
ಸಂಸದ ಶಶಿ ತರೂರ್ ಹಾಗೂ ಬಾಂಗ್ಲಾ ಕ್ರಿಕೆಟಿಗ ಮುಸ್ತಫಿಜುರ್ ರೆಹಮಾನ್
ಬಾಂಗ್ಲಾ ಆಟಗಾರರ ಆಯ್ಕೆ ವಿವಾದ: ಕ್ರೀಡೆ ಮತ್ತು ರಾಜಕೀಯ ಬೆರೆಸಬೇಡಿ ಎಂದ ಶಶಿ ತರೂರ್
ಮುಸ್ತಫಿಜುರ್ ರೆಹಮಾನ್ ಒಬ್ಬ ಕ್ರೀಡಾಪಟುವಾಗಿದ್ದು, ಅವರಿಗೆ ಈ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ. ಅವರು ಎಲ್ಲೂ ದ್ವೇಷ ಭಾಷಣ ಮಾಡಿಲ್ಲ ಅಥವಾ ಯಾವುದೇ ಹಿಂಸಾತ್ಮಕ ಕೃತ್ಯಗಳನ್ನು ಬೆಂಬಲಿಸಿಲ್ಲ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಆಯ್ಕೆ ಮಾಡಿರುವ ವಿಚಾರವಾಗಿ ಸೃಷ್ಟಿಯಾಗಿರುವ ರಾಜಕೀಯ ಹಂಗಾಮದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್ ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯ ಹೊಣೆಯನ್ನು ಕ್ರಿಕೆಟ್ ಮೇಲೆ ಹೇರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು, ಕ್ರೀಡೆಯನ್ನು ರಾಜಕೀಯ ಸಂಘರ್ಷಗಳಿಂದ ದೂರವಿಡಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ತಿರುವನಂತಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೀಡೆಯು ರಾಜಕೀಯದ ಹೊರೆ ಹೊರಬಾರದು ಎಂಬುದು ನನ್ನ ಸ್ಪಷ್ಟ ನಿಲುವಾಗಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆ ಮತ್ತು ಅವರ ಮೇಲಿನ ದಾಳಿಗಳ ತಡೆಗೆ ಭಾರತವು ರಾಜತಾಂತ್ರಿಕ ಮಟ್ಟದಲ್ಲಿ ನಿರಂತರವಾಗಿ ಆ ರಾಷ್ಟ್ರದ ಮೇಲೆ ಒತ್ತಡ ಹೇರುತ್ತಲೇ ಬರಬೇಕು. ಆದರೆ, ಆ ಕಾರಣಕ್ಕಾಗಿ ಕ್ರೀಡೆ ಅಥವಾ ಒಬ್ಬ ಆಟಗಾರನನ್ನು ಗುರಿಯಾಗಿಸುವುದು ಸಮರ್ಥನೀಯವಲ್ಲ ಎಂದಿದ್ದಾರೆ. ಮುಸ್ತಫಿಜುರ್ ರೆಹಮಾನ್ ಒಬ್ಬ ಕ್ರೀಡಾಪಟುವಾಗಿದ್ದು, ಅವರಿಗೆ ಈ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ. ಅವರು ಎಲ್ಲೂ ದ್ವೇಷ ಭಾಷಣ ಮಾಡಿಲ್ಲ ಅಥವಾ ಯಾವುದೇ ಹಿಂಸಾತ್ಮಕ ಕೃತ್ಯಗಳನ್ನು ಬೆಂಬಲಿಸಿಲ್ಲ. ಇಂತಹ ಸಂದರ್ಭದಲ್ಲಿ ಆಟಗಾರನ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳುವುದು ನ್ಯಾಯವಲ್ಲ ಎಂದು ತರೂರ್ ಹೇಳಿದ್ದಾರೆ.
ಉದ್ದೇಶ ಈಡೇರದು?
ಇದೇ ವೇಳೆ ನೆರೆಯ ರಾಷ್ಟ್ರಗಳನ್ನು ಕ್ರೀಡಾ ಬಹಿಷ್ಕಾರದ ಮೂಲಕ ಒಂಟಿಯಾಗಿಸುವ ತಂತ್ರವು ಯಾವುದೇ ರಚನಾತ್ಮಕ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಭಾರತವು ತನ್ನ ಸುತ್ತಮುತ್ತಲಿನ ಎಲ್ಲಾ ನೆರೆಹೊರೆಯ ರಾಷ್ಟ್ರಗಳನ್ನು ದೂರವಿಡಲು ಹೋದರೆ ಅದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ನಾವು ವಿಶಾಲವಾದ ಮನೋಭಾವವನ್ನು ಹೊಂದಿರಬೇಕು. ಕ್ರೀಡೆಯನ್ನು ರಾಜಕೀಯ ಪ್ರಭಾವದಿಂದ ಮುಕ್ತಗೊಳಿಸುವುದು ಅತ್ಯಗತ್ಯವಾಗಿದ್ದು, ಕೆಕೆಆರ್ ತಂಡದ ಆಟಗಾರನ ಆಯ್ಕೆಯು ಕೇವಲ ಕ್ರೀಡಾ ಆಧಾರಿತ ನಿರ್ಧಾರವಾಗಿದೆ. ಅದನ್ನು ಅಲ್ಲಿಗೆ ಬಿಡುವುದು ಜಾಣತನದ ಲಕ್ಷಣ ಎಂದು ಅವರು ಮಂಡಳಿಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮುಸ್ತಫಿಜುರ್ ಆಯ್ಕೆಯ ನಂತರ ಬಿಜೆಪಿ ಮತ್ತು ಕೆಲವು ಧಾರ್ಮಿಕ ಸಂಘಟನೆಗಳು ಶಾರುಖ್ ಖಾನ್ ಮತ್ತು ಕೆಕೆಆರ್ ತಂಡದ ವಿರುದ್ಧ ವಾಗ್ದಾಳಿ ನಡೆಸಿರುವ ಬೆನ್ನಲ್ಲೇ ತರೂರ್ ಅವರ ಈ ಹೇಳಿಕೆ ಹೊರಬಿದ್ದಿದೆ. ಈ ವಿವಾದವು ದೇಶದ ಕ್ರೀಡಾ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಕ್ರೀಡೆ ಮತ್ತು ರಾಷ್ಟ್ರದ ರಾಜತಾಂತ್ರಿಕ ಸಂಬಂಧಗಳ ನಡುವಿನ ಗೆರೆಯ ಬಗ್ಗೆ ಚರ್ಚೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಬಿಸಿಸಿಐ ಈ ಸೂಕ್ಷ್ಮ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದೆ ಎಂಬುದರ ಮೇಲೆ ಈಗ ಎಲ್ಲರ ಕುತೂಹಲ ನೆಟ್ಟಿದೆ.

