
ಕೋಗಿಲು ಪುನರ್ವಸತಿ ಬಿಕ್ಕಟ್ಟು: ಕಡ್ಡಾಯವಾಗಿ ಕನ್ನಡಿಗರಿಗಷ್ಟೇ ಆದ್ಯತೆ; ಅನ್ಯರಿಗಿಲ್ಲ ಮಾನ್ಯತೆ
ಕೋಗಿಲು ಸಂತ್ರಸ್ತರು ಮನೆಗಾಗಿ ಸಲ್ಲಿಕೆ ಮಾಡಿರುವ ಅರ್ಜಿಗಳ ಸಂಖ್ಯೆ 250 ದಾಟಿದೆ. ನೆಲಸಮಗೊಂಡ ಮನೆಗಳಿಗಿಂತ ಹೆಚ್ಚಿನ ಅರ್ಜಿಗಳು ಬಂದಿರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.
ಬೆಂಗಳೂರಿನ ಉತ್ತರ ಭಾಗದ ಕೋಗಿಲು ಪ್ರದೇಶದ ನಿವಾಸಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶಾಶ್ವತ ವಸತಿ ಕಲ್ಪಿಸುವುದಾಗಿ ನೀಡಿದ ಸರ್ಕಾರದ ಭರವಸೆಯು ಈಗ ಆಡಳಿತಾತ್ಮಕ ವಿಳಂಬ, ಅಂಕಿ-ಅಂಶಗಳ ವ್ಯತ್ಯಾಸ ಮತ್ತು ಕಠಿಣ ನಿಯಮಗಳ ಸುಳಿಯಲ್ಲಿ ಸಿಲುಕಿಸಿದೆ.
ಆಶ್ರಯ ನೀಡಬೇಕಾದ ಸರ್ಕಾರಿ ವ್ಯವಸ್ಥೆಯೇ ಸಂತ್ರಸ್ತರ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿರುವುದು ದುರದೃಷ್ಟಕರ. ಫಕೀರ್ ನಗರ, ನ್ಯೂ ಫಕೀರ್ ನಗರ ಮತ್ತು ವಾಸೀಮ್ ನಗರಗಳಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ವಸತಿ ನೀಡುವ ಪ್ರಕ್ರಿಯೆಯಲ್ಲಿನ ಗೊಂದಲಗಳು ಆಡಳಿತ ಯಂತ್ರದ ವಿಫಲತೆಗೆ ಸಾಕ್ಷಿಯಾಗಿದೆ.
ಯಾವುದೇ ಪುನರ್ವಸತಿ ಪ್ರಕ್ರಿಯೆಯ ಮೊದಲ ಹಂತವೆಂದರೆ ಅರ್ಹ ಫಲಾನುಭವಿಗಳ ಪತ್ತೆ ಮಾಡಬೇಕು. ಆದರೆ ಕೋಗಿಲು ಬಡಾವಣೆಯ ಸಂತ್ರಸ್ತೆಯ ಪ್ರಕರಣದಲ್ಲಿ, ಸಮೀಕ್ಷೆ ನಡೆಸಿದ ಎರಡು ಪ್ರಮುಖ ಸಂಸ್ಥೆಗಳ ವರದಿಗಳಲ್ಲೇ ಗಣನೀಯ ವ್ಯತ್ಯಾಸವಿದೆ. ಕಂದಾಯ ಇಲಾಖೆಯು ನಡೆಸಿದ ಪ್ರಾಥಮಿಕ ಸಮೀಕ್ಷೆಯ ಪ್ರಕಾರ 200 ಮಂದಿ ಮನೆ ಪಡೆಯಲು ಅರ್ಹರಾಗಿದ್ದಾರೆ. ಇದೇ ಪ್ರದೇಶದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಮೀಕ್ಷೆಯು 180 ಫಲಾನುಭವಿಗಳನ್ನು ಮಾತ್ರ ಗುರುತಿಸಿದೆ. ಆದರೆ, ಮನೆಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 250 ದಾಟಿದೆ. ನೆಲಸಮಗೊಂಡ ಮನೆಗಳಿಗಿಂತ ಹೆಚ್ಚಿನ ಅರ್ಜಿಗಳು ಬಂದಿರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಅಂದಾಜಿಗಿಂತ 50-70ಕ್ಕೂ ಹೆಚ್ಚು ಅರ್ಜಿಗಳು ಬಂದಿರುವುದು ಹಂಚಿಕೆ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದ್ದು, ಯಾರು ನಿಜವಾದ ಸಂತ್ರಸ್ತರು ಮತ್ತು ಯಾರು ಹಿತಾಸಕ್ತಿ ಗುಂಪುಗಳು ಎಂಬುದನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ.
