
ಹಚ್ಚ ಹಸುರಿನ ನಡುವೆ ತುಂಬಿರುವ ಮಂಚನಬೆಲೆ ಜಲಾಶಯ. ಚಿತ್ರ: ಆರ್.ಡಿ.ರಘು
Ground Report Part-3| ವನ್ಯಜೀವಿಗಳಿಗೆ ಉರುಳಾದ ಕಲ್ಲು ಗಣಿಗಾರಿಕೆ; ಅರಣ್ಯಕ್ಕೂ ಅಪಾಯ !
ಕಲ್ಲು ಗಣಿಗಾರಿಕೆಯಿಂದ ಮಂಚನಬೆಲೆಯ ನೀರು ಮಲಿನವಾಗುವ ಜತೆಗೆ ಅಂತರ್ಜಲವೂ ಕಲುಷಿತವಾಗಲಿದೆ. ಅರಣ್ಯದ ಅಂಚಿನಿಂದಲೇ ಗಣಿಗಾರಿಕೆಗೆ ಅವಕಾಶ ನೀಡಿರುವುದು ದೊಡ್ಡ ಬೆದರಿಕೆಯಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕೇವಲ ಮನುಷ್ಯರಿಗಷ್ಟೇ ಅಲ್ಲ, ವನ್ಯಜೀವಿಗಳಿಗೂ ಮಾರಕವಾಗಿ ಪರಿಣಮಿಸಿದೆ.
ಸೂಲಿವಾರ, ಎಸ್.ಗೊಲ್ಲಹಳ್ಳಿ ಗ್ರಾಮದ ಸಮೀಪ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಕಗ್ಗಲೀಪುರ ವ್ಯಾಪ್ತಿಯ ಬಸವನತಾರ ಅರಣ್ಯದಲ್ಲಿ ವನ್ಯ ಜೀವಿಗಳು ಹಾಗೂ ಅರಣ್ಯಕ್ಕೆ ಆಪತ್ತು ಎದುರಾಗಿದೆ.
ಡೈನಾಮೇಟ್‌ಗಳ ಸ್ಫೋಟ, ಕಲ್ಲಿನ ದೂಳು, ಕ್ರಷರ್‌ಗಳ ಕರ್ಕಶದ ಧ್ವನಿಗೆ ಪ್ರಾಣಿಗಳ ಆವಾಸಸ್ಥಾನವೂ ಬದಲಾಗುತ್ತಿದೆ. ಇತ್ತೀಚೆಗೆ ಎಸ್.ಗೊಲ್ಲಹಳ್ಳಿ ಗ್ರಾಮದಲ್ಲಿ ಕಲ್ಲು ಸಿಡಿದು ಗರ್ಭಿಣಿ ಚಿರತೆ ಮೃತಪಟ್ಟಿತ್ತು. ಗರ್ಭದಲ್ಲಿದ್ದ ಮೂರು ಮರಿಗಳು ಸಹ ಮೃತಪಟ್ಟಿದ್ದವು. ಇದರಿಂದ ತಾವರೆಕೆರೆ ಹೋಬಳಿ ಕಲ್ಲು ಗಣಿಗಾರಿಕೆಯ ಕರಾಳ ಮುಖ ಮತ್ತೊಮ್ಮೆ ಅನಾವರಣವಾಗಿದೆ.
ಬಂಡೆಗಳ ಸ್ಫೋಟದಿಂದ ಕಾಡು ಪ್ರಾಣಿಗಳು, ಜಾನುವಾರುಗಳು ಕೂಡ ಮೃತಪಡುತ್ತಿವೆ. ಎಂ-ಸ್ಯಾಂಡ್ ತೊಳೆದ ನೀರಿನಲ್ಲಿ ಸಿಲುಕಿ ಸಾಕಷ್ಟು ಪ್ರಾಣಿಗಳು ಸತ್ತಿರುವ ಅನುಮಾನಗಳೂ ಇವೆ ಎಂಬುದು ಗ್ರಾಮಸ್ಥರ ಆರೋಪ.
