ಜಿಬಿಎ ಚುನಾವಣಾ ಕಣಕ್ಕೆ ಬಿಜೆಪಿ ಹೈಕಮಾಂಡ್ ಎಂಟ್ರಿ: ರಾಜ್ಯ ನಾಯಕರಿಗೆ ಕೊಕ್​, ಉತ್ತರದ ನಾಯಕರಿಗೆ ಹೊಣೆ
x

ಜಿಬಿಎ ಚುನಾವಣಾ ಕಣಕ್ಕೆ ಬಿಜೆಪಿ ಹೈಕಮಾಂಡ್ ಎಂಟ್ರಿ: ರಾಜ್ಯ ನಾಯಕರಿಗೆ ಕೊಕ್​, ಉತ್ತರದ ನಾಯಕರಿಗೆ ಹೊಣೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನಿರ್ದೇಶನದ ಮೇರೆಗೆ, ಚುನಾವಣಾ ಉಸ್ತುವಾರಿಗಳ ಪಟ್ಟಿಯನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಂಗಳವಾರ (ಜ.20, 2026) ಪ್ರಕಟಿಸಿದ್ದಾರೆ.


Click the Play button to hear this message in audio format

ಬಹುನಿರೀಕ್ಷಿತ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಹೈಕಮಾಂಡ್ ರಣಕಹಳೆ ಊದಿದೆ. ಆದರೆ ಈ ಬಾರಿ ರಾಜ್ಯ ನಾಯಕರ ಮೇಲೆ ಅವಲಂಬಿತವಾಗದೆ, ನೇರವಾಗಿ ರಾಷ್ಟ್ರೀಯ ನಾಯಕರನ್ನೇ ಅಖಾಡಕ್ಕಿಳಿಸುವ ಮೂಲಕ ಹೈಕಮಾಂಡ್ ತಾನೇ ಚುಕ್ಕಾಣಿ ಹಿಡಿದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನಿರ್ದೇಶನದ ಮೇರೆಗೆ, ಚುನಾವಣಾ ಉಸ್ತುವಾರಿಗಳ ಪಟ್ಟಿಯನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಂಗಳವಾರ (ಜ.20, 2026) ಪ್ರಕಟಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ನಾಯಕತ್ವವು ಗ್ರೇಟರ್ ಬೆಂಗಳೂರು ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಪ್ರಭಾವಿ ನಾಯಕರ ತಂಡವನ್ನೇ ರಚಿಸಿದೆ: ಬಿಜೆಪಿಯ ಚಾಣಕ್ಯ ಎಂದೇ ಖ್ಯಾತಿ ಹೊಂದಿರುವ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರು ರಾಜ್ಯದಲ್ಲಿ ಸಕ್ರಿಯರಾಗಿದ್ದರು ಮತ್ತು ಚುನಾವಣಾ ಕಾರ್ಯತಂತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಈಶಾನ್ಯ ರಾಜ್ಯಗಳಲ್ಲಿ ಹಾಗೂ ಜಮ್ಮು ಕಾಶ್ಮೀರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಇವರನ್ನು ಬೆಂಗಳೂರಿಗೆ ಕರೆತರಲಾಗಿದೆ.

ಸಹ-ಉಸ್ತುವಾರಿಗಳಾಗಿ ರಾಮ್​ ಮಾಧವ್​ ಅವರಿಗೆ ನರೆವಾಗಲು ಇಬ್ಬರು ಉತ್ತರ ಭಾರತದ ಪ್ರಬಲ ನಾಯಕರನ್ನು ನೇಮಿಸಲಾಗಿದೆ. ರಾಜಸ್ಥಾನ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರಾಗಿರುವ ಸತೀಶ್ ಪೂನಿಯಾ ಮಹಾರಾಷ್ಟ್ರದ ಹಾಲಿ ಶಾಸಕರಾಗಿರುವ ಸಂಜಯ್ ಉಪಾಧ್ಯಾಯ ಅವರನ್ನು ನೇಮಿಸಲಾಗಿದೆ.

