
ಸಿಎಂ ಸಿದ್ದರಾಮಯ್ಯ ಜೊತೆ ಸಚಿವ ಜಮೀರ್ ಸಮಾಲೋಚನೆ
ಸಚಿವ ಜಮೀರ್ ಅಹಮದ್ ಖಾನ್ ಅವರು ಮುಖ್ಯಮಂತ್ರಿಯವರೊಂದಿಗೆ ಅರ್ಧಗಂಟೆಗೂ ಹೆಚ್ಚು ಚರ್ಚೆ ನಡೆಸಿದರು. ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಜಮೀರ್ ಅವರು ಸಿಎಂ ಅವರಿಗೆ ವಿವರಣೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕ ಅನುದಾನ ನೀಡುತ್ತಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದ ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಬುಧವಾರ ಸಂಜೆ ಬೆಂಗಳೂರಿನ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಭೇಟಿಯಾಗಿ ಮಾತುಕತೆ ನಡೆಸಿದರು.
ಬುಧವಾರ ಸಂಜೆ ನವದೆಹಲಿಯಿಂದ ಹಿಂತಿರುಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜು ಕಾಗೆ ಹಾಗೂ ಜಮೀರ್ ಅವರು ಪ್ರತ್ಯೇಕವಾಗಿ ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಲಂಚ ಆರೋಪ ಹಿನ್ನೆಲೆ ಚರ್ಚೆ
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ ಅವರು ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ಲಂಚ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಂಡ ಸಚಿವ ಜಮೀರ್ ಅಹಮದ್ ಖಾನ್ ಅವರು ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಅರ್ಧಗಂಟೆಗೂ ಹೆಚ್ಚು ಚರ್ಚೆ ನಡೆಸಿದರು.
ಸಿಎಂ ಸಿದ್ದರಾಮಯ್ಯ ಅವರು ಆರೋಪಗಳ ಬಗ್ಗೆ ಸಂಪೂರ್ಣ ವಿವರಣೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜೀನಾಮೆ ಸಂಕೇತಿಸಿದ ರಾಜು ಕಾಗೆ
ಕಾಗವಾಡ ಶಾಸಕ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಅವರು, “ಸರ್ಕಾರವು ಅಧಿಕಾರಿಗಳನ್ನು ನಿಯಂತ್ರಿಸುವುದಿಲ್ಲ. ಸರ್ಕಾರದಲ್ಲಿ ಯಾವ ಕೆಲಸವೂ ಆಗುತ್ತಿಲ್ಲ. ನಾನು ಸಿಎಂ ಅವರನ್ನು ಭೇಟಿಯಾಗಿ ರಾಜೀನಾಮೆ ಬಗ್ಗೆ ನಿರ್ಧಾರ ಮಾಡ್ತೀನಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಬುಧವಾರ ಮುಖ್ಯಮಂತ್ರಿ ಅವರನ್ನು ಭೇಟಿಯಾದ ರಾಜು ಕಾಗೆ ಅವರು, ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಹೈಕಮಾಂಡ್ನಿಂದ ಸೂಚನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಶಾಸಕರ ಅಸಮಾಧಾನ ಕುರಿತಂತೆ ಚರ್ಚೆ ನಡೆದಿತ್ತು.
ಶಾಸಕರ ಬಹಿರಂಗ ಹೇಳಿಕೆಗೆ ಹೈಕಮಾಂಡ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಗೊಂದಲ ಪರಿಹರಿಸುವಂತೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಸಚಿವರ ಜೊತೆ ಸಮಾಲೋಚನೆ ನಡೆಸಿದ್ದು, ಇದೀಗ ಶಾಸಕರೊಂದಿಗೆ ಮಾತುಕತೆ ಆರಂಭಿಸಿದ್ದಾರೆ.