A Bengaluru techie fell into a pothole in Bengaluru and broke his shoulder!
x

ಗಾಯಾಳು ಐಟಿ ಉದ್ಯೋಗಿ ಶ್ರೀಧರ್ 

ಬೆಂಗಳೂರಿನ ರಸ್ತೆ ಗುಂಡಿಗೆ ಬಿದ್ದು ಭುಜದ ಮೂಳೆ ಮುರಿದುಕೊಂಡ ಟೆಕ್ಕಿ!

ಬೆಂಗಳೂರಿನ ಪಣತ್ತೂರು-ದಿಣ್ಣೆ ರಸ್ತೆ ಗುಂಡಿಯಿಂದಾಗಿ ಐಟಿ ಉದ್ಯೋಗಿ ಶ್ರೀಧರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಗಲ ಮೂಳೆ ಮುರಿದು ಲಕ್ಷಾಂತರ ರೂಪಾಯಿ ವೆಚ್ಚದ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಬಗ್ಗೆ ವರದಿಯಾಗಿದೆ


Click the Play button to hear this message in audio format

"ನನ್ನ ಬಲ ಭುಜವೇ ಮುರಿದುಹೋಗಿದೆ, ಮೂಳೆ ಪೂರ್ತಿ ಕಟ್ ಆಗಿದೆ. ಆಪರೇಷನ್‌ಗೆ ಒಂದೂವರೆ ಲಕ್ಷ ಖರ್ಚು, ನಾಲ್ಕು ತಿಂಗಳು ಬೆಡ್ ರೆಸ್ಟ್.. ದಯವಿಟ್ಟು ರಸ್ತೆ ಸರಿಪಡಿಸಿ..." - ಇದು ಐಟಿ ಉದ್ಯೋಗಿ ಶ್ರೀಧರ್ ಅವರ ಅಳಲು. ಬೆಂಗಳೂರಿನ ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುವ ಪಣತ್ತೂರು-ದಿಣ್ಣೆ ರಸ್ತೆಯಲ್ಲಿನ ಗುಂಡಿಗೆ ಬಿದ್ದಿರುವ ಅವರು ವಿಡಿಯೊ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಶ್ರೀಧರ್ ಅವರು ಹೊರ ವರ್ತುಲ ರಸ್ತೆಯಲ್ಲಿರುವ ಬಹುರಾಷ್ಟ್ರೀಯ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜನವರಿ 12ರ ಸೋಮವಾರ ಸಂಜೆ ಕಚೇರಿಯಿಂದ ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪಣತ್ತೂರು-ದಿಣ್ಣೆ ಗುಂಜೂರು ಪಾಳ್ಯ ರಸ್ತೆಯ ಸಿಡಿಪಿ ರಸ್ತೆ ಬಳಿ ಸ್ಕೂಟರ್ ಚಲಾಯಿಸುತ್ತಿದ್ದಾಗ, ದೊಡ್ಡ ಹೊಂಡವೊಂದಕ್ಕೆ ಸ್ಕೂಟರ್ ಇಳಿದಿದೆ. ನಿಯಂತ್ರಣ ಕಳೆದುಕೊಂಡ ಸ್ಕೂಟರ್ ರಸ್ತೆ ಬದಿಯಲ್ಲಿದ್ದ ಮಣ್ಣು ಮತ್ತು ಕಸದ ರಾಶಿಗೆ ನುಗ್ಗಿದ್ದು, ಶ್ರೀಧರ್ ಅವರು ರಸ್ತೆಗೆ ಬಲವಾಗಿ ಅಪ್ಪಳಿಸಿದ್ದಾರೆ.

ಕೆಲ ನಿಮಿಷ ಪ್ರಜ್ಞೆ ಕಳೆದುಕೊಂಡಿದ್ದ ಅವರಿಗೆ, ದಾರಿಹೋಕರು ನೀರು ಕೊಟ್ಟು ಉಪಚರಿಸಿ ಸಹಾಯ ಮಾಡಿದ್ದಾರೆ. ಆದರೆ ಮನೆಗೆ ತಲುಪಿದ ಮೇಲೆ ಬಲ ಭುಜದಲ್ಲಿ ವಿಪರೀತ ಊತ ಕಾಣಿಸಿಕೊಂಡಿದೆ.