ರಾಜ್ಯ ನಾಯಕರ ಮೇಲೆ ವಿಶ್ವಾಸವಿಲ್ಲ ?

ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳ ಜವಾಬ್ದಾರಿಯನ್ನು ಆಯಾ ರಾಜ್ಯದ ನಾಯಕರಿಗೆ ವಹಿಸುವುದು ವಾಡಿಕೆ. ಆದರೆ, ಈ ಬಾರಿ ಹೊರರಾಜ್ಯದ ನಾಯಕರನ್ನು, ಅದರಲ್ಲೂ ವಿಶೇಷವಾಗಿ ಉತ್ತರ ಭಾರತದ ನಾಯಕರನ್ನು ಉಸ್ತುವಾರಿಗಳನ್ನಾಗಿ ನೇಮಿಸಿರುವುದು ರಾಜ್ಯ ಬಿಜೆಪಿ ಪಾಳೆಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮೂಲಗಳ ಪ್ರಕಾರ ಕರ್ನಾಟಕ ಬಿಜೆಪಿಯಲ್ಲಿನ ಗುಂಪುಗಾರಿಕೆ ಮತ್ತು ನಾಯಕರ ನಡುವಿನ ಶೀತಲ ಸಮರದಿಂದ ಹೈಕಮಾಂಡ್ ಬೇಸತ್ತಿದೆ. ಸ್ಥಳೀಯ ನಾಯಕರಿಗೆ ಜವಾಬ್ದಾರಿ ನೀಡಿದರೆ ಅದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಬಹುದು ಎಂಬ ಆತಂಕ ರಾಷ್ಟ್ರೀಯ ನಾಯಕರಿಗಿದೆ ಎನ್ನಲಾಗಿದೆ. ಬೆಂಗಳೂರು ಚುನಾವಣೆ ಮುಂದಿನ ರಾಜಕೀಯ ದಿಕ್ಸೂಚಿಯಾಗಲಿದ್ದು, ತಪ್ಪು ನಿರ್ಧಾರ ಕೈಗೊಳ್ಳಲು ಹೈಕಮಾಂಡ್ ಸಿದ್ಧವಿಲ್ಲ. ಹೀಗಾಗಿ ರಾಜ್ಯ ನಾಯಕರನ್ನು ಬದಿಗಿಟ್ಟು, ತನ್ನದೇ ನಂಬಿಕಸ್ಥ ತಂಡವನ್ನು ಕಳುಹಿಸಿದೆ.

ಮುಂಬೈ ಗೆಲುವಿನ ರೂವಾರಿಗಳ ಮೇಲೆ ಭರವಸೆ

ಇತ್ತೀಚೆಗಷ್ಟೇ (ಜನವರಿ 2026) ನಡೆದ ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿತ್ತು. ಈ ಗೆಲುವಿನ ಹುಮ್ಮಸ್ಸಿನಲ್ಲಿರುವ ಪಕ್ಷವು, ಅಲ್ಲಿನ ತಂತ್ರಗಾರಿಕೆಯನ್ನು ಬೆಂಗಳೂರಿನಲ್ಲೂ ಪ್ರಯೋಗಿಸಲು ಮುಂದಾಗಿದೆ. ಮಹಾರಾಷ್ಟ್ರದ ಶಾಸಕ ಸಂಜಯ್ ಉಪಾಧ್ಯಾಯ ಅವರನ್ನು ಸಹ-ಉಸ್ತುವಾರಿಯನ್ನಾಗಿ ನೇಮಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಮುಂಬೈ ಮಾದರಿಯಲ್ಲೇ ಬೆಂಗಳೂರಿನಲ್ಲೂ ಉತ್ತರ ಭಾರತೀಯ ಮತಗಳನ್ನು ಕ್ರೋಢೀಕರಿಸುವುದು ಮತ್ತು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವುದು ಇವರ ಪ್ರಮುಖ ಅಜೆಂಡಾ ಆಗಿರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Read More
Next Story