
ಕೋಗಿಲು ಲೇಔಟ್ ಒತ್ತುವರಿದಾರರಿಗೆ ಮನೆ ಹಂಚಿಕೆ ವಿಳಂಬ: ಸರ್ಕಾರಕ್ಕೆ ಕಗ್ಗಂಟಾದ ಫಲಾನುಭವಿಗಳ ಪಟ್ಟಿ!
ಬೆಂಗಳೂರಿನ ಕೋಗಿಲು ಲೇಔಟ್ ಒತ್ತುವರಿದಾರರಿಗೆ ಮನೆ ನೀಡುವ ಪ್ರಕ್ರಿಯೆ ವಿಳಂಬಗೊಂಡಿದೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಫಲಾನುಭವಿಗಳ ಪಟ್ಟಿ ಇನ್ನೂ ತಲುಪಿಲ್ಲ. ಹೀಗಾಗಿ ಮನೆ ಹಂಚಿಕೆಯನ್ನು ಮುಂದೂಡಲಾಗಿದೆ.
ಕೋಗಿಲು ಲೇಔಟ್ ಒತ್ತುವರಿ ಪ್ರಕರಣದಲ್ಲಿ ತೆರವುಗೊಂಡ ನಿವಾಸಿಗಳಿಗೆ ಪರ್ಯಾಯವಾಗಿ ಮನೆಗಳನ್ನು ಹಂಚಿಕೆ ಮಾಡುವ ಸರ್ಕಾರದ ಯೋಜನೆ ಈಗ ಮತ್ತಷ್ಟು ಮುಂದಕ್ಕೆ ಹೋಗಿದೆ. ಹೊಸ ವರ್ಷದ ದಿನವೇ ಮನೆ ಹಂಚಿಕೆ ಮಾಡುವುದಾಗಿ ನೀಡಿದ್ದ ಭರವಸೆ ಈಡೇರದ ಕಾರಣ, ಸಂತ್ರಸ್ತರಲ್ಲಿ ಆತಂಕ ಮನೆಮಾಡಿದೆ.
ವಿಳಂಬಕ್ಕೆ ಕಾರಣವೇನು?
ಮೊದಲು ಹೊಸ ವರ್ಷದಂದು (ಜನವರಿ 1) ಮನೆ ನೀಡುವುದಾಗಿ ಘೋಷಿಸಲಾಗಿತ್ತು. ನಂತರ ಈ ದಿನಾಂಕವನ್ನು ಜನವರಿ 2ಕ್ಕೆ ಮುಂದೂಡಲಾಗಿತ್ತು. ಇದೀಗ ತಾಂತ್ರಿಕ ಕಾರಣಗಳಿಂದಾಗಿ ಹಂಚಿಕೆ ಪ್ರಕ್ರಿಯೆ ಇನ್ನೂ ವಿಳಂಬವಾಗಲಿದೆ ಎಂದು ತಿಳಿದುಬಂದಿದೆ. ಮನೆಗಳನ್ನು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಹಂಚಿಕೆ ಮಾಡಬೇಕಿದೆ. ಆದರೆ, ನಿಗಮಕ್ಕೆ ಜಿಲ್ಲಾಡಳಿತದಿಂದ ಈವರೆಗೂ 'ಅರ್ಹ ಫಲಾನುಭವಿಗಳ ಪಟ್ಟಿ' ಸಲ್ಲಿಕೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಅರ್ಜಿಗಳ ಮಹಾಪೂರ
ಇನ್ನು ಕೋಗಿಲು ಬಡಾವಣೆಯಲ್ಲಿ ತೆರವುಗೊಂಡಿರುವುದು 167ಮನೆಗಳು. ಆದರೆ ಜಿಲ್ಲಾಡಳಿತಕ್ಕೆ ಇದುವರೆಗೆ 250ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಕೋಗಿಲು ಲೇಔಟ್ ಒತ್ತುವರಿ ಜಾಗದಲ್ಲಿ ವಾಸವಿದ್ದವರ ಪೈಕಿ ಯಾರು ನಿಜವಾದ ಅರ್ಹರು ಮತ್ತು ಯಾರು ಅನರ್ಹರು ಎಂಬುದನ್ನು ಪತ್ತೆಹಚ್ಚುವುದು ಅಧಿಕಾರಿಗಳಿಗೆ ಸವಾಲಾಗಿದೆ. ಈ ಅರ್ಜಿಗಳ ಪರಿಶೀಲನೆಗೆ ಹೆಚ್ಚಿನ ಸಮಯ ಬೇಕಿರುವುದರಿಂದ ಹಂಚಿಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಮುಂದೇನು?
ಜಿಲ್ಲಾಡಳಿತವು ಪ್ರತಿಯೊಂದು ಅರ್ಜಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ವಸತಿ ನಿಗಮಕ್ಕೆ ಅಂತಿಮ ಪಟ್ಟಿ ಸಲ್ಲಿಸಿದ ನಂತರವಷ್ಟೇ ಮನೆಗಳ ಹಂಚಿಕೆ ಅಧಿಕೃತವಾಗಿ ಆರಂಭವಾಗಲಿದೆ. ಅಲ್ಲಿಯವರೆಗೆ ಸಂತ್ರಸ್ತರು ಕಾಯುವುದು ಅನಿವಾರ್ಯವಾಗಿದೆ.
ಕೋರ್ಟ್ ಮೆಟ್ಟಿಲೇರಿದ ಒತ್ತುವರಿದಾರರು
ಕೋಗಿಲು ಲೇಔಟ್‌ನಲ್ಲಿ ಯಾವುದೇ ಮುನ್ಸೂಚನೆ ನೀಡದೆ ಮನೆಗಳನ್ನು ತೆರವುಗೊಳಿಸಿರುವುದನ್ನು ಪ್ರಶ್ನಿಸಿ ಸಂತ್ರಸ್ತರು ಇದೀಗ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸರ್ಕಾರದ ಈ ಕ್ರಮವು ಸಂವಿಧಾನಬದ್ಧ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಅರ್ಜಿ ಸಲ್ಲಿಸಿದವರು ಯಾರು?
ಬಡಾವಣೆಯ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ರಾಜ್ಯ ಸರ್ಕಾರ, ಬಿಬಿಎಂಪಿ (BBMP), ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ತಹಸೀಲ್ದಾರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಅರ್ಜಿಯಲ್ಲಿನ ಪ್ರಮುಖ ಅಂಶಗಳು:
• ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ: ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳಿಗೆ ತದ್ವಿರುದ್ಧವಾಗಿ, ಯಾವುದೇ ಕಾನೂನುಬದ್ಧ ನೋಟಿಸ್ ನೀಡದೆ ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
• ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಚಕಾರ: ದಿಢೀರ್ ತೆರವು ಕಾರ್ಯಾಚರಣೆಯಿಂದಾಗಿ ಮಕ್ಕಳ ಶಾಲಾ ಸಮವಸ್ತ್ರ, ಪಠ್ಯಪುಸ್ತಕಗಳು ಮತ್ತು ಪರೀಕ್ಷೆಯ ಹಾಲ್ ಟಿಕೆಟ್‌ಗಳು ನಾಶವಾಗಿವೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
• ಮಾನವೀಯ ನೆಲೆಗಟ್ಟಿನ ಒತ್ತಾಯ: ನಿವಾಸಿಗಳಿಗೆ ಮನೆ ಕೆಡವಿರುವ ಜಾಗದಿಂದ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪರ್ಯಾಯ ವಸತಿ ಅಥವಾ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.

