Ground Report| ಕೋಗಿಲು ಬಡಾವಣೆಯಲ್ಲಿ ಅಕ್ರಮ ಕಟ್ಟಡ ನೆಲಸಮ; ಒಂದೇ  ಒಂದು ಕೇರಳ ಕುಟುಂಬವಿಲ್ಲ!
x

ಯಲಹಂಕದ ಕೋಗಿಲು ಬಡಾವಣೆಯಲ್ಲಿ ಮನೆಗಳನ್ನು ಧ್ವಂಸ ಮಾಡಿರುವುದು

Ground Report| ಕೋಗಿಲು ಬಡಾವಣೆಯಲ್ಲಿ ಅಕ್ರಮ ಕಟ್ಟಡ ನೆಲಸಮ; ಒಂದೇ ಒಂದು ಕೇರಳ ಕುಟುಂಬವಿಲ್ಲ!

ಕೋಗಿಲು ಕ್ರಾಸ್‌ನಲ್ಲಿ ಎರಡು ದಶಕಗಳಿಂದ ಸ್ಥಳೀಯರೇ ವಾಸವಿದ್ದಾರೆ. ಉರ್ದು ಶಾಲೆಯ ಸಮೀಪ ಕೇರಳ ಮೂಲದ ಎರಡು ಅಂಗಡಿಯವರನ್ನು ಹೊರತುಪಡಿಸಿ ಬೇರೆ ಯಾರೂ ಕೇರಳದವರು ಇಲ್ಲ ಎಂಬುದು ಸ್ಥಳೀಯರ ಮಾತು.


Click the Play button to hear this message in audio format

ಬೆಂಗಳೂರಿನ ಯಲಹಂಕದ ಕೋಗಿಲು ಸಮೀಪದ ಫಕೀರ್ ಬಡಾವಣೆಯಲ್ಲಿ ಅನಧಿಕೃತ ಕಟ್ಟಡಗಳ ಧ್ವಂಸ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಅಕ್ರಮ ಕಟ್ಟಡಗಳ ನೆಲಸಮ ಪ್ರಕರಣವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ʼಬುಲ್ಡೋಜರ್ ಸಂಸ್ಕೃತಿʼಗೆ ಹೋಲಿಸಿ ಟೀಕಿಸಿದ್ದ ಬೆನ್ನಲ್ಲೇ ಕೇರಳದ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ಪ್ರಕರಣ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಕೇರಳ ಮೂಲದ ಕುಟುಂಬಗಳು ನೆಲೆ ಕಟ್ಟಿಕೊಂಡಿರುವ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದಿದ್ದವು. ಆದರೆ, ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಕೇರಳದ ಹಸ್ತಕ್ಷೇಪವೇ ಇದೀಗ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಏಕೆಂದರೆ, ಕಟ್ಟಡಗಳ ನೆಲಸಮ ಸ್ಥಳದಲ್ಲಿ ಯಾವುದೇ ಕೇರಳ ಮೂಲದ ಕುಟುಂಬಗಳು ಇಲ್ಲ ಎಂಬ ಸಂಗತಿಯು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಅಲ್ಲದೇ ಕೇರಳದ ಅನಗತ್ಯ ಹಸ್ತಕ್ಷೇಪವು ಅನುಮಾನ ಮೂಡಿಸಿದೆ.

ಕೇರಳದವರು ಯಾರೂ ಇಲ್ಲ

ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೇರಳ ಸರ್ಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಕೇರಳ ಸರ್ಕಾರವು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕೋಗಿಲು ಬಡಾವಣೆಯಲ್ಲಿ ಎರಡು ದಶಕಗಳಿಂದ ಸ್ಥಳೀಯರೇ ವಾಸವಾಗಿದ್ದಾರೆ. ಉರ್ದು ಶಾಲೆಯ ಸಮೀಪ ಕೇರಳದ ಮೂಲದವರ ಎರಡು ಅಂಗಡಿಯವರನ್ನು ಹೊರತುಪಡಿಸಿ ಬೇರೆ ಯಾರೂ ಕೇರಳದವರು ಈ ಸ್ಥಳದಲ್ಲಿ ಇಲ್ಲ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ಉತ್ತರ ಕರ್ನಾಟಕದ ಕೆಲ ಜಿಲ್ಲೆಯ ನಿವಾಸಿಗಳು ಹಾಗೂ ಅಕ್ರಮ ಬಾಂಗ್ಲಾ ನಿವಾಸಿಗಳು ವಾಸವಾಗಿದ್ದಾರೆ. ಕಟ್ಟಡ ನಿರ್ಮಾಣ ಸೇರಿದಂತೆ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡಿರುವವರು ಇದ್ದಾರೆ. ಕೇರಳದ ಒಂದೇ ಒಂದು ಕುಟುಂಬ ಇಲ್ಲದಿದ್ದರೂ ಅಲ್ಲಿನ ಸರ್ಕಾರ ಮಧ್ಯಪ್ರವೇಶ ಮಾಡಿರುವುದು ಅಚ್ಚರಿ ಮೂಡಿಸಿದೆ ಎಂಬುದು ಸ್ಥಳೀಯರ ಮಾತು.

