ಖಲೀದಾ ಜಿಯಾ ಅಂತ್ಯಕ್ರಿಯೆಯಲ್ಲಿ ಸಚಿವ ಜೈಶಂಕರ್ ಭಾಗಿ: ಪ್ರಧಾನಿ ಮೋದಿ ಪತ್ರ ಹಸ್ತಾಂತರ
x

ಖಲೀದಾ ಜಿಯಾ ಅಂತ್ಯಕ್ರಿಯೆಯಲ್ಲಿ ಸಚಿವ ಜೈಶಂಕರ್ ಭಾಗಿ: ಪ್ರಧಾನಿ ಮೋದಿ ಪತ್ರ ಹಸ್ತಾಂತರ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ವಿದೇಶಾಂಗ ಸಚಿವ ಎಸ್ ಜೈಶಂಕರ್, ಬಿಎನ್‌ಪಿ ನಾಯಕ ತಾರಿಕ್ ರಹಮಾನ್ ಅವರಿಗೆ ಪ್ರಧಾನಿ ಮೋದಿ ಅವರ ಸಂತಾಪ ಪತ್ರ ನೀಡಿದರು.


ಎರಡು ದಿನಗಳ ಹಿಂದೆ ವಿಧಿವಶರಾದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಅಂತ್ಯಕ್ರಿಯೆ ಬುಧವಾರ ಢಾಕಾದಲ್ಲಿ ನಡೆಯಿತು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂತಾಪ ಪತ್ರವನ್ನು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷ (ಬಿಎನ್‌ಪಿ) ನಾಯಕ ತಾರಿಕ್ ರಹಮಾನ್ ಅವರಿಗೆ ಹಸ್ತಾಂತರಿಸಿದರು.

ಫೆಬ್ರವರಿ 12 ರಂದು ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಪ್ರಧಾನಮಂತ್ರಿ ಹುದ್ದೆಗೆ ಮುಂಚೂಣಿ ಅಭ್ಯರ್ಥಿಯಾಗಿರುವ ರಹಮಾನ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಜೈಶಂಕರ್ ಅವರು ಜಿಯಾ ಅವರ “ದೃಷ್ಟಿ ಮತ್ತು ಮೌಲ್ಯಗಳು” ಎರಡೂ ರಾಷ್ಟ್ರಗಳ ನಡುವಿನ ಸಹಭಾಗಿತ್ವದ ಅಭಿವೃದ್ಧಿಗೆ ಮಾರ್ಗದರ್ಶಿಯಾಗಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಪ್ರಸ್ತುತ ಬಿಎನ್‌ಪಿಯ ಕಾರ್ಯನಿರ್ವಹಣಾ ಅಧ್ಯಕ್ಷರಾಗಿರುವ ರಹಮಾನ್ ಅವರು ಜಿಯಾ ಅವರ ಹಿರಿಯ ಪುತ್ರ. ಮೂರು ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಹಾಗೂ ಬಿಎನ್‌ಪಿಯ ಸ್ಥಾಪಕರಾಗಿದ್ದ ಖಲೀದಾ ಜಿಯಾ ಅವರು ದೀರ್ಘಕಾಲದ ಅನಾರೋಗ್ಯದ ಬಳಿಕ ಮಂಗಳವಾರ ನಿಧನರಾದರು.

ಭಾರತ-ಪಾಕಿಸ್ತಾನ ಮುಖಾಮುಖಿ

ಜಿಯಾ ಅವರ ಅಂತ್ಯಕ್ರಿಯೆಗೆ ನೆರೆಯ ದೇಶಗಳಿಂದ ಆಗಮಿಸಿದ್ದ ಹಿರಿಯ ಸಚಿವರು ಮತ್ತು ಗಣ್ಯರು ಸೇರಿದ್ದ ಸಭಾಂಗಣದಲ್ಲಿ, ಪಾಕಿಸ್ತಾನದ ರಾಷ್ಟ್ರೀಯ ಸಭೆಯ ಸ್ಪೀಕರ್ ಸರ್ದಾರ್ ಆಯಾಜ್ ಸಾದಿಕ್ ಅವರು ಜೈಶಂಕರ್ ಅವರೊಂದಿಗೆ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. 'ಆಪರೇಷನ್ ಸಿಂಧೂರ್' ನಂತರ ಇಬ್ಬರು ನಾಯಕರ ನಡುವೆ ನಡೆದ ಮೊದಲ ಭೇಟಿ ಇದಾಗಿದೆ. ಆದಾಗ್ಯೂ, ಇದು ಕೇವಲ ಸೌಜನ್ಯದ ಭೇಟಿಯಾಗಿದ್ದು, ಇದಕ್ಕೆ ಹೆಚ್ಚಿನ ರಾಜತಾಂತ್ರಿಕ ಪ್ರಾಮುಖ್ಯತೆ ನೀಡಬೇಕಿಲ್ಲ ಎಂದು ಭಾರತ ಸರ್ಕಾರಿ ಮೂಲಗಳು ತಿಳಿಸಿವೆ. ಉಭಯ ನಾಯಕರ ಫೋಟೋವನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಕಚೇರಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.

ಜೈಶಂಕರ್ ಅವರು ಹೊಸ ನೇಪಾಳ ವಿದೇಶಾಂಗ ಸಚಿವ ಬಲಾನಂದ ಶರ್ಮಾ ಸೇರಿದಂತೆ ಇತರ ಹಲವು ಗಣ್ಯರೊಂದಿಗೆ ಕೂಡ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. “ಢಾಕಾಗೆ ಆಗಮಿಸಿದ ಬಳಿಕ, ಬಿಎನ್‌ಪಿಯ ಕಾರ್ಯನಿರ್ವಹಣಾ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರ ಪುತ್ರರಾದ ತಾರಿಕ್ ರಹಮಾನ್ ಅವರನ್ನು ಭೇಟಿಯಾದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವೈಯಕ್ತಿಕ ಪತ್ರವನ್ನು ಅವರಿಗೆ ಹಸ್ತಾಂತರಿಸಿದೆ” ಎಂದು ಜೈಶಂಕರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಅವರು ಮುಂದುವರೆದು, “ಭಾರತ ಸರ್ಕಾರ ಮತ್ತು ಜನರ ಪರವಾಗಿ ಆಳವಾದ ಸಂತಾಪವನ್ನು ತಿಳಿಸಿದೆ. ಬೇಗಂ ಖಾಲಿದಾ ಜಿಯಾ ಅವರ ದೃಷ್ಟಿ ಮತ್ತು ಪರಂಪರೆ ನಮ್ಮ ಸಹಭಾಗಿತ್ವದ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ” ಎಂದು ಹೇಳಿದರು.

Read More
Next Story