ಬಾಂಗ್ಲಾದಲ್ಲಿ ಮತಾಂಧರ ಅಟ್ಟಹಾಸ; ಹಿಂದೂ ಉದ್ಯಮಿಯ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನಕ್ಕೆ ಯತ್ನ
x
ಖೋಕೋನ್ ದಾಸ್ ಅವರ ಪತ್ನಿ ಸೀಮಾ ಅವರು ದಾಳಿಕೋರರಲ್ಲಿ ಇಬ್ಬರನ್ನು ಗುರುತಿಸಿದ್ದಾರೆ.

ಬಾಂಗ್ಲಾದಲ್ಲಿ ಮತಾಂಧರ ಅಟ್ಟಹಾಸ; ಹಿಂದೂ ಉದ್ಯಮಿಯ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನಕ್ಕೆ ಯತ್ನ

ಬಾಂಗ್ಲಾದೇಶದ ಶರಿಯತ್‌ಪುರದಲ್ಲಿ ಹಿಂದೂ ಉದ್ಯಮಿ ಖೋಕನ್ ಚಂದ್ರ ದಾಸ್ ಮೇಲೆ ಭೀಕರ ದಾಳಿ ನಡೆದಿದೆ. ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.


ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದೌರ್ಜನ್ಯ ಮುಂದುವರಿದಿದೆ. ಶರಿಯತ್‌ಪುರ ಜಿಲ್ಲೆಯಲ್ಲಿ ಹಿಂದೂ ಉದ್ಯಮಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಭೀಕರ ಘಟನೆ ಬುಧವಾರ ರಾತ್ರಿ ನಡೆದಿದೆ. ಕಳೆದ ಎರಡು ವಾರಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ನಾಲ್ಕನೇ ದಾಳಿ ಇದಾಗಿದೆ.

ಘಟನೆಯ ವಿವರ

ಮೃತಪ್ರಾಯರಾದ ಉದ್ಯಮಿಯನ್ನು 50 ವರ್ಷದ ಖೋಕನ್ ಚಂದ್ರ ದಾಸ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಔಷಧಿ ಅಂಗಡಿ ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ಮುಗಿಸಿ ಆಟೋರಿಕ್ಷಾದಲ್ಲಿ ಮನೆಗೆ ಮರಳುತ್ತಿದ್ದಾಗ ದಮುದ್ಯಾ ಎಂಬಲ್ಲಿ ದುಷ್ಕರ್ಮಿಗಳು ವಾಹನವನ್ನು ಅಡ್ಡಗಟ್ಟಿದ್ದಾರೆ. ಮೊದಲು ಅವರನ್ನು ಮನಬಂದಂತೆ ಥಳಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿದ ನಂತರ ತಲೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜೀವ ಉಳಿಸಿಕೊಳ್ಳಲು ಖೋಕನ್ ಅವರು ಪಕ್ಕದ ಕೆರೆಗೆ ಜಿಗಿದಿದ್ದಾರೆ. ನಂತರ ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಅವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಢಾಕಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಗುರುತು ಪತ್ತೆಯಾದ ದಾಳಿಕೋರರು

ಖೋಕನ್ ಅವರ ಪತ್ನಿ ಸೀಮಾ ದಾಸ್ ಪ್ರಕಾರ, ಖೋಕನ್ ಅವರು ದಾಳಿಕೋರರಲ್ಲಿ ಇಬ್ಬರನ್ನು ಗುರುತಿಸಿದ್ದರು. ಆ ಕಾರಣಕ್ಕಾಗಿಯೇ ಅವರನ್ನು ಕೊಲ್ಲಲು ಪ್ರಯತ್ನಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪೊಲೀಸರು 'ರಬ್ಬಿ' ಮತ್ತು 'ಸೋಹಾಗ್' ಎಂಬ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬಾಂಗ್ಲಾದೇಶದಲ್ಲಿ ಬರ್ಬರ ದಾಳಿಗೊಳಗಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಹಿಂದೂ ಉದ್ಯಮಿ ಖೋಕನ್ ಚಂದ್ರ ದಾಸ್ ಅವರ ಪತ್ನಿ ಸೀಮಾ ದಾಸ್ ಅವರ ಮಾತುಗಳು ಕಲ್ಲು ಮನಸ್ಸನ್ನೂ ಕರಗಿಸುವಂತಿವೆ. ಎನ್‌ಡಿಟಿವಿ (NDTV) ಜೊತೆ ಮಾತನಾಡುತ್ತಾ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ನಮಗೆ ಶತ್ರುಗಳೇ ಇರಲಿಲ್ಲ!

