
ಯಲಹಂಕದ ಕೋಗಿಲು ಬಡಾವಣೆ ನೆಲಸಮ ಮಾಡಿರುವುದು
ಕೋಗಿಲು ಬಡಾವಣೆ ನೆಲಸಮ: ಕೃಷ್ಣ ಬೈರೇಗೌಡ ಫಾರೀನ್ ಟ್ರಿಪ್, ಡಿಕೆಶಿ ತಂತ್ರಕ್ಕೆ ಸಹಾಯವಾಯಿತೇ?
ಸಚಿವ ಕೃಷ್ಣ ಬೈರೇಗೌಡ ಡಿ.20ರಂದು ಅನಧಿಕೃತ ಕಟ್ಟಡಗಳತೆರವು ಕಾರ್ಯಾಚರಣೆ ಆರಂಭಕ್ಕೂ ಮುನ್ನವೇ ವಿದೇಶಕ್ಕೆ ತೆರಳಿದ್ದರು. ಈ ನಡುವೆ ಎದ್ದಿರುವ ಕೋಗಿಲು ಬಡಾವಣೆ ವಿವಾದ ಕಾಂಗ್ರೆಸ್‌ಗೆ ʼತಲೆಬಿಸಿʼಯಾಗಿದೆ.
ಕೇರಳ ಹಾಗೂ ಕರ್ನಾಟಕದ ಮಧ್ಯೆ ರಾಜಕೀಯ ಜಟಾಪಟಿಗೆ ಕಾರಣವಾದ ಕೋಗಿಲು ಬಡಾವಣೆ ನೆಲಸಮ ಪ್ರಕರಣದಿಂದ ಆಡಳಿತದ ಹುಳುಕಿನ ಜೊತೆಗೆ ಪಕ್ಷದ ನಾಯಕರಿಬ್ಬರ ಮುನಿಸನ್ನೂ ಜಗಜ್ಜಾಹೀರು ಮಾಡಿದೆ.
ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಅವರ ಕ್ಷೇತ್ರದಲ್ಲಿ ಕಸ ವಿಲೇವಾರಿಗಾಗಿ ಸ್ಥಳ ನಿಗದಿ ಮಾಡಿದ್ದರೂ ಅನಧಿಕೃತವಾಗಿ ಮನೆಗಳು ತಲೆ ಎತ್ತಿದ್ದು ಹೇಗೆ? 2018 ರಲ್ಲಿ ಕಾಂಗ್ರೆಸ್ ಸರ್ಕಾರವೇ ಹಕ್ಕುಪತ್ರ ನೀಡಿರುವುದರ ಹಿಂದಿನ ಕಾರಣಗಳೇನು? ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.
ಈ ಮಧ್ಯೆ, ಕೋಗಿಲು ಬಡಾವಣೆ ನೆಲಸಮ ಪ್ರಕರಣವು ರಾಷ್ಟ್ರಾದ್ಯಂತ ಪ್ರತಿಧ್ವನಿಸಿ, ಎರಡು ರಾಜ್ಯಗಳ ನಡುವೆ ಸಂಘರ್ಷಕ್ಕೆ ಕಾರಣವಾದರೂ ಸ್ಥಳೀಯ ಶಾಸಕ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಕಾರ ಎತ್ತದೇ ಅಂತರ ಕಾಯ್ದುಕೊಂಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ತರಾತುರಿಯಲ್ಲಿ ಕಟ್ಟಡಗಳನ್ನು ನೆಲಸಮ ಮಾಡಿಸಿದ್ದೇ ಇಷ್ಟೆಲ್ಲಾ ಬೆಳವಣಿಗೆಗಳಿಗೆ ಕಾರಣ. ಅಲ್ಲದೇ ಕ್ಷೇತ್ರದ ವಿಚಾರಗಳಲ್ಲಿ ಯಾವುದೇ ಸಮಾಲೋಚನೆ ನಡೆಸದೇ ಮೂಗು ತೂರಿಸಿದ ಬಗ್ಗೆಯೂ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಕೋಗಿಲು ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಧ್ಯಪ್ರವೇಶ ಮಾಡಿದ ಬಳಿಕ ವಿವಾದ ಸೃಷ್ಟಿಸಿತು. ಒತ್ತುವರಿದಾರರಿಗೇ ಮನೆ ನೀಡಲು ತೀರ್ಮಾನ ಮಾಡಿದರೂ ಕೃಷ್ಣ ಬೈರೇಗೌಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಕೃಷ್ಣ ಬೈರೇಗೌಡ ಅವರ ಕ್ಷೇತ್ರದಲ್ಲಿ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಕೃಷ್ಣ ಬೈರೇಗೌಡ ಅವರ ಪ್ರಭಾವ ತಗ್ಗಿಸಲೆಂದೇ ಡಿಕೆಶಿ ಅವರು ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯು ಡಿಕೆಶಿ ಉಸ್ತುವಾರಿಯಲ್ಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧೀನದಲ್ಲೇ ಬರಲಿದೆ. ಕಟ್ಟಡಗಳ ನೆಲಸಮಗೊಳಿಸಿದ್ದಲ್ಲದೇ ಎಐಸಿಸಿ ನಾಯಕರ ಒತ್ತಡಕ್ಕೆ ಮಣಿದು ಒತ್ತುವರಿದಾರರಿಗೆ ಗೃಹಭಾಗ್ಯ ಕಲ್ಪಿಸುವ ನಿರ್ಧಾರ ಕೈಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಗಿಲು ಗ್ರಾಮದ ಸರ್ವೇ ನಂ.99 ರಲ್ಲಿದ್ದ ಫಕೀರ್ ಹಾಗೂ ವಸೀಮ್ ಬಡಾವಣೆಯಲ್ಲಿ ಸುಮಾರು 167 ಮನೆಗಳನ್ನು ಜೆಸಿಬಿಗಳ ಮೂಲಕ ಧ್ವಂಸ ಮಾಡಲಾಗಿದೆ. ಕೇರಳ ಸರ್ಕಾರ ಇದೇ ವಿಚಾರ ಪ್ರಸ್ತಾಪಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿದೆ. ಒತ್ತುವರಿ ತೆರವು ಕಾನೂನುಬದ್ಧ ಪ್ರಕ್ರಿಯೆಯಾದರೂ ಇದರ ಹಿಂದಿನ ವಿಚಾರಗಳು, ಸರ್ಕಾರದ ಹುಳುಕುಗಳು ಹಾಗೂ ರಾಜಕೀಯ ಲಾಬಿ ಮುಖ ಅನಾವರಣವಾಗುತ್ತಿದೆ.
"ವಿವಾದಿತ ಕೋಗಿಲು ಬಡಾವಣೆಯು ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಗೆ ಬರಲಿದೆ. ಅನಧಿಕೃತ ಕಟ್ಟಡಗಳ ನೆಲಸಮಕ್ಕೂ ಮುನ್ನ ಸ್ಥಳೀಯ ಶಾಸಕರ ಅಭಿಪ್ರಾಯ ಪಡೆಯುವುದು ನಿಯಮ. ಆದರೆ, ಇಲ್ಲಿ ಕಂದಾಯ ಸಚಿವರೂ ಆಗಿರುವ ಶಾಸಕ ಕೃಷ್ಣ ಬೈರೇಗೌಡ ಅವರ ಅಭಿಪ್ರಾಯವನ್ನೇ ಕೇಳಿಲ್ಲ. 2018 ರಲ್ಲಿ ಶಾಸಕರೇ ಹಕ್ಕುಪತ್ರ ವಿತರಣೆ ಮಾಡಿರುವ ಮಾಹಿತಿ ಇದೆ. ಹೀಗಿರುವಾಗ, ಏಕಾಏಕಿ ಜೆಸಿಬಿಗಳನ್ನು ನುಗ್ಗಿಸಿ, ಬಡಾವಣೆ ನೆಲಸಮ ಮಾಡಿರುವುದರಿಂದ ಶಾಸಕರು ಅಸಮಾಧಾನಗೊಂಡಿರಬಹುದು. ಬೇರೆ ಆಯಾಮದಲ್ಲಿ ನೋಡುವುದಾದರೆ ಡಿಕೆಶಿಯಿಂದ ಆರಂಭವಾಗಿರುವ ವಿವಾದವನ್ನು ಅವರೇ ಬಗೆಹರಿಸಿಕೊಳ್ಳಲಿ ಎಂದು ಕೃಷ್ಣ ಬೈರೇಗೌಡ ಸುಮ್ಮನಾಗಿರಬಹುದು. ತೆರವು ಸಂದರ್ಭದಲ್ಲಿ ಕೃಷ್ಣ ಬೈರೇಗೌಡ ಅವರು ಕ್ಷೇತ್ರದಲ್ಲಿ ಇದ್ದರೆ, ಇಲ್ಲವೇ ಎಂಬುದು ಇಲ್ಲಿ ಮುಖ್ಯವಾಗಲಿದೆ ಎಂದು ರಾಜಕೀಯ ವಿಶ್ಲೇಷಕ ಬೆಲಗೂರು ಸಮೀವುಲ್ಲಾ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ತೆರವಿಗೂ ಮುನ್ನವೇ ವಿದೇಶಕ್ಕೆ ಹೋಗಿದ್ದ ಕೃಷ್ಣ ಬೈರೇಗೌಡ
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಡಿ.20ರಂದು ಅನಧಿಕೃತ ಕಟ್ಟಡಗಳತೆರವು ಕಾರ್ಯಾಚರಣೆ ಆರಂಭಕ್ಕೂ ಮುನ್ನವೇ ಕುಟುಂಬ ಸಮೇತ ವಿದೇಶಕ್ಕೆ ತೆರಳಿದ್ದರು. ಕ್ಷೇತ್ರದಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ, ಪ್ರತಿಕ್ರಿಯೆ ನೀಡಿಲ್ಲ ಎಂಬುದು ಸಚಿವ ಕೃಷ್ಣ ಬೈರೇಗೌಡ ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಸೋಮವಾರ ವಿದೇಶದಿಂದ ವಾಪಸಾಗಲಿದ್ದು, ಆ ಬಳಿಕ ಘಟನೆ ಕುರಿತು ಪ್ರತಿಕ್ರಿಯೆ ನೀಡಲಿದ್ದಾರೆ. ಒಂದು ವೇಳೆ ಸಚಿವರು ಕ್ಷೇತ್ರದಲ್ಲೇ ಇದ್ದಿದ್ದರೆ ವಿವಾದ ಇಷ್ಟರಮಟ್ಟಿಗೆ ಬೆಳೆಯುತ್ತಿರಲಿಲ್ಲ ಎಂದು ವಿವರಿಸಿದ್ದಾರೆ.
ಘಟನೆ ಹಿಂದಿನ ಅಸಲಿಯತ್ತು ಏನು?
ಕೋಗಿಲು ಕ್ರಾಸ್ ಸಮೀಪದ ಫಕೀರ್ ಕಾಲೊನಿ ಹಾಗೂ ವಸೀಮ್ ಬಡಾವಣೆಯಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣದ ಹಿಂದೆ ಸ್ಥಳೀಯ ರಾಜಕಾರಣಿಗಳು ಹಾಗೂ ಮುಖಂಡರ ಹಣ ಗಳಿಸುವ ಹುನ್ನಾರ ಹಾಗೂ ವೋಟ್ ಬ್ಯಾಂಕ್ ರಾಜಕಾರಣವಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.
ಕೋಗಿಲು ಗ್ರಾಮದ ಸರ್ವೇ ನಂ. 99 ರಲ್ಲಿ ಸುಮಾರು 87 ಎಕರೆಗೂ ಹೆಚ್ಚು ವಿಸ್ತೀರ್ಣವಿದೆ. ಇದರಲ್ಲಿ 46 ಎಕರೆ 32 ಗುಂಟೆ ಗೋಮಾಳ ಕಲ್ಲುಬಂಡೆಯಿದೆ. 5 ಎಕರೆ ಜಾಗವನ್ನು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೀಸಲಿಡಲಾಗಿದೆ. ಆಶ್ರಯ ಯೋಜನೆ, ಟ್ಯಾಂಕ್ ನಿರ್ಮಾಣ, ಉರ್ದು ಶಾಲೆಗೂ ಈ ಸರ್ವೇ ನಂಬರ್ ನಲ್ಲಿ ಜಾಗ ನೀಡಲಾಗಿದೆ. ಉಳಿದ ಬಹುಪಾಲು ಜಾಗ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ನೋಂದಣಿಯಾಗಿದೆ.
