
Ground Report Part-1|ಬ್ಯಾಲಾಳು ಇಸ್ರೋ ಕೇಂದ್ರಕ್ಕೆ 'ಅಕ್ರಮ' ಗಣಿಗಾರಿಕೆ ಕಂಟಕ!
ಇಸ್ರೋದ ಬ್ಯಾಲಾಳು ಕೇಂದ್ರದಲ್ಲಿ ರಿಮೋಟ್ ಸೆನ್ಸಿಂಗ್ ಹಾಗೂ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ನಡೆಯುತ್ತಿದೆ. ಅಲ್ಲದೇ ಉಪಗ್ರಹಗಳ ಕಾರ್ಯಾಚರಣೆ ನಿಯಂತ್ರಿಸುವ ಬೃಹತ್ ಅಂಟೆನಾಗಳನ್ನು ಹೊಂದಿದೆ.
ಚಂದ್ರಯಾನ-3 ಯೋಜನೆ ಹಾಗೂ ಭಾರತ-ಪಾಕಿಸ್ತಾನ ನಡುವಿನ ಸೇನಾ ಕಾರ್ಯಾಚರಣೆಯಲ್ಲಿ (ಆಪರೇಷನ್ ಸಿಂಧೂರ್) ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಇಸ್ರೋದ "ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್” (ಐಡಿಎಸ್‌ಎನ್) ಇದೀಗ ಕಲ್ಲು ಗಣಿಗಾರಿಕೆಯಿಂದ ಅಪಾಯ ಎದುರಿಸುತ್ತಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಬ್ಯಾಲಾಳು ಗ್ರಾಮದಲ್ಲಿರುವ ಈ ಡೀಪ್ ಸ್ಪೇಸ್ ನೆಟ್‌ವರ್ಕ್ ಕೇಂದ್ರದಿಂದ ಒಂದೇ ಕಿ.ಮೀ. ಅಂತರದಲ್ಲಿ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಸೂಲಿವಾರ ಸರ್ವೇ ನಂ.59 ಹಾಗೂ 60 ರಲ್ಲಿ ಒಟ್ಟು 24 ಕ್ರಷರ್‌ಗಳು 220 ಎಕರೆ ವಿಸ್ತೀರ್ಣದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಬಂಡೆಗಳ ಸ್ಫೋಟದಿಂದ ಈ ಭಾಗದಲ್ಲಿ ನಿತ್ಯ ಕಂಪನದ ಅನುಭವವಾಗುತ್ತಿದೆ.
2025 ಏಪ್ರಿಲ್ ತಿಂಗಳಲ್ಲಿ ನಡೆದ ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂಧೂರ್ ಹೆಸರಿನ ಸೇನಾ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆ ವಿಮಾನಗಳು ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದ್ದವು. ಈ ಉಗ್ರರ ನೆಲೆಗಳನ್ನು ಇಸ್ರೋ ತನ್ನ ಉಪಗ್ರಹದ ಮೂಲಕ ನಿಖರವಾಗಿ ಪತ್ತೆ ಮಾಡಿ, ಸೇನೆಗೆ ರವಾನಿಸಿತ್ತು. ಬ್ಯಾಲಾಳು ಕೇಂದ್ರದಿಂದಲೇ ಉಗ್ರರ ನೆಲೆಗಳನ್ನು ಗುರುತಿಸಿ, ಉಗ್ರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿರಿಸಿತ್ತು.
