ಖಲೀದಾ ಜಿಯಾ ಯುಗಾಂತ್ಯ- ಬಾಂಗ್ಲಾದ ಮೊದಲ ಮಹಿಳಾ ಪ್ರಧಾನಿಯ ಹೋರಾಟದ ಬದುಕು ಹೇಗಿತ್ತು?
x
ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ

ಖಲೀದಾ ಜಿಯಾ ಯುಗಾಂತ್ಯ- ಬಾಂಗ್ಲಾದ ಮೊದಲ ಮಹಿಳಾ ಪ್ರಧಾನಿಯ ಹೋರಾಟದ ಬದುಕು ಹೇಗಿತ್ತು?

ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಮುಖ್ಯಸ್ಥೆ ಖಲೀದಾ ಜಿಯಾ (80) ನಿಧನರಾಗಿದ್ದಾರೆ. ಪತಿಯ ಹತ್ಯೆಯ ನಂತರ ರಾಜಕೀಯಕ್ಕೆ ಬಂದು ದೇಶದ ಮೊದಲ ಮಹಿಳಾ ಪ್ರಧಾನಿಯಾದ ಅವರ ರೋಚಕ ಜೀವನಗಾಥೆ ಇಲ್ಲಿದೆ.


Click the Play button to hear this message in audio format

ಬಾಂಗ್ಲಾದೇಶವು ರಾಜಕೀಯ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿರುವ ಈ ಹೊತ್ತಿನಲ್ಲಿ, ತನ್ನ ಇತಿಹಾಸದ ಅತ್ಯಂತ ಪ್ರಭಾವಿ ನಾಯಕಿಯರಲ್ಲಿ ಒಬ್ಬರಾದ ಬೇಗಂ ಖಲೀದಾ ಜಿಯಾ ಅವರನ್ನು ಕಳೆದುಕೊಂಡಿದೆ. ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ಮತ್ತು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ (ಬಿಎನ್ ಪಿ) ಅಧ್ಯಕ್ಷೆಯಾಗಿದ್ದ ಖಲೀದಾ ಜಿಯಾ ಅವರು 80ನೇ ವಯಸ್ಸಿನಲ್ಲಿ ಮಂಗಳವಾರ ನಿಧನರಾಗಿದ್ದು, ಬಾಂಗ್ಲಾ ರಾಜಕೀಯದಲ್ಲಿ ಒಂದು ಯುಗವೇ ಅಂತ್ಯವಾಗಿದೆ.

ನವೆಂಬರ್ 23 ರಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ಎವರ್‌ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಸ್ಥಿತಿ ಈ ತಿಂಗಳ ಆರಂಭದಲ್ಲಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು ಮತ್ತು ಅವರನ್ನು ವೆಂಟಿಲೇಟರ್‌ ಸಂಪರ್ಕದಲ್ಲಿರಿಸಲಾಗಿತ್ತು ಎಂದು ಬಿಎನ್‌ಪಿ ಪತ್ರಿಕಾ ವಿಭಾಗ ಹೊರಡಿಸಿದ ಅಧಿಕೃತ ಹೇಳಿಕೆ ತಿಳಿಸಿದೆ.

ಖಲೀದಾ ಜಿಯಾ ಹಿನ್ನೆಲೆ ಏನು?

1946 ರಲ್ಲಿ ಅಂದಿನ ಅವಿಭಜಿತ ದಿನಾಜ್‌ಪುರ ಜಿಲ್ಲೆಯ ಜಲ್ಪೈಗುರಿಯಲ್ಲಿ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ ಖಲೀದಾ ಜಿಯಾ ಅವರು 1959 ರಲ್ಲಿ ಸೇನಾ ಅಧಿಕಾರಿ ಜಿಯಾವುರ್ ರೆಹಮಾನ್ ಅವರನ್ನು ವಿವಾಹವಾದರು. ನಂತರದ ದಿನಗಳಲ್ಲಿ ರೆಹಮಾನ್ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕನಾಗಿ ಮತ್ತು ದೇಶದ ಅಧ್ಯಕ್ಷರಾಗಿ ಗುರುತಿಸಿಕೊಂಡರು. 1981 ರಲ್ಲಿ ತಮ್ಮ ಪತಿಯ ಹತ್ಯೆಯಾಗುವವರೆಗೂ ರಾಜಕೀಯದಿಂದ ದೂರವಿದ್ದ ಖಲೀದಾ ಜಿಯಾ, 1984 ರಲ್ಲಿ ರಾಜಕೀಯ ಅಸ್ಥಿರತೆಯ ನಡುವೆಯೇ ಬಿಎನ್‌ಪಿ ಪಕ್ಷದ ಸಾರಥ್ಯ ವಹಿಸಿಕೊಂಡರು.

