
ಡಿಸಿಎಂ ಡಿ.ಕೆ. ಶಿವಕುಮಾರ್
ಜಿಬಿಎ ಚುನಾವಣೆ|‘ಐದೂ ಪಾಲಿಕೆ ನಮ್ಮದೇ’! ಬಿಜೆಪಿ-ಜೆಡಿಎಸ್ ಮೈತ್ರಿಗೆ ಡಿಕೆಶಿ ಓಪನ್ ಚಾಲೆಂಜ್
ಜಿಬಿಎ ಚುನಾವಣೆಯಲ್ಲಿ ಸರ್ಕಾರಕ್ಕೆ ಯಾವುದೇ ಸವಾಲು ಇಲ್ಲ. ಚುನಾವಣೆ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಕಾರ್ಯಕರ್ತರಿಗೆ ಅಧಿಕಾರ ಕೊಡಬೇಕು ಎಂಬುದು ನಮ್ಮ ಉದ್ದೇಶ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಜೂನ್.30 ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಹಾಗೂ ಪ್ರತಿಪಕ್ಷಗಳು ಜಿಬಿಎ ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ. ಇದರ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಐದಕ್ಕೆ ಐದೂ ಪಾಲಿಕೆಗಳು ನಮ್ಮದೇ ಎಂದು ಓಪನ್ ಚಾಲೆಂಜ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ(ಜ.13) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಚುನಾವಣೆ ಮಾಡುತ್ತೇವೆ. ಚುನಾವಣೆಗೆ ಸರ್ಕಾರ ಸಿದ್ಧವಾಗಿದೆ. ಆದರೆ ರಾಜ್ಯ ಚುನಾವಣೆ ಆಯೋಗ ಅಪಿಡವಿಟ್ ಸಲ್ಲಿಸಿದ್ದು, ಸರ್ಕಾರ ಎಲ್ಲಾ ರೀತಿಯಲ್ಲೂ ಆದೇಶ ಕೊಡುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದಂತೆ ನಮಗೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಾಗಬೇಕು. ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಪ್ರಕಾರ ಚುನಾವಣೆಗೆ ಸಿದ್ದತೆ ಮಾಡುತ್ತೇವೆ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕರದ ಐದು ಪಾಲಿಕೆಗಳಿಗೆ ಕರಡು ಮೀಸಲಾತಿ ಪ್ರಕಟಿಸಲಾಗಿದ್ದು, ಕೆಲವರು ಆಕ್ಷೇಪ ಸಲ್ಲಿಸಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಮೀಸಲಾತಿಗಾಗಿಯೇ ಸಮಿತಿ ಇದ್ದು, ಅದು ತೀರ್ಮಾನ ಮಾಡುತ್ತದೆ. ಮೀಸಲಾತಿಯಲ್ಲಿ ವ್ಯತ್ಯಾಸವಾಗಿದ್ದರೆ ಅದನ್ನ ಪತ್ತೆ ಹಚ್ಚಿ ಸರಿಮಾಡಲು ಸಮಿತಿಗೆ ತಿಳಿಸಲಾಗುವುದು. ಈ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ರಾಜ್ಯ ಚುನಾವಣೆ ಆಯೋಗ ಚುನಾವಣೆ ನಡೆಸಲಿದ್ದು ನಾವು ಸಿದ್ದವಿದ್ದೇವೆ ಎಂದು ತಿಳಿಸಿದರು.
ಚುನಾವಣೆ ಹಣಾಹಣಿಯಿರಲಿ
ಜಿಬಿಎ ಚುನಾವಣೆಯಲ್ಲಿ ಸರ್ಕಾರಕ್ಕೆ ಯಾವುದೇ ಸವಾಲು ಇಲ್ಲ. ಚುನಾವಣೆ ಮಾಡೋದು ನಮ್ಮ ಕರ್ತವ್ಯವಾಗಿದ್ದು ಕಾರ್ಯಕರ್ತರಿಗೆ ಅಧಿಕಾರ ಕೊಡಬೇಕು, ಹೊಸ ನಾಯಕರನ್ನ ತಯಾರು ಮಾಡಬೇಕು ಎಂಬುದು ನಮ್ಮ ಉದ್ದೇಶ. ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಗ್ಯಾರಂಟಿ ಯೋಜನೆಗಳು ನೀಡಿರುವುದರಿಂದ ಐದು ಪಾಲಿಕೆಗಳನ್ನು ಗೆಲ್ಲುತ್ತೇವೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಂತೆ ನೇರಾನೇರ ಹಣಾಹಣಿಯಿರಲಿ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಹೇಳಿದ್ದೇನು ?
ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ ಯಾವುದೇ ವಿಳಂಬವಿಲ್ಲದೆ ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪೀಠ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸೋಮವಾರ (ಜ.12) ಕಟ್ಟುನಿಟ್ಟಿನ ಆದೇಶ ನೀಡಿತ್ತು.
ಕಾಲಾವಕಾಶ ಕೋರಿದ್ದ ಆಯೋಗ
ಈ ಕುರಿತು ನಡೆದ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು, ವಾರ್ಡ್‌ಗಳ ಮೀಸಲಾತಿ ಪ್ರಕ್ರಿಯೆಯು ಪ್ರಸ್ತುತ ಅಂತಿಮ ಹಂತದಲ್ಲಿದ್ದು, ಫೆಬ್ರವರಿ 28ರೊಳಗೆ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಇತ್ತ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಶೀಲನೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಕಾರಣದಿಂದಾಗಿ ಸಿಬ್ಬಂದಿ ಕೊರತೆ ಎದುರಾಗಬಹುದು ಎಂಬ ಆತಂಕ ವ್ಯಕ್ತಪಡಿಸಿ, ಚುನಾವಣೆ ನಡೆಸಲು ಮೇ ಅಂತ್ಯದವರೆಗೆ ಕಾಲಾವಕಾಶ ಕೋರಿತ್ತು.