ಇಸ್ರೋದ ಕನಿಷ್ಠ 10 ಉಪಗ್ರಹಗಳು ದಿನದ 24 ಗಂಟೆಯೂ ಭಾರತದ 7,000 ಕಿ.ಮೀ ಕರಾವಳಿ ಮತ್ತು ಗಡಿಗಳ ಮೇಲೆ ತೀವ್ರ ನಿಗಾ ಇರಿಸಿದ್ದವು. ಕಾರ್ಟೋಸ್ಯಾಟ್ ಮತ್ತು ರಿಸ್ಯಾಟ್ ಸರಣಿಯ ಉಪಗ್ರಹಗಳು ಶತ್ರುಗಳ ಚಲನವಲನಗಳ ಮತ್ತು ಭಯೋತ್ಪಾದಕರ ಅಡಗುತಾಣ ಗುರುತಿಸಲು ಅತ್ಯಂತ ನಿಖರವಾದ ಚಿತ್ರಗಳನ್ನು ಭಾರತೀಯ ಸೇನೆಗೆ ಒದಗಿಸಿದ್ದವು. ಇಂತಹ ಬಹುಮುಖ್ಯ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಬ್ಯಾಲಾಳು ಕೇಂದ್ರದ ಸಮೀಪವೇ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದರೂ ನಿಯಂತ್ರಣ ಸಾಧ್ಯವಾಗಿಲ್ಲ.
ಬ್ಯಾಲಾಳು ಕೇಂದ್ರದ ಸಮೀಪ 2010 ರಲ್ಲಿ ಇಬ್ಬರು ಅಪರಿಚಿತರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಸಿಐಎಸ್‌ಎಫ್ ಸಿಬ್ಬಂದಿ ಪ್ರಶ್ನಿಸಿದಾಗ ಅಪರಿಚಿತರು ತಪ್ಪಿಸಿಕೊಂಡಿದ್ದರು. ಪೊಲೀಸರು ತನಿಖೆ ನಡೆಸಿದರೂ ಯಾರೆಂಬುದು ಈವರೆಗೂ ಪತ್ತೆಯಾಗಿಲ್ಲ. ತಾವರೆಕೆರೆ ಹೋಬಳಿಯಲ್ಲಿರುವ ಕ್ರಷರ್‌ಗಳಲ್ಲಿ ಬೇರೆ ಬೇರೆ ರಾಜ್ಯದ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಕೆಲ ಅಕ್ರಮ ಬಾಂಗ್ಲಾ ನಿವಾಸಿಗಳು ಕೂಡ ಇರುವ ಮಾಹಿತಿ ಇದೆ. ವಿಪರ್ಯಾಸ ಎಂದರೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಮಾಹಿತಿ ಸಂಬಂಧಪಟ್ಟ ಇಲಾಖೆಯ ಬಳಿ ಇಲ್ಲ. ಇದು ಕೂಡ ಇಸ್ರೋ ಸಂಶೋಧನಾ ಸಂಸ್ಥೆಗೆ ಆತಂಕ ತಂದೊಡ್ಡಿದೆ.
ಬ್ಯಾಲಾಳುವಿನ ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್‌ನಲ್ಲಿ ರಿಮೋಟ್ ಸೆನ್ಸಿಂಗ್ ಹಾಗೂ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳು ಸಾಕಷ್ಟು ನಡೆಯುತ್ತಿವೆ. ಆಳ ಅಂತರಿಕ್ಷದಲ್ಲಿ ಉಪಗ್ರಹಗಳಿಂದ ದತ್ತಾಂಶ ಸ್ವೀಕರಿಸಿ, ವಿಶ್ಲೇಷಣೆ ನಡೆಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಆದರೆ, ಈಗ ಬಂಡೆಗಳ ಸ್ಫೋಟದಿಂದ ಸಂಶೋಧನೆಗೆ ತೊಡಕಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಸೂಲಿವಾರ ಸಮೀಪವೇ ಬಂಡೆಗಳ ಸ್ಫೋಟ ನಡೆಯುತ್ತಿದ್ದು, ಭೂಮಿ ಕಂಪಿಸುತ್ತಿದೆ. ಶಬ್ದ ಮಾಲಿನ್ಯ ಹಾಗೂ ದೂಳಿನಿಂದಲೂ ಸಂಶೋಧನೆಗೆ ಅಡ್ಡಿಯಾಗಿದೆ. ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್‌ನಲ್ಲಿ ಸಂವೇದನಶೀಲ ಉಪಕರಣಗಳ ಮೇಲೆ ವಿಪರೀತ ದೂಳು ಕುಳಿತುಕೊಳ್ಳುವುದರಿಂದ ತರಂಗಾಂತರದ ಸಮಸ್ಯೆ ಆಗಲಿದೆ ಎನ್ನಲಾಗಿದೆ.
