
ಜಿಬಿಎ ಹಿಡಿತಕ್ಕೆ ಕಾಂಗ್ರೆಸ್ ಬ್ಯಾಲೆಟ್ ತಂತ್ರ? 25 ವರ್ಷಗಳ ಇವಿಎಂ ಪಯಣಕ್ಕೆ ಇತಿಶ್ರೀ
ಬ್ಯಾಲೆಟ್ ಪೇಪರ್ ಬಳಕೆಯಿಂದ ಮತ ಎಣಿಕೆಗೆ ಸಮಯ ಬೇಕಾಗುತ್ತದೆ. ಈ ಅವಧಿಯಲ್ಲಿ ಮತಪೆಟ್ಟಿಗೆಗಳ ‘ಸ್ಟ್ರಾಂಗ್ ರೂಮ್’ಗಳಲ್ಲಿ ಅಕ್ರಮಗಳು ನಡೆಯುವ ಸಾಧ್ಯತೆ ಹೆಚ್ಚು ಎಂಬ ಆತಂಕ ಸಾರ್ವಜನಿಕರಲ್ಲಿದೆ.
ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಇತಿಹಾಸದಲ್ಲಿ ಬರೋಬ್ಬರಿ 25 ವರ್ಷಗಳ ಬಳಿಕ ಇವಿಎಂಗಳನ್ನು ಬದಿಗೊತ್ತಿ ಮತ್ತೆ ಬ್ಯಾಲೆಟ್ ಪೇಪರ್(ಮತಪತ್ರ) ಯುಗವನ್ನು ಆರಂಭಿಸಲಾಗುತ್ತಿದೆ. ಇದು ಕೇವಲ ಆಡಳಿತಾತ್ಮಕ ತೀರ್ಮಾನವಾಗಿರದೆ ಇದರ ಹಿಂದೆ ಬಿಜೆಪಿಯ ರಾಷ್ಟ್ರ ನಾಯಕರನ್ನು ʼಕುಟುಕುʼವ ಕಾಂಗ್ರೆಸ್ ತಂತ್ರ ಅಡಗಿದೆ.
ಸಿಲಿಕಾನ್ ಸಿಟಿಯಂತಹ ಜಾಗತಿಕ ಕೇಂದ್ರದಲ್ಲಿ ತಂತ್ರಜ್ಞಾನವನ್ನು ಕೈಬಿಟ್ಟಿರುವುದು ಪಾರದರ್ಶಕತೆ ಹೆಸರಿನಲ್ಲಿ ಕಾಂಗ್ರೆಸ್ ಪಡೆದುಕೊಳ್ಳುತ್ತಿರುವ ರಾಜಕೀಯ ಲಾಭ ಎಂಬುದು ಪ್ರತಿಪಕ್ಷಗಳ ವಿಶ್ಲೇಷಣೆಗಳಾಗಿವೆ.
ಬೆಂಗಳೂರಿನ ಚುನಾವಣಾ ಇತಿಹಾಸವನ್ನು ಕೆದಕಿದಾಗ 2001ನೇ ವರ್ಷ ಅತ್ಯಂತ ಪ್ರಮುಖವಾಗಿ ಕಾಣಿಸುತ್ತದೆ. ಅಂದು ಇನ್ನೂ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ಅಸ್ತಿತ್ವಕ್ಕೆ ಬಂದಿರಲಿಲ್ಲ. ಅದು ‘ಬೆಂಗಳೂರು ಮಹಾನಗರ ಪಾಲಿಕೆ’ ಆಗಿತ್ತು. ಆ ಸಮಯದಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಇವಿಎಂ ಗಳನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. ಇದು ಅಂದಿನ ಕಾಲಕ್ಕೆ ಅತ್ಯಂತ ಕ್ರಾಂತಿಕಾರಕ ಹೆಜ್ಜೆಯಾಗಿತ್ತು. ಮತದಾನದ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಮತ ಎಣಿಕೆಯನ್ನು ವೇಗಗೊಳಿಸಲು ಇವಿಎಂ ಸಹಕಾರಿಯಾಗಿದ್ದವು.
