
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (ಚಿತ್ರ ಕೃಪೆ:ಎಕ್ಸ್ ಪೋಸ್ಟ್)
ಸಂಕ್ರಾಂತಿ ನಂತರ ಡಿಕೆಶಿ ದೆಹಲಿಯಾತ್ರೆ, ಸೋನಿಯಾ-ರಾಹುಲ್ ಭೇಟಿ ಮಾಡಿಸುವಂತೆ ಖರ್ಗೆಗೆ ಮನವಿ
ನಾಯಕತ್ವ ಗೊಂದಲ ನಿವಾರಿಸುವಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಡಿಸಿಎಂ ಡಿ.ಕೆ. ಶಿವಕುಮಾರ್ ನವೆಂಬರ್‌ನಲ್ಲಿ ದೆಹಲಿಗೆ ತೆರಳಿದ್ದರು. ಆದರೆ ಹಲವು ಕಾರಣದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಗೆ ಅವಕಾಶ ನೀಡಿರಲಿಲ್ಲ.
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಗೊಂದಲ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಬೆಳಗಾವಿ ಅಧಿವೇಶನಕ್ಕೂ ಮುನ್ನ ಸುಮ್ಮನಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಜ.16ರಂದು ದೆಹಲಿ ತೆರಳಲು ಸಿದ್ದತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಶತಾಯಗತಾಯ ಸಿಎಂ ಗಾದಿ ಪಡೆಯಲೇ ಬೇಕು ಎಂದು ಪ್ರಯತ್ನ ನಡೆಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಸೋಮವಾರ(ಜ.12) ಸದಾಶಿವನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಸುವಂತೆ ಒತ್ತಾಯಿಸಿದ್ದಾರೆ.
ನಾಯಕತ್ವ ಗೊಂದಲ ಶಮನ ಮಾಡುವ ಉದ್ದೇಶದಿಂದ ಎಐಸಿಸಿ ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕರೆ ಮಾಡಿ, ಆದಷ್ಟು ಶೀಘ್ರವೇ ದೆಹಲಿಗೆ ಆಹ್ವಾನ ನೀಡಲಾಗುವುದು. ಅಲ್ಲಿಯವರೆಗೂ ಯಾರೂ ನಾಯಕತ್ವದ ಬಗ್ಗೆ ಬಹಿರಂಗ ಹೇಳಿಕೆ ನೀಡದೆ ಒಗ್ಗಟ್ಟಿನಿಂದ ಇರಬೇಕು ಎಂದು ಸೂಚಿಸಿತ್ತು. ಇದೀಗ ಮತ್ತೆ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಲು ಸಿದ್ಧತೆ ನಡೆಸಿದ್ದಾರೆ.
ಭೇಟಿಗೆ ಅವಕಾಶ ನೀಡದ ಹೈಕಮಾಂಡ್
ನಾಯಕತ್ವ ಗೊಂದಲ ನಿವಾರಿಸುವಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಡಿಸಿಎಂ ಡಿ.ಕೆ. ಶಿವಕುಮಾರ್ ನವೆಂಬರ್‌ನಲ್ಲಿ ದೆಹಲಿಗೆ ತೆರಳಿದ್ದರು. ಆದರೆ ಬಿಹಾರ ಚುನಾವಣೆ ಕಾರಣ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಗೆ ಅವಕಾಶ ನೀಡಿರಲಿಲ್ಲ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗದೇ ಡಿ.ಕೆ. ಶಿವಕುಮಾರ್ ಬರಿಗೈನಲ್ಲಿ ವಾಪಸ್ ಬಂದಿದ್ದರು. ಆದ್ದರಿಂದ ಈ ಬಾರಿ ದೆಹಲಿ ಭೇಟಿಗೂ ಮುನ್ನವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರಿಷ್ಠರ ಭೇಟಿಗೆ ಸಮಯ ಕೊಡಿಸುವಂತೆ ಹಾಗೂ ಭೇಟಿ ಮಾಡಿಸುವಂತೆ ಮನವಿ ಮಾಡಿದ್ದಾರೆ.
ಸಿಎಂ ಆಪ್ತರಿಂದ ದಲಿತಾಸ್ತ್ರ ಪ್ರಯೋಗ
ನಾಯಕತ್ವ ಗೊಂದಲ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಂ ಗಾದಿ ಪಡೆಯಲೇ ಬೇಕು ಎಂದು ನಡೆಸುತ್ತಿರುವ ಪ್ರಯತ್ನಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಸಚಿವರು ರಹಸ್ಯ ಸಭೆಗಳ ಮೂಲಕ ಹೈಕಮಾಂಡ್‌ಗೆ ಸಂದೇಶ ರವಾನಿಸುತ್ತಿದ್ದಾರೆ. ಎಲ್ಲಾ ಕಾರ್ಯಕ್ರಮಗಳಲ್ಲೂ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳುವ ಮೂಲಕ ವರಿಷ್ಠರಿಗೆ ಗೌರವ ನೀಡಿದರೂ, ತಮ್ಮ ಆಪ್ತ ಸಚಿವರ ಮೂಲಕ ರಹಸ್ಯ ಸಭೆಗಳನ್ನು ನಡೆಸಿ ಪ್ಲಾನ್-ಬಿ ಯೋಜನೆಯನ್ನು ರೂಪಿಸಿ ದಲಿತ ಕಾರ್ಡ್ ಮುನ್ನಲೆಗೆ ತರಲು ಸಿದ್ದತೆ ನಡೆಸಿದ್ದಾರೆ.