ಪಥ ಬದಲಿಸಿದ ಆನೆಗಳ ಹಿಂಡು
"ತಾವರೆಕೆರೆ ಸಮೀಪದ ಮಾದಪಟ್ಟಣ, ಸೂಲಿವಾರ, ದೊಣ್ಣೇನಹಳ್ಳಿ, ಕುರುಬರಪಾಳ್ಯ, ಗೊಲ್ಲಹಳ್ಳಿ ಗ್ರಾಮದ ಗೋಮಾಳದಲ್ಲಿ ಕಲ್ಲುಗಣಿಗಾರಿಕೆಗೆ ಸರ್ಕಾರವೇ ಆದೇಶ ನೀಡಿದೆ. ಅರಣ್ಯಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲೇ ಕಲ್ಲು ಗಣಿಗಾರಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಬಸವನತಾರ ಅರಣ್ಯ ವ್ಯಾಪ್ತಿಯಲ್ಲಿ ನೈಸರ್ಗಿಕವಾಗಿ ಇರುವ ಬೆಟ್ಟ ಗುಡ್ಡ, ಗುಹೆಗಳಿವೆ. ಕಾಡಿನಿಂದ ಚಿರತೆ, ಕರಡಿಗಳು ಆಗಾಗ ಹೊರಬರುತ್ತಿರುತ್ತವೆ. ಈಗ ಕಲ್ಲು ಗಣಿಗಾರಿಕೆಯಿಂದ ಪ್ರಾಣಿಗಳಿಗೆ ಅಪಾಯ ಎದುರಾಗುತ್ತಿದೆ. ಇತ್ತೀಚೆಗೆ ಗೊಲ್ಲಹಳ್ಳಿ ಗ್ರಾಮದಲ್ಲಿ ಕಲ್ಲು ಸಿಡಿದು ಚಿರತೆ ಮೃತಪಟ್ಟಿತ್ತು. ಈ ಪ್ರಕರಣವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ" ಎಂದು ಬೆಂಗಳೂರು ದಕ್ಷಿಣ ವಿಭಾಗದ ಉಪಅರಣ್ಯ ಸಂರಕ್ಷಕ (ಎಸಿಎಫ್) ಗಣೇಶ್ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಕಲ್ಲು ಗಣಿಗಾರಿಕೆಯಿಂದ ಶಬ್ದ ಮಾಲೀನ್ಯ, ದೂಳು ಹೆಚ್ಚುತ್ತಿದೆ. ಗಾಳಿ ಮತ್ತು ನೀರು ಸಹ ಮಲಿನವಾಗುತ್ತಿದೆ. ಬಂಡೆ ತೊಳೆದಿರುವ ನೀರು ನೋಡಿದರೆ ಸಾಕು ಅಂತರ್ಜಲ ಎಷ್ಟರ ಮಟ್ಟಿಗೆ ಕೆಟ್ಟಿದೆ ಎಂದು ಊಹಿಸಬಹುದು. ಆದಾಗ್ಯೂ ಸರ್ಕಾರವು ಆದಾಯದ ದೃಷ್ಟಿಯಿಂದ ಗೋಮಾಳದಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿದೆ. ಗೋಮಾಳದ ಪಕ್ಕದಲ್ಲೇ ಅರಣ್ಯ ಇರುವುದರಿಂದ ಸಮಸ್ಯೆ ಗಂಭೀರವಾಗಿದೆ ಎಂದು ಹೇಳಿದರು.
ಮೊದಲು ಆನೆಗಳು ಬನ್ನೇರುಘಟ್ಟದಿಂದ ಗೊಲ್ಲಹಳ್ಳಿ, ಕೋಡೆಸ್ ಅವರ ಜಮೀನು, ದೇವಿಕಾರಾಣಿ ಎಸ್ಟೇಟ್, ವಿ.ಎಂ ಕಾವಲ್, ಬಿ.ಎಂ.ಕಾವಲ್ ಮೂಲಕ ಮಂಚನಬೆಲೆಗೆ ಬರುತ್ತಿದ್ದವು. ಆದರೆ ಈಗ ಬನ್ನೇರುಘಟ್ಟದ ಬಳಿ ಬ್ಯಾರಿಕೇಡ್ ನಿರ್ಮಿಸಿದ ನಂತರ ತುಮಕೂರು ಮಾರ್ಗಕ್ಕೆ ಆನೆಗಳು ಬರುತ್ತಿಲ್ಲ. ಬದಲಾಗಿ ರಾಮನಗರ, ಚನ್ನಪಟ್ಟಣದತ್ತ ಹೋಗುತ್ತಿವೆ. ಬಸವನತಾರ ಅರಣ್ಯದಲ್ಲಿ ಕಲ್ಲು ಗಣಿಗಾರಿಕೆಯಿಂದ ಚಿರತೆಗಳಿಗೆ ಹೆಚ್ಚು ಅಪಾಯವಾಗುವ ಸಾಧ್ಯತೆ ಇದೆ ಎಂದರು.