ಕಲ್ಲು ಗಣಿಗಾರಿಕೆಯಲ್ಲಿ ಡೈನಾಮೇಟ್, ಜಿಲೆಟಿನ್ ಸ್ಫೋಟಕಗಳ ಬಳಕೆಯಿಂದ ಪ್ರಯೋಗಾಲಯದ ಕಟ್ಟಡಗಳಿಗೆ ಹಾನಿಯಾಗುವ ಆತಂಕವಿದೆ. ಈಗಾಗಲೇ ಸೂಲಿವಾರ, ಗೊಲ್ಲಹಳ್ಳಿ ಗ್ರಾಮಗಳಲ್ಲಿ ಬಂಡೆಗಳ ಸ್ಫೋಟದಿಂದ ಮನೆಗಳು ಬಿರುಕು ಬಿಟ್ಟಿವೆ. ಹಾಗಾಗಿ ಇಲ್ಲಿಯೂ ಆತಂಕ ಕಾಡುತ್ತಿದೆ.
"ಬ್ಯಾಲಾಳು ಕೇಂದ್ರದಲ್ಲಿರುವ ಆಂಟೆನಾಗಳು ಸೂಕ್ಷ್ಮವಾದ ಆಂಪ್ಲಿಫೈಯರ್ ಹೊಂದಿರುತ್ತವೆ. ಬಂಡೆ ಸ್ಫೋಟದಿಂದ ಭೂಮಿಯಲ್ಲಾಗುವ ಕಂಪನಗಳು ಆಂಟೇನಾಗೆ ವರ್ಗಾವಣೆಯಾಗಲಿವೆ. ಸೂಕ್ಷ್ಮ ತರಂಗಗಳನ್ನು ಸ್ವೀಕರಿಸುವಾಗ ಅಡಚನೆಯಾಗುವ ಸಾಧ್ಯತೆಗಳಿವೆ" ಎಂದು ಹೆಸರು ಹೇಳಲು ಇಚ್ಛಿಸದ ಇಸ್ರೋ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಆಳ ಅಂತರಿಕ್ಷದಲ್ಲಿರುವ ಉಪಗ್ರಹಗಳನ್ನು ಟ್ರ್ಯಾಕ್ ಮಾಡುವಾಗ ಸರಿಯಾದ ಮಾಹಿತಿ ಸ್ವೀಕರಿಸುವುದು ಅಸಾಧ್ಯವಾಗಲಿದೆ. ಉದಾಹರಣೆಗೆ ಒಂದು ಉಪಗ್ರಹವು 1 ಲಕ್ಷ ಕಿ.ಮೀ. ದೂರದಲ್ಲಿರುತ್ತದೆ. ನಿಯಂತ್ರಣ ಕೇಂದ್ರದಲ್ಲಿ ಭೂಮಿಯ ಕಂಪನದಿಂದ ಆ ಉಪಗ್ರಹದ ದೂರ 75 ಸಾವಿರ ಕಿ.ಮೀ. ಎಂದು ತೋರಿಸುವ ಸಾಧ್ಯತೆಗಳಿರುತ್ತವೆ. ಹೀಗಾದಾಗ ಉಪಗ್ರಹದ ಪರಿಚಲನೆಯ (Navigation) ದತ್ತಾಂಶವೇ ಅದಲು ಬದಲಾಗಲಿದೆ ಎಂದು ವಿವರಿಸಿದರು.
