ಬೆಂಗಳೂರಿನ ವರ್ತೂರು ಕೆರೆಯಲ್ಲಿ ಅಪರೂಪದ ಫ್ಲೆಮಿಂಗೊ ಪ್ರತ್ಯಕ್ಷ: ವಲಸೆ ಮಾರ್ಗ ಬದಲಾವಣೆಯ ಸಂಕೇತವೇ?
x

ವರ್ತೂರು ಕೆರೆಯಲ್ಲಿ ಕಂಡು ಬಂದ ಫ್ಲೆಮಿಂಗೊ. ಚಿತ್ರ: ಪಕ್ಷಿ ವೀಕ್ಷಕ ಪ್ರಶಾಂತ್ ಗುಪ್ತಾ

ಬೆಂಗಳೂರಿನ ವರ್ತೂರು ಕೆರೆಯಲ್ಲಿ ಅಪರೂಪದ ಫ್ಲೆಮಿಂಗೊ ಪ್ರತ್ಯಕ್ಷ: ವಲಸೆ ಮಾರ್ಗ ಬದಲಾವಣೆಯ ಸಂಕೇತವೇ?

ಸಾಮಾನ್ಯವಾಗಿ ಭಾರತದ ಕರಾವಳಿ ತೀರಗಳಲ್ಲಿ, ಅದರಲ್ಲೂ ವಿಶೇಷವಾಗಿ ಮುಂಬೈ ಅಥವಾ ಗುಜರಾತ್​ನಲ್ಲಿ ಕಾಣಸಿಗುವ ಈ ಉದ್ದ ಕಾಲಿನ, ಆಕರ್ಷಕ ಗುಲಾಬಿ ಬಣ್ಣದ ಪಕ್ಷಿಯು, ಸಮುದ್ರದಿಂದ ಕನಿಷ್ಠ 300 ಕಿ.ಮೀ. ದೂರದಲ್ಲಿರುವ ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವುದು ಒಂದು ಅಚ್ಚರಿ


ಬೆಂಗಳೂರಿನ ಟೆಕ್ ಕಾರಿಡಾರ್​​ನಲ್ಲಿ ಇದೀಗ ಹೊಸದೊಂದು 'ಟ್ರಾಫಿಕ್ ಸ್ಟಾಪರ್' ಕಾಣಿಸಿಕೊಂಡಿದೆ. ನಗರದ ವರ್ತೂರು ಕೆರೆಯಲ್ಲಿ ಅಪರೂಪದ 'ಬೃಹತ್ ಫ್ಲೆಮಿಂಗೊ' (Greater Flamingo) ಪಕ್ಷಿಯೊಂದು ಕಾಣಿಸಿಕೊಂಡಿದ್ದು, ಇದು ಸ್ಥಳೀಯ ಪಕ್ಷಿವೀಕ್ಷಕರು ಮತ್ತು ಪ್ರಕೃತಿ ಪ್ರೇಮಿಗಳಲ್ಲಿ ತೀವ್ರ ಸಂತಸ ಮತ್ತು ಕುತೂಹಲ ಮೂಡಿಸಿದೆ.

ಸಾಮಾನ್ಯವಾಗಿ ಭಾರತದ ಕರಾವಳಿ ತೀರಗಳಲ್ಲಿ, ಅದರಲ್ಲೂ ವಿಶೇಷವಾಗಿ ಮುಂಬೈ ಅಥವಾ ಗುಜರಾತ್​ನಲ್ಲಿ ಕಾಣಸಿಗುವ ಈ ಉದ್ದ ಕಾಲಿನ, ಆಕರ್ಷಕ ಗುಲಾಬಿ ಬಣ್ಣದ ಪಕ್ಷಿಯು, ಸಮುದ್ರದಿಂದ ಕನಿಷ್ಠ 300 ಕಿ.ಮೀ. ದೂರದಲ್ಲಿರುವ ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವುದು ಒಂದು ಅಚ್ಚರಿಯ ಮತ್ತು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಪಕ್ಷಿಪ್ರೇಮಿಗಳ ಸಂತಸ

ವರ್ತೂರು ಕೆರೆಯ ಆಳವಿಲ್ಲದ ನೀರಿನಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿರುವ ಈ ಗುಲಾಬಿ ಅತಿಥಿಯ ದೃಶ್ಯವು, ಸುತ್ತಲಿನ ಹಸಿರು ಮತ್ತು (ದುರದೃಷ್ಟವಶಾತ್) ಕೊಳಚೆ ನೀರಿನ ನಡುವೆ ಎದ್ದು ಕಾಣುತ್ತಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ, ನೂರಾರು ಪಕ್ಷಿವೀಕ್ಷಕರು ಮತ್ತು ಛಾಯಾಗ್ರಾಹಕರು ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮತ್ತು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ವರ್ತೂರು ಕೆರೆಯತ್ತ ದೌಡಾಯಿಸುತ್ತಿದ್ದಾರೆ.

ವರ್ತೂರು ಕೆರೆಯಲ್ಲಿ ನಿದ್ರಿಸುತ್ತಿದ್ದ ಫ್ಲೆಮಿಂಗೊದ ಚಿತ್ರವನ್ನು ಸೆರೆ ಹಿಡಿದ ದೀಪಾ ಮೋಹನ್.

