
ರಸ್ತೆ ಸ್ವಚ್ಛಗೊಳಿಸುತ್ತಿರುವ ಸಾರ್ವಜನಿಕರು.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜನ; ಗುದ್ದಲಿ, ಪಿಕಾಸಿ ಹಿಡಿದು ರಸ್ತೆಗಿಳಿದ ಬಳಗೆರೆ ನಿವಾಸಿಗಳು!
ವಿಶ್ವದಾದ್ಯಂತ ಐಟಿ ಹಬ್, ಗಾರ್ಡನ್ ಸಿಟಿ ಎಂದು ಖ್ಯಾತಿ ಗಳಿಸಿರುವ ಬೆಂಗಳೂರಿನಲ್ಲಿ, ನಾಗರಿಕರು ಮೂಲಸೌಕರ್ಯಕ್ಕಾಗಿ ಪಿಕಾಸಿ ಹಿಡಿಯುವಂತಾಗಿರುವುದು 'ಬ್ರ್ಯಾಂಡ್ ಬೆಂಗಳೂರು' ಮಾನ ಹರಾಜಾದಂತಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
"ಸಿಲಿಕಾನ್ ಸಿಟಿ" ಬೆಂಗಳೂರಿನ ಕೀರ್ತಿ ಪತಾಕೆ ಒಂದೆಡೆಯಾದರೆ, ಮೂಲಭೂತ ಸೌಕರ್ಯಗಳ ಕೊರತೆ ಇನ್ನೊಂದೆಡೆ ಎದ್ದು ಕಾಣುತ್ತಿದೆ. ವರ್ತೂರು ಭಾಗದ ಬಳಗೆರೆ ರಸ್ತೆಯ ದುಸ್ಥಿತಿ ಕಂಡು ರೋಸಿ ಹೋದ ಸ್ಥಳೀಯ ನಿವಾಸಿಗಳು, ಅಧಿಕಾರಿಗಳಿಗಾಗಿ ಕಾಯದೇ ತಾವೇ ಸ್ವತಃ ರಸ್ತೆ ದುರಸ್ತಿ ಮಾಡುವ ಮೂಲಕ ಆಡಳಿತ ವ್ಯವಸ್ಥೆಗೆ ಚಾಟಿ ಬೀಸಿದ್ದಾರೆ.
ಕಳೆದ ಹಲವು ತಿಂಗಳಿಂದ ಬಳಗೆರೆ ಮುಖ್ಯ ರಸ್ತೆಯು ಗುಂಡಿಮಯವಾಗಿತ್ತು. ವಿಪರೀತ ಧೂಳು ಮತ್ತು ಎಲ್ಲೆಂದರಲ್ಲಿ ಬಿದ್ದಿದ್ದ ಕಸದಿಂದಾಗಿ ವಾಹನ ಸವಾರರು ಹಾಗೂ ಸ್ಥಳೀಯರು ನರಕಯಾತನೆ ಅನುಭವಿಸುತ್ತಿದ್ದರು. ಈ ಬಗ್ಗೆ ನೂತನ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ದ (GBA) ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ, ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಜನರಿಂದಲೇ ಶ್ರಮದಾನ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ನಾಗರಿಕರು, ಶನಿವಾರದಂದು ಸಾಮೂಹಿಕವಾಗಿ ರಸ್ತೆಗಿಳಿದರು. ಗುದ್ದಲಿ, ಪಿಕಾಸಿ ಮತ್ತು ಬಾಣಲಿಗಳನ್ನು ಹಿಡಿದು ಶ್ರಮದಾನ ಮಾಡಿದರು. ಸ್ವಂತ ಖರ್ಚಿನಲ್ಲಿ ಟ್ರ್ಯಾಕ್ಟರ್ ಮೂಲಕ ಮಣ್ಣು ತರಿಸಿ ರಸ್ತೆ ಗುಂಡಿಗಳನ್ನು ಮುಚ್ಚಿದರು. ರಸ್ತೆಯಲ್ಲಿದ್ದ ಕಸವನ್ನು ಗುಡಿಸಿ ಸ್ವಚ್ಛಗೊಳಿಸುವ ಮೂಲಕ ವ್ಯವಸ್ಥೆಯ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದರು.
ಪೊರಕೆ, ಗುದ್ದಲಿ ಹಿಡಿದು ರಸ್ತೆ ರಿಪೇರಿಗೆ ಮುಂದಾದ ಸಾರ್ವಜನಿಕರು.
ಸ್ಥಳೀಯರ ಆಕ್ರೋಶ
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ನಿವಾಸಿ ಯೋಗೇಂದ್ರ, "ನಾವು ರಸ್ತೆ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಹಲವು ತಿಂಗಳಿಂದ ದುಂಬಾಲು ಬಿದ್ದಿದ್ದೇವೆ. ಆದರೆ ಯಾರೂ ಸ್ಪಂದಿಸಲಿಲ್ಲ. ಹೀಗಾಗಿ ನಾವೇ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮುಂದಾಗಿದ್ದೇವೆ. ತೆರಿಗೆ ಕಟ್ಟುವ ನಾಗರಿಕರು ಹೀಗೆ ರಸ್ತೆ ಕೆಲಸ ಮಾಡುವಂತಾಗಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿ," ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವದಾದ್ಯಂತ ಐಟಿ ಹಬ್, ಗಾರ್ಡನ್ ಸಿಟಿ ಎಂದು ಖ್ಯಾತಿ ಗಳಿಸಿರುವ ಬೆಂಗಳೂರಿನಲ್ಲಿ, ನಾಗರಿಕರು ಮೂಲಸೌಕರ್ಯಕ್ಕಾಗಿ ಪಿಕಾಸಿ ಹಿಡಿಯುವಂತಾಗಿರುವುದು 'ಬ್ರ್ಯಾಂಡ್ ಬೆಂಗಳೂರು' ಮಾನ ಹರಾಜಾದಂತಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

