
ಸೂಲಿವಾರ ಗ್ರಾಮದ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ದೃಶ್ಯ ಚಿತ್ರ: ಆರ್.ಡಿ.ರಘು
Ground Report Part-2| ಕಲ್ಲು ಗಣಿಗಾರಿಕೆಗೆ ನಲುಗಿದ ಗ್ರಾಮಗಳು ; ವೃದ್ಧರು, ಗರ್ಭಿಣಿಯರ ನೆಮ್ಮದಿಗೆ ಕೊಳ್ಳಿಯಿಟ್ಟ ʼಕ್ರಷರ್ʼ
ಕೆಂಗೇರಿ ಬಳಿಯ ಪ್ರವಾಸಿತಾಣವಾದ ದೊಡ್ಡ ಆಲದ ಮರಕ್ಕೂ ಕಲ್ಲು ಗಣಿಗಾರಿಕೆ ಕುತ್ತು ತರುತ್ತಿದೆ. ಬಂಡೆಗಳ ಸ್ಫೋಟದಿಂದ 400 ವರ್ಷದಷ್ಟು ಹಳೆಯ ಮರದ ಅಡಿಪಾಯಕ್ಕೆ ಹಾನಿಯಾಗುವ ಆತಂಕ ಎದುರಾಗಿದೆ.
ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿ ಮೇಲಾಗುತ್ತಿರುವ ನಿರಂತರ ದೌರ್ಜನ್ಯವು ಮಿತಿ ಮೀರುತ್ತಿದೆ. ಬೆಂಗಳೂರು ಸನಿಹದಲ್ಲೇ ಹಸಿರ ವನರಾಶಿಯಲ್ಲಿ ಕಂಗೊಳಿಸುವ ಅರ್ಕಾವತಿಯ ಸೊಬಗು, ಕ್ರಷರ್ ಮಾಫಿಯಾದಿಂದ ಕಳೆಗುಂದಿದೆ.
ಸುಮಾರು 15 ವರ್ಷಗಳಿಂದ ಕಾಡು-ಮೇಡು, ಬೆಟ್ಟಗುಡ್ಡ ಕರಗಿಸಿರುವ ಕಲ್ಲು ಗಣಿಗಾರಿಕೆಯು ಅಕ್ಷರಶಃ ಅನರ್ಥವನ್ನೇ ಸೃಷ್ಟಿಸಿದೆ.
ಸೂಲಿವಾರದಲ್ಲಿ ಗಣಿಗಾರಿಕೆಯ ಕಲ್ಲು ಸಿಡಿದು ಚಿರತೆ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ʼದ ಫೆಡರಲ್ ಕರ್ನಾಟಕʼ ಕಲ್ಲು ಗಣಿಗಾರಿಕೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಕ್ರಷರ್ ಕರಾಳತೆ, ಜನ ಅನುಭವಿಸುತ್ತಿರುವ ಸಮಸ್ಯೆಗಳು ಬೆಚ್ಚು ಬೀಳಿಸುವಂತಿವೆ.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿ ವ್ಯಾಪ್ತಿಯ ಸೂಲಿವಾರ, ಕುರುಬರಪಾಳ್ಯ ಹಾಗೂ ಎಸ್.ಗೊಲ್ಲಹಳ್ಳಿ ಗ್ರಾಮಗಳು ಸೇರಿದಂತೆ ಹೆಜ್ಜಾಲದವರೆಗೆ ಸುಮಾರು 150 ಕ್ಕೂ ಹೆಚ್ಚು ಕ್ರಷರ್‌ಗಳು ಕಾರ್ಯಾಚರಿಸುತ್ತಿವೆ. ಆದರೆ, ಕಲ್ಲು ಗಣಿಗಾರಿಕೆ ಆರ್ಭಟದಲ್ಲಿ ಜನರ ನೆಮ್ಮದಿ ಕಳೆದು ಹೋಗುತ್ತಿದೆ. ಬಂಡೆಗಳ ಸ್ಫೋಟ, ಕ್ರಷರ್ ಚಟುವಟಿಕೆಗಳಿಂದ ಹೆಚ್ಚುತ್ತಿರುವ ದೂಳು, ಜನರ ಆರೋಗ್ಯದ ಮೇಲೂ ಗಂಭೀರ ಸ್ವರೂಪದ ಪರಿಣಾಮ ಬೀರುತ್ತಿದೆ. ಡೈನಾಮೇಟ್ ಸದ್ದಿಗೆ ವನ್ಯಜೀವಿಗಳು ದಿಕ್ಕು ಪಾಲಾಗುತ್ತಿವೆ. ಕೆಲವು ಪ್ರಾಣ ಕಳೆದುಕೊಳ್ಳುತ್ತಿವೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಬಸವನತಾರ ಅರಣ್ಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಲ್ಲು ಸ್ಫೋಟದಿಂದ ಗರ್ಭಿಣಿ ಚಿರತೆ ಮೃತಪಟ್ಟಿತ್ತು. ಹೊಟ್ಟೆಯಲ್ಲಿದ್ದ ಮೂರು ಮರಿಗಳು ಕೂಡ ಸಾವನ್ನಪ್ಪಿದ್ದ ಘಟನೆ ಕಲ್ಲು ಗಣಿಗಾರಿಕೆಯ ಅನಾಹುತಗಳಿಗೆ ಸಾಕ್ಷಿಯಾಗಿದೆ.
