
ಕೋಗಿಲು ಲೇಔಟ್ ಒತ್ತುವರಿ ಬಿಜೆಪಿ ಅವಧಿಯ ಅಕ್ರಮ: ಸಚಿವ ಕೃಷ್ಣಬೈರೇಗೌಡ ಆರೋಪ
ಕೋಗಿಲು ಲೇಔಟ್‌ನಲ್ಲಿ ಒತ್ತುವರಿ ಮಾಡಿರುವ ಜಾಗ ಕಂದಾಯ ಇಲಾಖೆಗೆ ಸೇರಿಲ್ಲ. ಈ ಜಾಗದಲ್ಲಿ ನಿರಂತರವಾಗಿ ಒತ್ತುವರಿಯಾಗುತ್ತಿದ್ದು, ಬಿಡಿಎ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೀಡಾಗುತ್ತಿರುವ ಕೋಗಿಲು ಬಡಾವಣೆ ಒತ್ತುವರಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿರೋಧ ಪಕ್ಷಗಳ ವಿಭಿನ್ನ ಹೇಳಿಕೆಗಳ ನಡುವೆಯೇ ಸ್ಥಳೀಯ ಶಾಸಕ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿದ್ದು, ಗ್ರೇಟರ್ ಬೆಂಗಳೂರು ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡಿರುವುದರಿಂದ ತೆರವು ಅನಿವಾರ್ಯ ಎಂದು ತಿಳಿಸಿದ್ದಾರೆ.
ಸೋಮವಾರ(ಜ.5) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕೆಲಸ ಏನು ಅಂತ ಜನ ನೋಡಿದ್ದಾರೆ, ನಾವು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇವೆ. ಒತ್ತುವರಿ ಮಾಡಿರುವ ಜಾಗ ಕಂದಾಯ ಇಲಾಖೆಗೆ ಸೇರಿಲ್ಲ. ಈ ಜಾಗದಲ್ಲಿ ನಿರಂತರವಾಗಿ ಒತ್ತುವರಿಯಾಗುತ್ತಿದ್ದು, ಬಿಡಿಎ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತೆರವು ಮಾಡುತ್ತಿದ್ದಾರೆ. ನಿರಾಶ್ರಿತರಿಗೆ 94cl, 94ccl ನಲ್ಲಿ ಹಕ್ಕುಪತ್ರ ಕೊಡಲು ಅವಕಾಶವಿಲ್ಲ ಎಂದು ಹೇಳಿದರು.
ಸರ್ಕಾರಿ ಆಸ್ತಿಗೆ ಭದ್ರತೆ ಅಗತ್ಯ
ಚಿಕ್ಕನಹಳ್ಳಿ ಸರ್ವೆ ನಂ.74ರಲ್ಲೂ ಕಬ್ಜ ಮಾಡಿಕೊಂಡಿದ್ದರು, ಸುಮಾರು 8 ಎಕರೆ ಜಮೀನನ್ನು ತೆರವು ಮಾಡಿದ್ದಾರೆ. ಇದೊಂದೆ ಪ್ರಕರಣವಲ್ಲ, ಸರ್ಕಾರಿ ಜಮೀನು ಭದ್ರತೆ ಮಾಡಬೇಕು, ಕೋಗಿಲು ಘಟನೆಯಲ್ಲಿ ಬಡವರು ಇದ್ದಾರೆ ಎಂಬ ಮಾನವೀಯತೆಯ ವಿಷಯ ಬಂದಿದೆ. ಆದರೂ ಸರ್ಕಾರದ ಯೋಜನೆಯಲ್ಲಿ ಮನೆ ಕೊಡುವ ಕೆಲಸವಾಗುತ್ತಿದ್ದು, ಸರ್ವೆ ಮಾಡಿ ರಾಜ್ಯ ಹಾಗೂ ಹೊರ ರಾಜ್ಯದವರಿಗೂ ಮನೆ ನೀಡಲಾಗುವುದು ಎಂದರು.
ಅರ್ಹರಿಗೆ ಮನೆ ಹಂಚಿಕೆ
ರಾಜಕೀಯ ಪ್ರೇರಿತರಾಗಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಮಾನವೀಯತೆ, ಕಾನೂನು ಧರ್ಮದ ಆಧಾರದ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳಿಂದ ಅರ್ಹತೆಯ ವರದಿ ಪಡೆಯುತ್ತೇವೆ, ಯಾರು ಎಷ್ಟು ವರ್ಷದಿಂದ ವಾಸ ಮಾಡುತ್ತಿದ್ದರು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದು ಅರ್ಹತೆ ಆಧಾರದ ಮೇಲೆ ಮನೆಗಳನ್ನು ಹಂಚಿಕೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಅಧಿಕಾರಿಗಳ ಸಭೆ ನಡೆಸಿ, ಘಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಅವಧಿಯಲ್ಲಿ ಅತಿಕ್ರಮಣ
ಸಚಿವರು ಹಾಗೂ ಶಾಸಕರು ಸರ್ಕಾರಿ ಜಾಗವನ್ನ ಕಾಪಾಡಬೇಕು. ಅಧಿಕಾರಿಗಳು ಸಾರ್ವಜನಿಕ ಹಿತ ಕಾಪಾಡಬೇಕು. ಚುನಾವಣೆಗಾಗಿ ಮನೆ ನೀಡುವಂತಿದ್ದರೆ ಒತ್ತುವರಿ ತೆರವು ಏಕೆ ಮಾಡಬೇಕಿತ್ತು. ಬಿಜೆಪಿಯವರು ಕೆಲವೊಮ್ಮೆ ನಿರಾಶ್ರಿತರ ಪರ ಹಾಗೂ ವಿರೋಧ ಮಾತನಾಡುತ್ತಾರೆ. 2020ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚು ಅತಿಕ್ರಮಣವಾಗಿತ್ತು. ನಾವು ಈಗ ತೆರವುಗೊಳಿಸಿದ್ದೇವೆ. 2023ರಲ್ಲೂ ಒತ್ತುವರಿಯಾಗಿತ್ತು. ಮೂರು ತಿಂಗಳ ಹಿಂದೆಯೂ ತೆರವು ಆಗಿದೆ, ಒಂದೂವರೆ ತಿಂಗಳ ಹಿಂದೆ ಮನೆ ಖಾಲಿ ಮಾಡಿ ಅಂತಲೂ ಹೇಳಿದ್ದೇವೆ ಎಂದು ತಿಳಿಸಿದರು.
