
ಆರು ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ನಿರ್ಧಾರ : ಡಿಕೆಶಿ
ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕಿದೆ. ಮುಂದಿನ ಆರು ತಿಂಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ.
ಮುಂದಿನ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದಿನ ಆರು ತಿಂಗಳಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣೆ ನಡೆಯಬೇಕಿರುವ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕಿದೆ. ಮುಂದಿನ ಆರು ತಿಂಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ. ಪಕ್ಷ ಸಂಘಟನೆಗೆ ಶ್ರಮಿಸಬೇಕು. 2028ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಜನರ ಬದುಕಿಗೆ ಹೊಸರೂಪ ನೀಡಲು ಕೆಲಸ ಮಾಡಬೇಕು ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಕಾನೂನು ಚೌಕಟ್ಟಿನಲ್ಲಿ ಸಂವಿಧಾನದ ಅಡಿಯಲ್ಲಿ ನಡೆಸಲು ಹೊಸ ರೂಪ ಬಂದಿದೆ. ದೇಶದಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳು ಒಟ್ಟಾಗಿ ಹೋರಾಟ ಮಾಡುತ್ತಿರುವುದು ಸಂತೋಷದ ವಿಚಾರ. ಇದರಲ್ಲಿ ನಾವು ಮುಂದಾಳತ್ವ ವಹಿಸಿ ಹೆಜ್ಜೆ ಇಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂಬ ವಿಶ್ವಾಸ ನಮಗಿದೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಪ್ರತಿಜ್ಞೆ ಮಾಡಿದ್ದೇವೆ ಎಂದು ಹೇಳಿದರು.
ಕುತಂತ್ರಗಳ ಮೂಲಕ ಈ ಸ್ವಾತಂತ್ರ್ಯಕ್ಕೆ ಧಕ್ಕೆ ತರುವವರು ಸಂವಿಧಾನ ವಿರೋಧಿಗಳು ಮಾತ್ರವಲ್ಲ, ಜೀವನದ ವಿರೋಧಿಗಳು ಸಹ ಆಗಿದ್ದು, ಅವರನ್ನು ಸಮಾಜಘಾತುಕರು ಎಂದು ಪರಿಗಣಿಸಬೇಕು. ಇವರನ್ನು ಸ್ವಾತಂತ್ರ್ಯದ ವೈರಿಗಳೆಂದು ಪರಿಗಣಿಸಬೇಕು. ದೇಶದ ಹಿತದೃಷ್ಟಿಯಿಂದ ಸಂವಿಧಾನಕ್ಕೆ ಆಗುವ ಮೋಸ ತಡೆಯಬೇಕು. ಸಂವಿಧಾನದ ಆಶಯಗಳನ್ನು ಉಳಿಸಬೇಕು. ಮತ ಕಳ್ಳತನ ದೇಶದ ಗೌರವಕ್ಕೆ ಧಕ್ಕೆ ತರುವಂತಾಗಿದೆ. ಇದರ ವಿರುದ್ಧದ ಹೋರಾಟಕ್ಕೆ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಕರ್ನಾಟಕದಿಂದಲೇ ಮುನ್ನುಡಿ ಬರೆದಿದ್ದಾರೆ. ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಎರಡೂ ವರೆ ವರ್ಷಗಳ ನಿಮ್ಮ ಪರಿಶ್ರಮದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಜನರ ಬದುಕಿನ ಬಗ್ಗೆ ಆಲೋಚಿಸಿ ರಾಜಕಾರಣ ಮಾಡುತ್ತಿದೆ. ಆದರೆ ವಿರೋಧ ಪಕ್ಷಗಳು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂಬುದನ್ನು ಅನೇಕ ಸಂದರ್ಭಗಳಲ್ಲಿ ಪ್ರತಿಪಕ್ಷಗಳು ಕೇಳುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಗೀತೆ, ರಾಷ್ಟ್ರಧ್ವಜ ತಂದುಕೊಟ್ಟಿದ್ದು ಕಾಂಗ್ರೆಸ್ ಎಂಬುದನ್ನು ಸಾರಬೇಕು. ನಮ್ಮ ಹೆಗಲ ಮೇಲೆ ತಿರಂಗಾ, ಎದೆಯ ಮೇಲೆ ಸಂವಿಧಾನವಿದೆ. ಹೀಗಾಗಿ ನಾವು ಸಮಾಜದಲ್ಲಿ ಮಾನವೀಯತೆ ಸ್ವಾತಂತ್ರ್ಯ ಸ್ಮರಿಸಬೇಕು. ಮಾನಸಿಕ, ಕಾನೂನಾತ್ಮಕ, ವೈಯಕ್ತಿಕ, ಧಾರ್ಮಿಕ, ಬೌದ್ಧಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ್ಯವನ್ನು ದೇಶಕ್ಕೆ ಕೊಟ್ಟವರು ಕಾಂಗ್ರೆಸ್. ಸಂವಿಧಾನದ ಅಡಿಯಲ್ಲಿ ಬದುಕುವ, ತಮಗೆ ಬೇಕಾದ ಜನಪ್ರತಿನಿಧಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಟ್ಟಿದ್ದೂ ಕಾಂಗ್ರೆಸ್ ಎಂದು ತಿಳಿಸಿದರು.