ಎಸ್.ಎಲ್‌. ಭೈರಪ್ಪ | ಸಾಹಿತ್ಯಕ್ಕೆ ಸಂದ ಸಮ್ಮಾನವೂ, ಬೆನ್ನಿಗೆ ಅಂಟಿದ ವಿವಾದವೂ...
x

ಎಸ್.ಎಲ್‌. ಭೈರಪ್ಪ | ಸಾಹಿತ್ಯಕ್ಕೆ ಸಂದ ಸಮ್ಮಾನವೂ, ಬೆನ್ನಿಗೆ ಅಂಟಿದ ವಿವಾದವೂ...

ಎಸ್.ಎಲ್‌.ಭೈರಪ್ಪ ಅವರು ತಮ್ಮ 13ನೇ ವಯಸ್ಸಿನಲ್ಲೇ ಗಾಂಧೀಜಿಯವರ ಮೌಲ್ಯಗಳಿಗೆ ಬೆಲೆ ಕೊಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು.


Click the Play button to hear this message in audio format

ಕನ್ನಡ ಸಾರಸ್ವತ ಲೋಕದ ಸಾಕ್ಷಿಪ್ರಜ್ಞೆಯಾದ ಖ್ಯಾತ ಕಾದಂಬರಿಕಾರ, ಪದ್ಮಭೂಷಣ ಪುರಸ್ಕೃತ ಎಸ್‌.ಎಲ್‌. ಭೈರಪ್ಪ (94) ಅವರು ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಬರಹದಲ್ಲೇ ಬದುಕಿದ ಭೈರಪ್ಪ ಅವರು ಸಮ್ಮಾನಗಳ ಜತೆಗೆ ವಿವಾದಗಳಿಂದಲೂ ಪ್ರಿಯವಾಗಿದ್ದರು.

ಸಂವೇದನಾ ಶೀಲ ಸಾಹಿತ್ಯ, ಪ್ರಖರ ನುಡಿಗಳ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರಿಗೆ ಅಷ್ಟೇ ದೊಡ್ಡ ಪ್ರಮಾಣದ ವೈಚಾರಿಕ ಹಾಗೂ ಸೈದ್ಧಾಂತಿಕವಾಗಿ ವಿರೋಧಿಸುವವರ ಸಂಖ್ಯೆಯೂ ಇತ್ತು. ಹಲವು ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಹೇಳಿಕೆಗಳ ಮೂಲಕವೂ ವಿವಾದ ಮೈಮೇಲೆ ಎಳೆದುಕೊಂಡಿದ್ದರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ 1934 ಜುಲೈ 26 ರಂದು ಜನಿಸಿದ ಭೈರಪ್ಪ ಅವರು, ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಬಡತನ, ಪ್ಲೇಗ್ ಮಾರಿಯಿಂದ ತತ್ತರಗೊಂಡಿದ್ದ ಪರಿಸರದಲ್ಲಿ ಬೆಳೆದ ಭೈರಪ್ಪ ಅವರು, ತಮ್ಮ ಐದನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದರು.

ಪ್ಲೇಗ್‌ ಕಾಯಿಲೆಗೆ ತಾಯಿ ಜೀವ ಕಳೆದುಕೊಂಡಾಗ ಜೀವನಯಾನದಲ್ಲಿ ಸಾಹಸಮಯ ಬದುಕನ್ನು ನಿರ್ಮಿಸಿಕೊಂಡರು. 13ನೇ ವಯಸ್ಸಿನಲ್ಲೇ ಗಾಂಧೀಜಿಯವರ ಮೌಲ್ಯಗಳಿಗೆ ಬೆಲೆ ಕೊಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು.

ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ

ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಹಾಗೂ ಕಾಲೇಜು ವ್ಯಾಸಂಗ ಮುಂದುವರೆಸಿದ ಭೈರಪ್ಪ ಅವರು ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ "ಸತ್ಯ ಮತ್ತು ಸೌಂದರ್ಯ" ಎಂಬ ಇಂಗ್ಲಿಷ್‌ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಪಡೆದಿದ್ದರು.

