GBA Chief Commissioner conducts city tour, instructs to asphalt Hebbal flyover
x

ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಬಳ್ಳಾರಿ ರಸ್ತೆ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಬಿಎ ಮುಖ್ಯ ಆಯುಕ್ತರಿಂದ ನಗರ ಪ್ರದಕ್ಷಿಣೆ, ಹೆಬ್ಬಾಳ ಮೇಲ್ಸೇತುವೆ ಡಾಂಬರೀಕರಣಕ್ಕೆ ಸೂಚನೆ

ಬಳ್ಳಾರಿ ರಸ್ತೆಯ ಮೆಟ್ರೋ ಕಾಮಗಾರಿ ಪೂರ್ಣಗೊಂಡ ಪ್ರದೇಶಗಳಲ್ಲಿ ಇರುವ ಅನುಪಯುಕ್ತ ಕಬ್ಬಿಣ ವಸ್ತುಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಮೆಟ್ರೋ ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಸೂಚಿಸಿದರು.


Click the Play button to hear this message in audio format

ಬಳ್ಳಾರಿ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಪಾಲಿಕೆ, ಮೆಟ್ರೋ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳು ಸಮನ್ವಯದಿಂದ ಪರಿಹಾರೋಪಾಯಗಳನ್ನು ರೂಪಿಸುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್‌ರಾವ್ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಮಂಗಳವಾರ(ನ.4) ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ರಸ್ತೆಯ ಮೆಟ್ರೋ ಕಾಮಗಾರಿ ಪೂರ್ಣಗೊಂಡ ಪ್ರದೇಶಗಳಲ್ಲಿ ಇರುವ ಅನುಪಯುಕ್ತ ಕಬ್ಬಿಣ ವಸ್ತುಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಮೆಟ್ರೋ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೇಲ್ಸೇತುವೆಗೆ ಡಾಂಬರೀಕರಣ ಮಾಡಿ

ಹೆಬ್ಬಾಳ ಮೇಲ್ಸೇತುವೆಯ ಮೇಲ್ಭಾಗ ಹಾಳಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಆದ್ದರಿಂದ ತಕ್ಷಣವೇ ಸಂಪೂರ್ಣ ಮೇಲ್ಸೇತುವೆಗೆ ಡಾಂಬರೀಕರಣ ಮಾಡಿ ವಾಹನ ಸಂಚಾರ ಸುಗಮಗೊಳಿಸಬೇಕು. ಹೆಬ್ಬಾಳದಿಂದ ಕೊಡಿಗೆಹಳ್ಳಿ ಕಡೆಗೆ ಸಂಪರ್ಕ ನೀಡುವ ಹಯಾತ್ ಸೆಂಟರ್ ಮುಂಭಾಗದ ರಸ್ತೆಯ ಮಧ್ಯ ಭಾಗದಲ್ಲಿರುವ ಸ್ಲ್ಯಾಬ್ ಸರಿಯಾಗಿ ಅಳವಡಿಸದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅದನ್ನು ತಕ್ಷಣ ಸರಿಪಡಿಸುವಂತೆ ತಿಳಿಸಿದರು.

ರಸ್ತೆಯಲ್ಲಿ ನೀರು ನಿಲ್ಲದಿರಲಿ

ಕೊಡಿಗೆಹಳ್ಳಿ ಸಿಗ್ನಲ್‌ನ ನಂತರ ಕ್ರಾಸ್ ಕಲ್ವರ್ಟ್ ಬಳಿ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ಸಮಸ್ಯೆ ಉಂಟಾಗಿದೆ. ಯಲಹಂಕ ರೈಲ್ವೆ ಸೇತುವೆ ಬಳಿ ಸೈಡ್ ಡ್ರೈನ್ ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿರುವುದರಿಂದ ಮಳೆ ಬಂದಾಗ ನೀರು ರಸ್ತೆಯಲ್ಲಿ ನಿಂತುಕೊಳ್ಳುತ್ತದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯ ರಸ್ತೆಗೆ ಸಂಪರ್ಕ ನೀಡಿ