ಕಲ್ಲು ಗಣಿಗಾರಿಕೆಯಿಂದ ಮಂಚನಬೆಲೆಯ ನೀರು ಮಲಿನವಾಗುವ ಜತೆಗೆ ಅಂತರ್ಜಲವೂ ಕಲುಷಿತವಾಗಲಿದೆ. ಅರಣ್ಯದ ಅಂಚಿನಿಂದಲೇ ಗಣಿಗಾರಿಕೆಗೆ ಅವಕಾಶ ನೀಡಿರುವುದು ದೊಡ್ಡ ಬೆದರಿಕೆಯಾಗಿದೆ. ಕನಿಷ್ಠ ಅರಣ್ಯದಿಂದ 100 ಮೀ. ದೂರದಲ್ಲಾದರೂ ಅವಕಾಶ ನೀಡಿದರೆ ಉತ್ತಮ ಎಂದು ಗಣೇಶ್ ಅಭಿಪ್ರಾಯಪಟ್ಟರು.
ಚಿರತೆ ಸಾವಿಗೆ ಸಂಬಂಧಿಸಿದಂತೆ ಸಚಿವರ ಸೂಚನೆ ಮೇರೆಗೆ ಈ ಭಾಗದ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿದ್ದೇವೆ. ಚಿರತೆಯ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 15 ದಿನಗಳಲ್ಲಿ ವರದಿ ನೀಡುವುದಾಗಿ ಹೇಳಿದ್ದರು. ಶೀಘ್ರವೇ ವರದಿ ಬರುವ ನಿರೀಕ್ಷೆ ಇದ್ದು, ಸರ್ಕಾರ ಅರಣ್ಯ ಇಲಾಖೆಯಿಂದ ಸಮಗ್ರ ವರದಿ ನೀಡಲಾಗುವುದು ಎಂದು ಹೇಳಿದರು.
ಬಫರ್ ವಲಯದಲ್ಲೂ ಗಣಿಗಾರಿಕೆ
ರಾಜ್ಯ ಸರ್ಕಾರ ಆದಾಯಕ್ಕಾಗಿ ಬಫರ್ ವಲಯದಲ್ಲೂ ಗಣಿಗಾರಿಕೆಗೆ ಅನುಮತಿ ನೀಡಿರುವುದು ಭವಿಷ್ಯದಲ್ಲಿ ಪ್ರಕೃತಿಯ ಅಸಮತೋಲನಕ್ಕೆ ಕಾರಣವಾಗಲಿದೆ ಎಂದು ತಜ್ಞರು ಹೇಳುತ್ತಾರೆ.
ಕಾಯ್ದಿಟ್ಟ ಅರಣ್ಯದ 100 ಮೀ. ಅಂತರದಲ್ಲಿ ಗಣಿಗಾರಿಕೆಗೆ ಅವಕಾಶ ಇರಲಿಲ್ಲ. ಈಗ ಬಫರ್ ವಲಯದಲ್ಲೇ ಕಲ್ಲು ಗಣಿಗಾರಿಕೆಗಡ ಅನುಮತಿ ನೀಡಿರುವುದು ಅರಣ್ಯ ನಾಶಕ್ಕೆಕಾರಣವಾಗಲಿದೆ. ತಾವರೆಕೆರೆ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ರಾಜಕಾರಣಿಗಳದ್ದೇ ಸಾಕಷ್ಟು ಕ್ರಷರ್ ಗಳಿವೆ. ಬಸವನತಾರದಿಂದ ಹೆಜ್ಜಾಲದವರೆಗೆ ಕ್ರಷರ್ ಮತ್ತು ಕ್ವಾರಿಗಳಿವೆ ಎಂದು ಹೆಸರು ಹೇಳಲು ಇಚ್ಛಿಸದ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಬಿಜೆಪಿ ನಾಯಕ ಚಿಕ್ಕರೇವಣ್ಣ ಸೇರಿ ಹಲವು ರಾಜಕಾರಣಿಗಳು ಹಾಗೂ ಅವರ ಹಿಂಬಾಲಕರ ಕ್ರಷರ್ ಗಳಿವೆ. ಬರಡು ಭೂಮಿಯಲ್ಲಿ ಗಣಿಗಾರಿಕೆ ನಡೆಸದೇ ಅರಣ್ಯದ ಸಮೀಪ ಕ್ರಷರ್ ಗಳಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಹೇಳಿದರು.