ಸುಮಾರು 20 ವರ್ಷಗಳ ಹಿಂದೆ ಫಕೀರಪ್ಪ ಹೆಸರಿನ ಬಡಾವಣೆಯಲ್ಲಿ ಬೆರಳೆಣಿಕೆಯ ಕುಟುಂಬಗಳು ವಾಸವಿದ್ದವು. ಉರ್ದು ಶಬ್ದ ಫಕೀರ ಎಂದರೆ ಬಿಕ್ಷುಕ ಎಂದರ್ಥ. ಉತ್ತರ ಕರ್ನಾಟಕದಲ್ಲಿ ಫಕೀರಪ್ಪ ಎಂಬ ಹೆಸರಿನಲ್ಲಿ ಹಿಂದೂಗಳು ಕೂಡ ಇದ್ದಾರೆ. ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕದ ಕೆಲ ಕುಟುಂಬಗಳು ಯಲಹಂಕಗೆ ಬಂದು ಸರ್ಕಾರಿ ಜಾಗದಲ್ಲಿ ನೆಲೆ ಕಲ್ಪಿಸಿಕೊಳ್ಳುತ್ತಾರೆ. ಆಗ ಕೆಲ ಸ್ಥಳೀಯ ಮುಖಂಡರು ವೋಟ್ ಬ್ಯಾಂಕ್ ಗಾಗಿ ಅವರಿಗೆ ದಾಖಲೆಗಳನ್ನು ಒದಗಿಸಿಕೊಟ್ಟರು. ಹಕ್ಕು ಪತ್ರ ಕೊಡಿಸುವುದಕ್ಕಾಗಿ ತಲಾ ಒಂದು ಕುಟುಂಬದಿಂದ 3 ಲಕ್ಷ ರೂ. ಹಣ ಪಡೆದಿದ್ದರು ಎಂಬುದು ಸ್ಥಳೀಯರ ಆರೋಪ. ಆದರೆ, ಹಣ ಪಡೆದು ಹಕ್ಕುಪತ್ರ ಕೊಡಿಸಿದವರ ಹೆಸರು ಬಹಿರಂಗಪಡಿಸಲು ಇಲ್ಲಿನ ನಿವಾಸಿಗಳು ಹೆದರುತ್ತಾರೆ.
ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿರುವ ಸಂಗತಿ ತಿಳಿದಿದ್ದರೂ ಕಂದಾಯ ಇಲಾಖೆ ಹಕ್ಕುಪತ್ರ ವಿತರಿಸಿದ್ದು ಹೇಗೆ? ಬೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಹೇಗೆ?, 2018 ರಲ್ಲಿ ಹಕ್ಕುಪತ್ರ ಹೇಗೆ ನೀಡಿತು ಎಂಬುದು ಅನುಮಾನ ಮೂಡಿಸಿದೆ. ಸ್ಥಳೀಯ ರಾಜಕಾರಣಿಗಳು ಮತಲಾಭ ಪಡೆಯಲು ವಲಸಿಗರನ್ನು ತಂದು ಬಿಟ್ಟಿದ್ದಾರೆ. ಈಗ ತಮಗೂ, ಪ್ರಕರಣಕ್ಕೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೇ ಹಕ್ಕುಪತ್ರ ನೀಡಿದಾಗ ಒತ್ತುವರಿ ಜಾಗದಲ್ಲಿ ಕಟ್ಟಡ ನಿರ್ಮಿಸಿರುವುದು ತಿಳಿದಿರಲಿಲ್ಲವೇ ಎಂದು ಪ್ರತಿಪಕ್ಷಗಳು ಪ್ರಶ್ನಿಸುತ್ತಿವೆ.