ಸರ್ಕಾರದ ಮೇಲೆ 'ತ್ರಿವಳಿ' ಒತ್ತಡ
ಮೂಲಗಳ ಪ್ರಕಾರ ಕೋಗಿಲು ಬಡಾವಣೆಯ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರವು ಮೂರು ಕಡೆಯಿಂದ ಒತ್ತಡಕ್ಕೆ ಸಿಲುಕಿದೆ. ಒಂದೆಡೆ ಕೇರಳ ಚುನಾವಣೆಯ ರಾಜಕೀಯ ಒತ್ತಡ, ಮತ್ತೊಂದೆಡೆ ಕಾನೂನು ಮತ್ತು ತಾಂತ್ರಿಕ ಅಡ್ಡಿ ಮತ್ತು ಇತರೆ ಬಡಾವಣೆಗಳ ಸಂತ್ರಸ್ತರ ನಿವಾಸಿಗಳಿಗೆ ಪುನರ್‌ವಸತಿ ಕಲ್ಪಿಸುವ ಒತ್ತಡಗಳು ಹೆಚ್ಚಿವೆ. ಕೇರಳ ಚುನಾವಣಾ ರಾಜಕಾರಣದ ಹಿನ್ನೆಲೆಯಲ್ಲಿ ಕೋಗಿಲು ಸಂತ್ರಸ್ತರಿಗೆ ಶೀಘ್ರವಾಗಿ ಮನೆ ಹಂಚಿಕೆ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ನಿಂದ ಒತ್ತಡವಿದೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಕೇರಳವು ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪ್ರಮುಖವಾದ ರಾಜ್ಯವಾಗಿದೆ. ಹೀಗಾಗಿ, ಹೈಕಮಾಂಡ್ ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದೆ ಎನ್ನಲಾಗುತ್ತಿದೆ. ಕೋಗಿಲು ಸಂತ್ರಸ್ತರನ್ನು ಸಂಕಷ್ಟಕ್ಕೆ ತಳ್ಳಬೇಡಿ, ಅವರಿಗೆ ಶೀಘ್ರವಾಗಿ ಮನೆ ಹಂಚಿಕೆ ಮಾಡಿ ಎಂಬ ಮೌಖಿಕ ಸೂಚನೆ ದೆಹಲಿಯಿಂದ ರಾಜ್ಯ ನಾಯಕರಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಕಾರಣಕ್ಕೂ ಮಾನವೀಯ ನೆಲೆಯ ಈ ವಿಚಾರವು ಚುನಾವಣಾ ವಿಷಯವಾಗಿ ಬದಲಾಗಬಾರದು ಎಂಬುದು ಹೈಕಮಾಂಡ್ ಉದ್ದೇಶ. ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಕರ್ನಾಟಕದ ನಿರ್ಧಾರವೊಂದು ಕೇರಳದ ಚುನಾವಣಾ ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಹೈಕಮಾಂಡ್‌ಗೆ ಅನಿವಾರ್ಯವಾಗಿದೆ.
