GBA Election Part-5| ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದಲ್ಲಿ ಬಂಡಾಯದ ಭೀತಿ?
x

GBA Election Part-5| ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದಲ್ಲಿ ಬಂಡಾಯದ ಭೀತಿ?

ಮೇಲ್ನೋಟಕ್ಕೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸುಗಮವಾಗಿ ಕಂಡರೂ, ಜಿಬಿಎ ಚುನಾವಣೆ ದೊಡ್ಡ ಸವಾಲು ತಂದೊಡ್ಡಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ʼಮೈತ್ರಿ ಮಾತುಕತೆʼ ಉಭಯ ಪಕ್ಷಗಳಿಗೂ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆಯಿದೆ.


Click the Play button to hear this message in audio format

ಲೋಕಸಭೆ ಚುನಾವಣೆಯಲ್ಲಾದ ಬಿಜೆಪಿ-ಜೆಡಿಎಸ್‌ ಮೈತ್ರಿಯು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರಿಸುವುದು ಬಹುತೇಕ ಅಧಿಕೃತವಾಗಿದೆ. ಈಗಾಗಲೇ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಮೈತ್ರಿ ಮುಂದುವರಿಸುವ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮತ ವಿಭಜನೆ ತಡೆಯಲು ಉಭಯ ಪಕ್ಷಗಳು ಮೈತ್ರಿ ಸಮ್ಮತಿ ಸೂಚಿಸಿವೆ.

ಮೇಲ್ನೋಟಕ್ಕೆ ಹಿರಿಯ ನಾಯಕರ ಮಟ್ಟದಲ್ಲಿ ಮೈತ್ರಿ ಮಾತುಕತೆ ಸುಗಮವಾಗಿರುವಂತೆ ಕಂಡರೂ, ಜಿಬಿಎ ರಾಜಕಾರಣದಲ್ಲಿ ಇದು ಅತ್ಯಂತ ಸಂಕೀರ್ಣ ಸವಾಲುಗಳನ್ನು ಸೃಷ್ಟಿಸಿದೆ. ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆಯು ಉಭಯ ಪಕ್ಷಗಳಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸ್ಥಳೀಯ ಚುನಾವಣೆಗಳಲ್ಲಿ ದಶಕಗಳಿಂದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಪರಸ್ಪರ ಎದುರಾಳಿಗಳಾಗಿ ಹೋರಾಡಿರುವ ಇತಿಹಾಸವಿದೆ. ಈಗ ಮೈತ್ರಿಯ ಕಾರಣದಿಂದ ದೋಸ್ತಿಗಳಾಗಿದ್ದರೂ ಹಿರಿಯ ನಾಯಕರು ಸೂಚಿಸುವ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಸ್ಥಳೀಯ ನಾಯಕರಿಗಿದೆ. ಪ್ರತಿ ವಾರ್ಡ್‌ನಲ್ಲಿ ಬಿಜೆಪಿಯಂತೆ ಜೆಡಿಎಸ್‌ ಕೂಡ ಸಮರ್ಥ ಆಕಾಂಕ್ಷಿಗಳನ್ನು ಹೊಂದಿದೆ. ಹೀಗಿರುವಾಗ ಟಿಕೆಟ್ ಹಂಚಿಕೆಯಲ್ಲಿ ಸಹಜವಾಗಿಯೇ ಅಸಮಾಧಾನ ತಲೆದೋರಲಿದೆ.

ಯಾವುದೇ ಒಂದು ವಾರ್ಡ್‌ನಲ್ಲಿ ಬಿಜೆಪಿ ಆಕಾಂಕ್ಷಿಗೆ ಟಿಕೆಟ್ ನೀಡಿದರೆ, ಅಲ್ಲಿ ತಳಮಟ್ಟದಿಂದ ಪಕ್ಷ ಕಟ್ಟಿರುವ ಜೆಡಿಎಸ್ ಆಕಾಂಕ್ಷಿ ಹಾಗೂ ಅವರ ಬೆಂಬಲಿಗರಲ್ಲಿ ಅಸಹನೆ ಹುಟ್ಟಿಕೊಳ್ಳಲಿದೆ. ಪಕ್ಷದ ಅಸ್ತಿತ್ವದ ಪ್ರಶ್ನೆಯೂ ಉದ್ಭವಿಸಲಿದೆ. ಆ ಸಂದರ್ಭದಲ್ಲಿ ಬಂಡಾಯವೇಳುವುದು ಸಾಮಾನ್ಯವಾಗಲಿದೆ.

ಬಂಡಾಯದ ಭೀತಿ ಸಾಧ್ಯತೆ?

ಟಿಕೆಟ್ ಕೈತಪ್ಪಿದ ಆಕಾಂಕ್ಷಿಗಳು ಸುಮ್ಮನೆ ಕುಳಿತುಕೊಳ್ಳುವ ಸಾಧ್ಯತೆ ಕಡಿಮೆ. ಸ್ಥಳೀಯವಾಗಿ ಹೆಚ್ಚು ಪ್ರಭಾವ ಹೊಂದಿರುವ ನಾಯಕರಿಗೆ ಹಿರಿಯ ನಾಯಕರು ಟಿಕೆಟ್ ನಿರಾಕರಿಸಿದರೆ ಬೇಸರಗೊಂಡು ಬಂಡಾಯ ಸಾರುವ ಸಾಧ್ಯತೆ ಇದೆ. ಒಂದು ಹೈಕಮಾಂಡ್‌ ತನ್ನ ನಿರ್ಧಾರಕ್ಕೆ ಬದ್ಧವಾದರೆ ಮೈತ್ರಿ ಅಭ್ಯರ್ಥಿ ವಿರುದ್ಧವೇ ಬಂಡಾಯವೆದ್ದು ಮತಗಳನ್ನು ವಿಭಜಿಸುವ ಸಾಧ್ಯತೆ ಇರಲಿದೆ. ಇದೇ ವೇಳೆ ಕಾಂಗ್ರೆಸ್ ಇಂತಹ ಅತೃಪ್ತ ನಾಯಕರನ್ನು ತನ್ನತ್ತ ಸೆಳೆದುಕೊಂಡರೆ ಮೈತ್ರಿಗೆ ದೊಡ್ಡ ಹೊಡೆತ ಬೀಳಲಿದೆ.

ಇನ್ನು ಹಿರಿಯ ನಾಯಕರ ಸೂಚನೆಯನ್ನು ವೇದವಾಕ್ಯದಂತೆ ಪಾಲಿಸುವವರು ಬಹಿರಂಗವಾಗಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುತ್ತಲೇ ಎದುರಾಳಿ ಅಭ್ಯರ್ಥಿಗಳಿಗೆ ಅಥವಾ ಪಕ್ಷೇತರರಿಗೆ ಸಹಾಯ ಮಾಡುವ ಮೂಲಕ ಒಳಯೇಟು ನೀಡುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಿಸಲಾಗಿದೆ.

"ರಾಜಕೀಯದಲ್ಲಿ ನಾಯಕರು ಕೈಜೋಡಿಸಿದ ತಕ್ಷಣ ಮತದಾರರು, ಕಾರ್ಯಕರ್ತರು ಒಂದಾಗುತ್ತಾರೆ ಎಂದು ಭಾವಿಸುವುದು ತಪ್ಪು. ಹಿಂದುತ್ವ ಅಥವಾ ರಾಷ್ಟ್ರೀಯತೆ ಆಧಾರದ ಮೇಲೆ ಮತ ಹಾಕುವ ಬಿಜೆಪಿ ಮತದಾರ, ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಲು ಮಾನಸಿಕವಾಗಿ ಸಿದ್ಧನಾಗಿರುತ್ತಾನೆಯೇ? ಎಂಬ ಪ್ರಶ್ನೆ ಮೂಡುತ್ತದೆ. ಇನ್ನು ಪ್ರಾದೇಶಿಕ ಅಸ್ಮಿತೆ ಮತ್ತು ಜಾತಿ ಸಮೀಕರಣದ ಆಧಾರದ ಮೇಲೆ ನಿಂತಿರುವ ಜೆಡಿಎಸ್ ಮತದಾರರು ಬಿಜೆಪಿಯ 'ಕಮಲ' ಗುರುತಿಗೆ ಮತ ನೀಡುತ್ತಾರೆಯೇ, ಮತಗಳು ಸರಿಯಾಗಿ ಚಲಾವಣೆಯಾಗದಿದ್ದರೆ ಮೈತ್ರಿಯ ಉದ್ದೇಶವೇ ವಿಫಲವಾಗುತ್ತದೆ" ಎಂದು ಬಿಜೆಪಿ ಪಕ್ಷದ ಹೇಸರೇಳಲು ಇಚ್ಛಿಸದ ಮುಖಂಡರೊಬ್ಬರು ʼದ ಫೆಡರಲ್‌ ಕರ್ನಾಟಕʼ ತಿಳಿಸಿದರು.

