
ಮೇನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಹಬ್ಬ: ಜಿಬಿಎ, ಪಂಚಾಯತ್‌ಗಳಿಗೆ ಏಕಕಾಲಕ್ಕೆ ಮತದಾನ?
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಇದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಬದಲಾಗಿ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಿದೆ.
ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ಆಡಳಿತ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಕೊನೆಗೂ ಚಾಲನೆ ಸಿಗುವ ಲಕ್ಷಣಗಳು ಕಂಡು ಬಂದಿವೆ. ಶಾಲಾ-ಕಾಲೇಜುಗಳ ವಾರ್ಷಿಕ ಪರೀಕ್ಷೆಗಳು ಮುಗಿದ ನಂತರ, ರಾಜ್ಯದಲ್ಲಿ ಸ್ಥಳೀಯ ಚುನಾವಣಾ ಹಬ್ಬ ಆರಂಭವಾಗಲಿದೆ.
ರಾಜ್ಯ ಚುನಾವಣಾ ಆಯೋಗವು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜೆಬಿಎ) ಚುನಾವಣೆ ನಡೆಸಿದ ಬಳಿಕ ಏಕಕಾಲಕ್ಕೆ ಗ್ರಾಮಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಇದು ಕೇವಲ ಒಂದು ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಬದಲಾಗಿ ರಾಜ್ಯದ ಆಡಳಿತಾರೂಢ ಸರ್ಕಾರ ಮತ್ತು ವಿರೋಧ ಪಕ್ಷಗಳ ಪಾಲಿಗೆ ಅಗ್ನಿಪರೀಕ್ಷೆಯೂ ಹೌದು.
ಬೆಂಗಳೂರು ನಗರದ ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ’ಯನ್ನು ಜಾರಿಗೆ ತಂದಿದೆ. ಈ ಹಿಂದೆ ಇದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬದಲಿಗೆ, ಇಡೀ ಬೆಂಗಳೂರನ್ನು ಐದು ನಗರ ಪಾಲಿಕೆಗಳನ್ನಾಗಿ ವಿಭಜಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚನೆ ಮಾಡಿದೆ. ಇದಕ್ಕೆ ಚುನಾವಣೆ ನಡೆಸಲು ಆಯೋಗವು ಸಜ್ಜಾಗಿದೆ. ಈ ಸಂಬಂಧ ಮತದಾರರ ಕರಡು ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಮೇ 25ರ ನಂತರ ಚುನಾವಣೆ ನಡೆಸಲು ಆಯೋಗವು ಮುಂದಾಗಿದೆ.
ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ನಡೆಯುತ್ತವೆ. ಶಾಲೆಗಳನ್ನು ಮತಗಟ್ಟೆಗಳಾಗಿ ಮತ್ತು ಶಿಕ್ಷಕರನ್ನು ಚುನಾವಣಾ ಸಿಬ್ಬಂದಿಯಾಗಿ ಬಳಸಿಕೊಳ್ಳಬೇಕಿರುವುದರಿಂದ ಪರೀಕ್ಷಾ ಅವಧಿಯಲ್ಲಿ ಚುನಾವಣೆ ಅಸಾಧ್ಯ. ಏಪ್ರಿಲ್ ಮತ್ತು ಮೇ ತಿಂಗಳ ಮೊದಲ ವಾರದಲ್ಲಿ ರಾಜ್ಯದಲ್ಲಿ ತೀವ್ರ ಬಿಸಿಲಿರುತ್ತದೆ. ಮೇ ಅಂತ್ಯದ ವೇಳೆಗೆ ವಾತಾವರಣವು ಸ್ವಲ್ಪ ತಂಪಾಗುವುದರಿಂದ ಮತ್ತು ಮಳೆಗಾಲ ಆರಂಭವಾಗುವ ಮುನ್ನ ಪ್ರಕ್ರಿಯೆ ಮುಗಿಸಲು ಆಯೋಗ ಚಿಂತಿಸಿದೆ. ಹೊಸ ವಾರ್ಡ್‌ಗಳ ಪುನರ್ವಿಂಗಡಣೆ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಲು ಸರ್ಕಾರಕ್ಕೆ ಇನ್ನು ಎರಡು ತಿಂಗಳ ಕಾಲಾವಕಾಶ ಬೇಕಿದೆ. ಈ ಎಲ್ಲಾ ಕಾರಣಗಳಿಂದಾಗಿ ಮೇ 25ರ ನಂತರ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ತೀರ್ಮಾನಿಸಿದೆ.
ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಅವಧಿ ಮುಗಿದು ಪ್ರಸ್ತುತ ಅಧಿಕಾರಿಗಳ ಆಡಳಿತದಲ್ಲಿವೆ. ಅಲ್ಲದೇ, ಡಿಸೆಂಬರ್ ತಿಂಗಳಿಗೆ ಗ್ರಾಮ ಪಂಚಾಯಿತಿಗಳ ಅವಧಿಯೂ ಮುಕ್ತಾಯಗೊಂಡಿದೆ. ಗ್ರಾಮೀಣ ಭಾಗದ ಪ್ರಜಾಪ್ರಭುತ್ವ ವ್ಯವಸ್ಥೆ ಕುಂಠಿತಗೊಂಡಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಪದೇ ಪದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುತ್ತಾ ಬಂದಿವೆ. ಸಂವಿಧಾನದ ಆಶಯದಂತೆ ಸ್ಥಳೀಯ ಸಂಸ್ಥೆಗಳು ಜನಪ್ರತಿನಿಧಿಗಳಿಲ್ಲದೆ ದೀರ್ಘಕಾಲ ಇರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಹೀಗಾಗಿ, ಪಂಚಾಯತ್ ಚುನಾವಣೆಗಳನ್ನು ಇನ್ನು ಮುಂದೆ ಮುಂದೂಡುವುದು ಸರ್ಕಾರಕ್ಕೆ ಅಸಾಧ್ಯವಾಗಿದೆ.