ಹುಬ್ಬಳ್ಳಿ ಕೆಸಿಡಿ ಕಾಲೇಜು, ಗುಜರಾತಿನ ಸರದಾರ್ ಪಟೇಲ್ ವಿಶ್ವವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ನೆರವೇರಿಸಿದ್ದ ಭೈರಪ್ಪನವರು ಹಲವು ಮಹತ್ವದ ಕಾದಂಬರಿಗಳನ್ನು ರಚಿಸಿದ್ದರು. 1961ರಲ್ಲಿ `ಧರ್ಮಶ್ರೀ' ಕಾದಂಬರಿ ಪ್ರಕಟಿಸಿದ್ದ ಅವರು, ಇದುವರೆವಿಗೆ ನಾಲ್ಕು ದಶಕಗಳಲ್ಲಿ 21 ಕಾದಂಬರಿಗಳನ್ನು ಬರೆದಿದ್ದಾರೆ.

ಸಿನಿಮಾಗಳಾದ ಕಾದಂಬರಿಗಳು

ಎಸ್‌.ಎಲ್‌. ಭೈರಪ್ಪನವರ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಗಳಿಸಿವೆ. ವಂಶವೃಕ್ಷಕ್ಕೆ 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975 ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಭಾರೀ ಚರ್ಚೆಗೆ ಗ್ರಾಸವಾಗಿದ್ದ ʼಪರ್ವʼ

`ಪರ್ವ' ಕಾದಂಬರಿಯು ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದ ಕೃತಿ. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿ ನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಬಿಂಬಿಸಲಾಗಿದೆ. ಲೈಂಗಿಕತೆ ಮತ್ತು ಸಾವುಗಳ ನೆಲೆಯಲ್ಲಿ ದ್ರೌಪದಿ, ಕುಂತಿ, ಮಾದ್ರಿ, ಗಾಂಧಾರಿ ಪಾತ್ರಗಳನ್ನು ವಿಶಿಷ್ಟವಾಗಿ ಮೂಡಿಸಿದ್ದಾರೆ.

ಕಾದಂಬರಿಗಳಲ್ಲದೆ ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ `ಸಾಹಿತ್ಯ ಮತ್ತು ಪ್ರತೀಕ', `ಕಥೆ ಮತ್ತು ಕಥಾವಸ್ತು', `ನಾನೇಕೆ ಬರೆಯುತ್ತೇನೆ' ಎಂಬ ಕೃತಿಗಳನ್ನೂ ರಚಿಸಿದ್ದ ಅವರು, 1999ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.

ಭೈರಪ್ಪ ಅವರಿಗೆ ಅಂಟಿದ ವಿವಾದಗಳು

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಾಗ ಸಾಹಿತಿ ಎಸ್. ಎಲ್. ಭೈರಪ್ಪ ಅವರು ನೀಡಿದ್ದ ಹೇಳಿಕೆ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಭೈರಪ್ಪ ಅವರು, 'ರಾಜ್ಯ ಸರ್ಕಾರವನ್ನು ಟೀಕಿಸಿ ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆಗ ಕಾಂಗ್ರೆಸ್‌ ನಾಯಕರು ಭೈರಪ್ಪ ಅವರನ್ನು ʼಅರೆ ಸಂವಿಧಾನ ತಜ್ಞರಾಗಲು ಹೊರಟಿದ್ದಾರೆ' ಎಂದು ಟೀಕಿಸಿದ್ದರು.

