
ವಸತಿ ಸಚಿವ ಜಮೀರ್ ಅಹಮದ್ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ
ಕೋಗಿಲು ಕ್ರಾಸ್ ನಿರಾಶ್ರಿತರಿಗೆ ಮನೆ ಹಂಚಿಕೆ; ಕನ್ನಡಿಗರಿಗೆ ಮೊದಲ ಆದ್ಯತೆ ನೀಡಲು ಸಚಿವರ ಸೂಚನೆ
ಉತ್ತರ ಪ್ರದೇಶ ಹಾಗೂ ಬಿಹಾರದ ಐದಾರು ಕುಟುಂಬಗಳೂ ಸಹ ಇಲ್ಲಿರುವ ಮಾಹಿತಿಯಿದೆ. ಆದರೆ, ಅರ್ಹರಿಗೆ ಮಾತ್ರ ಮನೆ ನೀಡಬೇಕು ಎಂದು ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇಶದ ಗಮನ ಸೆಳೆದಿದ್ದ ಕೋಗಿಲು ಕ್ರಾಸ್ ಒತ್ತುವರಿ ಘಟನೆ ಇದೀಗ ಬಹುತೇಕ ಅಂತಿಮ ಹಂತ ತಲುಪಿದ್ದು, ನಿರಾಶ್ರಿತರಲ್ಲಿ ಯಾರಿಗೆ ಮನೆ ನೀಡಬೇಕು ಎಂಬುದರ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಅಧಿಕಾರಿಗಳಿಗೆ ಹಲವು ಮಹತ್ವದ ಸೂಚನೆ ನೀಡಿದ್ದಾರೆ.
ಪ್ರಕರಣ ಕುರಿತು ಸೋಮವಾರ(ಜ.5) ಸಭೆ ನಡೆಸಿದ ಸಚಿವರು, ಸರ್ಕಾರಿ ಜಮೀನಲ್ಲಿ ಯಾರಿಗೋ ಹಣ ಕೊಟ್ಟು ಒತ್ತುವರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲೆಮಾರಿಗಳಿಗೆ ಭೂ ಒತ್ತುವರಿ ಅಗತ್ಯವಿಲ್ಲ. ಅವರು ಬರುತ್ತಾರೆ, ಹೋಗುತ್ತಾರೆ. ಆದರೆ ಭೂ ಒತ್ತುವರಿದಾರರನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರಿ ಜಮೀನಲ್ಲಿ ಶೆಡ್ ಹಾಕಿದ ಕೂಡಲೇ ಅವರಿಗೆ ಮನೆ ಕೊಟ್ಟರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸರ್ಕಾರಿ ಜಮೀನು ಒತ್ತುವರಿಗೆ ನಾವೇ ಪರೋಕ್ಷವಾಗಿ ಕುಮ್ಮಕ್ಕು ಕೊಟ್ಟಂತಾಗುತ್ತದೆ ಎಂದರು.
ಎಷ್ಟೋ ಜನ ಸರ್ಕಾರಿ ಮನೆಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಹೀಗೆ ಒತ್ತುವರಿದಾರರಿಗೆ ಏಕಾಏಕಿ ಮನೆ ನೀಡುವುದು ಸರಿಯಲ್ಲ. ಆದರೆ ಕೋಗಿಲು ಕ್ರಾಸ್ ಪ್ರಕರಣದಲ್ಲಿ ಬಡವರಿಗೆ ಮಾನವೀಯತೆ ಅಡಿಯಲ್ಲಿ ಮನೆ ನೀಡಬೇಕು ನಿಜ. ಆದರೆ, ಆ ಕೆಲಸ ಕಾನೂನುಬದ್ಧವಾಗಿಯೇ ಆಗಬೇಕು. ಇಲ್ಲಿ ಗುಡಿಸಲು ಹಾಕಿರುವವರು ಎಲ್ಲಿಂದ ಬಂದರು ಎಂಬ ಬಗ್ಗೆ ಮೊದಲು ತನಿಖೆಯಾಗಬೇಕು. ಉತ್ತರ ಪ್ರದೇಶ ಹಾಗೂ ಬಿಹಾರದ ಐದಾರು ಕುಟುಂಬಗಳೂ ಸಹ ಇಲ್ಲಿರುವ ಮಾಹಿತಿಯಿದೆ. ಆದರೆ, ಅರ್ಹರಿಗೆ ಮಾತ್ರ ಮನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದವರಿಗೆ ಮೊದಲ ಆದ್ಯತೆ
