Ground Report| ಕೋಗಿಲು ಒತ್ತುವರಿ ಸುತ್ತ ʼಮುಸ್ಲಿಂ ವಿಷಯʼ: ಪಿಣರಾಯಿ ರಾಜಕೀಯದಲ್ಲಿ  ʼಸಿಲುಕಿಕೊಂಡʼ ಸಿದ್ದರಾಮಯ್ಯ
x

Ground Report| ಕೋಗಿಲು ಒತ್ತುವರಿ ಸುತ್ತ ʼಮುಸ್ಲಿಂ ವಿಷಯʼ: ಪಿಣರಾಯಿ ರಾಜಕೀಯದಲ್ಲಿ ʼಸಿಲುಕಿಕೊಂಡʼ ಸಿದ್ದರಾಮಯ್ಯ

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಸಲ್ಮಾನರು, ದಲಿತರು, ಹಿಂದುಳಿದವರ ಮತಗಳು ಕಾಂಗ್ರೆಸ್‌ ಪಾಲಾಗುತ್ತಿರುವುದನ್ನು ಗಮನಿಸಿದ ಕೇರಳ ಸರ್ಕಾರವು ಮಸ್ಲಿಮರ ಓಲೈಕೆಗೆ ಮುಂದಾಗಿದೆ.

 &
Click the Play button to hear this message in audio format

ಬೆಂಗಳೂರಿನ ಯಲಹಂಕದ ಕೋಗಿಲು ಬಡಾವಣೆಯಲ್ಲಿ ಡಿ.20 ರಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಕೈಗೊಂಡ ಅನಧಿಕೃತ ಕಟ್ಟಡಗಳ ಒತ್ತುವರಿ ತೆರವು ಕಾರ್ಯಾಚರಣೆ ಪ್ರಕರಣವು ಕೇರಳ ಹಾಗೂ ಕರ್ನಾಟಕದ ಮಧ್ಯೆ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, ಒತ್ತುವರಿ ತೆರವು ಕಾರ್ಯಾಚರಣೆಯನ್ನು ʼಬುಲ್ಡೋಜರ್ ರಾಜ್‌ ʼ ಎಂದು ಟೀಕಿಸುವ ಮೂಲಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದರೆ, ಕಾಂಗ್ರೆಸ್ ಹೈಕಮಾಂಡ್ ನಾಯಕ ಕೆ.ಸಿ.ವೇಣುಗೋಪಾಲ್ ಸಹ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಜ್ಯದ ವಿಚಾರಗಳಲ್ಲಿ ಕೆ.ಸಿ.ವೇಣುಗೋಪಾಲ್‌ ಹಸ್ತಕ್ಷೇಪಕ್ಕೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ, ಸೂಪರ್‌ ಸಿಎಂ ಎಂದು ಜರಿದಿವೆ.

ಕೇರಳದಲ್ಲಿ ಮುಸ್ಲಿಂ ವೋಟ್‌ಬ್ಯಾಂಕ್‌ ಮೇಲೆ ಕಣ್ಣಿಟ್ಟಿರುವ ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರವು ಕರ್ನಾಟಕದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಿದ್ದಾರೆ. ಇದಕ್ಕೆ ತಮ್ಮ ಹೈಕಮಾಂಡ್‌ ನಾಯಕರೇ ಸಾಥ್‌ ನೀಡಿರುವುದು ರಾಜ್ಯ ಸರ್ಕಾರವನ್ನು ಗೊಂದಲಕ್ಕೆ ದೂಡಿದೆ. ಹೈಕಮಾಂಡ್‌ ನಾಯಕರ ಅಪ್ಪಣೆಯಂತೆ ನಡೆದುಕೊಂಡ ಸರ್ಕಾರವು ಇದೀಗ ವಿರೋಧ ಪಕ್ಷಗಳು ಹಾಗೂ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಅನ್ಯ ರಾಜ್ಯದ ಸ್ವಹಿತಾಸಕ್ತಿ ಸಾಧನೆಗಾಗಿ ರಾಜ್ಯದ ವಿಷಯವನ್ನು ದಾಳವನ್ನಾಗಿ ಬಳಸಿಕೊಂಡಿರುವುದರಿಂದ ಸಿಎಂ ಸಿದ್ದರಾಮಯ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಈ ಮಧ್ಯೆ, ಕೋಗಿಲು ಗ್ರಾಮಕ್ಕೆ ಕೇರಳ ಸಂಸದ ಎ.ಎ. ರಹೀಂ ಹಾಗೂ ಶಾಸಕ ಕೆ.ಟಿ. ಜಲೀಲ್ ನೇತೃತ್ವದ ನಿಯೋಗವನ್ನು ಭೇಟಿ ನೀಡಿ ವಸ್ತುಸ್ಥಿತಿ ಅವಲೋಕಿಸಿರುವುದು ಸಹ ಸರ್ಕಾರಕ್ಕೆ ತಲೆ ನೋವು ತಂದಿಟ್ಟಿದೆ.