ʼದ ಫೆಡರಲ್ ಕರ್ನಾಟಕʼ ಸೋಮವಾರ ಕೋಗಿಲು ಸಮೀಪದ ಘಟನಾ ಸ್ಥಳಕ್ಕೆ ತೆರಳಿದ ವೇಳೆ ಹಲವು ಸಂಗತಿಗಳು ಬೆಳಕಿಗೆ ಬಂದವು. ಕೇರಳ ಮೂಲದವರು ವಾಸವಿಲ್ಲ. ಆಗಿದ್ದರೂ ಕೇರಳ ಸರ್ಕಾರದ ನಿಯೋಗ ಭೇಟಿ ನೀಡಿದ್ದು ಅಕ್ಷಮ್ಯ. ರಾಜ್ಯದ ಆಂತರಿಕ ವಿಚಾರಗಳಲ್ಲಿ ಬೇರೆ ರಾಜ್ಯಗಳು ಮೂಗು ತೂರಿಸುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

"20 ವರ್ಷದಿಂದ ನಾವು ಇಲ್ಲೇ ಇದ್ದೇವೆ. ಇಲ್ಲಿ ಯಾರೂ ಕೇರಳವರು ಇಲ್ಲ. ಈ ವಿಷಯದಲ್ಲಿ ಕೇರಳ ಸಿಎಂ ಹಾಗೂ ರಾಜಕಾರಣಿಗಳು ಯಾಕೆ ಬಂದರೋ ಗೊತ್ತಿಲ್ಲ. ಇದು ನಮಗೂ ಆಶ್ಚರ್ಯ ತಂದಿದೆ. ಅವರ ರಾಜಕಾರಣ ಏನಿದೆಯೋ ಗೊತ್ತಿಲ್ಲ" ಎಂದು ಸ್ಥಳೀಯ ನಿವಾಸಿ ಮಲ್ಲಿಕಾರ್ಜುನ ʼದ ಫೆಡರಲ್‌ ಕರ್ನಾಟಕʼಕ್ಕೆ ಹೇಳಿದರು.

"ಕೇರಳದವರೂ ಯಾರೂ ಇಲ್ಲ .ಆದರೂ ಕೇರಳ ರಾಜಕಾರಣಿಗಳು ಬಂದಿದ್ದು ಆಶ್ಚರ್ಯ ತಂದಿದೆ. ಅವರು(ಕೇರಳ) ಮಾನವೀಯ ದೃಷ್ಟಿಯಿಂದ ಬಂದಿರಬಹುದು. ಇಲ್ಲಿಗೆ ಕೇರಳದವರು ಬರುವವರಿಗೂ ನಮ್ಮ ರಾಜಕಾರಣಿಗಳು ಬಂದಿರಲಿಲ್ಲ" ಎಂದು ಸಂತ್ರಸ್ತ ಖಲಂದರ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ದೂರಿದರು.

ಯಲಹಂಕದ ಕೋಗಿಲು ಬಡಾವಣೆಯಲ್ಲಿ ಮನೆಗಳನ್ನು ಧ್ವಂಸ ಮಾಡಿರುವುದು

ಸಿಎಂ ಸೂಚನೆ ಮೇರೆಗೆ ತೆರವು

ಅನಧಿಕೃತ ಕಟ್ಟಡಗಳ ತೆರವಿಗೆ ನ್ಯಾಯಾಲಯದ ಆದೇಶ ನೀಡಿತ್ತು. ಸ್ಥಳ ತೆರವು ಮಾಡುವಂತೆ ಕ್ಷೇತ್ರದ ಶಾಸಕರೂ ಆಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದರೂ ನಿವಾಸಿಗಳ ಮನೆ ತೆರವು ಮಾಡಿರಲಿಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ತೆರವಿಗೆ ಸೂಚಿಸಿದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ನಮ್ಮ ಸರ್ಕಾರ ಯಾವುದೇ ಕಾನೂನು ಬಾಹಿರ ಕೃತ್ಯಗಳಿಗೆ ಬೆಂಬಲ ನೀಡುವುದಿಲ್ಲ. ಇಲ್ಲಿ ಯಾರೂ ಕೇರಳದವರು ವಾಸ ಮಾಡುತ್ತಿಲ್ಲ, ಆದರೂ, ಕೇರಳ ಸರ್ಕಾರದ ನಿಯೋಗ ಇಲ್ಲಿಗೆ ಭೇಟಿ ನೀಡಿ ರಾಜಕೀಯ ಮಾಡುತ್ತಿದೆ ಎಂದು ಸಚಿವ ಜಮೀರ್ ಆರೋಪಿಸಿದ್ದರು.

