Kogilu Cross encroachment | BJP forms fact-finding committee, instructed to submit report within a week
x

ಕೋಗಿಲು ಕ್ರಾಸ್‌ ಒತ್ತುವರಿ ಕುರಿತು ಬಿಜೆಪಿ ರಚಿಸಿರುವ ಸತ್ಯಶೋಧನ ತಂಡ

ಕೋಗಿಲು ಕ್ರಾಸ್‌ ಒತ್ತುವರಿ| ಬಿಜೆಪಿಯಿಂದ ಸತ್ಯಶೋಧನ ಸಮಿತಿ ರಚನೆ, ವಾರದೊಳಗೆ ವರದಿ ನೀಡಲು ಸೂಚನೆ

ಯಲಹಂಕ ಸಮೀಪದ ಕೋಗಿಲು ಬಂಡೆ ಪ್ರದೇಶದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಸಿಇಒ ಕರೀಗೌಡ ಅವರ ನೇತೃತ್ವದಲ್ಲಿ ಈ ಒತ್ತುವರಿ ತೆರವು ಕಾರ್ಯಾಚರಣೆ ಇತ್ತೀಚೆಗೆ ನಡೆದಿತ್ತು.


Click the Play button to hear this message in audio format

ರಾಷ್ಟ್ರದ ಗಮನ ಸೆಳೆದಿದ್ದ ಕೋಗಿಲು ಕ್ರಾಸ್‌ ಒತ್ತುವರಿ ಪ್ರಕರಣ ದಿನಕ್ಕೊಂದು ರಾಜಕೀಯ ತಿರುವು ಪಡೆಯುತ್ತಿದ್ದು, ಸತ್ಯಾಸತ್ಯತೆ ಪರಿಶೀಲಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಏಳು ಸದಸ್ಯರ ಸತ್ಯಶೋಧನಾ ತಂಡವನ್ನು ರಚಿಸಿ ಆದೇಶಿಸಿದ್ದಾರೆ.

ಈ ಕುರಿತು ಬುಧವಾರ(ಡಿ.31) ಪ್ರಕಟಣೆ ಹೊರಡಿಸಿರುವ ಅವರು, ಯಲಹಂಕದ ಕೋಗಿಲು ಲೇಔಟ್ ಬಳಿಯಿರುವ ಫಕೀರ್ ಕಾಲೋನಿ ಮತ್ತು ವಸೀಮ್ ಬಡಾವಣೆಯಲ್ಲಿ 200ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಿರುವ ಕುರಿತು ಅದರ ಹಿಂದೆ ಅಡಗಿರುವ ಸತ್ಯಾಸತ್ಯತೆಯನ್ನು ತಿಳಿಯುವ ಉದ್ದೇಶದಿಂದ ಸಮಿತಿಯ ಸದಸ್ಯರು ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲಿಸಿ, ಒಂದು ವಾರದೊಳಗೆ ಸಮಗ್ರ ವರದಿಯನ್ನು ನೀಡಬೇಕು ಎಂದು ತಿಳಿಸಿದ್ದಾರೆ.

ಸಮಿತಿಯಲ್ಲಿನ ಸದಸ್ಯರು

ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ದಾಸರಹಳ್ಳಿ ಶಾಸಕ ಎಸ್‌. ಮುನಿರಾಜು, ವಿಧಾನಪರಿಷತ್‌ ಸದಸ್ಯ ಕೆ.ಎಸ್. ನವೀನ್, ರಾಜ್ಯ ಉಪಾಧ್ಯಕ್ಷ ಮಾಳವಿಕಾ ಅವಿನಾಶ್, ರಾಜ್ಯ ಕಾರ್ಯದರ್ಶಿ ತಮ್ಮೇಶ್‌ಗೌಡ, ಜಿಲ್ಲಾ ಅಧ್ಯಕ್ಷ ಎಸ್. ಹರೀಶ್ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕ‌ರ್ ರಾವ್ ಸೇರಿ ಒಟ್ಟು ಏಳು ಸದಸ್ಯರನ್ನು ನೇಮಕಮಾಡಲಾಗಿದೆ.