ಬಂಡೆ ಸ್ಫೋಟದಿಂದಾಗಿ ಮನೆಯ ಚಾವಣಿಯ ಕೈಪಿಡಿ ಕುಸಿದಿರುವುದು ಚಿತ್ರ: ಆರ್.ಡಿ.ರಘು
ಮನೆಗಳು ಬಿರುಕು
ಕಲ್ಲು ಗಣಿಗಾರಿಕೆಯಲ್ಲಿ ಡೈನಾಮೇಟ್‌ಗಳ ಬಳಕೆಯಿಂದ ಸಮೀಪದ ಗ್ರಾಮಗಳಾದ ಸೂಲಿವಾರ, ಎಸ್.ಗೊಲ್ಲಹಳ್ಳಿ ಹಾಗೂ ಕುರುಬರಪಾಳ್ಯದಲ್ಲಿ ಮನೆಗಳು ಬಿರುಕು ಬಿಡುತ್ತಿವೆ. ಕ್ರಷರ್‌ಗಳ ದೂಳಿನಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಇಳುವರಿ ಕ್ಷೀಣಿಸುತ್ತಿದೆ. ಜಾನುವಾರುಗಳು ಗರ್ಭಧಾರಣೆಯ ಸಾಮರ್ಥ್ಯ ಕಳೆದುಕೊಳ್ಳುತ್ತಿವೆ. ದೂಳು ಆವರಿಸಿದ ಮೇವು ಸೇವಿಸಿ ಕುರಿ-ಮೇಕೆಗಳು ಮೃತಪಡುತ್ತಿವೆ.
ಇನ್ನು ವಿಪರೀತ ದೂಳಿನಿಂದ ಗ್ರಾಮದ ಜನರಲ್ಲಿ ಆಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ.
“ಮನೆ ಹಿಂದೆಯೇ ಗಣಿಗಾರಿಕೆ ನಡೆಯುತ್ತಿರುವುದರಿಂದ ಗಾಳಿ ಕಲುಷಿತವಾಗಿದೆ. ಸ್ಫೋಟದಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಬೆಳೆಗಳು ಹಾಳಾಗುತ್ತಿವೆ. ಮಕ್ಕಳ ಆರೋಗ್ಯ ಹದಗೆಡುತ್ತಿದೆ. ಕ್ರಷರ್ ಮಾಲೀಕರು ಅಲ್ಪಸ್ವಲ್ಪ ಹಣ ಕೊಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದು ನಮ್ಮ ಜೀವನಕ್ಕೆ ಸಂಬಂಧಿಸಿದ ಸಮಸ್ಯೆ. ಇದನ್ನು ಮುಂದುವರಿಸುವುದು ಒಳ್ಳೆಯದಲ್ಲ. ಕಲ್ಲು ಗಣಿಗಾರಿಕೆ ನಿಲ್ಲಿಸಬೇಕು ಎಂಬುದು ನನ್ನ ಆಶಯ” ಎಂದು ಗೊಲ್ಲಹಳ್ಳಿಯ ನಿವಾಸಿ ಭವ್ಯ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
“ಕ್ರಷರ್ ನವರು ಕೊಡುವ ಪರಿಹಾರದಿಂದ ಯಾವ ಲಾಭವೂ ಇಲ್ಲ. ಟಿಪ್ಪರ್ ಲಾರಿಗಳು ಸಂಚರಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಗಳು ಗುಂಡಿ ಬಿದ್ದಿವೆ. ಊರಿನ ಎಲ್ಲರೂ ಒಗ್ಗಟ್ಟಾಗುವುದರಿಂದ ಇದನ್ನು ನಿಲ್ಲಿಸಬಹುದು” ಎಂದು ಅಭಿಪ್ರಾಯಪಟ್ಟರು.