ವಾರ್ಡ್‌ಗಳಲ್ಲಿ ಸಂಘಟನೆ ಭಿನ್ನ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ದಡಿ ಐದು ಪಾಲಿಕೆಗಳನ್ನಾಗಿ ವಿಂಗಡಿಸಿ, ಒಟ್ಟು 369 ವಾರ್ಡ್‌ಗಳನ್ನು ಅಧಿಸೂಚಿಸಲಾಗಿದೆ. ಪಶ್ಚಿಮ ಪಾಲಿಕೆಯಲ್ಲಿ 112, ಉತ್ತರ ಪಾಲಿಕೆಯಲ್ಲಿ 72, ದಕ್ಷಿಣ ಪಾಲಿಕೆಯಲ್ಲಿ 72, ಕೇಂದ್ರ ಪಾಲಿಕೆಯಲ್ಲಿ 63 ಹಾಗೂ ಪೂರ್ವಪಾಲಿಕೆಯಲ್ಲಿ 50 ವಾರ್ಡ್‌ಗಳನ್ನು ರಚಿಸಲಾಗಿದೆ.

ವಾರ್ಡ್‌ವಾರು ಆಕಾಂಕ್ಷಿಗಳ ಸಂಖ್ಯೆಯು ಹೆಚ್ಚಿದೆ. ಬೆಂಗಳೂರಿನ ಕೆಲ ವಾರ್ಡ್‌ಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಇನ್ನು ಕೆಲವೆಡೆ ಬಿಜೆಪಿಯು ಮೂರನೇ ಸ್ಥಾನದಲ್ಲಿದೆ. ಇಂತಹ ಸನ್ನಿವೇಶದಿಂದ ಬಿಜೆಪಿ ತನ್ನ ಅಸ್ತಿತ್ವ ಹೆಚ್ಚಿಸಿಕೊಳ್ಳಲು ಹವಣಿಸುತ್ತದೆ. ಇನ್ನು ಜೆಡಿಎಸ್ ನಾಯಕರು ತಮ್ಮ ಕ್ಷೇತ್ರ ಬಿಟ್ಟುಕೊಡಲು ಸಿದ್ಧರಿಲ್ಲ. ಸೀಟು ಹಂಚಿಕೆ ವಿಚಾರವಾಗಿ ಎರಡು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ತಲೆದೋರಲಿದೆ. ಈ ಪ್ರಾದೇಶಿಕ ಅಸಮತೋಲನವು ಟಿಕೆಟ್ ಹಂಚಿಕೆಯಲ್ಲಿ ಕಿಚ್ಚು ಹೊತ್ತಿಸುವ ಸಾಧ್ಯತೆ ಇರಲಿದೆ ಎಂದು ಹೇಳಲಾಗುತ್ತಿದೆ.

"ವಾರ್ಡ್ ಮಟ್ಟದಲ್ಲಿ ಸಮನ್ವಯದ ಕೊರತೆ ಉಂಟಾದರೆ ಆಡಳಿತರೂಢ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ. ಮೈತ್ರಿ ಪಕ್ಷಗಳ ನಡುವಿನ ಕಚ್ಚಾಟದಿಂದ ಅತೃಪ್ತರು ನೇರವಾಗಿ ಕಾಂಗ್ರೆಸ್‌ಗೆ ಮತ ಚಲಾಯಿಸಬಹುದು. ಅಲ್ಲದೇ ಹಲವು ವರ್ಷಗಳಿಂದ ವಾರ್ಡ್‌ಮಟ್ಟದಲ್ಲಿ ಪಕ್ಷ ಕಟ್ಟಿರುವವರ ರಾಜಕೀಯ ಭವಿಷ್ಯ ಮಸುಕಾಗುತ್ತದೆ. ಇದು ಮತದಾನ ಪ್ರಮಾಣದ ಮೇಲೂ ಪರಿಣಾಮ ಬೀರಲಿದೆ" ಎಂದು ವಿದ್ಯಾರಣ್ಯಪುರ ವಾರ್ಡ್‌ನ ಜೆಡಿಎಸ್‌ ಮುಖಂಡ ಬಸವರಾಜು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಜೆಡಿಎಸ್‌ನಲ್ಲಿ ಆತಂಕ

ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಉಂಟಾಗಿರುವ ಅಸಮಾಧಾನ ಶಮನಗೊಳಿಸುವುದು ಬಿಜೆಪಿ ಹೈಕಮಾಂಡ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ದೊಡ್ಡ ಸವಾಲಾಗುವ ಸಾಧ್ಯತೆಗಳಿವೆ.