ಅಂದಿನಿಂದ ಸತತ 25 ವರ್ಷಗಳ ಕಾಲ ನಡೆದ ಎಲ್ಲಾ ಪಾಲಿಕೆ ಚುನಾವಣೆಗಳು ಹಾಗೂ ನಂತರ ಹಂತ ಹಂತವಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲೂ ಇವಿಎಂಗಳನ್ನೇ ಬಳಸಲಾಗಿತ್ತು. ಆದರೆ, ಈಗ ಎರಡು ದಶಕಗಳಿಗೂ ಹೆಚ್ಚು ಕಾಲದ ಆಧುನಿಕ ಪಯಣವನ್ನು ಬದಿಗೊತ್ತಿ, ಮತ್ತೆ 1990ರ ದಶಕದ ಬ್ಯಾಲೆಟ್ ಪೇಪರ್ ಕಾಲಕ್ಕೆ ಹೋಗುತ್ತಿರುವುದು "ಪ್ರಗತಿಯೇ ಅಥವಾ ಹಿನ್ನಡೆಯೇ?" ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ, "ಬ್ಯಾಲೆಟ್ ಪೇಪರ್ ಬಳಕೆ ನಿರ್ಧಾರವನ್ನು ಕಾನೂನುಬದ್ಧವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಜಿಬಿಎ ಕಾಯ್ದೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಸ್ಪಷ್ಟ ಅವಕಾಶವಿದೆ. ಸುಪ್ರೀಂಕೋರ್ಟ್ ಎಲ್ಲೂ ಬ್ಯಾಲೆಟ್ ಪೇಪರ್ ನಿಷೇಧಿಸಿಲ್ಲ," ಎಂದು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.
"ಇವಿಎಂ ಬಳಸಿದಾಗ ಫಲಿತಾಂಶವು ಅತ್ಯಂತ ನಿಖರವಾಗಿ ಮತ್ತು ಯಾಂತ್ರಿಕವಾಗಿ ದಾಖಲಾಗುತ್ತದೆ. ಅಲ್ಲಿ ಮತಗಳನ್ನು ಅಳಿಸಿಹಾಕಲು ಅಥವಾ ಬದಲಾಯಿಸಲು ಯಾವುದೇ ಮಾನವ ಹಸ್ತಕ್ಷೇಪಕ್ಕೆ ಅವಕಾಶವಿರುವುದಿಲ್ಲ. ಆದರೆ ಬ್ಯಾಲೆಟ್ ಪೇಪರ್ ವ್ಯವಸ್ಥೆಯಲ್ಲಿ ಪ್ರತಿಯೊಂದು ಹಂತದಲ್ಲೂ ಮಾನವ ಹಸ್ತಕ್ಷೇಪ ಇರುತ್ತದೆ. ಬ್ಯಾಲೆಟ್ ಪೇಪರ್‌ನಲ್ಲಿ ಸಣ್ಣ ತಪ್ಪುಗಳಾದರೂ ಅಂತಹ ಮತಗಳನ್ನು ತಿರಸ್ಕೃತ ಎಂದು ಘೋಷಿಸಬಹುದು. ಎಣಿಕೆ ಸಮಯದಲ್ಲಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ವಿರೋಧ ಪಕ್ಷದ ಅಭ್ಯರ್ಥಿಗಳಿಗೆ ಬಿದ್ದಿರುವ ನಿರ್ಣಾಯಕ ಮತಗಳನ್ನು ತಾಂತ್ರಿಕ ಕಾರಣ ನೀಡಿ ತಿರಸ್ಕರಿಸುವಂತೆ ಮಾಡುವುದು ಹಳೆಯ ಕಾಲದ ರಾಜಕೀಯ ತಂತ್ರಗಾರಿಕೆಯಾಗಿದೆ. ಈಗ ಮತ್ತೆ ಅದೇ ತಂತ್ರಕ್ಕೆ ಕಾಂಗ್ರೆಸ್ ಹಾದಿ ಮಾಡಿಕೊಡುತ್ತಿದೆ," ಎಂಬುದು ಪ್ರತಿಪಕ್ಷ ಬಿಜೆಪಿಯ ಅರೋಪ.