ಕ್ರಷರ್ ಗಳ ದೂಳು ಜನರ ಬದುಕನ್ನೇ ಕಸಿದುಕೊಂಡಿದೆ. ಇತ್ತೀಚೆಗೆ ನಮ್ಮ ತಾಯಿಯವರಿಗೆ ದೂಳಿನಿಂದ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿತ್ತು. ಆಸ್ಪತ್ರೆಯಲ್ಲಿ ಒಂದೂವರೆ ಲಕ್ಷ ಖರ್ಚು ಮಾಡಿ ಗುಣಪಡಿಸಿಕೊಂಡು ಬಂದಿದ್ದೇವೆ. ಕ್ರಷರ್ ಗಳು ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿದ್ದರೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಪರೂಪಕ್ಕೊಮ್ಮೆ ಬಂದು ಪರಿಶೀಲಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಕ್ರಷರ್ ಮಾಲೀಕರು ವ್ಯಾಕ್ಯೂಮ್ ಯಂತ್ರಗಳನ್ನು ಬಳಸಿ ದೂಳು ನಿಯಂತ್ರಿಸುತ್ತಾರೆ. ಆಗ ಅಧಿಕಾರಿಗಳು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ವಾಪಸಾಗುತ್ತಾರೆ ಎಂದು ಗೊಲ್ಲಹಳ್ಳಿ ಗ್ರಾಮದ ಶಶಿಕುಮಾರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಗ್ರಾಮದಲ್ಲಿ ದೂಳಿನಿಂದ ಒಂದು ರೀತಿಯ ಸಮಸ್ಯೆಯಾದರೆ, ಬಂಡೆ ಸ್ಫೋಟದ ಸದ್ದಿನಿಂದ ವೃದ್ಧರು, ಗರ್ಭಿಣಿಯರು ಹಾಗೂ ಹೃದಯ ಸಂಬಂಧಿ ಸಮಸ್ಯೆ ಇರುವವರೂ ಕೂಡ ಆತಂಕದಲ್ಲೇ ಬದುಕುತಿದ್ದಾರೆ. ಸೂಲಿವಾರ, ಕುರುಬರ ಪಾಳ್ಯ ಹಾಗೂ ಗೊಲ್ಲಹಳ್ಳಿ ಗ್ರಾಮದಲ್ಲಿ ದೂಳಿನಿಂದ ಹಲವರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಇವರು ನಿತ್ಯ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಸೂಲಿಕೆರೆಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ದೃಶ್ಯ ಚಿತ್ರ: ಆರ್.ಡಿ.ರಘು
ಜಲಾಶಯಕ್ಕೆ ಹಾನಿ ಸಾಧ್ಯತೆ
ಸೂಲಿವಾರ, ಎಸ್.ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಹಿಂಭಾಗದಲ್ಲೇ ಮಂಚನಬೆಲೆ ಜಲಾಶಯವಿದೆ. ರಾಮನಗರ ಹಾಗೂ ಮಾಗಡಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಈ ಜಲಾಶಯಕ್ಕೆ ಕ್ರಷರ್‌ಗಳಿಂದ ಹೊರಬರುವ ಅಪಾರ ಪ್ರಮಾಣದ ದೂಳು ಹಾಗೂ ಎಂ-ಸ್ಯಾಂಡ್ ತೊಳೆಯುವ ನೀರು ಸೇರುತ್ತಿದೆ. ಕ್ವಾರಿಗಳಲ್ಲಿ ಬಂಡೆಗಳ ಸ್ಫೋಟದಿಂದ ಜಲಾಶಯದ ಗೋಡೆಗೂ ಅಪಾಯ ಎದುರಾಗುವ ಆತಂಕ ಕಾಡುತ್ತಿದೆ.