ವೋಟ್ ಬ್ಯಾಂಕ್ ರಾಜಕಾರಣ

ಕೇರಳ ಸರ್ಕಾರದ ಹಸ್ತಕ್ಷೇಪದ ಹಿಂದೆ ವೋಟ್‌ಬ್ಯಾಂಕ್‌ ರಾಜಕಾರಣದ ಆರೋಪಗಳು ಕೇಳಿ ಬಂದಿವೆ. ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಡಪಕ್ಷಗಳ ಸರ್ಕಾರವು ಅಲ್ಪಸಂಖ್ಯಾತರ ಮತ ಬ್ಯಾಂಕ್‌ನಿಂದಲೇ ಅಧಿಕಾರದಲ್ಲಿದೆ. ಆದರೆ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದವರ ಮತಗಳು ಕಾಂಗ್ರೆಸ್‌ ಪಾಲಾಗಿರುವುದನ್ನು ಗಮನಿಸಿದ ಕೇರಳ ಸರ್ಕಾರವು ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದೆ.

ಕೋಗಿಲು ಬಡಾವಣೆಯಲ್ಲಿ ಕೇರಳದವರು ಇಲ್ಲದಿದ್ದರೂ ವಿಷಯವನ್ನು ರಾಜಕೀಯ ಬಳಸಿರುವುದು ವೋಟ್‌ ಬ್ಯಾಂಕ್‌ ರಾಜಕಾರಣವಾಗಿದೆ. ಆದರೆ, ಇದನ್ನು ನೇರವಾಗಿ ಒಪ್ಪಿಕೊಳ್ಳಲು ಕೇರಳ ಸರ್ಕಾರ ಸಿದ್ಧವಿಲ್ಲ. ಮೈತ್ರಿ ಸರ್ಕಾರದ ಶಾಸಕ ಕೆ.ಟಿ.ಜಲೀಲ್ ಕೋಗಿಲು ಗ್ರಾಮಕ್ಕೆ ಭೇಟಿ ನೀಡಿದಾಗ, ನಾವು ಈ ಪ್ರಕರಣವನ್ನು ರಾಜಕೀಯವಾಗಿ ನೋಡುತ್ತಿಲ್ಲ. ಈ ಹಿಂದೆ ದೆಹಲಿಯಲ್ಲಿ ಸ್ಥಳೀಯ ಪಾಲಿಕೆಯು ತೆರವು ಕಾರ್ಯಾಚರಣೆ ನಡೆಸಿದಾಗಲೂ ಬಡವರ ಪರವಾಗಿ ಸಿಪಿಐ(ಎಂ) ನಿಂತಿತ್ತು. ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್‌ ಅವರು ಹೋರಾಟದ ಮುಂಚೂಣಿ ವಹಿಸಿದ್ದರು. ದೇಶದ ಯಾವುದೇ ಭಾಗದಲ್ಲಿ ಇಂತಹ ಬುಲ್ಡೋಜರ್‌ ಸಂಸ್ಕೃತಿಯ ಕಾರ್ಯಾಚರಣೆ ನಡೆದರೆ ಸಂತ್ರಸ್ತರ ಪರವಾಗಿ ಸಿಪಿಐ (ಎಂ) ನಿಲ್ಲಲಿದೆ ಎಂದು ಹೇಳಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

