
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿ
GBA Election | 5 ಪಾಲಿಕೆಗಳ ಕರಡು ಮತದಾರರ ಪಟ್ಟಿ ಸಿದ್ಧ; ಅಂತೂ ಚುನಾವಣೆಗೆ ಸಜ್ಜಾದ ಜಿಬಿಎ
ಬೆಂಗಳೂರು ಕೇಂದ್ರ ನಗರ ಪಾಲಿಕೆಯ 63, ಉತ್ತರ ನಗರ ಪಾಲಿಕೆ 72, ದಕ್ಷಿಣ ನಗರ ಪಾಲಿಕೆ 72, ಪೂರ್ವ ನಗರ ಪಾಲಿಕೆ 50 ಹಾಗೂ ಪಶ್ಚಿಮ ನಗರ ಪಾಲಿಕೆಯ 112 ವಾರ್ಡ್ಗಳಿಗೆ ಕರಡು ಮೀಸಲಾತಿಯನ್ನು ನಗರಾಭಿವೃದ್ಧಿ ಇಲಾಖೆ ಈಗಾಗಲೇ ಪ್ರಕಟಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ವಾರು ಕರಡು ಮತದಾರರ ಪಟ್ಟಿಯನ್ನು ನಾಳೆ (ಸೋಮವಾರ) ಪ್ರಕಟಿಸಲಿದ್ದು, ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗವು ಸುದೀರ್ಘ ಅವಧಿಯಿಂದ ಬಾಕಿ ಉಳಿದಿದ್ದ ಜಿಬಿಎ ಚುನಾವಣೆಗೆ ಅಧಿಕೃತವಾಗಿ ಚಾಲನೆ ನೀಡಲಿವೆ.
ಚುನಾವಣಾ ಆಯೋಗದ ಆಯುಕ್ತರು, ರಾಜ್ಯ ಚುನಾವಣಾ ವಿಭಾಗದ ವಿಶೇಷ ಆಯುಕ್ತರು ಹಾಗೂ ವಿಶೇಷ ಕರ್ತವ್ಯಾಧಿಕಾರಿ ಸಮ್ಮುಖದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ ವಾರ್ಡ್ವಾರು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಂದ್ರ ಕಚೇರಿಯಲ್ಲಿ ನಾಳೆ ಬೆಳಿಗ್ಗೆ 11ಕ್ಕೆ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಆ ಮೂಲಕ ಪಾಲಿಕೆ ಆಡಳಿತವನ್ನು ಮರು ಸ್ಥಾಪಿಸುವತ್ತ ಜಿಬಿಎ ಮಹತ್ವದ ಹೆಜ್ಜೆ ಇಟ್ಟಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ಬದಲಾಯಿಸಿ, ಐದು ನಗರ ಪಾಲಿಕೆಗಳಾಗಿ ವಿಭಜಿಸಲಾಗಿದೆ. ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣ ಹಾಗೂ ಆಡಳಿತ ಸರಳೀಕರಣದ ದೃಷ್ಟಿಯಿಂದ ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಕಳೆದ ವಾರವಷ್ಟೇ ಕರಡು ಮೀಸಲನ್ನು ಜಿಬಿಎ ಪ್ರಕಟಿಸಿತ್ತು.
ಚುನಾವಣಾ ಪ್ರಕ್ರಿಯೆಯ ಮೊದಲ ಹೆಜ್ಜೆ
ಐದು ನಗರ ಪಾಲಿಕೆಗಳ ವಾರ್ಡ್ವಾರು ಕರಡು ಮತದಾರರ ಪಟ್ಟಿ ಪ್ರಕಟಿಸುವ ಮೂಲಕ ರಾಜ್ಯ ಚುನಾವಣಾ ಆಯೋಗವು ಜಿಬಿಎ ಚುನಾವಣಾ ಪ್ರಕ್ರಿಯೆಯಲ್ಲಿ ಮೊದಲ ಹೆಜ್ಜೆ ಇರಿಸಿದೆ.
ಕರಡು ಪಟ್ಟಿ ಪ್ರಕಟಿಸಿದ ಬಳಿಕ ಸಾರ್ವಜನಿಕರ ಆಕ್ಷೇಪಣೆ, ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಅವಕಾಶ ನೀಡಲಾಗುವುದು.15 ದಿನಗಳ ಒಳಗೆ ಬರುವ ಆಕ್ಷೇಪಣೆಗಳನ್ನು ಪರಿಶೀಲಿಸಲಿದೆ. ಅಂತಿಮ ಮತದಾರರ ಪಟ್ಟಿಯ ಪ್ರಕಟಿಸಿದ ನಂತರ ಅಧಿಕೃತವಾಗಿ ಚುನಾವಣಾ ವೇಳಾಪಟ್ಟಿ ಘೋಷಿಸುವ ಸಾಧ್ಯತೆ ಇದೆ.