ವರ್ಲ್ಡ್ ವೈಲ್ಡ್ ಫಂಡ್ ಫಾರ್ ನೇಚರ್ ಸಂಸ್ಥೆ ಕರ್ನಾಟಕದ ಹಿರಿಯ ಯೋಜನಾಧಿಕಾರಿ ವೈ.ಟಿ.ಲೋಹಿತ್ 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿ, "ಕರ್ನಾಟಕದ ರಾಜ್ಯ ಪ್ರಾಣಿ ಆನೆ. ತಲೆಮಾರುಗಳಿಂದ ಆನೆಗಳು ಒಂದೇ ಪಥವನ್ನು ರೂಢಿಸಿಕೊಂಡಿರುತ್ತವೆ. ಬನ್ನೇರುಘಟ್ಟ, ಮುತ್ತತ್ತಿ, ಸಾವನದುರ್ಗ, ಶಿವಗಂಗೆಯ ಅಂದರಗಿ ಅರಣ್ಯದಿಂದ ತುಮಕೂರು-ಕುಣಿಗಲ್ ಹೆದ್ದಾರಿ ದಾಟಿ ಗುಬ್ಬಿಯ ಮಲ್ಲಸಂದ್ರದಲ್ಲಿ ತುಮಕೂರು ಪ್ರವೇಶಿಸುತ್ತವೆ. ವರ್ಷಕ್ಕೊಮ್ಮೆ ಆನೆಗಳ ಇದೇ ಮಾರ್ಗವಾಗಿ ಬಂದು ಹೋಗಲಿವೆ. ಆದರೆ, ಸಾವನದುರ್ಗ, ತಾವರೆಕೆರೆ ಸುತ್ತಮುತ್ತ ಕಲ್ಲು ಗಣಿಗಾರಿಕೆ ವಿಪರೀತವಾಗಿರುವುದರಿಂದ ಆನೆಗಳು ತಮ್ಮ ಪಥ ಬದಲಿಸಿವೆ. ಕಾಡಿನಲ್ಲಿ ಸಂಚರಿಸುತ್ತಿದ್ದ ಆನೆಗಳು ಈಗ ಗ್ರಾಮಗಳಿಗೆ ಪ್ರವೇಶಿಸಿ ಬೆಳೆಗಳನ್ನು ನಾಶ ಮಾಡುತ್ತಿವೆ" ಎಂದು ಹೇಳಿದರು.
"ಆನೆಗಳ ಪಥ ಬದಲಾದರೂ ಅವುಗಳ ಸಂಖ್ಯೆ ಬದಲಾಗಿಲ್ಲ. ಏಕೆಂದರೆ, ಅರಣ್ಯದಲ್ಲಿ ಆಹಾರಕ್ಕಾಗಿ ಅಲೆದಾಡುವ ಆನೆಗಳು ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ಸಿಗುವ ರೈತರ ಬೆಳೆಗಳನ್ನು ತಿಂದು ಹಾಳು ಮಾಡಲಿವೆ. ಹಾಗಾಗಿ ಬೇರೆ ಮಾರ್ಗ ಹುಡುಕಿಕೊಂಡಿರಬಹುದು. ಆನೆಯು ಅತ್ಯಂತ ಹೆಚ್ಚು ಸೂಕ್ಷ್ಮಗ್ರಹಿ ಪ್ರಾಣಿ. ಭೂಮಿಯ ಒಳಗಿನ ಕಂಪನಗಳು ಕಂಪನಗಳನ್ನು ತನ್ನ ಪಾದದಿಂದಲೇ ತಿಳಿದುಕೊಳ್ಳಲಿವೆ. ಹೀಗಿರುವಾಗ ಬಂಡೆಗಳ ಸ್ಫೋಟದಿಂದ ಆಗುವ ಕಂಪನಗಳಿಂದಾಗಿ ಆನೆಗಳು ಬಸವನತಾರ ಅರಣ್ಯದಿಂದ ಕಾಲ್ಕಿತ್ತಿರಬಹುದು" ಎಂದು ಹೇಳಿದರು.
ಬಂಡೆ ಸ್ಫೋಟ ಹಾಗೂ ಕ್ರಷರ್‌ಗಳ ಸದ್ದಿಗೆ ಅಪರೂಪದ ಪಕ್ಷಿ ಪ್ರಭೇದಗಳೂ ಕೂಡ ಅಳಿವಿನಂಚಿಗೆ ಸಾಗುವ ಅಪಾಯವಿದೆ ಎಂದು ಹೇಳಿದರು.