ದಾಖಲೆಗಳಿಲ್ಲದವರಿಗೆ ಮನೆ ನೀಡಿದರೆ ಭವಿಷ್ಯದಲ್ಲಿ ಕಾನೂನು ಸಂಘರ್ಷ ಎದುರಾಗಬಹುದು ಅಥವಾ ನ್ಯಾಯಾಲಯದಲ್ಲಿ ಆಕ್ಷೇಪ ವ್ಯಕ್ತವಾಗಬಹುದು ಎಂಬ ಆತಂಕ ಅಧಿಕಾರಿಗಳಲ್ಲಿದೆ. ಇಂದಿನ ದಿನಗಳಲ್ಲಿ ಸಣ್ಣಪುಟ್ಟ ಸರ್ಕಾರಿ ಲೋಪಗಳೂ ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ನ್ಯಾಯಾಲಯದ ಮೆಟ್ಟಿಲೇರುತ್ತವೆ. ಒಂದು ವೇಳೆ ಸಂತ್ರಸ್ತರಿಗೆ ಮನೆಗಳನ್ನು ಹಂಚಿಕೆ ಮಾಡಿದ ನಂತರ, ಯಾರಾದರೂ ನ್ಯಾಯಾಲಯದಲ್ಲಿ ಅನರ್ಹರಿಗೆ ಅಥವಾ ದಾಖಲೆಗಳಿಲ್ಲದವರಿಗೆ ಸರ್ಕಾರಿ ಹಣದಲ್ಲಿ ಮನೆ ನೀಡಲಾಗಿದೆ ಎಂದು ಪ್ರಶ್ನಿಸಿದರೆ, ಹಂಚಿಕೆ ಮಾಡಿದ ಅಧಿಕಾರಿಯೇ ನೇರ ಹೊಣೆಗಾರರಾಗುತ್ತಾರೆ. ಈ ಹಿಂದೆ ಬೆಂಗಳೂರಿನ ವಿವಿಧೆಡೆ ನಡೆದ ಒತ್ತುವರಿ ತೆರವು ಮತ್ತು ಪುನರ್ವಸತಿ ಪ್ರಕರಣಗಳಲ್ಲಿ ನ್ಯಾಯಾಲಯವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವಂತೆ ಆದೇಶಿಸಿದೆ. ನಿಯಮ ಮೀರಿ ಮನೆ ನೀಡಿದರೆ ಅದನ್ನು ಸಾರ್ವಜನಿಕ ಸಂಪನ್ಮೂಲದ ಲೂಟಿ ಎಂದು ಪರಿಗಣಿಸುವ ಸಾಧ್ಯತೆಯಿದೆ. ಹೀಗಾಗಿ ಅಧಿಕಾರಿಗಳು ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದ್ದಾರೆ.
ಕೋಗಿಲು ನಿವಾಸಿಗಳಿಗೆ ಪರ್ಯಾಯ ವಸತಿ ನೀಡಿದರೆ, ರಾಜಧಾನಿಯ ಇತರೆಡೆಗಳಲ್ಲಿ ಮನೆ ಕಳೆದುಕೊಂಡ ಸಾವಿರಾರು ಸಂತ್ರಸ್ತರು ಕೂಡ ಇದೇ ರೀತಿ ಪರ್ಯಾಯ ವ್ಯವಸ್ಥೆಗೆ ಪಟ್ಟು ಹಿಡಿಯಬಹುದು. ಇದು ನ್ಯಾಯಾಲಯದ ಮೆಟ್ಟಿಲೇರಿದರೆ ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯಬಹುದು ಎಂದು ದುಗುಡ ಇದೆ. ಯಾವುದೇ ಒಂದು ಆಡಳಿತಾತ್ಮಕ ನಿರ್ಧಾರವು ಕೇವಲ ಆ ಸಂದರ್ಭಕ್ಕೆ ಸೀಮಿತವಾಗಿರುವುದಿಲ್ಲ. ಅದು ಭವಿಷ್ಯದ ಇದೇ ರೀತಿಯ ಪ್ರಕರಣಗಳಿಗೆ ಒಂದು ಮಾದರಿಯಾಗುತ್ತದೆ. ಕೋಗಿಲು ಬಡಾವಣೆಯು ತಾಂತ್ರಿಕವಾಗಿ 'ಅಕ್ರಮ ಒತ್ತುವರಿ' ಎಂದು ಗುರುತಿಸಲ್ಪಟ್ಟು ತೆರವುಗೊಂಡಿದೆ. ಈಗ ಅಲ್ಲಿನ ನಿವಾಸಿಗಳಿಗೆ ಸರ್ಕಾರವು ಪರ್ಯಾಯ ವಸತಿ ನೀಡಿದರೆ, ಅದು ಬೆಂಗಳೂರಿನ ಇತರೆಡೆಗಳಲ್ಲಿರುವ ಲಕ್ಷಾಂತರ ಅಕ್ರಮ ಒತ್ತುವರಿದಾರರಿಗೆ ಒಂದು "ಕಾನೂನುಬದ್ಧ ಹಕ್ಕು" ನೀಡಿದಂತಾಗುತ್ತದೆ ಎಂಬುದು ಅಧಿಕಾರಿಗಳ ಆತಂಕವಾಗಿದೆ.