ಬ್ಯಾಲಾಳು ಕೇಂದ್ರದಲ್ಲಿ ಉಪಗ್ರಹ ಕಳುಹಿಸುವ ತರಂಗಗಳನ್ನು ಸ್ವೀಕರಿಸಿ, ಪೀಣ್ಯದ ಟೆಲಿಮೆಟ್ರಿ, ಟ್ಯಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ ಕೇಂದ್ರದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗುವುದು. ಪೀಣ್ಯದಲ್ಲಿ ಬೃಹತ್ ಆಂಟೆನಾ ನಿರ್ಮಿಸಲು ಸೂಕ್ತ ಸ್ಥಳವಿಲ್ಲ. ಬ್ಯಾಲಾಳುವಿನಲ್ಲಿ ವಿಶಾಲ ಕ್ಯಾಂಪಸ್ ಇದೆ. ಗಟ್ಟಿಯಾದ ಅಡಿಪಾಯವಿದ್ದಲ್ಲಿ ಗುಣಮಟ್ಟದ ತರಂಗಗಳನ್ನು ಸ್ವೀಕರಿಸಬಹುದಾಗಿದೆ. ಆದರೆ, ಕಂಪನಗಳಾದರೆ ಸರಿಯಾದ ದತ್ತಾಂಶಗಳ ವಿಶ್ಲೇಷಣೆ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಸರ್ಕಾರದ ನಿರ್ಲಕ್ಷ್ಯ ಆರೋಪ
ದೇಶದ ಬಾಹ್ಯಾಕಾಶ ಸಂಶೋಧನೆಯಲ್ಲಿ ಇಸ್ರೋ ಮಹತ್ವ ಪಾತ್ರ ನಿರ್ವಹಿಸುತ್ತಿದೆ. ಇಂತಹ ಸೂಕ್ಷ್ಮ ಪ್ರದೇಶದ ಸಮೀಪವೇ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿರುವುದು ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಕೂಡಲೇ ಸರ್ಕಾರ, ಕಲ್ಲು ಗಣಿಗಾರಿಕೆಗೆ ನಿಯಂತ್ರಣ ಹೇರಬೇಕು. ಇಸ್ರೋ ಕೇಂದ್ರದ ಸುತ್ತಲಿನ ಪ್ರದೇಶವನ್ನು ಸುರಕ್ಷಿತ ವಲಯ ಎಂದು ಘೋಷಿಸಬೇಕು ಎಂದು ಹೆಸರೇಳಲು ಇಚ್ಛಿಸದ ಸೂಲಿವಾರ ಗ್ರಾಮದ ವ್ಯಕ್ತಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬ್ಯಾಲಾಳು ಕೇಂದ್ರದಲ್ಲಿ 18x32 ಮೀಟರ್ ಸುತ್ತಳತೆಯ ಬೃಹತ್ ಆಂಟೆನಾಗಳಿವೆ. ಬಂಡೆ ಸ್ಫೋಟದಿಂದ ಆಂಟೆನಾಗಳಿಗೆ ಧಕ್ಕೆಯಾಗುವ ಭೀತಿ ಎದುರಾಗಿದೆ. ಬಂಡೆಗಳ ಸ್ಫೋಟದಿಂದ ವಿಜ್ಞಾನಿಗಳು ಕಾರ್ಯನಿರ್ವಹಿಸಲು ಕಷ್ಟಪಡುವಂತಾಗಿದೆ.
ಸೂಲಿವಾರದಲ್ಲಿ ಕಲ್ಲು ಬಂಡೆ ಸ್ಫೋಟದಿಂದ ಮನೆಗಳ ಚಾವಣಿ ಹಾಗೂ ಕಿಟಕಿ ಒಡೆದಿರುವುದು
ಅಕ್ರಮ ಕಲ್ಲು ಗಣಿಗಾರಿಕೆ ಕುರಿತು ಇಸ್ರೋದಿಂದ ಯಾವುದೇ ದೂರುಗಳು ಬಂದಿಲ್ಲ. ಅಕ್ರಮಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಗಾ ವಹಿಸಿದೆ ಎಂದು ತಾವರೆಕೆರೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮೋಹನ್‌ಕುಮಾರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಇಸ್ರೋ ಕೇಂದ್ರದ ಸುತ್ತಲಿನ ನಿರ್ದಿಷ್ಟ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು. ಇಲ್ಲವೇ ನಿಯಂತ್ರಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.