ಗುಂಡಿ ಬಿದ್ದಿರುವ ರಸ್ತೆ

ಗಂಭೀರ ಗಾಯ, ಲಕ್ಷಾಂತರ ಖರ್ಚು

ವೈದ್ಯರ ಸಲಹೆಯಂತೆ ಎಕ್ಸ್-ರೇ ಮತ್ತು ಎಂಆರ್‌ಐ ಸ್ಕ್ಯಾನ್ ಮಾಡಿದಾಗ ಆಘಾತಕಾರಿ ಸಂಗತಿ ತಿಳಿದುಬಂದಿದೆ. ಅವರ ಬಲ ಭುಜದ ಮೇಲ್ಭಾಗದಲ್ಲಿ ಹತ್ತಾರು ಕಡೆ ಮುರಿತಗಳಾಗಿದ್ದು , ಮೂಳೆ ಪೂರ್ತಿ ತುಂಡಾಗಿದೆ. ಇದಕ್ಕೆ ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಸುಮಾರು 1.25 ರಿಂದ 1.5 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಟೆಕಿ ಶ್ರೀಧರ್ ಏನು ಹೇಳುತ್ತಾರೆ ಕೇಳಿ

ನಾಲ್ಕು ತಿಂಗಳು ನರಕಯಾತನೆ

"ನಾನು ಸಂಪೂರ್ಣ ಗುಣಮುಖನಾಗಲು ಕನಿಷ್ಠ ಎರಡು ತಿಂಗಳು ಬೇಕು. ಮತ್ತೆ ಗಾಡಿ ಓಡಿಸಲು ಇನ್ನೆರಡು ತಿಂಗಳು ಬೇಕಾಗಬಹುದು. ಪ್ರತಿದಿನ ಮಗಳನ್ನು ಶಾಲೆಗೆ ಬಿಡುವುದು, ಹೆಂಡತಿಗೆ ಸಹಾಯ ಮಾಡುವುದು ಎಲ್ಲವೂ ನಿಂತುಹೋಗಿದೆ. ಆಫೀಸ್ ಕೆಲಸಕ್ಕೂ ತೊಂದರೆಯಾಗಿದೆ. ಕೇವಲ ಒಂದು ಗುಂಡಿಯಿಂದ ನನ್ನ ಇಡೀ ಕುಟುಂಬ ನಾಲ್ಕು ತಿಂಗಳು ಪರದಾಡುವಂತಾಗಿದೆ," ಎಂದು ಶ್ರೀಧರ್ ನೋವು ತೋಡಿಕೊಂಡಿದ್ದಾರೆ.

ಟ್ರಾಫಿಕ್ ಕಿರಿಕಿರಿ ಮತ್ತು ಸ್ಕೂಟರ್ ಅನಿವಾರ್ಯತೆ

ಈ ಭಾಗದಲ್ಲಿ ವಿಪರೀತ ಟ್ರಾಫಿಕ್ ಇರುವುದರಿಂದ 7-8 ಕಿ.ಮೀ ಕ್ರಮಿಸಲು ಕಾರಿನಲ್ಲಿ 1 ಗಂಟೆ 15 ನಿಮಿಷ ಬೇಕಾಗುತ್ತದೆ. ಹೀಗಾಗಿ ಸಮಯ ಉಳಿಸಲು ಬೆನ್ನು ನೋವಿದ್ದರೂ ಶ್ರೀಧರ್ ಸ್ಕೂಟರ್ ಬಳಸುತ್ತಿದ್ದರು. ಆದರೆ ಈಗ ರಸ್ತೆ ಗುಂಡಿ ಅವರನ್ನೇ ಆಸ್ಪತ್ರೆಗೆ ಸೇರಿಸಿದೆ.

"ಈ ರಸ್ತೆಗಳಲ್ಲಿನ ಗುಂಡಿಗಳು ಪ್ರಾಣಕ್ಕೆ ಕುತ್ತು ತರುತ್ತಿವೆ. ಅದೃಷ್ಟವಶಾತ್ ನಾನು ಬದುಕುಳಿದಿದ್ದೇನೆ, ಆದರೆ ಎಲ್ಲರಿಗೂ ಹೀಗಾಗುವುದಿಲ್ಲ. ದಯವಿಟ್ಟು ಬಿಬಿಎಂಪಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪಣತ್ತೂರು ಮತ್ತು ಸಿಡಿಪಿ ರಸ್ತೆಯ ಗುಂಡಿಗಳನ್ನು ಮುಚ್ಚಬೇಕು," ಎಂದು ಶ್ರೀಧರ್ ಮನವಿ ಮಾಡಿದ್ದಾರೆ.

Read More
Next Story