ಮಹಿಳಾ ಹಕ್ಕುಗಳಿಗಾಗಿ ಹೋರಾಟ

1991 ರಿಂದ 1996 ಮತ್ತು 2001 ರಿಂದ 2006 ರವರೆಗೆ ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುವ ಮೂಲಕ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಎಂಬ ಇತಿಹಾಸ ಸೃಷ್ಟಿಸಿದ ಖಲೀದಾ ಮಹಿಳಾ ಹಕ್ಕುಗಳ ಪರ ಹೋರಾಟದಿಂದಲೇ ಜನಜನಿತರಾದವರು. ತಮ್ಮ ಮೊದಲ ಅವಧಿಯಲ್ಲಿ ಅವರು ದೇಶವನ್ನು ಮರಳಿ ಸಂಸದೀಯ ಪ್ರಜಾಪ್ರಭುತ್ವಕ್ಕೆ ಕೊಂಡೊಯ್ದರು ಮತ್ತು ಆರ್ಥಿಕ ಸುಧಾರಣೆಗಳು ಹಾಗೂ ಮಹಿಳೆಯರಿಗೆ ಹೆಚ್ಚಿನ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ಕಲ್ಪಿಸುವಲ್ಲಿ ಶ್ರಮಿಸಿದರು. ಸಂವಿಧಾನಕ್ಕೆ ತಿದ್ದುಪಡಿ ತಂದು ಸಂಸತ್ತಿನಲ್ಲಿ ಮಹಿಳೆಯರಿಗಾಗಿ 45 ಸ್ಥಾನಗಳನ್ನು ಮೀಸಲಿಟ್ಟಿದ್ದು ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು ಅವರ ಅವಧಿಯ ಪ್ರಮುಖ ಸಾಧನೆಯಾಗಿದೆ.

ಶೇಖ್‌ ಹಸೀನಾ ಜೊತೆ ಪೈಪೋಟಿ

ತಮ್ಮ ಎರಡನೇ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ಮಟ್ಟ ಹಾಕುವ ಪ್ರತಿಜ್ಞೆ ಮಾಡಿದರೂ, ಆ ಸಮಸ್ಯೆಗಳು ಅವರ ಸರ್ಕಾರದ ಅವಧಿಯಲ್ಲಿ ಸವಾಲಾಗಿಯೇ ಉಳಿದವು. ಖಲೀದಾ ಜಿಯಾ ಅವರ ಇಡೀ ರಾಜಕೀಯ ಜೀವನವು ಪ್ರತಿಸ್ಪರ್ಧಿ ಅವಾಮಿ ಲೀಗ್ ಪಕ್ಷದ ನಾಯಕಿ ಶೇಖ್ ಹಸೀನಾ ಅವರೊಂದಿಗಿನ ದಶಕಗಳ ಕಾಲದ ಸುದೀರ್ಘ ಪೈಪೋಟಿಗೆ ಸಾಕ್ಷಿಯಾಗಿತ್ತು.

ಭ್ರಷ್ಟಾಚಾರ ಸುಳಿಯಲ್ಲಿ ಸಿಲುಕಿದ್ದ ಖಲೀದಾ

ಖಲೀದಾ ತಮ್ಮ ಅಧಿಕಾರಾವಧಿಯ ನಂತರ ಅವರು ಅನೇಕ ಭ್ರಷ್ಟಾಚಾರದ ಆರೋಪಗಳನ್ನು ಮತ್ತು ಶಿಕ್ಷೆಗಳನ್ನು ಎದುರಿಸಬೇಕಾಯಿತು, ಇದನ್ನು ಅವರು ಮತ್ತು ಅವರ ಬೆಂಬಲಿಗರು ರಾಜಕೀಯ ಪ್ರೇರಿತ ಎಂದು ಕರೆದಿದ್ದರು. ಸುದೀರ್ಘ ಕಾಲ ಜೈಲು ಶಿಕ್ಷೆ ಮತ್ತು ಗೃಹಬಂಧನದಲ್ಲಿದ್ದ ಇವರು, ನಂತರದ ವರ್ಷಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಬಿಡುಗಡೆ ಹೊಂದಿದ್ದರು. ತಮ್ಮ ಜೀವನದುದ್ದಕ್ಕೂ ಖಲೀದಾ ಜಿಯಾ ಅವರು ದಕ್ಷಿಣ ಏಷ್ಯಾದ ಮಹಿಳಾ ರಾಜಕೀಯ ನಾಯಕತ್ವದ ಸಂಕೇತವಾಗಿ ಮತ್ತು ಬಾಂಗ್ಲಾದೇಶದ ಪ್ರಜಾಪ್ರಭುತ್ವದ ವಿಕಸನದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

Read More
Next Story