ಈ ಹಿಂದೆ ಕೇರಳದಲ್ಲಿ ಪ್ರವಾಹ ತಲೆದೋರಿದಾಗ ಕರ್ನಾಟಕ ಸರ್ಕಾರವು ಮಾನವೀಯತೆಯಿಂದ ನೆರವು ನೀಡಿತ್ತು. ಅನಧಿಕೃತ ನಿವಾಸಿಗಳ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ಕೇರಳ ಸರ್ಕಾರವೇ ಪರಿಹಾರ ನೀಡಲಿ, ಮುಂಬರುವ ಏಪ್ರಿಲ್‌ನಲ್ಲಿ ಕೇರಳದಲ್ಲಿ ಚುನಾವಣೆ ಇರುವುದರಿಂದ ಈ ರೀತಿಯ ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದ್ದರು.

"ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಚುನಾವಣಾ ರಾಜಕೀಯ ಮಾಡುತ್ತಿದ್ದಾರೆ. ಅಲ್ಲಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಮುಸ್ಲಿಮರನ್ನು ಓಲೈಕೆ ಮಾಡುತ್ತಿದ್ದಾರೆ. ರಾಜ್ಯದ ವಿಚಾರಗಳಲ್ಲಿ ಕೇರಳ ಸರ್ಕಾರದ ಹಸ್ತಕ್ಷೇಪವನ್ನು ನಾವು ಸಹಿಸುವುದಿಲ್ಲ" ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಸ್ಥಳೀಯರು ಹೇಳುವುದೇನು?

ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ಕೇರಳ ಮೂಲದವರು ವಾಸ ಮಾಡುತ್ತಿದ್ದಾರೆ ಎಂಬ ವರದಿಗಳು ಸುಳ್ಳು. ಇಲ್ಲಿನ ಫಕೀರ್‌ ಹಾಗೂ ವಾಸಿಂ ಬಡಾವಣೆಯಲ್ಲಿ ಯಾರೂ ಕೂಡ ಕೇರಳದವರು ಇಲ್ಲ. ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಬೇರೆ ಬೇರೆ ರಾಜ್ಯದವರು ವಾಸಿಸುತ್ತಿದ್ದರು. ರೋಹಿಂಗ್ಯಾ ಮುಸ್ಲಿಮರೂ ಸಹ ಇಲ್ಲಿದ್ದರು. ಕೇರಳ ಸರ್ಕಾರ ಈ ವಿಚಾರವನ್ನು ಧರ್ಮ ಹಾಗೂ ಪ್ರಾಂತ್ಯದ ಆಧಾರದ ಮೇಲೆ ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಸ್ಥಳೀಯರು ಟೀಕಿಸಿದ್ದಾರೆ.

"ಕೋಗಿಲು ಬಡಾವಣೆಯಲ್ಲಿ ಕೇರಳದವರು ಯಾರೂ ಇಲ್ಲ. ಲೇಔಟ್ ಹೊರಗಡೆ ಮಾತ್ರ ಒಂದಿಬ್ಬರು ಇದ್ದಾರೆ. ಅವರ ಮನೆಗಳು ನೆಲಸಮವಾಗಿಲ್ಲ. ನಾವು ದಶಕಗಳಿಂದ ಇಲ್ಲಿಯೇ ವಾಸಿಸುತ್ತಿದ್ದು, ಏಕಾಏಕಿ ಮನೆಗಳನ್ನು ತೆರವು ಮಾಡುವ ಮೂಲಕ ನಮ್ಮನ್ನು ಬೀದಿಗೆ ತಳ್ಳಲಾಗಿದೆ" ಎಂದು ಸ್ಥಳೀಯ ನಿವಾಸಿ ಮೊಹಮದ್ ರಿಯಾಜ್ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ವಸ್ತುಸ್ಥಿತಿ ಪರಿಶೀಲಿಸಿದ್ದ ಕೇರಳ ನಿಯೋಗ

ಯಲಹಂಕದ ಕೋಗಿಲು ಕ್ರಾಸ್ನಲ್ಲಿ ನಡೆದ ಅಕ್ರಮ ಕಟ್ಟಡಗಳ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಕೇರಳದಿಂದ ಬಂದಿದ್ದ ನಿಯೋಗವು ಅಕ್ರಮ ಕಟ್ಟಡಗಳ ಕಾರ್ಯಾಚರಣೆಯ ಹಿನ್ನೆಲೆ, ಕಾನೂನು ಪ್ರಕ್ರಿಯೆ ಹಾಗೂ ಸ್ಥಳೀಯರ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿತ್ತು.

ಧ್ವಂಸಗೊಂಡ ಮನೆಗಳಲ್ಲಿ ಕೇರಳ ಮೂಲದ ಕುಟುಂಬಗಳು ಅಥವಾ ಕಾರ್ಮಿಕರು ವಾಸಿಸುತ್ತಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನಿಯೋಗ ಸ್ಥಳೀಯರೊಂದಿಗೆ ಮಾತುಕತೆ ನಡೆಸಿತ್ತು. ಮನೆಗಳ ನೆಲಸಮದ ನಂತರ ಅವರಿಗೆ ಪುನರ್ವಸತಿ, ಆಹಾರ ಒದಗಿಸುವ ಕುರಿತು ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಿತ್ತು.


ದ ಫೆಡರಲ್‌ ಕರ್ನಾಟಕ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ.


Read More
Next Story