ಏನಿದು ಪ್ರಕರಣ ?

ಯಲಹಂಕ ಸಮೀಪದ ಕೋಗಿಲು ಬಂಡೆ ಪ್ರದೇಶದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಸಿಇಒ ಕರೀಗೌಡ ಅವರ ನೇತೃತ್ವದಲ್ಲಿ ಈ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿತ್ತು. ಒಂಬತ್ತು ಜೆಸಿಬಿಗಳು ಹಾಗೂ ಒಂಬತ್ತು ಟ್ರ್ಯಾಕ್ಟರ್‌ಗಳನ್ನು ಬಳಸಲಾಗಿತ್ತು. ಸುಮಾರು 200ಕ್ಕೂ ಅಧಿಕ ಸಿಬ್ಬಂದಿ ಮತ್ತು 70 ಮಾರ್ಷಲ್‌ಗಳು ಪೊಲೀಸ್ ಬಿಗಿ ಭದ್ರತೆಯೊಂದಿಗೆ ಪಾಲ್ಗೊಂಡಿದ್ದರು. ರಾಜಕಾಲುವೆ ಹಾಗೂ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಿದ್ದ 150ಕ್ಕೂ ಹೆಚ್ಚು ಅನಧಿಕೃತ ಶೆಡ್‌ಗಳು ಮತ್ತು ಮನೆಗಳನ್ನು ನೆಲಸಮಗೊಳಿಸಲಾಗಿತ್ತು. ವಶಕ್ಕೆ ಪಡೆದ 80 ಕೋಟಿ ರೂ. ಮೌಲ್ಯದ ಈ ಜಾಗವನ್ನು ಮುಂದಿನ ದಿನಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಯೋಜನೆಗಳಿಗೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಸ್ಥಳೀಯರ ಆಕ್ರೋಶ

ಒತ್ತುವರಿ ತೆರವು ಕಾರ್ಯಾಚರಣೆ ಯಶಸ್ವಿಯಾದರೂ, ಬಿಬಿಎಂಪಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. "ಕಟ್ಟಡಗಳು ನಿರ್ಮಾಣವಾಗುವ ಹಂತದಲ್ಲೇ ಅಧಿಕಾರಿಗಳು ಏನು ಮಾಡುತ್ತಿದ್ದರು? ಇಷ್ಟು ವರ್ಷಗಳ ಕಾಲ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡುವಾಗ ಇದು ಸರ್ಕಾರಿ ಜಾಗ ಎಂದು ತಿಳಿಯಲಿಲ್ಲವೇ?" ಎಂದು ಸಂತ್ರಸ್ತರು ಪ್ರಶ್ನಿಸಿದ್ದರು. ಬಡವರು ಕಷ್ಟಪಟ್ಟು ನಿರ್ಮಿಸಿಕೊಂಡಿದ್ದ ಮನೆಗಳನ್ನು ಏಕಾಏಕಿ ತೆರವುಗೊಳಿಸಿರುವುದು ನ್ಯಾಯಸಮ್ಮತವಲ್ಲ. ಇದಕ್ಕೆ ಕಾರಣರಾದ ಭ್ರಷ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದರು.

ಮಾನವೀಯ ನೆಲೆಗಟ್ಟಿನಲ್ಲಿ ಪುನರ್ವಸತಿ

"ತೆರವುಗೊಂಡ ಪ್ರದೇಶದಲ್ಲಿದ್ದವರಲ್ಲಿ ಬಹುತೇಕರು ವಲಸೆ ಕಾರ್ಮಿಕರಾಗಿದ್ದಾರೆ. ಅವರು ಬೀದಿಗೆ ಬೀಳಬಾರದು ಎಂಬುದು ಸರ್ಕಾರದ ಆಶಯ. ಹೀಗಾಗಿ, ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು" ಎಂದು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.


Read More
Next Story