ಸೂಲಿವಾರ ಗ್ರಾಮದಲ್ಲಿ ಜಾನುವಾರುಗಳು ಚಿತ್ರ: ಆರ್.ಡಿ.ರಘು
ಜಾನುವಾರು, ಜಲಚರಗಳಿಗೂ ಕಂಟಕ
ಕಲ್ಲು ಗಣಿಗಾರಿಕೆಯಿಂದ ಬರುವ ದೂಳು ಮೇವಿನ ಮೇಲೆ ಕುಳಿತುಕೊಳ್ಳಲಿದೆ. ಇಂತಹ ದೂಳು ಮಿಶ್ರಿತ ಮೇವು ಸೇವನೆಯಿಂದ ಜಾನುವಾರುಗಳು ಕೂಡ ಮೃತಪಡುತ್ತಿವೆ.
ಗೊಲ್ಲಹಳ್ಳಿ, ಸೂಲಿವಾರ ಗ್ರಾಮದಲ್ಲಿ ಈ ಸಮಸ್ಯೆಯಿಂದಾಗಿಯೇ ಹಸುಗಳು ಗರ್ಭಧಾರಣೆ ಸಾಮರ್ಥ್ಯ ಕಳೆದುಕೊಂಡಿವೆ. ಹಲವು ರೈತರ ಜಾನುವಾರುಗಳು ಮೃತಪಟ್ಟಿವೆ ಎಂಬುದು ಗೊಲ್ಲಹಳ್ಳಿ ಹಾಗೂ ಸೂಲಿವಾರ ಗ್ರಾಮಸ್ಥರ ಅರೋಪವಾಗಿದೆ.
"ಎಲ್ಲರಿಗೂ ದೂಳಿನಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಬಂಡೆ ಸ್ಫೋಟದ ವೇಳೆ ದೂಳು ಮೋಡದಂತೆ ಬರುತ್ತದೆ. ಬೆಳೆಗಳ ಮೇಲೆ ದೂಳು ಕುಳಿತುಕೊಂಡ ಫಸಲು ಬಿಡುವುದಿಲ್ಲ. ಮೇವಿನ ಮೇಲೂ ಕಲ್ಲಿನ ದೂಳು ವಿಪರೀತವಾಗಿದೆ. ದೂಳು ಮಿಶ್ರಿತ ಮೇವು ಸೇವನೆಯಿಂದ ಜಾನುವಾರುಗಳ ಫಲ ಕಟ್ಟುತ್ತಿಲ್ಲ. ಕುರಿ ಮೇಕೆಗಳು ಸಾವನ್ನಪ್ಪುತ್ತಿವೆ ಎಂದು ಗೊಲ್ಲಹಳ್ಳಿ ಗ್ರಾಮದ ಯುವಕ ದೀಕ್ಷಿತ್ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಚಿಕ್ಕನಹಳ್ಳಿ ಗ್ರಾ.ಪಂ.ಮಾಜಿ ಸದಸ್ಯರೂ ಆಗಿರುವ ಗೊಲ್ಲಹಳ್ಳಿ ನಿವಾಸಿ ಎಸ್. ಶಶಿಕುಮಾರ್ ಮಾತನಾಡಿ, ಚಿರತೆ ಸಾವಿನಿಂದಾಗಿ ಕಲ್ಲು ಗಣಿಗಾರಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ನಮಗೆ ತಿಳಿಯದೆಯೇ ಬೇಕಾದಷ್ಟು ಪ್ರಾಣಿಗಳು ಸತ್ತಿರಬಹುದು. ಜಾನುವಾರುಗಳು ಮೇಯಲು ಹೋಗಿ ಎಂ-ಸ್ಯಾಂಡ್ ತೊಳೆದ ನೀರಿನಲ್ಲೇ ಸಿಲುಕಿ ಸಾವನ್ನಪ್ಪಿವೆ. ಇಲ್ಲಿ ಎಲ್ಲರೂ ಪ್ರಭಾವಿಗಳೇ ಇದ್ದಾರೆ. ಅವರೆಲ್ಲರೂ ಬೇರೆ ನಗರಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಾರೆ, ಮನೆ ಮಂದಿಯೆಲ್ಲಾ ಎಸಿ ಕಾರುಗಳಲ್ಲಿ ಓಡಾಡುತ್ತಾರೆ. ಅವರಿಗೆ ಹಳ್ಳಿಗರ ಕಷ್ಟ ಕಾಣುವುದಿಲ್ಲ. ಬಂಡೆ ಮುಚ್ಚುವವರೆಗೂ ನಮ್ಮ ಜೀವಕ್ಕೆ ಗ್ಯಾರಂಟಿ ಇಲ್ಲ ಎಂದು ಹತಾಶರಾಗಿ ನುಡಿದರು.