ಅಕ್ರಮದಲ್ಲಿ ಬಿಜೆಪಿ ಭಾಗಿ
ಬಿಜೆಪಿ ಸರ್ಕಾರದ ಅವಧಿಯಲ್ಲೇ ಅತಿಕ್ರಮಣವಾಗಿದೆ. ಅವ್ಯವಹಾರವೂ ನಡೆದಿದೆ, ಬಿಜೆಪಿ ಕಾರ್ಯಕರ್ತರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸರ್ಕಾರಿ ಜಮೀನನ್ನ ದೋಚುವ ಪ್ರಯತ್ನವಾಗಿದೆ. ಇವರ ವಿರುದ್ಧ ಈಗಾಗಲೇ ಕ್ರಮವಾಗಿದೆ. ಅದು ಕಸ ಮುಚ್ಚಿರುವ ಜಾಗ, ಸ್ವಲ್ಪ ಪ್ರದೇಶ ಗಟ್ಟಿಯಾಗಿದ್ದರೆ ಸ್ವಲ್ಪ ಹುಸಿಯಾಗಿದೆ. ಏನಾದರೂ ಅವಘಡಗಳು ಸಂಭವಿಸಿ ಸಾವು, ನೋವು ಆದರೆ ಸರ್ಕಾರ ಜವಾಬ್ದಾರಿಯಾಗುತ್ತದೆ ಎಂದರು.
ಬಾಂಗ್ಲಾ ಪ್ರಜೆಗಳ ವಾಸ ಊಹಾಪೋಹ
ಬಾಂಗ್ಲಾದೇಶದ ನಿವಾಸಿಗಳು ವಾಸ ಮಾಡುತ್ತಿದ್ದರು ಎಂಬುದು ಕೇವಲ ಊಹಾಪೋಹ ಮಾತ್ರ. ಹೊರ ರಾಜ್ಯದವರಿದ್ದರೆ ಪೊಲೀಸರು ತನಿಖೆ ನಡೆಸಲಿ. ಈ ಜಾಗದಲ್ಲಿ ಬಹಳ ವರ್ಷದಿಂದ ವಾಸ ಮಾಡುವವರಿದ್ದಾರೆ. 2015ಕ್ಕಿಂತ ಮೊದಲೇ ಮನೆ ಕಟ್ಟಿಕೊಂಡಿರುವವರು ಇದ್ದಾರೆ. ಯಶವಂತಪುರ, ಆರ್‌ಆರ್‌ನಗರದಲ್ಲೂ ತೆರವು ಮಾಡಿದಾಗ ಮನೆ ಕೊಡಲಾಗಿದೆ ಎಂದು ತಿಳಿಸಿದರು.
ಹಲವು ಪ್ರಕರಣಗಳಲ್ಲಿ ಬಾದಿತರಿಗೆ ಪರಿಹಾರ ಕೊಡಲಾಗಿದೆ. ಮಳೆಯಿಂದ ಹಾನಿಯಾದ ಮನೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಸರ್ಕಾರ ಕೈಗೊಳ್ಳವು ತೀರ್ಮಾನಗಳಲ್ಲಿ ತಪ್ಪುಗಳಾಗಿದ್ದರೆ ಸರಿ ಮಾಡಿಕೊಳ್ಳೋಣ. ಸುಳ್ಳು ಸೃಷ್ಟಿ ಮಾಡಿ ಅಭಿಪ್ರಾಯವೆಂದರೆ ಹೇಗೆ ? ಯಾರೂ ಹೊಟ್ಟೆಗೆ ಬೆಂಕಿ ಹಾಕುವ ಕೆಲಸ ಮಾಡಬಾರದು. ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ತೀರ್ಮಾನ ಕೈಗೊಳ್ಳವ ಅಧಿಕಾರವಿದೆ. ಆಶ್ರಯ ಸಮಿತಿಯನ್ನು ವಿಶ್ವಾಸಕ್ಕೆ ಪಡೆದು ಮನೆಗಳನ್ನು ಹಂಚಲು ತಿಳಿಸಿದ್ದಾರೆ ಎಂದು ಹೇಳಿದರು.