ಚಾಮುಂಡಿ ಬೆಟ್ಟದ ಅಭಿವೃದ್ಧಿ ಹಿಂದೆ ಭ್ರಷ್ಟಾಚಾರ ಎಂದಿದ್ದ ಭೈರಪ್ಪ

ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿ ಬೆಟ್ಟ, ಜೋಶಿಮಠದಂತೆ ಅಭಿವೃದ್ಧಿ ಕಾರ್ಯಗಳಿಂದ ನಲುಗಬಾರದು ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ತಿಳಿಸಿದ್ದರು. ನಾನು ಹಿಮಾಲಯಕ್ಕೆ ಹಲವು ಬಾರಿ ಹೋಗಿದ್ದೇನೆ. ಹಿಂದೆ ಹೋಗಿದ್ದಾಗ ಅಲ್ಲಿ ಜೋಶಿ ಮಠವಿತ್ತು. ಕೆಲ ವರ್ಷಗಳ ಹಿಂದೆ ಜೋಶಿಮಠಕ್ಕೆ ಭೇಟಿ ನೀಡಿದಾಗ ಅದು ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿತ್ತು. ಬಹುಮಹಡಿ ಕಟ್ಟಡದಿಂದ ಬಂದು ಅಲ್ಲಿಗೆ ಹೋದಾಗ ಉಂಟಾಗುತ್ತಿದ್ದ ಭಾವನೆಯೇ ಈಗ ದೂರವಾಗಿದೆ. ಈ ರೀತಿ ಚಾಮುಂಡಿ ಬೆಟ್ಟವೂ ಆಗಬಾರದು ಎಂದು ನನ್ನ ಸಲಹೆ. ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಚಾಮುಂಡಿ ಬೆಟ್ಟ ಇತ್ತೀಚೆಗೆ ಹಲವು ಬಾರಿ ಕುಸಿದಿದೆ. ಹೀಗಿದ್ದರೂ ಅಭಿವೃದ್ಧಿ ಎಂಬ ವಿಷಯ ಮುಂದಿಟ್ಟುಕೊಂಡು ರೋಪ್ ವೇ ಮಾಡಲು ಸರ್ಕಾರ ಹೊರಟಿದೆ. ಪ್ರಕೃತಿಗೆ ವಿರುದ್ಧವಾದದ್ದು ಎಂದು ತಿಳಿದಿದ್ದರೂ ಅಭಿವೃದ್ಧಿ ಕಾಮಗಾರಿ ಮಾಡುತ್ತೇವೆ ಎಂದು ಹೇಳುವುದರ ಹಿಂದೆ ಭ್ರಷ್ಟಾಚಾರ ಅಡಗಿದೆ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಕಾಂಗ್ರೆಸ್‌ ನಾಯಕರು ತಿರುಗೇಟು ನೀಡಿದ್ದರು.

ಲಿಂಗಾಯತ ಧರ್ಮ – ʼಸ್ವತಂತ್ರ ಧರ್ಮʼ

2017 ರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಆರಂಭವಾದಾಗ ಎಸ್‌.ಎಲ್‌.ಭೈರಪ್ಪ ಅವರು ಟೀಕಿಸಿದ್ದರು. “ಇದು ಶುದ್ಧ ಅವಿವೇಕ. ‘ಹಿಂದೂ ಧರ್ಮ’ ಎಂಬ ಮನೆಯನ್ನು ಹಾಳು ಮಾಡುವಂತಹ ಕೆಲಸ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅವರ ಹೇಳಿಕೆಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಧಾರ್ಮಿಕ ನಂಬಿಕೆ ಟೀಕಿಸಿದ ವಿವಾದ

ಭೈರಪ್ಪನವರು ʼಆವರಣ” ಕಾದಂಬರಿಯಲ್ಲಿ ಇಸ್ಲಾಂ ಧರ್ಮ, ಮುಸ್ಲಿಮರು ಹಾಗೂ ಅವರ ಆಚಾರ-ವಿಚಾರಗಳ ಬಗ್ಗೆ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ದೊಡ್ಡ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದರು. “ಸಾರಸ್ವತಿ ಸಮಾರಾಧನೆ” ಮತ್ತು ಇತರ ಬರಹಗಳಲ್ಲಿ ಹಿಂದೂ ಧರ್ಮದ ಪರ ನಿಲುವು ತಾಳಿದ ಕಾರಣ ಭೈರಪ್ಪ ಅವರಿಗೆ ಧರ್ಮಪರ ಅಭಿಪ್ರಾಯ ವ್ಯಕ್ತವಾಗಿ ಬಲಪಂಥೀಯ ಎಂಬ ಹಣೆಪಟ್ಟಿ ಲಭಿಸಿತ್ತು.