"ನಮಗೆ ಈ ಭಾಗದಲ್ಲಿ ಯಾರೊಂದಿಗೂ ಯಾವುದೇ ವಿವಾದವಿರಲಿಲ್ಲ. ನಮ್ಮ ಕುಟುಂಬಕ್ಕೆ ಶತ್ರುಗಳೇ ಇಲ್ಲದಿದ್ದರೂ, ನನ್ನ ಪತಿಯನ್ನು ಯಾಕೆ ಇಷ್ಟು ಕ್ರೂರವಾಗಿ ಗುರಿ ಮಾಡಲಾಯಿತು ಎಂಬುದು ನಮಗೆ ಅರ್ಥವಾಗುತ್ತಿಲ್ಲ," ಎಂದು ಸೀಮಾ ದಾಸ್ ಕಣ್ಣೀರು ಹಾಕಿದ್ದಾರೆ. "ನಾವು ಹಿಂದೂಗಳು. ನಾವು ಕೇವಲ ಶಾಂತಿಯಿಂದ ಬದುಕಲು ಬಯಸುತ್ತೇವೆ ಅಷ್ಟೇ," ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.

ದಾಳಿಕೋರರನ್ನು ಗುರುತಿಸಿದ್ದೇ ಮುಳುವಾಯಿತೇ?

ಖೋಕನ್ ದಾಸ್ ಅವರು ದಾಳಿಕೋರರಲ್ಲಿ ಇಬ್ಬರನ್ನು ಗುರುತಿಸಿದ್ದರು ಎಂದು ಸೀಮಾ ತಿಳಿಸಿದ್ದಾರೆ. "ದಾಳಿಕೋರರು ಮುಸ್ಲಿಮರಾಗಿದ್ದರು. ನನ್ನ ಪತಿ ಇಬ್ಬರನ್ನು ಗುರುತಿಸಿದ ಕಾರಣಕ್ಕಾಗಿಯೇ ಅವರು ಸಾಯಲೆಂದು ತಲೆ ಮತ್ತು ಮುಖದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈಗ ಪೊಲೀಸರು ಅವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ," ಎಂದು ಅವರು ಮಾಹಿತಿ ನೀಡಿದ್ದಾರೆ.

ಹೆಚ್ಚುತ್ತಿರುವ ದಾಳಿಗಳು

• ಡಿಸೆಂಬರ್ 18: ಮೈಮೆನ್ಸಿಂಗ್ ನಗರದಲ್ಲಿ ನಿಂದನೆಯ ಆರೋಪದ ಮೇಲೆ ದೀಪು ಚಂದ್ರ ದಾಸ್ (25) ಎಂಬ ಯುವಕನನ್ನು ಗುಂಪು ಹತ್ಯೆ ಮಾಡಿ ಶವಕ್ಕೆ ಬೆಂಕಿ ಹಚ್ಚಲಾಗಿತ್ತು.

• ಡಿಸೆಂಬರ್ 24: ರಾಜ್‌ಬರಿ ಪಟ್ಟಣದಲ್ಲಿ ಅಮೃತ್ ಮೊಂಡಲ್ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಲಾಗಿತ್ತು.

Read More
Next Story