ಏಕಕಾಲಕ್ಕೆ ಚುನಾವಣೆ
ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲು ಚುನಾವಣಾ ಆಯೋಗ ಮುಂದಾಗಿರುವುದು ಒಂದು ಮಹತ್ವದ ನಿರ್ಧಾರವಾಗಿದೆ. ಪದೇ ಪದೇ ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದರಿಂದ ಅಭಿವೃದ್ಧಿ ಕೆಲಸಗಳಿಗೆ ತಡೆಯುಂಟಾಗುತ್ತದೆ. ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ಪ್ರತ್ಯೇಕ ಚುನಾವಣೆಗಳನ್ನು ನಡೆಸುವ ಬದಲಿಗೆ ಒಟ್ಟಾಗಿ ನಡೆಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವ ಚುನಾವಣಾ ವೆಚ್ಚವನ್ನು ತಗ್ಗಿಸಬಹುದು. ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳ ಪ್ರಭಾವ ಹಸಿರಾಗಿರುವಾಗಲೇ ಈ ಎಲ್ಲ ಚುನಾವಣೆಗಳನ್ನು ಎದುರಿಸಲು ಬಯಸಿದೆ. ಅತ್ತ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ಒಗ್ಗಟ್ಟಾಗಿ ಸರ್ಕಾರವನ್ನು ಕಟ್ಟಿಹಾಕಲು ಸಜ್ಜಾಗಿದೆ.
ಕಳೆದ ಕೆಲವು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದ ಕಾರಣ ಸ್ಥಳೀಯ ಮಟ್ಟದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಮತ್ತು ಸಾಮಾನ್ಯ ಜನರ ಕೆಲಸಗಳು ಆಗುತ್ತಿಲ್ಲ ಎಂಬ ದೂರುಗಳಿವೆ. ಶಾಸಕರೇ ಈಗ ಕಾರ್ಪೊರೇಟರ್ ಅಥವಾ ಪಂಚಾಯತ್ ಸದಸ್ಯರ ಕೆಲಸವನ್ನೂ ಮಾಡಬೇಕಾದ ಪರಿಸ್ಥಿತಿ ಇದೆ.
ಜನಪ್ರತಿನಿಧಿಗಳು ಇಲ್ಲದಿದ್ದಾಗ ಅಧಿಕಾರಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಕಡಿಮೆಯಾಗುತ್ತದೆ. ಸ್ಥಳೀಯ ಸಮಸ್ಯೆಗಳಾದ ರಸ್ತೆ, ಚರಂಡಿ, ಬೀದಿ ದೀಪ ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಆಲಿಸಲು ವಾರ್ಡ್ ಮಟ್ಟದ ಅಥವಾ ಗ್ರಾಮ ಮಟ್ಟದ ಪ್ರತಿನಿಧಿಗಳು ಅಗತ್ಯ. ಮೇ ತಿಂಗಳ ನಂತರ ಚುನಾವಣೆ ನಡೆದರೆ, ಈ ಆಡಳಿತಾತ್ಮಕ ಶೂನ್ಯತೆ ಕೊನೆಗೊಳ್ಳಲಿದೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ರಾಜ್ಯ ಚುನಾವಣಾ ಆಯೋಗ ಆಯುಕ್ತ ಜಿ.ಎಸ್.ಸಂಗ್ರೇಶಿ, ಬಿಬಿಎ ಚುನಾವಣೆಯನ್ನು ಮೇ 25ರ ನಂತರ ನಡೆಸುವ ಬಗ್ಗೆ ಗಂಭೀರವಾಗಿ ಆಲೋಚನೆ ನಡೆಸಲಾಗಿದೆ. ಆ ವೇಳೆಗೆ ಎಲ್ಲಾ ವಾರ್ಷಿಕ ಪರೀಕ್ಷೆಗಳು ಮುಕ್ತಾಯಗೊಂಡಿರುತ್ತವೆ. ಆ ಸಮಯದಲ್ಲಿ ಶಾಲಾ ಶಿಕ್ಷಕರು ಮಾತ್ರವಲ್ಲದೇ, ಇತರೆ ಸಿಬ್ಬಂದಿಗಳು ಸಹ ಚುನಾವಣೆ ಕಾರ್ಯಕ್ಕೆ ಲಭ್ಯವಾಗಿರುತ್ತಾರೆ. ಮತದಾರರು ಕರಡು ಪಟ್ಟಿ ಬಿಡುಗಡೆಯಾಗಿದ್ದು, ಆಕ್ಷೇಪಣೆಗಳಿದ್ದರೆ ಸಲ್ಲಿಕೆ ಮಾಡಬಹುದು. ಮಾ.೧೬ಕ್ಕೆ ಅಂತಿಮಪಟ್ಟಿ ಪ್ರಕಟಿಸಲಾಗುವುದು. ಆಯೋಗವು ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಸರ್ಕಾರವು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಕೆಯಾಗಿ ತಿದ್ದುಪಡಿಗಳಿದ್ದರೆ ಸರಿಮಾಡಿ ಆಯೋಗಕ್ಕೆ ನೀಡಲಿದೆ. ನಂತರ ಆಯೋಗವು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