ಬೆರಳೆಣಿಕೆ ಕುಟುಂಬಗಳಿಗೆ ಸರ್ಕಾರ ತಾತ್ಕಾಲಿಕ ಹಕ್ಕು ಪತ್ರ ವಿತರಿಸಿದ ನಂತರದಲ್ಲಿ ಸ್ಥಳೀಯ ರಾಜಕೀಯ ಮುಖಂಡರು ವಲಸಿಗರನ್ನು ತಂದು ಬಿಟ್ಟರು. 18*16 ಜಾಗದಲ್ಲಿ ಶೆಡ್ ಹಾಕಿಕೊಳ್ಳಲು ಅವಕಾಶ ನೀಡಿ ಪ್ರತಿಯೊಬ್ಬರಿಂದ ಹಣ ವಸೂಲಿ ಮಾಡಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೆಲ ಕುಟುಂಬಗಳು 94 ಸಿಸಿ ನಮೂನೆಯಡಿ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದವು. ಇಂದಲ್ಲಾ, ನಾಳೆ ಹಕ್ಕುಪತ್ರ ಸಿಗಲಿದೆ ಎಂಬ ವಿಶ್ವಾಸದಲ್ಲಿ ಹಣ ನೀಡಿದ್ದವರು ಇದೀಗ ಬೀದಿಗೆ ಬಿದ್ದಿದ್ದಾರೆ. ವಿಪರ್ಯಾಸವೆಂದರೆ ಹಕ್ಕುಪತ್ರ ನೀಡಿದ ರಾಜ್ಯ ಸರ್ಕಾರವೇ ಮನೆಗಳನ್ನು ತೆರವು ಮಾಡುವಂತೆ ಇತ್ತೀಚೆಗೆ ನೋಟಿಸ್ ನೀಡಿತ್ತು. ಮನೆ ತೊರೆಯಲು ನಿರಾಕರಿಸಿದಾಗ ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ಮಾಡಲಾಯಿತು.
ಸ್ಥಳೀಯರ ವಾದವೇನು?
ಯಲಹಂಕದ ಕೋಗಿಲು ಸಮೀಪದ ಫಕೀರ್ ಕಾಲೊನಿಯಲ್ಲಿ ದಲಿತರು ಹಾಗೂ ಕೆಲ ಮುಸ್ಲಿಂ ಕುಟುಂಬಗಳು ವಾಸವಿದ್ದವು. ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಳ್ಳಳ್ಳಿ ಕಸ ವಿಲೇವಾರಿ ಘಟಕ, ಅಟ್ಟೂರು ಘಟಕ 2 ಹಾಗೂ ೩ ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಕ್ರಮ ವಲಸಿಗರು ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಸ್ಥಳೀಯ ಆಡಳಿತದ ಅಧಿಕಾರಿಗಳು ಹಣದಾಸೆಗೆ ವಿದ್ಯುತ್ ಸಂಪರ್ಕ ಹಾಗೂ ಮೂಲ ಸೌಕರ್ಯ ಒದಗಿಸಿವೆ. ಕಾಲೊನಿಯಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿರುವರಿಗೆ ವಸತಿ ಸೌಲಭ್ಯ ಒದಗಿಸಲಿ, ಆದರೆ, ಬಾಂಗ್ಲಾ ನಿರಾಶ್ರಿತರು, ರೋಹಿಂಗ್ಯಾ ಮುಸ್ಲಿಮರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸರಿಯಲ್ಲ ಎಂದು ಯಲಹಂಕ ನಿವಾಸಿ ಸುರೇಶ್ ಬಾಬು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬೀದಿಗೆ ಬಿದ್ದ ಬಡವರು
ಫಕೀರ್ ಬಡಾವಣೆ ಮತ್ತು ವಸೀಮ್ ಬಡಾವಣೆಯಲ್ಲಿ ಮನೆಗಳನ್ನು ನೆಲಸಮ ಮಾಡಿದ್ದರಿಂದ ನೈಜವಾಗಿ ಮನೆ ಕಟ್ಟಿಕೊಂಡಿದ್ದವರು ಸಮಸ್ಯೆ ಎದುರಿಸುವಂತಾಗಿದೆ. ಹಲವು ಕುಟುಂಬಗಳು ಎರಡು ದಶಕಗಳಿಂದ ವಾಸವಿವೆ. ಆದರೆ, ಕೆಲವರು ಐದಾರು ವರ್ಷಗಳ ಹಿಂದೆ ಬಂದು ಶೆಡ್ ಹಾಕಿಕೊಂಡಿದ್ದಾರೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ವಿದ್ಯುತ್ ಸಂಪರ್ಕ ಪಡೆದಿದ್ದೇವೆ. ಮನೆ ತೆರವಿಗೂ ಮೊದಲು ಯಾವುದೇ ಲಿಖಿತ ನೋಟಿಸ್ ನೀಡಿಲ್ಲ” ಎಂಬುದು ಸ್ಥಳೀಯರ ದೂರಾಗಿದೆ.

