
ಈ ವರ್ಷವೇ ಜಿಬಿಎ ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸರ್ಕಾರ ಘೋಷಣೆ
2026ರ ವರ್ಷ ಶುಭ ಲಗ್ನದಲ್ಲಿ ಆರಂಭವಾಗಿದೆ. 2025ರಲ್ಲಿ ಸರ್ಕಾರ ಉತ್ತಮ ಆಡಳಿತ ನೀಡಿದೆ. ಬಂಡವಾಳ ಹೂಡಿಕೆದಾರರ ಸಮಾವೇಶ ಮತ್ತು ಟೆಕ್ ಸಮ್ಮೇಳನ ಮೂಲಕ ರಾಜ್ಯವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸಿದ್ದೇವೆ.
ಹೊಸ ವರ್ಷದ ಆರಂಭದ ದಿನವೇ ರಾಜ್ಯದ ರಾಜಧಾನಿಯ ಜನತೆಗೆ ಮಹತ್ವದ ಸುದ್ದಿಯೊಂದನ್ನು ನೀಡಿರುವ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಗ್ರೇಟರ್ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಬಾಕಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಈ ವರ್ಷವೇ ನಡೆಸಲಾಗುವುದು ಎಂದು ಅಶ್ವಾಸನೆ ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊಸ ವರ್ಷದ ಆಡಳಿತಾತ್ಮಕ ಮತ್ತು ಅಭಿವೃದ್ಧಿ ಸಂಕಲ್ಪಗಳ ಮಾಹಿತಿಯನ್ನು ಹಂಚಿಕೊಂಡರು. 2026ರ ವರ್ಷ ಶುಭ ಲಗ್ನದಲ್ಲಿ ಆರಂಭವಾಗಿದೆ. 2025ರಲ್ಲಿ ಸರ್ಕಾರ ಉತ್ತಮ ಆಡಳಿತ ನೀಡಿದೆ. ಬಂಡವಾಳ ಹೂಡಿಕೆದಾರರ ಸಮಾವೇಶ ಮತ್ತು ಟೆಕ್ ಸಮ್ಮೇಳನಗಳ ಮೂಲಕ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸಿದ್ದೇವೆ. ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ಅಲ್ಲದೆ, ನೀರಾವರಿ ಕ್ಷೇತ್ರದಲ್ಲಿ ಮೇಕೆದಾಟು, ಯುಕೆಪಿ ಮತ್ತು ತುಂಗಾಭದ್ರ ಯೋಜನೆಗಳಿಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ನನ್ನ 35 ವರ್ಷಗಳ ರಾಜಕಾರಣದಲ್ಲಿ ಬೆಂಗಳೂರಿಗೆ ಇಷ್ಟು ದೊಡ್ಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲ. ಪ್ರಧಾನಮಂತ್ರಿಗಳು ಕೂಡ ಬೆಂಗಳೂರಿಗೆ ಬಂದಾಗ ಈ ನಗರವನ್ನು ಕೊಂಡಾಡಿದರು. ಅವರು ನಮ್ಮ ನಗರಕ್ಕೆ ಅನುದಾನ ನೀಡದಿದ್ದರೂ ನಗರಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಹೆಬ್ಬಾಳ ಮೇಲ್ಸೇತುವೆ ಎರಡನೇ ಲೂಪ್ ಉದ್ಘಾಟನೆ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಉತ್ತರ ಭಾಗದ ಜನರ ಸುಗಮ ವಾಹನ ಸಂಚಾರಕ್ಕಾಗಿ ಹೆಬ್ಬಾಳ ಮೇಲ್ಸೇತುವೆಯ ಎರಡನೇ ಲೂಪ್ ಅನ್ನು ಉದ್ಘಾಟನೆ ಮಾಡಲಾಗಿದೆ. ಈ ಭಾಗದ ಜನರು ಹೆಬ್ಬಾಳ ಮೇಲ್ಸೇತುವೆ ಬಳಿ ಸಂಚಾರ ದಟ್ಟಣೆ ದೂರು ಹೇಳುತ್ತಿದರು. ಹೀಗಾಗಿ ನಾವು ತ್ವರಿತ ಗತಿಯಲ್ಲಿ ಪರಿಹಾರ ಕಂಡು ಹಿಡಿದಿದ್ದೇವೆ. ಆಮೂಲಕ ಸಂಚಾರ ದಟ್ಟಣೆ ನಿವಾರಿಸಿದ್ದೇವೆ ಎಂದು ತಿಳಿಸಿದರು.