ಬ್ಯಾಲೆಟ್ ಪೇಪರ್ ಬಳಕೆ ಬಗ್ಗೆ ಬಿಜೆಪಿ ಮುಖಂಡ ಹಾಗೂ ಪಾಲಿಕೆಯ ಮಾಜಿ ಸದಸ್ಯ ಎನ್.ಆರ್.ರಮೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಅವರು, "ಬ್ಯಾಲೆಟ್ ಪೇಪರ್ ಬಳಕೆ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಇದೆ. ಇದು ಗೂಂಡಾಗಿರಿ ಸಂಸ್ಕೃತಿಗೆ ಅನುಕೂಲವಾಗಲಿದೆ. ಇವಿಎಂ ಬಳಕೆ ಬಂದ ನಂತರ ಕಾಂಗ್ರೆಸ್‌ನ ವರ್ಚಸ್ಸು ಕಡಿಮೆಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬ್ಯಾಲೆಟ್ ಪೇಪರ್‌ಗಳನ್ನು ತೆಗೆದುಕೊಂಡು ಹೋಗಿ ಅವರೇ ಮತಪತ್ರಗಳ ಮೇಲೆ ಗುದ್ದುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇವಿಎಂ ಮೂಲಕ ಚುನಾವಣೆ ನಡೆಸಬೇಕು," ಎಂದು ಆಗ್ರಹಿಸಿದರು.
ತಾಂತ್ರಿಕ ಹಿನ್ನಡೆಯೇ? ಅಥವಾ ವ್ಯವಸ್ಥಿತ ಪಿತೂರಿಯೇ?
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತಿದೆ ಎಂಬ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿಕೆಯು ತಾರ್ಕಿಕವಾಗಿ ಸರಿಯಿದ್ದರೂ, ಭಾರತದಂತಹ ಜನಸಂಖ್ಯೆ ಹೆಚ್ಚಿರುವ ದೇಶದಲ್ಲಿ ಇದು ಹಿನ್ನಡೆಯೇ ಎಂಬ ವಾದವಿದೆ. ಬ್ಯಾಲೆಟ್ ಪೇಪರ್ ಬಳಕೆಯಿಂದ ಮತ ಎಣಿಕೆಗೆ ದಿನಗಟ್ಟಲೆ ಸಮಯ ಬೇಕಾಗುತ್ತದೆ. ಈ ಸುದೀರ್ಘ ಅವಧಿಯಲ್ಲಿ ಮತಪೆಟ್ಟಿಗೆಗಳನ್ನು ಇರಿಸುವ ‘ಸ್ಟ್ರಾಂಗ್ ರೂಮ್’ಗಳಲ್ಲಿ ಅಕ್ರಮಗಳು ನಡೆಯುವ ಸಾಧ್ಯತೆ ಹೆಚ್ಚು ಎಂಬ ಆತಂಕ ಸಾರ್ವಜನಿಕರಲ್ಲಿದೆ. ಇವಿಎಂ ಕೊರತೆಯ ನೆಪವನ್ನೊಡ್ಡಿ ಇಡೀ ವ್ಯವಸ್ಥೆಯನ್ನು ಹಳೆಯ ಪದ್ಧತಿಗೆ ತಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಬಿಜೆಪಿ ಹಾಗೂ ಜೆಡಿಎಸ್ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿವೆ.
ತಂತ್ರಜ್ಞಾನದ ಯುಗದಲ್ಲಿ ಬೆಂಗಳೂರನ್ನು ಮತ್ತೆ 80ರ ದಶಕಕ್ಕೆ ಕೊಂಡೊಯ್ಯಲಾಗುತ್ತಿದೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಸರ್ಕಾರವು ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿ ಈ ನಿರ್ಧಾರ ಕೈಗೊಂಡಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಪ್ರತಿಪಕ್ಷದ ನಾಯಕರು ಕಿಡಿಕಾರಿದ್ದಾರೆ. ಮತಪತ್ರಗಳಲ್ಲಿ ಅಕ್ರಮ ಎಸಗುವುದು ಸುಲಭ ಎಂಬ ಕಾರಣಕ್ಕಾಗಿಯೇ ಸರ್ಕಾರ ಈ ಹಾದಿ ಹಿಡಿದಿದೆ ಎಂಬುದು ಅವರ ನೇರ ಆರೋಪವಾಗಿದೆ.
