
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೂ ಬ್ಯಾಲೆಟ್ ಪೇಪರ್ ಬಳಸಲು ಆಯೋಗ ತೀರ್ಮಾನ
ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆಗೆ ತೀರ್ಮಾನಿಸಿದ್ದ ಆಯೋಗವು ಇದೀಗ ಜಿಬಿಎ ಚುನಾವಣೆಯಲ್ಲಿಯೂ ಬ್ಯಾಲೆಟ್ ಪೇಪರ್ ಬಳಸಲು ನಿರ್ಧರಿಸಿದೆ.
ರಾಜ್ಯ ಚುನಾವಣಾ ಆಯೋಗವು ಇವಿಎಂ ಮತಯಂತ್ರದ ಬದಲಿಗೆ ಸಾಂಪ್ರದಾಯಿಕ ಬ್ಯಾಲೆಟ್ ಪೇಪರ್ (ಮತಪತ್ರ) ವ್ಯವಸ್ಥೆಗೆ ಹಿಂತಿರುಗಲು ತೀರ್ಮಾನಿಸಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೂ ಮುನ್ನವೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲು ನಿರ್ಧರಿಸಿದೆ.
ಆಡಳಿತ ವ್ಯವಸ್ಥೆ ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ ಸರ್ಕಾರವು ಬೆಂಗಳೂರಿನ 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ'ಯನ್ನು ಮರುರಚಿಸಿ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' ಸ್ಥಾಪಿಸಿದೆ. ಮೆಟ್ರೋ ನಗರದಲ್ಲಿ ತಾಂತ್ರಿಕವಾಗಿ ಮುಂದುವರಿದ ಮತದಾನದ ಬದಲು ಪೇಪರ್ ಬ್ಯಾಲೆಟ್ ಬಳಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಚುನಾವಣಾ ಆಯೋಗ ಆಯುಕ್ತ ಜಿ.ಎಸ್.ಸಂಗ್ರೇಶಿ ಮಾತನಾಡಿ, ಬ್ಯಾಲೆಟ್ ಪೇಪರ್ ಬಳಸುವ ಕುರಿತ ಚರ್ಚೆಗಳಿಗೆ ಕಾನೂನುಬದ್ಧ ಮತ್ತು ತಾರ್ಕಿಕ ಸಮರ್ಥನೆ ನೀಡಿದರು.
ಜಿಬಿಎ ಕಾಯ್ದೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಸ್ಪಷ್ಟವಾದ ಅವಕಾಶವಿದೆ. ಕಾಯ್ದೆಯಲ್ಲಿ ಅವಕಾಶವಿರುವಾಗ ಅದರ ಬಳಕೆ ಮಾಡುವುದರಲ್ಲಿ ಯಾವುದೇ ಅಡ್ಡಿಯಿಲ್ಲ. ಸುಪ್ರೀಂಕೋರ್ಟ್ ಯಾವುದೇ ತೀರ್ಪಿನಲ್ಲಾಗಲಿ ಅಥವಾ ದೇಶದ ಯಾವುದೇ ಕಾನೂನಿನಲ್ಲಾಗಲಿ ಬ್ಯಾಲೆಟ್ ಪೇಪರ್ ಬಳಕೆ ನಿಷೇಧಿಸಲಾಗಿದೆ ಎಂಬ ಪ್ರಸ್ತಾಪವಿಲ್ಲ. ನಿಯಮಗಳ ಚೌಕಟ್ಟಿನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬ್ಯಾಲೆಟ್ ಪೇಪರ್ ಬಳಕೆಯಿಂದ ದೇಶವು ತಾಂತ್ರಿಕವಾಗಿ ಹಿಂದೆ ಹೋಗುತ್ತಿದೆ ಎಂಬ ಟೀಕೆ ತಳ್ಳಿಹಾಕಿದ ಅವರು, ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇಂದಿಗೂ ಬ್ಯಾಲೆಟ್ ಪೇಪರ್ ಮೂಲಕವೇ ಪಾರದರ್ಶಕವಾಗಿ ಚುನಾವಣೆ ನಡೆಸಲಾಗುತ್ತಿದೆ. ಹೀಗಿರುವಾಗ ನಾವು ಬ್ಯಾಲೆಟ್ ಪೇಪರ್ ಬಳಸಿದರೆ ಅದು ಹಿನ್ನಡೆ ಎಂದು ಭಾವಿಸುವುದು ಸರಿಯಲ್ಲ. ಆಧುನಿಕ ತಂತ್ರಜ್ಞಾನಕ್ಕಿಂತಲೂ ನಂಬಿಕೆ ಮತ್ತು ಕಾನೂನಿನ ಅನುಷ್ಠಾನ ಮುಖ್ಯವಾಗಿರುತ್ತದೆ. ಚುನಾವಣಾ ಆಯೋಗವು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಪರವಾಗಿ ಅಥವಾ ಯಾರದ್ದೋ ಹೆದರಿಕೆಗೆ ಮಣಿದು ಈ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದರು.
ರಾಜ್ಯ ಚುನಾವಣಾ ಆಯೋಗವು ಒಂದು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದಕ್ಕೆ ತನ್ನದೇ ಆದ ಅಧಿಕಾರವಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಭಾರತೀಯ ಚುನಾವಣಾ ಆಯೋಗ ನಡೆಸುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಜವಾಬ್ದಾರಿ ನಮ್ಮದಾಗಿದ್ದು, ಇಲ್ಲಿ ಬ್ಯಾಲೆಟ್ ಪೇಪರ್ ಬಳಸುವ ಹಕ್ಕು ಆಯೋಗಕ್ಕಿದೆ ಎಂದು ತಿಳಿಸಿದರು.
ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಬಿಎ ಚುನಾವಣೆಗಳಲ್ಲಿ ಈ ಹೊಸ ಬದಲಾವಣೆ ಜಾರಿಗೆ ಬರಲಿದೆ. ಇವಿಎಂ ಕೊರತೆ ಅಥವಾ ತಾಂತ್ರಿಕ ಮಿತಿಗಳ ನಡುವೆ, ಬ್ಯಾಲೆಟ್ ಪೇಪರ್ ಮೂಲಕ ಸುಗಮ ಮತ್ತು ವಿಶ್ವಾಸಾರ್ಹ ಚುನಾವಣೆ ನಡೆಸುವುದು ಆಯೋಗದ ಪ್ರಮುಖ ಗುರಿಯಾಗಿದೆ ಎಂದರು.