ಹಿರಿಯ ನಾಯಕರು ತೆಗೆದುಕೊಳ್ಳುವ ನಿರ್ಧಾರದಿಂದ ತಳಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಸಮಸ್ಯೆಯಾಗಲಿದೆ. ಮೈತ್ರಿ ಕಾರಣದಿಂದಾಗಿ ಹಲವು ಮುಖಂಡರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವೇ ಸಿಗದಂತಾಗುತ್ತದೆ. ಚುನಾವಣೆಯಲ್ಲಿ ಟಿಕೆಟ್‌ ಸಿಗದಿದ್ದರೆ ಐದು ವರ್ಷಗಳ ಕಾಲ ತಮ್ಮ ರಾಜಕೀಯ ಭವಿಷ್ಯ ಡೋಲಾಯನಮಾನವಾಗಲಿದೆ. ಟಿಕೆಟ್‌ ವಂಚಿತರಾದವರು ಎರಡೂ ಪಕ್ಷಗಳಲ್ಲಿ ಚುನಾವಣಾ ಪ್ರಚಾರದಿಂದ ದೂರ ಉಳಿಯುವ ಆತಂಕವಿದೆ.

ಅಖಾಡಕ್ಕಿಳಿದ ಬಿಜೆಪಿ ಹೈಕಮಾಂಡ್‌

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಹೈಕಮಾಂಡ್ ಸಿದ್ಧತೆ ಆರಂಭಿಸಿದೆ. ಬಿಜೆಪಿ ಸಂಘಟನಾ ಚತುರ ಹಾಗೂ ರಾಷ್ಟ್ರೀಯ ನಾಯಕ ರಾಮ್ ಮಾಧವ್ ಅವರನ್ನು ಜಿಬಿಎಗೆ ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ. ರಾಜ್ಯದ ಮುಖಂಡರು ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಮ್‌ ಮಾಧವ್‌ ಅವರನ್ನು ನೇಮಕ ಮಾಡಲಾಗಿದೆ. ಇದು ಉಭಯ ಪಕ್ಷಗಳಿಗೆ ಕಂಟಕವಾಗುವ ಸಾಧ್ಯತೆ ಇದೆ.

ರಾಮ್‌ಮಾಧವ್‌ ಅವರು ನೇರವಾಗಿ ಹೈಕಮಾಂಡ್‌ ಜತೆ ಚರ್ಚೆ ಮಾಡುವುದರಿಂದ ಟಿಕೆಟ್‌ ಹಂಚಿಕೆಯಲ್ಲಿ ರಾಜ್ಯದ ಮುಖಂಡರ ಹಸ್ತಕ್ಷೇಪಕ್ಕೆ ಅವಕಾಶ ಇರುವುದಿಲ್ಲ. ಯಾರ ಶಿಫಾರಸು ಕೂಡ ನಡೆಯುವುದಿಲ್ಲ. ದೆಹಲಿಯಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಕುಳಿತು ಚರ್ಚಿಸಿ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಅಂತಿಮಗೊಳಿಸಿದರೆ ಸ್ಥಳೀಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಷ್ಟವಾಗಲಿದೆ. ರಾಷ್ಟ್ರೀಯ ನಾಯಕರೇ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವುದರಿಂದ ಎರಡೂ ಪಕ್ಷಗಳ ನಾಯಕರು ಹೈಕಮಾಂಡ್‌ ಹೇಳಿದಂತೆ ಕೇಳಬೇಕಾಗುತ್ತದೆ. ಒಲ್ಲದ ಮನಸ್ಸಿನಿಂದ ಚುನಾವಣಾ ಕಾರ್ಯದಲ್ಲಿ ತೊಡಬೇಕಾಗುತ್ತದೆ. ಇದು ಮೈತ್ರಿ ಪಕ್ಷಗಳ ಸೋಲಿಗೆ ಕಾರಣವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

Read More
Next Story