ಕೆ.ಜಿ.ಹಳ್ಳಿ, ಕೆ.ಆರ್. ಪುರಂ, ಮಹದೇವಪುರ ಮತ್ತು ಬೊಮ್ಮನಹಳ್ಳಿ ಭಾಗಗಳಲ್ಲಿ ಸಾವಿರಾರು ಮನೆಗಳನ್ನು ಒತ್ತುವರಿ ಹೆಸರಿನಲ್ಲಿ ನೆಲಸಮ ಮಾಡಲಾಗಿದೆ. ಆ ಸಂದರ್ಭದಲ್ಲಿ ಯಾರಿಗೂ ಪರ್ಯಾಯ ವಸತಿ ನೀಡಿರಲಿಲ್ಲ. ಈಗ ಕೋಗಿಲು ನಿವಾಸಿಗಳಿಗೆ ಮನೆ ನೀಡಿದರೆ, ಈ ಹಿಂದಿನ ಸಂತ್ರಸ್ತರೆಲ್ಲರೂ "ನಮಗೇಕೆ ನೀಡಿಲ್ಲ?" ಎಂದು ಬೀದಿಗೆ ಇಳಿದು ಸರ್ಕಾರವನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಸಂವಿಧಾನದ 14ನೇ ವಿಧಿಯಡಿ (ಸಮಾನತೆಯ ಹಕ್ಕು) ಇತರ ಬಡಾವಣೆಗಳ ನಿರಾಶ್ರಿತರು ನ್ಯಾಯಾಲಯಕ್ಕೆ ಹೋಗಿ, ಕೋಗಿಲು ನಿವಾಸಿಗಳಿಗೆ ನೀಡಿದಂತೆ ನಮಗೂ ಪರ್ಯಾಯ ವಸತಿ ನೀಡಿ ಎಂದು ಕೇಳಿದರೆ ಸರ್ಕಾರಕ್ಕೆ ಉತ್ತರಿಸಲು ದಾರಿಯೇ ಇರುವುದಿಲ್ಲ. ಸರ್ಕಾರದ ನಡೆ ಅಕ್ರಮ ಒತ್ತುವರಿದಾರರಿಗೆ ತಪ್ಪು ಸಂದೇಶ ರವಾನಿಸುವ ಸಾಧ್ಯತೆಯಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ರಾಜೀವ್ ಗಾಂಧಿ ವಸತಿ ನಿಗಮದ ನಿಯಮಗಳ ಅಡ್ಡಿ
ಸಂತ್ರಸ್ತರಿಗೆ ಮನೆ ನೀಡುವ ಜವಾಬ್ದಾರಿ ಹೊತ್ತಿರುವ ರಾಜೀವ್ ಗಾಂಧಿ ವಸತಿ ನಿಗಮವು ಕೆಲವು ಕಟ್ಟುನಿಟ್ಟಾದ ಮಾನದಂಡಗಳನ್ನು ಹೊಂದಿದೆ. ಇವು ಕೋಗಿಲು ನಿವಾಸಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿವೆ. ಫಲಾನುಭವಿಗಳು ಕಡ್ಡಾಯವಾಗಿ ಕರ್ನಾಟಕದ ನಿವಾಸಿಯಾಗಿರಬೇಕು ಮತ್ತು ಕನಿಷ್ಠ 10 ವರ್ಷಗಳಿಂದ ಅದೇ ಪ್ರದೇಶದಲ್ಲಿ ನೆಲೆಸಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು. ಆದರೆ, ಕೋಗಿಲು ಬಡಾವಣೆಯ ನಿವಾಸಿಗಳಲ್ಲಿ ಅನೇಕರು ವಲಸಿಗರಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ನೆಲೆಸಿದವರಾಗಿದ್ದಾರೆ. ವಾರ್ಷಿಕ ಆದಾಯ 1.2 ಲಕ್ಷ ರೂ. ಮೀರಿರಬಾರದು. ಆಧಾರ್, ಮತದಾರರ ಚೀಟಿ ಮತ್ತು ಪಡಿತರ ಚೀಟಿ ಕಡ್ಡಾಯ. ವರದಿಯ ಪ್ರಕಾರ, ಮನೆ ಧ್ವಂಸ ಮಾಡುವ ಸಂದರ್ಭದಲ್ಲಿ ಅನೇಕರು ತಮ್ಮ ಮೂಲ ದಾಖಲೆಗಳನ್ನು ಕಳೆದುಕೊಂಡಿದ್ದಾರೆ, ಇದು ಅವರನ್ನು ತಾಂತ್ರಿಕವಾಗಿ ಅನರ್ಹರನ್ನಾಗಿ ಮಾಡುತ್ತಿದೆ ಎಂದು ಹೇಳಲಾಗಿದೆ.
ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪರಶುರಾಮ್ ಸಿನ್ನಾಳ್ಕರ್ ಈ ವಿಚಾರದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಾನೂನುಬದ್ಧವಾಗಿ ದಾಖಲೆಗಳಿಲ್ಲದ ಅಥವಾ ಅನರ್ಹರಿಗೆ ಮನೆಗಳನ್ನು ಹಂಚಿಕೆ ಮಾಡಿದರೆ, ಮುಂದೆ ಅಧಿಕಾರಿಗಳು ಮತ್ತು ಸರ್ಕಾರ ಕಾನೂನು ಸಂಘರ್ಷಕ್ಕೆ ಸಿಲುಕಬೇಕಾಗುತ್ತದೆ. ಈಗಾಗಲೇ ವಿರೋಧ ಪಕ್ಷವಾದ ಬಿಜೆಪಿ, ಅಕ್ರಮವಾಗಿ ನೆಲೆಸಿದ ವಲಸಿಗರಿಗೆ ಮನೆ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಬಿಜೆಪಿ ನ್ಯಾಯಾಲಯದ ಮೆಟ್ಟಿಲೇರಿದರೆ, ಸರ್ಕಾರ ಇಕ್ಕಟ್ಟಿಗೆ ಸಿಲುಕುವುದು ನಿಶ್ಚಿತ ಎಂದು ಹೇಳಲಾಗಿದೆ. ದಾಖಲೆಗಳಿಲ್ಲದ ಅರ್ಜಿಯನ್ನು ಅನುಮೋದಿಸಿದರೆ, ಭವಿಷ್ಯದಲ್ಲಿ 'ಆಡಿಟ್' ನಡೆಯುವಾಗ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ. ಹಣಕಾಸಿನ ದುರುಪಯೋಗದ ಆರೋಪ ಬಂದರೆ ಅಧಿಕಾರಿಗಳ ನಿವೃತ್ತಿ ಸೌಲಭ್ಯಗಳಿಗೂ ಕುತ್ತು ಬರಬಹುದು ಎಂಬ ಮಾತುಗಳು ಕೇಳಿಬಂದಿವೆ.