ಬಿಡಿಎ 50ನೇ ವರ್ಷದ ಸಂಭ್ರಮ: ಬೃಹತ್ ಯೋಜನೆಗಳ ಅನಾವರಣ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ವರ್ಷ 50ನೇ ವಸಂತಕ್ಕೆ ಕಾಲಿಟ್ಟಿದ್ದು, ನನ್ನ ರಾಜಕೀಯ ಜೀವನದಲ್ಲಿ ಹಿಂದೆಂದೂ ಮಾಡಲಾಗದ ಐತಿಹಾಸಿಕ ಯೋಜನೆಗಳನ್ನು ಹಮ್ಮಿಕೊಂಡಿದೆ. 120 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಅನ್ನು ಕಾರ್ಯರೂಪಕ್ಕೆ ತರಲು ರೈತರ ಬಳಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಶೇ.35 ರಷ್ಟು ವಾಣಿಜ್ಯ ಭೂಮಿಯನ್ನು ರೈತರಿಗೆ ಪರಿಹಾರವಾಗಿ ನೀಡಲಾಗುತ್ತಿದೆ. ಜತೆಗೆ ಸಣ್ಣ ಟೌನ್ ಶಿಪ್ ನಿರ್ಮಾಣಕ್ಕೆ ರೈತರಿಗೆ ಉತ್ತಮ ಪರಿಹಾರ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಒಂದೂವರೇ ಕಿ.ಮೀ ಟನಲ್ ರಸ್ತೆ ಬರಲಿದೆ. ಮೇಕ್ರಿ ವೃತ್ತದ ಬಳಿ ಮೇಲ್ಸೇತುವೆ ಸಾಗಲಿದೆ. ಇದನ್ನು ಮೂರು ಭಾಗವಾಗಿ ಕಟ್ಟಲಾಗುವುದು. ಇನ್ನು ತುಮಕೂರು ರಸ್ತೆಯಿಂದ ಕೆ.ಆರ್ ಪುರದ ವರೆಗೆ ಮೇಲ್ಸೇತುವೆ ಮೂಲಕ ಹೊರ ವರ್ತುಲ ರಸ್ತೆ (ಒಆರ್ ಆರ್) ಮಾಡಲು ಮುಂದಾಗಿದ್ದೇವೆ ಎಂದು ವಿವರಿಸಿದರು.
ಇದೇ ವೇಳೆ ನೈಸ್ ಸಂಸ್ಥೆಯ ಕೆಲವು ಕೆಐಎಡಿಬಿ ಜಾಗವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ಇದಕ್ಕೆ ಅವರು ತಕರಾರು ಎತ್ತಿದ್ದಾರೆ. ನೈಸ್ ನವರು ತಾವು ಸರ್ಕಾರಕ್ಕಿಂತ ದೊಡ್ಡವರು ಎಂದು ಭಾವಿಸಿದ್ದಾರೆ. ಹೀಗಾಗಿ ಬೇರೆ ದಾರಿ ಹುಡುಕುತ್ತೇವೆ. ಅವರಿಗೆ ಹೇಗೆ ಪಾಠ ಕಲಿಸಬೇಕು ಎಂಬುದು ಗೊತ್ತಿದೆ. ಹೀಗಾಗಿ ಸ್ಕೈಡೆಕ್ ಗಾಗಿ ನಾವು ಬೇರೆ ಕಡೆ ಬಿಡಿಎ ಜಾಗ ಗುರುತಿಸಿದ್ದೇವೆ. ವಿಮಾನ ಹಾರಾಟದ ಟವರ್ ಸಮಸ್ಯೆ ಇರುವ ಕಾರಣ, ಇದನ್ನು ಸೂಕ್ತ ಜಾಗದಲ್ಲಿ ನಿರ್ಮಿಸುತ್ತೇವೆ ಎಂದರು.