ಕೇರಳದ ರಾಜಕಾರಣಿಗಳ ವರ್ತನೆಗೆ ರಾಜ್ಯ ಸರ್ಕಾರದ ಸಚಿವರು ಕೂಡ ಮುಗಿಬಿದ್ದಿದ್ದಾರೆ. ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕಾಂಗ್ರೆಸ್‌ ನೇತೃತ್ವದ ಸರ್ಕಾರ ಒತ್ತುವರಿ ತೆರವನ್ನು ಕಾನೂನು ಬದ್ಧವಾಗಿ ಕೈಗೊಂಡಿದೆ. ಕಾನೂನು ಬಿಟ್ಟು ಏನು ಮಾಡಲು ಸಾಧ್ಯವಿಲ್ಲ. ಕೇರಳದಲ್ಲಿ ಈ ಹಿಂದೆ ದಲಿತ ಯುವಕನನ್ನು ಭೀಕರವಾಗಿ ಥಳಿಸಿದಾಗ ಅದರ ಬಗ್ಗೆ ಏಕೆ ಮಾತನಾಡಿಲ್ಲ. ಅವರ ಅಂಗಳದ ನಡೆಯುವ ವಿಚಾರಗಳ ಬಗ್ಗೆ ಮಾತನಾಡಲ್ಲ, ಪಕ್ಕದ ಮನೆಯಲ್ಲಿ ನಡೆಯುವ ವಿಚಾರಗಳ ಬಗ್ಗೆ ಮಾತನಾಡುವುದು ರಾಜಕೀಯ ಅಲ್ಲದೇ ಮತ್ತೇನು" ಎಂದು ಪ್ರಶ್ನಿಸಿದ್ದಾರೆ.

ಕೋಗಿಲು ಪ್ರಕರಣ ಪ್ರಸ್ತಾಪದ ಉದ್ದೇಶ ಏನು?

ರಾಷ್ಟ್ರ ಮಟ್ಟದಲ್ಲಿ ಸಿಪಿಐ(ಎಂ) ಪಕ್ಷವು ʼಇಂಡಿಯಾ ಒಕ್ಕೂಟʼ ದ ಭಾಗವಾಗಿದೆ. ಕೇರಳದಲ್ಲಿ ಸಿಪಿಐ(ಎಂ) ಪಕ್ಷವು ಎಡಪಕ್ಷಗಳ ನೇತೃತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇಲ್ಲಿ ಕಾಂಗ್ರೆಸ್‌ ಅಧಿಕೃತ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಾಂಗ್ರೆಸ್‌ ನೇತೃತ್ವದ ಪಕ್ಷಗಳ ಒಕ್ಕೂಟ ಯುಡಿಎಫ್‌ ಆಗಿದೆ.

2026ಕ್ಕೆ ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಹಾಗೂ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ನಡುವೆ ಪೈಫೋಟಿ ಇದೆ. ಚುನಾವಣಾ ತಂತ್ರಗಾರಿಕೆಯ ಭಾಗವಾಗಿ ಕೇರಳ ಸರ್ಕಾರವು ಕೋಗಿಲು ಪ್ರಕರಣವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದು, ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ತರುವ ಪ್ರಯತ್ನಕ್ಕೆ ಕೈ ಹಾಕಿದೆ.

ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದ್ದು, ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇರುವುದು ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೂರನೇ ಅವಧಿಗೆ ಸರ್ಕಾರ ರಚಿಸಲು ಸಿಪಿಐ(ಎಂ)ಗೆ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿವೆ. ಹಾಗಾಗಿಯೇ ಅಲ್ಪಸಂಖ್ಯಾತರು ಹಾಗೂ ದಲಿತರ ವಿಚಾರಗಳನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಹಿಂದ ವರ್ಗಗಳಲ್ಲಿ ಕಾಂಗ್ರೆಸ್‌ ವಿರೋಧಿ ಭಾವನೆ ಮೂಡಿಸುವ ಕೇರಳ ಸರ್ಕಾರದ ಕಾರ್ಯತಂತ್ರಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಪ್ರತಿತಂತ್ರ ರೂಪಿಸಿದ್ದು, ಕೋಗಿಲು ಸಂತ್ರಸ್ತರಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ. ಕೇರಳದವರೇ ಆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚಿಸಿರುವುದು ಚುನಾವಣಾ ಗಿಮಿಕ್‌ ಎಂದೇ ವಿಶ್ಲೇಷಿಸಲಾಗಿದೆ.