ಆಗಸ್ಟ್ 2023 ರಲ್ಲಿ ಚಂದ್ರಯಾನ ಯೋಜನೆಯಡಿ ನಭಕ್ಕೆ ಚುಮ್ಮಿದ ಉಪಗ್ರಹವು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಇಳಿಸಿತ್ತು. ಅದರಿಂದ ಹೊರಬಂದಿದ್ದ ಪ್ರಜ್ಞಾನ್ ರೋವರ್ ಸುಮಾರು 14 ದಿನಗಳ ಕಾಲ ಕಾರ್ಯನಿರ್ವಹಿಸಿ ಮಣ್ಣು ಮತ್ತು ಬಂಡೆಗಳ ಅಧ್ಯಯನ ಮಾಡಿತ್ತು. ಗಂಧಕ ಸೇರಿದಂತೆ ಹಲವು ಖನಿಜಗಳನ್ನು ಪತ್ತೆ ಮಾಡಿತ್ತು.
ಚಂದ್ರನಲ್ಲಿ ರಾತ್ರಿ ಪ್ರಾರಂಭವಾದಾಗ ತೀವ್ರ ಶೀತ ಮತ್ತು ಸೂರ್ಯನ ಬೆಳಕಿನ ಕೊರತೆಯಿಂದಾಗಿ ರೋವರ್ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಇಸ್ರೋ ವಿಜ್ಞಾನಿಗಳು 'ಪ್ರಜ್ಞಾನ್' ಮರಳಿ ಸಕ್ರಿಯಗೊಳಿಸಲು ಪ್ರಯತ್ನಿಸಿದರೂ, ಅದು ಯಶಸ್ವಿಯಾಗಿರಲಿಲ್ಲ. ಪ್ರಜ್ಞಾನ್ ರೋವರ್ ಯಂತ್ರ ನೀಡುವ ದತ್ತಾಂಶಗಳನ್ನು ಇದೇ ಬ್ಯಾಲಾಳು ಕೇಂದ್ರದಿಂದ ಸ್ವೀಕರಿಸಲಾಗುತ್ತಿತ್ತು ಎಂಬುದು ವಿಶೇಷ.
2008 ರಲ್ಲಿ ಬ್ಯಾಲಾಳು ಕೇಂದ್ರ ಆರಂಭ
ಬೆಂಗಳೂರಿನಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ತಾವರೆಕೆರೆ ಸಮೀಪದ ಬ್ಯಾಲಾಳು ಗ್ರಾಮದಲ್ಲಿ 2008 ರಲ್ಲಿ 120 ಎಕರೆ ಪ್ರದೇಶದಲ್ಲಿ ʼಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್ʼ ಕೇಂದ್ರ ಸ್ಥಾಪಿಸಲಾಯಿತು. ಅಮೆರಿಕ, ಆಸ್ಪ್ರೇಲಿಯಾ, ಸ್ಪೇನ್, ಚೀನಾ ಹಾಗೂ ಜಪಾನ್ ಹೊರತುಪಡಿಸಿ ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮಾತ್ರ ಡೀಪ್ ಸ್ಪೇಸ್ ನೆಟ್‌ವರ್ಕ್ ಆಂಟೆನಾ ವ್ಯವಸ್ಥೆ ಇದೆ.