ಕ್ರಷರ್‌ಗಳಿಂದ ಜಲಾಶಯದಲ್ಲಿ ಹೂಳು ಹೆಚ್ಚುತ್ತಿದೆ. ನೀರಿನ ಸಂಗ್ರಹಣಾ ಸಾಮರ್ಥ್ಯ ಕುಸಿಯುತ್ತಿದೆ. ಅಲ್ಲದೇ ಬಂಡೆಗಳ ಸ್ಫೋಟದಿಂದ ಅರ್ಕಾವತಿ ನದಿ ಪಾತ್ರದ ನೀರಿನ ನೈಸರ್ಗಿಕ ಹರಿವು ಸಹ ಬದಲಾಗುತ್ತಿದೆ. ವನ್ಯಜೀವಿಗಳ ಆವಾಸಸ್ಥಾನದ ಮೇಲೂ ಕಲ್ಲು ಗಣಿಗಾರಿಕೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮೂರು ವರ್ಷಗಳ ಹಿಂದೆ ಜಲಾಶಯದ ಮುಂದಿನ ಸೇತುವೆ ಒಂದೇ ಮಳೆಗೆ ಕುಸಿದು ಬಿದ್ದಿತ್ತು. ಬಂಡೆಗಳ ಸ್ಫೋಟದಿಂದಲೇ ಸೇತುವೆ ಸಾಮರ್ಥ್ಯ ಕಳೆದುಕೊಂಡಿತ್ತು ಎಂಬ ಆರೋಪಗಳು ಕೇಳಿಬಂದಿವೆ.
"10 ವರ್ಷದ ಹಿಂದೆ 300 ಅಡಿಗೆ ನೀರು ಸಿಗುತ್ತಿತ್ತು. ಈಗ ಬಂಡೆ ಸ್ಪೋಟದಿಂದಾಗಿ ಅಂತರ್ಜಲ 1400 ಅಡಿಗೆ ಇಳಿದಿದೆ. ನೀರು ಆಳಕ್ಕೆ ಇಳಿದಿರುವುದರಿಂದ ಕೊಳವೆ ಬಾವಿ ಕೊರೆಸಿದರೂ ಪ್ರಯೋಜನವಾಗುತ್ತಿಲ್ಲ. ಬೋರ್ವೆಲ್ ಕೊರೆಸಲು ಲಕ್ಷಾಂತರ ರೂ. ಖರ್ಚಾಗುತ್ತದೆ. ಇಲ್ಲಿನ ಬಸವನತಾರ ಅರಣ್ಯ ಪ್ರದೇಶವು ಸಾವನದುರ್ಗಕ್ಕೆ ಸಂಪರ್ಕ ಹೊಂದಿದೆ. ಮಂಚನಬೆಲೆ ಜಲಾಶಯದ ನೀರು ಸಹ ಕಲುಷಿತ ವಾಗಿದೆ" ಎಂದು ಗೊಲ್ಲಹಳ್ಳಿ ಗ್ರಾಮದ ಪುಟ್ಟ ಹೊನ್ನಯ್ಯ ʼದ ಫೆಡರಲ್ ಕರ್ನಾಟಕʼಕ್ಕೆ ಹೇಳಿದರು.
ಮಂಚನಬೆಲೆ ಜಲಾಶಯದ ದೃಶ್ಯ ಚಿತ್ರ: ಆರ್.ಡಿ.ರಘು
ಅರಣ್ಯ ಪ್ರದೇಶಕ್ಕೂ ಕುತ್ತು
ರಾಮನಗರ ಜಿಲ್ಲೆಯ ಸಾವನದುರ್ಗ ಅರಣ್ಯಕ್ಕೆ ಸಂಪರ್ಕ ಕಲ್ಪಿಸುವ ಇಲ್ಲಿನ ಬಸವನತಾರ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ಸಾಗಿದ್ದು, ಆನೆ ಕಾರಿಡಾರ್‌ಗೂ ಧಕ್ಕೆ ತಂದಿದೆ. ಸಾಮಾನ್ಯವಾಗಿ ಆನೆಗಳು ಬನ್ನೇರುಘಟ್ಟದಿಂದ ರಾಮನಗರದ ಸಾವನದುರ್ಗ, ಅಲ್ಲಿಂದ ತುಮಕೂರಿಗೆ ಮೇವು ಮತ್ತು ನೀರಿನ ಅರಸಿ ವಲಸೆ ಹೋಗುತ್ತವೆ. ಆ ಬಳಿಕ ಸಾಗಿದ ಮಾರ್ಗದಲ್ಲೇ ವಾಪಸಾಗುತ್ತವೆ. ಆದರೆ, ಬಂಡೆಗಳ ಸ್ಫೋಟದಿಂದಾಗಿ ಆನೆಗಳು ಇತ್ತೀಚೆಗೆ ಪಥ ಬದಲಿಸಿವೆ.