ಸಮೀಕ್ಷೆ, ಫಲಾನುಭವಿಗಳ ಅಂತಿಮಗೊಳಿಸುವ ಅಗತ್ಯ
ಮನೆ ಸಿಗುವ ನಿರೀಕ್ಷೆಯಲ್ಲಿರುವ ಜನರ ಸ್ಥಿತಿ ಗಂಭೀರವಾಗಿದೆ. ತಾತ್ಕಾಲಿಕ ಶೆಡ್‌ಗಳಲ್ಲಿ ಅಥವಾ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಸರ್ಕಾರವು ಮನೆ ನೀಡುವುದಾಗಿ ಭರವಸೆ ನೀಡಿದ ಮೇಲೆ ಇತರ ವ್ಯವಸ್ಥೆಗಳನ್ನು ಮಾಡಿಕೊಳ್ಳದ ಜನರು ಈಗ ಸರ್ಕಾರದತ್ತ ದೈನ್ಯದಿಂದ ನೋಡುತ್ತಿದ್ದಾರೆ. ಆಡಳಿತದ ವಿಳಂಬವು ಸರ್ಕಾರದ ಮೇಲಿರುವ ಸಾರ್ವಜನಿಕ ನಂಬಿಕೆಯನ್ನು ಕುಸಿಯುವಂತೆ ಮಾಡಲಿದೆ. ಹೀಗಾಗಿ ಗೊಂದಲಗಳನ್ನು ನಿವಾರಿಸಲು ಕಂದಾಯ ಇಲಾಖೆ ಮತ್ತು ಜಿಬಿಎ ಜಂಟಿಯಾಗಿ ಒಂದು ಅಂತಿಮ ಸಮೀಕ್ಷೆ ನಡೆಸಬೇಕು. ಸ್ಥಳದಲ್ಲೇ ಮಹಜರು ನಡೆಸಿ ಫಲಾನುಭವಿಗಳನ್ನು ಅಂತಿಮಗೊಳಿಸಬೇಕು. ಸಂತ್ರಸ್ತರು ಪ್ರತಿ ಇಲಾಖೆಗೆ ಅಲೆಯುವ ಬದಲು, ಎಲ್ಲಾ ಪ್ರಕ್ರಿಯೆಗಳನ್ನು ಒಂದೇ ಕಡೆ ಪೂರ್ಣಗೊಳಿಸುವ ವ್ಯವಸ್ಥೆ ಮಾಡಬೇಕು.
ಅಧಿಕಾರಿಗಳ ಆತಂಕವು ನ್ಯಾಯಬದ್ಧವಾಗಿದೆ. ಭವಿಷ್ಯದಲ್ಲಿ ರಾಜಕಾರಣಿಗಳು ಅಧಿಕಾರ ಕಳೆದುಕೊಂಡರೂ, ಸಹಿ ಮಾಡಿದ ಅಧಿಕಾರಿಗಳು ಮಾತ್ರ ಕಾನೂನಿನ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ಆದ್ದರಿಂದ, ಕೋಗಿಲು ಪುನರ್ವಸತಿ ಪ್ರಕ್ರಿಯೆಯು ಕೇವಲ 'ಭರವಸೆ'ಯ ಮೇಲೆ ನಡೆಯುವ ಬದಲು, ʼಕಾನೂನುಬದ್ಧ ಭದ್ರತೆ'ಯ ಮೇಲೆ ನಡೆಯಬೇಕಿದೆ. ಇಲ್ಲವಾದಲ್ಲಿ, ಹಂಚಿಕೆಯಾದ ಮನೆಗಳು ಕೂಡ ನ್ಯಾಯಾಲಯದ ಆದೇಶದಿಂದಾಗಿ ಮತ್ತೆ ತೆರವುಗೊಳ್ಳುವ ಭೀತಿ ಎದುರಾಗಬಹುದು. ಸರ್ಕಾರವು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ಎಲ್ಲಾ ಅರ್ಜಿಗಳನ್ನು ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲಿಸಬೇಕು. ರಾಜಕೀಯ ಒತ್ತಡಕ್ಕೆ ಮಣಿಯದೆ ಕೇವಲ ಅರ್ಹ ಮತ್ತು ದಾಖಲೆ ಹೊಂದಿರುವ ಸಂತ್ರಸ್ತರಿಗೆ ಮಾತ್ರ ಮನೆಗಳನ್ನು ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ, ಇದು ಭವಿಷ್ಯದಲ್ಲಿ ಬೆಂಗಳೂರಿನಾದ್ಯಂತ ಅಕ್ರಮ ಒತ್ತುವರಿದಾರರಿಗೆ ಮನೆ ಕಳೆದುಕೊಂಡರೆ ಪರ್ಯಾಯ ಮನೆ ಸಿಗುತ್ತದೆ ಎಂಬ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಹೇಳಲಾಗಿದೆ.
ಘನತ್ಯಾಜ್ಯ ವಿಲೇವಾರಿ ಘಟಕದ ಸ್ಥಳ
ಈ ನಡುವೆ, ಕೋಗಿಲು ಬಡಾವಣೆಯಲ್ಲಿ ಮನೆಗಳ ಧ್ವಂಸ ಪ್ರಕರಣ ಸಂಬಂಧ ಸಂತ್ರಸ್ತರು ಇತ್ತೀಚೆಗೆ ಬಂದು ನೆಲೆಸಿದ್ದರು ಎಂಬ ವಿಷಯ ಗೊತ್ತಾಗಿದೆ. ಈ ಮೂಲಕ ಕಳೆದ 25 ವರ್ಷಗಳಿಂದ ವಾಸವಿದ್ದೇವೆಂಬ ಸ್ಥಳೀಯರ ಆರೋಪಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಯಾಟಲೈಟ್ ಫೋಟೋ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದೆ. ಅಲ್ಲದೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯು ಇದಕ್ಕೆ ಪುಷ್ಠಿ ನೀಡಿದೆ. ಸ್ಯಾಟಲೈಟ್ ಫೋಟೋಗಳು 2016ರ ಮೊದಲು ಆ ಪ್ರದೇಶದಲ್ಲಿ ಯಾವುದೇ ಮನೆಗಳೂ ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ ಎಂದು ಹೇಳಿದ್ದಾರೆ. ಈ ಮೂಲಕ ಮನೆಗಳು ಲಭ್ಯತೆಯ ಬಗ್ಗೆ ಅನುಮಾನ ಮೂಡಿವೆ ಎಂದು ಹೇಳಲಾಗಿದೆ.
ಉತ್ತರ ಭಾರತದವರು ಸಹ ನೆಲೆಸಿದ್ದಾರೆ
ಕೋಗಿಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಭಾರಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಮತ್ತು ಗುಜರಿ ಉದ್ಯಮದಲ್ಲಿ ಕೆಲಸ ಮಾಡಲು ಉತ್ತರ ಭಾರತದ ವಿವಿಧ ರಾಜ್ಯಗಳಿಂದ ವಲಸಿಗರು ಬಂದಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಬಹುತೇಕ ಮಂದಿ ಮುಸ್ಲಿಮರು ಆಗಿದ್ದು, ತಾತ್ಕಾಲಿಕ ಶೆಡ್‌ಗಳನ್ನು ಹಾಕಿಕೊಂಡು ನೆಲೆಸಿದ್ದರು ಎನ್ನಲಾಗಿದೆ. ನೆಲೆಸಿರುವ ಉತ್ತರ ಭಾರತದ ಮುಸ್ಲಿಂ ಸಮುದಾಯದ ಜನರು ಪ್ರಮುಖವಾಗಿ ದಿನಗೂಲಿ ಕೆಲಸ, ಕಟ್ಟಡ ನಿರ್ಮಾಣ, ಸೆಕ್ಯೂರಿಟಿ ಗಾರ್ಡ್ ಮತ್ತು ಹಳೆಯ ವಸ್ತುಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಕಡಿಮೆ ಅವಧಿಯಲ್ಲಿ ಇಲ್ಲಿ ನೆಲೆ ಕಂಡುಕೊಂಡಿರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ. ಉತ್ತರ ಭಾರತದವರು ನೆಲೆಸಿರುವುದು ಕೇವಲ ವಲಸೆಯೋ ಅಥವಾ ವ್ಯವಸ್ಥಿತ ಅತಿಕ್ರಮಣವೋ ಎಂಬುದು ಕಂದಾಯ ಇಲಾಖೆಯ ದಾಖಲೆಗಳ ಪರಿಶೀಲನೆಯ ನಂತರವಷ್ಟೇ ಸ್ಪಷ್ಟವಾಗಲಿದೆ.