ಗ್ರಾಮಗಳಿಗೆ ಮನೆ ಪರಿಹಾರ
ಕಲ್ಲು ಗಣಿಗಾರಿಕೆ ಪೀಡಿತ ಗ್ರಾಮಗಳಾದ ಸೂಲಿವಾರ, ಕುರುಬರಪಾಳ್ಯ ಹಾಗೂ ಎಸ್.ಗೊಲ್ಲಹಳ್ಳಿ ಗ್ರಾಮಕ್ಕೆ ಕ್ರಷರ್ ಮಾಲೀಕರು ವಾರ್ಷಿಕವಾಗಿ ಮನೆ ಪರಿಹಾರ ನೀಡುತ್ತಿದ್ದಾರೆ.
ಸೂಲಿವಾರ ಗ್ರಾಮದ ಪ್ರತಿ ಮನೆಗೆ ವಾರ್ಷಿಕ ಪರಿಹಾರವಾಗಿ 35 ಸಾವಿರ ನೀಡಿದರೆ, ಎಸ್. ಗೊಲ್ಲಹಳ್ಳಿಗೆ 40ಸಾವಿರ ರೂ. ನೀಡುತ್ತಾರೆ ಕುರುಬರಪಾಳ್ಯದಲ್ಲಿ 35 ಸಾವಿರ ನೀಡುತ್ತಿದ್ದಾರೆ. ಕಲ್ಲು ಗಣಿಗಾರಿಕೆಯು ಸೂಲಿವಾರ ಗ್ರಾಮದ ಸರ್ವೇ ನಂಬರ್ಗಳಲ್ಲೇ ನಡೆದರೂ ಎಸ್. ಗೊಲ್ಲಹಳ್ಳಿ ಗ್ರಾಮವು ಹತ್ತಿರವಿರುವ ಕಾರಣ ಹೆಚ್ಚು ಬಾಧಿತವಾಗಿದೆ. ಹಾಗಾಗಿ ಮನೆ ಪರಿಹಾರ ಹೆಚ್ಚು ನೀಡಲಾಗುತ್ತಿದೆ.
ಪ್ರತಿ ವರ್ಷ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಕ್ರಷರ್ ಮಾಲೀಕರು ಪರಿಹಾರದ ಚೆಕ್ಗಳನ್ನು ನೀಡುತ್ತಾರೆ. ಆದರೆ, ಈಗ ಸಮಸ್ಯೆ ಹೆಚ್ಚಿರುವುದರಿಂದ ಗ್ರಾಮಸ್ಥರು ನಮಗೆ ಪರಿಹಾರ ಬೇಡ, ಕಲ್ಲು ಗಣಿಗಾರಿಕೆ ನಿಲ್ಲಿಸಿ ಎಂದು ಆಗ್ರಹಿಸುತ್ತಿದ್ದಾರೆ.
ವಿಪರ್ಯಾಸವೆಂದರೆ ಇಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವ ಎಲ್ ಅಂಡ್ ಟಿ ಕಂಪೆನಿ ಸೇರಿದಂತೆ ಹಲವು ಖಾಸಗಿ ವ್ಯಕ್ತಿಗಳಿಗೆ ಗ್ರಾಮಸ್ಥರೇ ಲಾರಿಗಳನ್ನು ಬಾಡಿಗೆಗೆ ಬಿಟ್ಟಿದ್ದಾರೆ. ಬಾಡಿಗೆ, ಪರಿಹಾರ ರೂಪವಾಗಿ ಸಾಕಷ್ಟು ಹಣ ಬಂದರೂ ಕಲ್ಲುಗಣಿಗಾರಿಕೆಯ ಸಹವಾಸವೇ ಬೇಡ ಎನ್ನುತ್ತಾರೆ ಗೃಹಿಣಿ ಶೋಭಾ.
ಒಟ್ಟಾರೆ, ಕಲ್ಲು ಗಣಿಗಾರಿಕೆಯಿಂದ ಪ್ರಾಣಿಗಳಷ್ಟೇ,ಮನುಷ್ಯರೂ ಕೂಡ ಸಮಸ್ಯೆಗಳ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದಾರೆ.