ಗೊಲ್ಲಹಳ್ಳಿ ಗ್ರಾಮದ ನಿವಾಸಿ ಮಾರೇಗೌಡ ಮಾತನಾಡಿ, ಮಂಚನಬೆಲೆ, ಬಸವನತಾರ ಅರಣ್ಯದಲ್ಲಿ ಆನೆಗಳ ಸಂಚಾರವಿತ್ತು. ಈಗ ಸುಮಾರು ಎಂಟರಿಂದ ಹತ್ತು ವರ್ಷಗಳಿಂದ ಆನೆಗಳ ಸುಳಿವೇ ಇಲ್ಲ ಎಂದು ಹೇಳಿದರು.
ಕೆಂಗೇರಿ ಬಳಿಯ ಪ್ರವಾಸಿತಾಣವಾದ ದೊಡ್ಡ ಆಲದ ಮರಕ್ಕೂ ಕಲ್ಲು ಗಣಿಗಾರಿಕೆ ಕುತ್ತು ತರುತ್ತಿದೆ. ಬಂಡೆಗಳ ಸ್ಫೋಟದಿಂದ 400 ವರ್ಷದಷ್ಟು ಹಳೆಯ ಮರದ ಅಡಿಪಾಯಕ್ಕೆ ಹಾನಿಯಾಗುವ ಆತಂಕ ಎದುರಾಗಿದೆ. ಕ್ರಷರ್‌ಗಳ ದೂಳು ಎಲೆಗಳ ಮೇಲೆ ಕುಳಿತುಕೊಳ್ಳುವುದರಿಂದ ಪತ್ರ ಹರಿತ್ತು ಸಾಧ್ಯವಾಗದೇ, ಮರದ ಬೆಳವಣಿಗೆ ಕುಂಠಿತವಾಗಲಿದೆ.
ದೊಡ್ಡ ಆಲದ ಮರ ವೀಕ್ಷಣೆಗಾಗಿಯೇ ನಿತ್ಯ ಸಾವಿರಾರು ಜನ ಬರುತ್ತಾರೆ. ಆದರೆ, ರಾಮೋಹಳ್ಳಿ ಪ್ರವೇಶಿಸುತ್ತಿದ್ದಂತೆ ದೂಳು ಆವರಿಸಲಿದೆ. ಟಿಪ್ಪರ್ ಗಳ ಓಡಾಟ, ದೂಳಿನಿಂದಾಗಿ ಇಡೀ ಪ್ರದೇಶವು ಶ್ವೇತವರ್ಣಕ್ಕೆ ತಿರುಗಿದೆ. ಇದರಿಂದ ಪ್ರವಾಸಿಗರ ಸಂಖ್ಯೆಯೂ ಕುಸಿಯುತ್ತಿದೆ.
ಮಂಚನಬೆಲೆ ಜಲಾಶಯದ ಬಳಿ ಹರಿಯುವ ಅರ್ಕಾವತಿ ನದಿ ಚಿತ್ರ: ಆರ್.ಡಿ.ರಘು
ಭೂಮಿ ಕಂಪಿಸಿದ ಅನುಭವ
ಸೂಲಿವಾರ ಬಂಡೆಯಲ್ಲಿ ಕಳೆದ 15 ವರ್ಷಗಳಿಂದ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಈ ಹಿಂದೆ ಅರಣ್ಯದ ಸಮೀಪ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಇದೀಗ ಗ್ರಾಮದ ಕಂದಾಯ ಭೂಮಿಯವರೆಗೂ ವ್ಯಾಪಿಸಿದೆ.