"ಇದು ನಿಜಕ್ಕೂ ಒಂದು ಮಾಂತ್ರಿಕ ದೃಶ್ಯ. ಬೆಂಗಳೂರಿನಲ್ಲಿ ಫ್ಲೆಮಿಂಗೊವನ್ನು ನೋಡುವುದು ಅತ್ಯಂತ ಅಪರೂಪ," ಎಂದು ಖ್ಯಾತ ಪಕ್ಷಿ ತಜ್ಞೆ ದೀಪಾ ಮೋಹನ್ ಅವರು ತಮ್ಮ ಸಂತಸ ಹಂಚಿಕೊಂಡಿದ್ದಾರೆ. "ಬೆಂಗಳೂರಿಗೆ ಹತ್ತಿರದಲ್ಲಿ ಈ ಹಿಂದೆ ಎರಡು ಬಾರಿ ಹೊಸಕೋಟೆ ಕೆರೆಯಲ್ಲಿ ಫ್ಲೆಮಿಂಗೊ ಕಾಣಿಸಿಕೊಂಡಿತ್ತು. ಇದು ತನ್ನ ಹಿಂಡಿನಿಂದ ದಾರಿ ತಪ್ಪಿದ ಒಂಟಿ ಪಕ್ಷಿಯಾಗಿರಬಹುದು," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂಟಿ ಜೀವ , ಆಹಾರದ ಚಿಂತೆ

ಸಾಮಾನ್ಯವಾಗಿ ಫ್ಲೆಮಿಂಗೊಗಳು ಗುಂಪುಗಳಲ್ಲಿ ವಲಸೆ ಹೋಗುತ್ತವೆ. ಆದರೆ, ಈ ಪಕ್ಷಿಯು ಒಂಟಿಯಾಗಿ ಬೆಂಗಳೂರಿನಲ್ಲಿ ಕಾಲ ಕಳೆಯುತ್ತಿರುವುದು ಮತ್ತೊಂದು ವಿಶೇಷ. "ಒಂಟಿ ಫ್ಲೆಮಿಂಗೊವನ್ನು ನೋಡುವುದೇ ಒಂದು ಅಪರೂಪ. ಆದರೆ, ಅದು ಅತ್ಯಂತ ಶಾಂತವಾಗಿ ಆಹಾರ ಸೇವಿಸುತ್ತಿರುವುದನ್ನು ನೋಡಿ ಖುಷಿಯಾಯಿತು," ಎನ್ನುತ್ತಾರೆ ದೀಪಾ ಮೋಹನ್.

ಫ್ಲೆಮಿಂಗೊಗಳ ಪ್ರಸಿದ್ಧ ಗುಲಾಬಿ ಬಣ್ಣಕ್ಕೆ ಕಾರಣ, ಅವು ಸೇವಿಸುವ ಪಾಚಿಯಲ್ಲಿರುವ 'ಕ್ಯಾರೊಟಿನಾಯ್ಡ್' ಎಂಬ ವರ್ಣದ್ರವ್ಯ. "ವರ್ತೂರು ಕೆರೆಯಲ್ಲಿ ಈ ಪಕ್ಷಿಯು ದೀರ್ಘಕಾಲ ಉಳಿಯಲು ಬೇಕಾದಷ್ಟು ಪಾಚಿ ಲಭ್ಯವಿದೆಯೇ ಎಂಬುದು ಅನುಮಾನ," ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಬದಲಾಗುತ್ತಿರುವ ವಲಸೆ ಮಾರ್ಗ?

ವಿಪರ್ಯಾಸವೆಂದರೆ, ವರ್ತೂರು ಕೆರೆಯು ತನ್ನ ನೊರೆ ಮತ್ತು ಮಾಲಿನ್ಯದಂತಹ ಕೆಟ್ಟ ಕಾರಣಗಳಿಗಾಗಿಯೇ ಹೆಚ್ಚು ಸುದ್ದಿಯಲ್ಲಿದೆ. ಆದರೂ, ಇದು ಅನೇಕ ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತಲೇ ಇದೆ. ಸಾಮಾನ್ಯವಾಗಿ ಅಕ್ಟೋಬರ್-ನವೆಂಬರ್​ನಲ್ಲಿ ಬರುವ ಸ್ಯಾಂಡ್​ ಪೈಪರ್​ನಂತಹ (ಮರಳು ಉಲ್ಲಂಕಿ) ಹಕ್ಕಿಗಳು ಇಲ್ಲಿಗೆ ಬರತ್ತವೆ. ಈ ಬಾರಿ ಆಗಸ್ಟ್​​ನಲ್ಲೇ ಆಗಮಿಸಿರುವುದು ಅಚ್ಚರಿ ಮೂಡಿಸಿದೆ. "ಇದು ವಲಸೆ ಹಕ್ಕಿಗಳ ಮಾರ್ಗಗಳು ಬದಲಾಗುತ್ತಿರುವುದರ ಸಂಕೇತವಿರಬಹುದು. ಆದರೆ, ಇದು ಕೇವಲ ಒಂದು ಊಹೆಯಷ್ಟೇ," ಎಂದು ದೀಪಾ ಮೋಹನ್ ಹೇಳುತ್ತಾರೆ.

Read More
Next Story