ಬಳ್ಳಾರಿ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಸರ್ವೀಸ್ ರಸ್ತೆಯಿಂದ ಮುಖ್ಯ ರಸ್ತೆಗೆ ಒಳಹೊಕ್ಕು-ಹೊರಹೊಮ್ಮುವ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಬ್ಯಾಟರಾಯನಪುರದಲ್ಲಿ ಅನುಷ್ಠಾನಗೊಂಡಿದೆ. ಇದೇ ಮಾದರಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿಯೂ ಇದೇ ರೀತಿಯ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಅನುಷ್ಠಾನಗೊಳಿಸಲು ಸೂಚಿಸಿದರು.

ಸೂಚನಾ ಫಲಕ ಅಳವಡಿಸಿ

ಸರ್ವೀಸ್ ರಸ್ತೆ ಮತ್ತು ಮುಖ್ಯ ರಸ್ತೆ ಸಂಪರ್ಕ ಬಿಂದುಗಳಲ್ಲಿಯೂ ನಾಗರಿಕರ ಸೌಲಭ್ಯಕ್ಕಾಗಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಬ್ಯಾಟರಾಯನಪುರ ಜಂಕ್ಷನ್‌ನಲ್ಲಿ ಸರ್ವೀಸ್ ರಸ್ತೆ ಮತ್ತು ಮುಖ್ಯ ರಸ್ತೆ ನಡುವೆ ಬ್ಯಾರಿಕೇಡ್ ಇರುವುದರಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಅಲ್ಲಿ ಸ್ಕೈವಾಕ್ ನಿರ್ಮಿಸಲು ಸಾಧ್ಯತೆಯನ್ನು ಪರಿಶೀಲಿಸಿ ಕಾಮಗಾರಿ ಕೈಗೊಳ್ಳಬೇಕು. ಮುಖ್ಯ ರಸ್ತೆ ಮತ್ತು ಸರ್ವೀಸ್ ರಸ್ತೆಯ ಮಧ್ಯದಲ್ಲಿರುವ ಚರಂಡಿಯ ಬಹುತೇಕ ಭಾಗದಲ್ಲಿ ಸ್ಲ್ಯಾಬ್‌ಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಮಾಡಿ, ಚರಂಡಿಯಲ್ಲಿರುವ ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸೂಚಿಸಿದರು.

ಪ್ರಮುಖ ನಿರ್ದೇಶನಗಳು

ಯಲಹಂಕ ರೈತರ ಸಂತೆ ಬಳಿ ಸೈಡ್ ಡ್ರೈನ್ ನಿರ್ಮಾಣ, ಬಾಗಲೂರು ಕ್ರಾಸ್‌ನಲ್ಲಿ ಜಲಾವೃತ, ರಸ್ತೆ ದುರಸ್ತಿ ಹಾಗೂ ಡ್ರೈನ್ ಸ್ವಚ್ಛಗೊಳಿಸಬೇಕು, ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಬೇಕು, ಅಲ್ಲಾಳಸಂದ್ರ ಗೇಟ್ ಬಳಿ ಎನ್‌ಎಚ್‌ಎಐ ಮೇಲ್ಸೇತುವೆ ಕೆಳಭಾಗದ ಖಾಲಿ ಜಾಗವನ್ನು ಉದ್ಯಾನ ಹಾಗೂ ಚಿತ್ರಗಳಂದ ಸುಂದರಗೊಳಿಸಬೇಕು, ಬ್ಯಾಟರಾಯನಪುರ ಸಿಗ್ನಲ್‌ನಿಂದ ಕೊಡಿಗೆಹಳ್ಳಿ ಸಿಗ್ನಲ್‌ವರೆಗೆ ರಸ್ತೆ ದುರಸ್ತಿ ಮತ್ತು ಸ್ವಚ್ಛತೆ ಕಾಪಾಡಲು ಸೂಚನೆ ನೀಡಿದರು.

Read More
Next Story