“ಕಳೆದ ತಿಂಗಳು ಇದ್ದಕ್ಕಿದ್ದಂತೆ ಭಾರೀ ಪ್ರಮಾಣದ ಸದ್ದಿನೊಂದಿಗೆ ಮಿಂಚೊಡೆದ ಅನುಭವವಾಯಿತು. ಮನೆಗಳಲ್ಲಿ ಪಾತ್ರೆಗಳು ಅಲುಗಾಡಿದವು. ಭೂಮಿ ಕಂಪಿಸಿದ್ದರಿಂದಲೇ ಇಂತಹ ಅನುಭವ ಆಯಿತು ಎಂದು ಗ್ರಾಮಸ್ಥ ಮಾರೇಗೌಡ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಅಂದು ಬಂಡೆಯನ್ನು ಸ್ಫೋಟಿಸಿರಲಿಲ್ಲ. ಈ ಕುರಿತು ಕ್ರಷರ್ ಕಾರ್ಮಿಕರನ್ನು ವಿಚಾರಿಸಿದರೂ ಬಂಡೆ ಸ್ಫೋಟಿಸಿರಲಿಲ್ಲ ಎಂಬುದು ತಿಳಿದು ಗಾಬರಿಯಾಯಿತು” ಎಂದು ಹೇಳಿದರು.
ಮೂರೂ ಗ್ರಾಮಗಳಲ್ಲಿ ಅಂತರ್ಜಲ 1300 ಅಡಿಗೆ ತಲುಪಿದೆ. ತೆಂಗು, ಅಡಿಕೆ, ಮಾವು ಸೇರಿದಂತೆ ತರಕಾರಿ ಬೆಳೆಗಳು ಇಳುವರಿ ಕೊಡುತ್ತಿಲ್ಲ. ಈ ಬಗ್ಗೆ ಕ್ರಷರ್ ಮಾಲೀಕರಿಗೆ ಹೇಳಿದರೂ ಯಾವುದೇ ಪರಿಹಾರ ನೀಡುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ಪರಿಹಾರ ಬೇಡ, ಗಣಿಗಾರಿಕೆ ನಿಲ್ಲಿಸಿ
ಗೊಲ್ಲಹಳ್ಳಿ ಗ್ರಾಮದ ರೈತ ಮಹಿಳೆ ಶೋಭಾ ಅವರು ದ ಫೆಡರಲ್ ಕರ್ನಾಟಕದ ಜೊತೆ ಮಾತನಾಡಿ, ಕ್ರಷರ್ ಮಾಲೀಕರು ವರ್ಷಕ್ಕೊಮ್ಮೆ ಪ್ರತಿ ಮನೆಗೆ 40 ಸಾವಿರ ರೂ. ಹಣ ನೀಡುತ್ತಾರೆ. ಆದರೆ, ಕಲ್ಲು ಗಣಿಗಾರಿಕೆ ದೂಳಿನಿಂದ ಪರಿಹಾರದ ನಾಲ್ಕೈದು ಪಟ್ಟು ಹಣವನ್ನು ಆಸ್ಪತ್ರೆಗಳಿಗೆ ಖರ್ಚು ಮಾಡಬೇಕಾಗಿದೆ. ನಾವು ಕೂಡ ಕ್ರಷರ್ ಕಂಪೆನಿಗಳಿಗೆ ಲಾರಿಗಳನ್ನು ಬಾಡಿಗೆಗೆ ಬಿಟ್ಟಿದ್ದೇವೆ. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ನಮಗೆ ಪರಿಹಾರವೂ ಬೇಡ, ಲಾರಿಗಳಿಗೆ ಬಾಡಿಗೆಯೂ ಬೇಡ. ಕಲ್ಲುಗಣಿಗಾರಿಕೆ ನಿಲ್ಲಿಸಿದರೆ ಸಾಕು ಎಂದು ಹೇಳಿದರು.
ಇನ್ನು ಬಸವನತಾರ ಅರಣ್ಯದಿಂ ಹೆಜ್ಜಾಲದವರೆಗೆ ಕಾರ್ಯ ನಿರ್ವಹಿಸುತ್ತಿರುವ ಕ್ರಷರ್ ಗಳು ಸರ್ಕಾರಕ್ಕೆ ಪ್ರತಿ ಟನ್ ಕಲ್ಲಿಗೆ 80 ರೂ. ರಾಜಧನ (ರಾಯಲ್ಟಿ) ಪಾವತಿಸುತ್ತವೆ. ತಾವರೆಕೆರೆ ಹೋಬಳಿಯ 150 ಕ್ಕೂ ಹೆಚ್ಚು ಕ್ರಷರ್‌ಗಳು ಸುಮಾರು 412 ಕೋಟಿ ರೂ. ರಾಜಧನ ಬಾಕಿ ಉಳಿಸಿಕೊಂಡಿವೆ. ಇಷ್ಟಾದರೂ ಸರ್ಕಾರವು ಕ್ರಷರ್ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