ಕೇರಳದ ಜನಪ್ರತಿನಿಧಿಗಳು ಕೋಗಿಲು ಬಡಾವಣೆಗೆ ಭೇಟಿ ನೀಡಿರುವುದರ ಹಿಂದೆ ರಾಜಕೀಯವಷ್ಟೇ ಅಲ್ಲ, ವೋಟ್‌ ಮತಬ್ಯಾಂಕ್ ರಾಜಕಾರಣವೂ ಇದೆ. ಕೋಗಿಲು ಪ್ರಕರಣವನ್ನು ಕೇರಳದ ರಾಜಕಾರಣಿಗಳು ಚುನಾವಣಾ ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್‌ ವಿರುದ್ಧ ಅಪಪ್ರಚಾರ ಷಡ್ಯಂತ್ರ?

ಕೇರಳದಲ್ಲಿ ಕಳೆದ ಹತ್ತು ವರ್ಷಗಳಿಂದ ಸಿಪಿಐ(ಎಂ) ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಇತ್ತೀಚೆಗೆ ಎಡಪಕ್ಷಗಳ ಸರ್ಕಾರದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ. ಇದು ಕಾಂಗ್ರೆಸ್ಸಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಎಂ ಪಿಣರಾಯಿ ವಿಜಯನ್‌ ಅವರು ಅಲ್ಪಸಂಖ್ಯಾತರ ಓಲೈಕೆ ಕಸರತ್ತು ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇರಳದಲ್ಲಿ ಅಧಿಕಾರಕ್ಕೆ ಬಂದರೆ ಇದೇ ರೀತಿಯ ಬುಲ್ಡೋಜರ್‌ ಕಾರ್ಯಾಚರಣೆ ನಡೆಸಲಿದೆ ಎಂಬ ಅಪಪ್ರಚಾರ ನಡೆಸುತ್ತಿದೆ ಎನ್ನಲಾಗಿದೆ.

ವಯನಾಡು ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಪರವಾಗಿ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಮಾಡಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಪರ ಅಹಿಂದ ವರ್ಗಗಳು ಕೆಲಸ ಮಾಡಿದ್ದರಿಂದ ಪ್ರಿಯಾಂಕಾ ಗಾಂಧಿ ಗೆಲುವು ಸುಲಭವಾಗಿತ್ತು. ಈ ಮಧ್ಯೆ, ಬಿಜೆಪಿಯಿಂದ ದೂರ ಸರಿಯುತ್ತಿರುವ ಅಹಿಂದ ವರ್ಗಗಳನ್ನು ಕಾಂಗ್ರೆಸ್‌ ತನ್ನ ಮತಬ್ಯಾಂಕ್‌ ಮಾಡಿಕೊಳ್ಳಲಿದೆ. ಅದು ನೆರವೇರಿದರೆ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಹಿನ್ನೆಡೆಯಾಗಲಿದೆ ಎಂಬ ಆತಂಕ ಕೂಡ ರಾಜ್ಯದ ವಿಷಯದಲ್ಲಿ ಕೇರಳ ಸರ್ಕಾರದ ಹಸ್ತಕ್ಷೇಪಕ್ಕೆ ಕಾರಣವಾಗಿದೆ.

ಕೇರಳದಲ್ಲಿ ಅಹಿಂದ ಸಮಾವೇಶ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಯೋಜನೆ ಕೂಡ ರೂಪಿಸುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಂದ ವಿಚಲಿತವಾಗಿರುವ ಸಿಪಿಐ(ಎಂ) ನೇತೃತ್ವದ ಸರ್ಕಾರ, ಕೋಗಿಲು ಪ್ರಕರಣವನ್ನು ದಾಳವನ್ನಾಗಿ ಬಳಸಿಕೊಂಡಿದೆ ಎನ್ನಲಾಗಿದೆ.

ತೆರವು ಕಾರ್ಯಾಚರಣೆಗೆ ಏಕೆ ಅಪಸ್ವರ?

ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಎಲ್ಲಾ ರಾಜ್ಯಗಳಲ್ಲಿ ನಿರಂತರ ಪ್ರಕ್ರಿಯೆಯಾಗಿದೆ. ಅದೇ ರೀತಿ ಗ್ರೇಟರ್‌ ಬೆಂಗಳೂರು ವತಿಯಿಂದ ಕೋಗಿಲು ಬಡಾವಣೆಯಲ್ಲಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಅನಗತ್ಯವಾಗಿ ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದು, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ಮುಜುಗರ ಎದುರಾಗಿದೆ. ಅಲ್ಪಸಂಖ್ಯಾತ ಮತಗಳನ್ನು ದೂರ ಸರಿಯದಂತೆ ನೋಡಿಕೊಳ್ಳಲು ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಅನಿವಾರ್ಯ. ಇದೇ ಕಾರಣಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಪರ್ಯಾಯ ವ್ಯವಸ್ಥೆಗೆ ಸೂಚಿಸಿರುವುದು ಸರ್ಕಾರದ ದ್ವಿಬಗೆಯ ನೀತಿಗೆ ಸಾಕ್ಷಿಯಾಗಿದೆ.

ಕಾಂಗ್ರೆಸ್‌ ಒಳರಾಜಕಾರಣದ ಗುಮ್ಮ

ಡಿ.20 ರಂದು ಕೋಗಿಲು ಬಡಾವಣೆಯಲ್ಲಿ ಅನಧಿಕೃತ ಕಟ್ಟಡಗಳನ್ನು ಧ್ವಂಸ ಮಾಡಿದಾಗಿನಿಂದ ಕ್ಷೇತ್ರದ ಶಾಸಕರಾಗಿರುವ ಕೃಷ್ಣ ಬೈರೇಗೌಡ ಅವರು ಸ್ಥಳಕ್ಕೆ ಭೇಟಿ ನೀಡದಿರುವುದು ಹಾಗೂ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.

ಕೋಲಾರದ ಗಾರುಡಿಗನಪಾಳ್ಯದಲ್ಲಿ ಭೂ ಕಬಳಿಕೆ ಆರೋಪದ ಎದುರಾದ ಬಳಿಕ ಈಗ ತಮ್ಮ ಕ್ಷೇತ್ರದಲ್ಲಿ ನಡೆದ ಅನಧಿಕೃತ ಕಟ್ಟಡಗಳ ನೆಲಸಮ ಪ್ರಕರಣ ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ. 2018 ರಲ್ಲಿ ಕಂದಾಯ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಅವರೇ ಇಲ್ಲಿನ ನಿವಾಸಿಗಳು ತಾತ್ಕಾಲಿಕ ಹಕ್ಕುಪತ್ರ ವಿತರಿಸಿದ್ದರು. ಈಗ ಹಕ್ಕು ಪತ್ರ ಹೊಂದಿದ್ದ ಮನೆಗಳನ್ನೇ ನೆಲಸಮ ಮಾಡಿರುವುದು ಆಡಳಿತದ ವೈಫಲ್ಯಕ್ಕೆ ಕಾರಣವಾಗಿದೆ.

ಈ ಮಧ್ಯೆ, ಬ್ಯಾಟರಾಯನಪುರದಲ್ಲಿ ಕೃಷ್ಣ ಬೈರೇಗೌಡ ಅವರ ವರ್ಚಸ್ಸು ಕ್ಷೀಣಿಸುವಂತೆ ಮಾಡಲು ಡಿಸಿಎಂ ಡಿ.ಕೆ. ಶಿವಕುಮಾರ್‌ ಯತ್ನಿಸುತ್ತಿದ್ದಾರೆ ಎಂದು ಮಾತುಗಳು ಕೂಡ ಕೇಳಿ ಬರುತ್ತಿವೆ. ಸಿದ್ದರಾಮಯ್ಯ ಆಪ್ತ ಸಚಿವರ ವಲಯದಲ್ಲಿ ಕೃಷ್ಣ ಬೈರೇಗೌಡ ಕೂಡ ಗುರುತಿಸಿಕೊಂಡಿದ್ದು, ಅವರ ಪ್ರಭಾವ ತಗ್ಗಿಸಲು ಕೋಗಿಲು ಪ್ರಕರಣವನ್ನು ಅಂತರರಾಜ್ಯ ವಿವಾದವನ್ನಾಗಿ ಮುನ್ನೆಲೆಗೆ ತರಲಾಗಿದೆ ಎನ್ನಲಾಗಿದೆ.

Read More
Next Story