ರಾಜ್ಯದ ಇತರೆ ಭಾಗದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರೆ ಅಂತವರಿಗೆ ಮೊದಲ ಆದ್ಯತೆಯಾಗಿ ಮನೆ ನೀಡಲು ಪರಿಗಣಿಸಬೇಕು. ಕನ್ನಡಿಗರಾಗಿದ್ದು ಕೋಗಿಲು ಲೇಔಟ್‌ನಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ನೆಲೆಸಿದ್ದರೆ ಆದ್ಯತೆಯಾಗಿ ಪರಿಗಣಿಸಬೇಕು. ಮಾತೃಭಾಷೆ ಬೇರೆ ಇದ್ದರೂ ತಲೆಮಾರಿನಿಂದ ಕರ್ನಾಟಕದಲ್ಲಿ ವಾಸ ಇದ್ದು, ಬೆಂಗಳೂರಿಗೆ ವಲಸೆ ಬಂದಿದ್ದರೂ ಮೂಲ ತಾಲೂಕು ಹಾಗೂ ಊರು ಯಾವುದು ಎಂದು ತಿಳಿದು ಅಲ್ಲಿನ ಗ್ರಾಮ ಆಡಳಿತ ಅಧಿಕಾರಿ ಹಾಗೂ ದಫೇದಾರ್ ಮೂಲಕ ಪರಿಶೀಲಿಸಿದ ನಂತರ ನಿರಾಶ್ರಿತರಿಗೆ ಮನೆ ನೀಡಬೇಕು ಎಂದರು.
ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿ
ವಸೀಂ ಕಾಲೋನಿಯವರು ಮಾತೃ ಭಾಷೆ ಬೇರೆ ಇದ್ದರೂ ಕರ್ನಾಟಕದ ಮೂಲದವರಾಗಿದ್ದರೆ, ರಾಜ್ಯದಲ್ಲೇ ನೆಲೆಸಿದ್ದವರಾದರೆ ಮನೆ ನೀಡಬೇಕು. ಆದರೆ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಕರ್ನಾಟಕದವರು ಕನ್ನಡಿಗರು ಅಲ್ಲದಿದ್ದು 5 ವರ್ಷ ರಾಜ್ಯದಲ್ಲಿ ನೆಲೆಸಿದ್ದರೆ ಅಂತವರು ಬಡವರಿಗೆ 1 ಲಕ್ಷ ಮನೆ ನೀಡುವ ಸರ್ಕಾರದ ವಸತಿ ಯೋಜನೆಯಡಿಯಲ್ಲಿ ಅರ್ಜಿ ಹಾಕಿ ಮನೆ ಪಡೆಯಲಿ ಎಂದು ಸಲಹೆ ನೀಡಿದರು.
ಒಂದು ಕುಟುಂಬಕ್ಕೆ ಒಂದೇ ಮನೆ
ಒಂದೇ ಕುಟುಂಬದವರು ಮನೆಗಾಗಿ ಎರಡು ಅರ್ಜಿ ಸಲ್ಲಿಸಿದ್ದರೆ ರೇಷನ್ ಕಾರ್ಡ್ ಆಧಾರದಲ್ಲಿ ಒಂದು ಮನೆ ನೀಡಬೇಕು. ಯಾರೋ ಹೊರ ರಾಜ್ಯದವರನ್ನ ಹುಡುಕುವ ಸಲುವಾಗಿ ಕನ್ನಡಿಗರಿಗೆ ಮನೆ ನೀಡಲು ತಡ ಮಾಡುವುದು ಸರಿಯಲ್ಲ. ಅರ್ಹರಿಗೆ ಮೊದಲ ಹಂತದಲ್ಲಿ ಮನೆ ನೀಡಲು ಆರಂಭಿಸಿ. ಪಕೀರ್ ಕಾಲೋನಿಯಲ್ಲಿ 35 ಮನೆ ಇದ್ದು ಬಹುಪಾಲು ಜನ ಅರ್ಹರಿದ್ದಾರೆ. ಈ ಪೈಕಿ ಗುರುವಾರ(ಜ.8)ದ ಒಳಗೆ 25 ರಿಂದ 30 ಜನರಿಗೆ ಮನೆ ನೀಡಬೇಕು. ಉಳಿದ ಎಲ್ಲಾ ಅರ್ಹರಿಗೂ ಹಂತ ಹಂತವಾಗಿ ಮನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