ಇವಿಎಂ ವಿರೋಧಿ ರಾಷ್ಟ್ರೀಯ ಅಜೆಂಡಾದ ʼಕರ್ನಾಟಕ ಮಾಡೆಲ್ʼ
ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವು ಇವಿಎಂಗಳ ಬಗ್ಗೆ ನಿರಂತರವಾಗಿ ಅಪನಂಬಿಕೆ ವ್ಯಕ್ತಪಡಿಸುತ್ತಾ ಬಂದಿದೆ. ಬಿಜೆಪಿ ಇವಿಎಂಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದು ಕಾಂಗ್ರೆಸ್‌ನ ಆರೋಪವಾಗಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿರುವಾಗ ಬ್ಯಾಲೆಟ್ ಪೇಪರ್ ಜಾರಿಗೆ ತರುವ ಮೂಲಕ, ಜನರಿಗೆ ಕೊಟ್ಟ ಮಾತಿನಂತೆ ಪಾರದರ್ಶಕ ಚುನಾವಣೆ ನಡೆಸುತ್ತಿದ್ದೇವೆ ಎಂದು ದೇಶಕ್ಕೆ ತೋರಿಸಲು ಕಾಂಗ್ರೆಸ್ ಮುಂದಾಗಿದೆ. ಇದು ಮುಂಬರುವ ಇತರ ರಾಜ್ಯಗಳ ಚುನಾವಣೆ ಮತ್ತು ಲೋಕಸಭೆ ಚುನಾವಣೆಯ ನಂತರದ ಹೋರಾಟಕ್ಕೆ ಒಂದು ಪ್ರಬಲ ಅಸ್ತ್ರವಾಗಲಿದೆ. ಬಿಜೆಪಿ ಸಾಮಾನ್ಯವಾಗಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನಗರ ಪ್ರದೇಶದ ಮತದಾರರನ್ನು ಸೆಳೆಯುತ್ತದೆ. ಬೆಂಗಳೂರಿನಂತಹ ನಗರದಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ತರುವ ಮೂಲಕ, ಡಿಜಿಟಲ್ ಯುಗದ ಮತದಾನದ ವೇಗಕ್ಕೆ ಬ್ರೇಕ್ ಹಾಕಿ ಸಾಂಪ್ರದಾಯಿಕ ಜಿದ್ದಾಜಿದ್ದಿಗೆ ಅಖಾಡ ಸಿದ್ಧಪಡಿಸುವುದು ಕಾಂಗ್ರೆಸ್‌ನ ಗುರಿ ಎನ್ನಲಾಗಿದೆ.
ಬ್ಯಾಲೆಟ್ ಪೇಪರ್ ಬಳಕೆಯ ಸವಾಲುಗಳು
ಬ್ಯಾಲೆಟ್ ಪೇಪರ್ ಮರಳಿ ತರುವುದು ಸುಲಭದ ಮಾತಲ್ಲ. ಇದರಲ್ಲಿ ಹಲವಾರು ಸವಾಲುಗಳಿವೆ. ಮತದಾನದ ಪ್ರಕ್ರಿಯೆ ಮತ್ತು ಮತ ಎಣಿಕೆ ಪ್ರಕ್ರಿಯೆ ಇವಿಎಂಗೆ ಹೋಲಿಸಿದರೆ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತದೆ. ಫಲಿತಾಂಶ ತಿಳಿಯಲು ದಿನಗಟ್ಟಲೆ ಕಾಯಬೇಕಾಗಬಹುದು. ಲಕ್ಷಾಂತರ ಟನ್ ಕಾಗದದ ಬಳಕೆ, ಮುದ್ರಣ ವೆಚ್ಚ ಮತ್ತು ಮತ ಪೆಟ್ಟಿಗೆಗಳ ಸಾಗಾಣಿಕೆ ವೆಚ್ಚ ಹೆಚ್ಚಾಗಿರುತ್ತದೆ. ಮತದಾರರು ಮತಪತ್ರದ ಮೇಲೆ ಸರಿಯಾಗಿ ಮುದ್ರೆ ಒತ್ತದಿದ್ದರೆ ಅಥವಾ ಶಾಯಿ ಹರಡಿದರೆ ಅಂತಹ ಮತಗಳು ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. ಇವಿಎಂಗಳಿಗಿಂತ ಮತ ಪೆಟ್ಟಿಗೆಗಳನ್ನು ಸುರಕ್ಷಿತವಾಗಿಡುವುದು ಮತ್ತು ಬೂತ್ ಮಟ್ಟದಲ್ಲಿ ಅಕ್ರಮ ನಡೆಯದಂತೆ ತಡೆಯುವುದು ದೊಡ್ಡ ಜವಾಬ್ದಾರಿಯಾಗಿದೆ.