ಬ್ಯಾಲಾಳು ಕೇಂದ್ರದಲ್ಲಿ ಬಾಹ್ಯಾಕಾಶ ಸಂಶೋಧನಾ ಉಪಗ್ರಹಗಳೊಂದಿಗೆ ಸಂಪರ್ಕ ಸಾಧಿಸಿ, ಸಂಶೋಧನೆ ನಡೆಸಲಾಗುತ್ತಿದೆ. ದೇಶದ 21 ಗ್ರೌಂಡ್ ಸ್ಟೇಷನ್ ಗಳನ್ನು ವಿಜ್ಞಾನಿಗಳು ಇಲ್ಲಿಂದಲೇ ಸಂಪರ್ಕಿಸಲಿದ್ದಾರೆ. ಇಸ್ರೋದ ಟೆಲಿಮೆಟ್ರಿ, ಟ್ಯಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ (ಐಎಸ್ ಟಿಆರ್‌ಎಸಿ) ಕಾರ್ಯಾಚರಣೆಗಾಗಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪ್ರತ್ಯೇಕ ಕೇಂದ್ರ ಸ್ಥಾಪಿಸಿದೆ.
ವಿಜ್ಞಾನಿಗಳು ಬಾಹ್ಯಾಕಾಶ ನೌಕೆಗಳಿಗೆ ಅಗತ್ಯ ಸಂದೇಶ ರವಾನಿಸಬೇಕಾದರೆ ಬ್ಯಾಲಾಳು ಕೇಂದ್ರದ ಆಂಟೆನಾ ಪ್ರದೇಶವನ್ನೇ ಅವಲಂಬಿಸಿದೆ. ತರಂಗಗಳ ರವಾನೆ, ಸಂವಹನ ಮಾತ್ರವಲ್ಲದೇ 'ಭಾರತೀಯ ಆಂತರಿಕ್ಷ ದತ್ತಾಂಶ ಕೇಂದ್ರವೂ (ಇಂಡಿಯನ್ ಸ್ಪೇಸ್ ಸೈಸ್ಸ್ ಡೇಟಾ ಸೆಂಟರ್) ಇಲ್ಲಿ ಕಾರ್ಯನಿರ್ವಹಿಸುತ್ತಿದೆ.
2010 ರಲ್ಲಿ ಗುಂಡಿನ ದಾಳಿ ನಡೆದಿತ್ತು!
2010 ಮಾ.16 ರಂದು ಬೆಳಗಿನ ಜಾವ 3.20 ರಿಂದ 4 ಗಂಟೆಯ ನಡುವೆ ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್ ಕೇಂದ್ರದ ಮುಖ್ಯ ದ್ವಾರದ ಹೊರಗೆ ಇಬ್ಬರು ಅಪರಿಚಿತರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಆಗ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಪ್ರಶ್ನಿಸಿದಾಗ, ಅಪರಿಚಿತರು ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದರು. ಇದಕ್ಕೆ ಪ್ರತಿಯಾಗಿ ಸಿಐಎಸ್‌ಎಫ್ ಸಿಬ್ಬಂದಿ ಎಂಟು ಸುತ್ತು ಗುಂಡು ಹಾರಿಸಿದ್ದರು. ಅಪರಿಚಿತರು ಕತ್ತಲಲ್ಲಿ ಪರಾರಿಯಾಗಿದ್ದರು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿರಲಿಲ್ಲ. ತನಿಖೆ ನಡೆಸಿದ ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲನೆ ನಡೆಸಿದ್ದರು.
ಅಂದಿನ ಕೇಂದ್ರ ಗೃಹ ಸಚಿವರಾಗಿದ್ದ ಪಿ.ಚಿದಂಬರಂ ಅವರು ಬ್ಯಾಲಾಳು ಕೇಂದ್ರದ ಸುತ್ತ ಭದ್ರತೆ ಹೆಚ್ಚಿಸಿದ್ದರು. ಆದರೆ, ಯಾವುದೇ ಭಯೋತ್ಪಾದಕ ಕೃತ್ಯವಲ್ಲ ಎಂಬುದನ್ನು ದೃಢಪಡಿಸಿದ್ದರು.

