಯುವಕನ ಕಥೆಯನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಇದು 70ರ ಕಾಲಘಟ್ಟದ ಕಥೆ. ಅದಕ್ಕೆ ಸೂಕ್ತವಾದ ಪರಿಸರ ಬೇಕು. ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ, ಸೆಟ್ ನಿರ್ಮಿಸಿ ಚಿತ್ರೀಕರಣ ಮಾಡಬೇಕಿತ್ತು. ಆ ಸೆಟ್‍ಗಳಿಗಾಗಿ ದೊಡ್ಡ ಪ್ರದೇಶ ಬೇಕಿತ್ತು. ‘ಮಾರ್ಟಿನ್’ ನಿರ್ಮಾಪಕ ಉದಯ್ ಮೆಹ್ತಾ ಅವರು ಈ ಜಾಗವನ್ನು ತೋರಿಸಿಕೊಟ್ಟರು. ಇದು ಅವರ ಸ್ನೇಹಿತರೊಬ್ಬರ ಜಾಗವಂತೆ. ಅಲ್ಲಿ ಅನುಮತಿ ಪಡೆದು ಚಿತ್ರದ ಬಹಳಷ್ಟು ಭಾಗ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ.
‘ಕೆಡಿ – ದಿ ಡೆವಿಲ್’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಇನ್ನು ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಹಾಗಂತ ಈ ಕೃತಕ ಬೆಂಗಳೂರಿನ ಸೆಟ್ಟನ್ನೂ ಇನ್ನೂ ಕೆಡವಲಾಗಿಲ್ಲ. ಬಹುಶಃ ಚಿತ್ರದ ಮುಂದುವರೆದ ಭಾಗ ಬೇಕಾದರೆ, ಆಗ ಬಳಸಿಕೊಳ್ಳಬಹುದು ಎಂದು ಅವರು ಅದನ್ನು ಹಾಗೆಯೇ ಇಟ್ಟುಕೊಂಡಿದ್ದಾರಂತೆ. ಇನ್ನು, ಎರಡನೆಯ ಭಾಗವನ್ನು ಮುಂದುವರೆಸಬೇಕೋ, ಬೇಡವೋ ಎಂಬುದನ್ನು ಈ ಚಿತ್ರದ ಬಿಡುಗಡೆಯಾದ ಮೇಲೆ ತೀರ್ಮಾನಿಸುತ್ತಾರಂತೆ.
ಆದರೆ, ಸದ್ಯಕ್ಕೆ ಈ ಸೆಟ್‍ನ್ನು ಚಿತ್ರತಂಡದವರನ್ನು ಬಿಟ್ಟು ಯಾರಿಗೂ ಪ್ರೇಮ್ ತೋರಿಸಿಲ್ಲ. ಸೆಟ್ ಹೇಗಿದೆ ಎಂಬುದನ್ನು ಅವರು ರಹಸ್ಯವಾಗಿಯೇ ಇಟ್ಟಿದ್ದು, ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾದ ನಂತರ ಒಮ್ಮೆ ಮಾಧ್ಯಮದವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ, ಸೆಟ್ ಹೇಗಿದೆ ಎಂಬುದನ್ನು ಅವರು ತೋರಿಸುವುದಾಗಿ ಆಶ್ವಾಸನೆ ನೀಡುತ್ತಾರೆ.