ಗರಿಗೆದರಿದ ರಾಜಕೀಯ ಚಟುವಟಿಕೆ
ಜಿಬಿಎ ಚುನಾವಣೆಗೆ ಕರಡು ಮೀಸಲು ಪ್ರಕಟಿಸಿದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜಕೀಯ ಪಕ್ಷಗಳು ವಾರ್ಡ್‌ವಾರು ಮತದಾರರ ಮಾಹಿತಿ, ಜಾತಿ ಸಮೀಕರಣ, ಜನಾಭಿಪ್ರಾಯ ಸಂಗ್ರಹಗಳಲ್ಲಿ ತೊಡಗಿಸಿಕೊಂಡಿವೆ.
ನಗರಾಭಿವೃದ್ಧಿ, ಮೂಲಸೌಕರ್ಯ, ಕುಡಿಯುವ ನೀರು, ರಸ್ತೆ, ತ್ಯಾಜ್ಯ ನಿರ್ವಹಣೆ, ಸಾರಿಗೆ ಹಾಗೂ ಪಾರದರ್ಶಕ ಆಡಳಿತವನ್ನೇ ಚುನಾವಣಾ ಅಸ್ತ್ರಗಳನ್ನಾಗಿ ಇಟ್ಟುಕೊಂಡು ಕಾರ್ಯತಂತ್ರ ರೂಪಿಸುವಲ್ಲಿ ನಿರತವಾಗಿವೆ. ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿ ಈಗಾಗಲೇ ಹಲವು ಅಭ್ಯರ್ಥಿಗಳು ಟಿಕೆಟ್‌ಗಾಗಿ ಒತ್ತಡ ಹೇರಲಾರಂಭಿಸಿವೆ.
ಕೊನೆಗೂ ನಿಟ್ಟುಸಿರು ಬಿಟ್ಟ ನಾಗರಿಕರು
ಕಳೆದ ಹಲವು ವರ್ಷಗಳಿಂದ ಪಾಲಿಕೆ ಚುನಾವಣೆ ನಡೆಯದ ಹಿನ್ನೆಲೆ ಸದಸ್ಯರಿಲ್ಲದೇ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಹೆಣಗಾಡುತ್ತಿದ್ದರು.
ಈಗ ಚುನಾವಣಾ ಪ್ರಕ್ರಿಯೆ ಆರಂಭಿಸಿರುವುದರಿಂದ ನಾಗರಿಕರಲ್ಲಿ ಕೊಂಚ ಸಮಾಧಾನ ತಂದಿದೆ. ವಾರ್ಡ್‌ಗಳಲ್ಲಿ ಸಮಸ್ಯೆ ಹೇಳಿಕೊಳ್ಳಲು ಜನಪ್ರತಿನಿಧಿಗಳು ಇರಲಿಲ್ಲ. ಅಧಿಕಾರಿಗಳು ಕೈಗೆ ಸಿಗುತ್ತಿರಲಿಲ್ಲ. ಹೀಗಾಗಿ ಸಾರ್ವಜನಿಕರು ಸಮಸ್ಯೆಗಳಲ್ಲೇ ತೊಳಲಾಡುವಂತಾಗಿತ್ತು. ನಗರ ಪಾಲಿಕೆಗಳಿಗೆ ಆಡಳಿತ ಮಂಡಳಿ ಬಂದರೆ ವಾರ್ಡ್‌ವಾರು ನೇರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆ ನಿರ್ಮಾಣವಾಗಲಿದೆ ಎಂಬ ಆಶಾಭಾವನೆ ಜನರಲ್ಲಿ ಮೂಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ 369 ವಾರ್ಡ್ಗಳಿಗೆ ಮೀಸಲಾತಿ ಕರಡು ಅಧಿಸೂಚನೆಯನ್ನು ಸರ್ಕಾರ ಕಳೆದ ವಾರ ಪ್ರಕಟಿಸಿತ್ತು.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ 63, ಬೆಂಗಳೂರು ಉತ್ತರ ನಗರ ಪಾಲಿಕೆ 72, ಬೆಂಗಳೂರು ದಕ್ಷಿಣ ನಗರ ಪಾಲಿಕೆ 72, ಬೆಂಗಳೂರು ಪೂರ್ವ ನಗರ ಪಾಲಿಕೆ 50 ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ 112 ವಾರ್ಡ್ಗಳಿಗೆ ಕರಡು ಮೀಸಲಾತಿಯನ್ನು ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿತ್ತು. ಈ ಕರಡು ಮೀಸಲಾತಿಗೆ ಜ. 23 ರೊಳಗೆ ಆಕ್ಷೇಪಣೆ ಸಲ್ಲಿಸಬೇಕಾಗಿದೆ.