ಹಿಂದುತ್ವ, ಅಯೋಧ್ಯೆ ರಾಮಮಂದಿರ ಸೇರಿದಂತೆ ಇತ್ಯಾದಿ ವಿಷಯಗಳಲ್ಲಿ ಭೈರಪ್ಪನವರು ಹಿಂದೂ ಪರ ನಿಲುವು ತಾಳಿದ್ದರು. ಇದರಿಂದ ಪ್ರಗತಿಪರ- ಎಡಪಂಥೀಯರು ಭೈರಪ್ಪ ಅವರನ್ನು ವಿರೋಧಿಸಿದ್ದರು. “ಭಾರತದಲ್ಲಿ ಸಾಂಸ್ಕೃತಿಕ ಏಕತೆ ಅಂದರೆ ಅದು ಹಿಂದೂ ಸಂಸ್ಕೃತಿ” ಎಂಬ ಅವರ ಹೇಳಿಕೆಯೂ ತೀವ್ರ ಟೀಕೆಗೆ ಗುರಿಯಾಗಿತ್ತು.

ಸಾಹಿತಿಗಳ ವಿರುದ್ಧವೂ ಟೀಕೆ

"ಪ್ರಗತಿಪರ ಲೇಖಕರು ಸತ್ಯ ಬದಲಾಯಿಸುತ್ತಾರೆ, ಕಲ್ಪಿತ ವಾಸ್ತವವನ್ನೇ ಪ್ರಚಾರ ಮಾಡುತ್ತಾರೆ" ಎಂಬ ಎಸ್‌.ಎಲ್‌.ಭೈರಪ್ಪನವರ ಹೇಳಿಕೆಗೆ ಪ್ರಗತಿಪರ ಸಾಹಿತ್ಯ ಚಳವಳಿಯಲ್ಲಿ ತೊಡಗಿಸಿಕೊಂಡ ಅನೇಕರು ಭೈರಪ್ಪ ವಿರುದ್ಧ ಸಿಡಿದೆದ್ದಿದ್ದರು. ಇದರಿಂದ ಕನ್ನಡ ಸಾಹಿತ್ಯ ವಲಯದಲ್ಲಿ ಎಡಪಂಥೀಯ ಹಾಗೂ ಬಲಪಂಥೀಯ ಎಂಬ ಎರಡು ಬಣಗಳು ಸೃಷ್ಟಿಯಾದವು.

ಮಹಿಳೆಯರ ಕುರಿತಂತೆಯೂ ವಿವಾದಿತ ಹೇಳಿಕೆ

ಮಹಿಳಾ ಹಕ್ಕುಗಳು, ಲೈಂಗಿಕ ಸ್ವಾತಂತ್ರ್ಯದ ವಿಚಾರಗಳಲ್ಲಿಯೂ ಭೈರಪ್ಪ ಅವರು ನೀಡಿದ ಹೇಳಿಕೆಗಳು ಸ್ತ್ರೀವಾದಿ ಲೇಖಕಿಯರ ಆಕ್ಷೇಪಗಳಿಗೆ ಕಾರಣವಾಗಿತ್ತು. "ಸ್ತ್ರೀ ಸ್ವಾತಂತ್ರ್ಯ ಎಂದರೆ ಅಶ್ಲೀಲತೆಯ ಪರವಾನಗಿ ಅಲ್ಲ" ಎಂಬ ಭೈರಪ್ಪನವರ ಅಭಿಪ್ರಾಯಕ್ಕೆ ಮಹಿಳಾ ಪರ ಹೋರಾಟಗಾರರು, ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಕಾದಂಬರಿ ಸುತ್ತಲಿನ ವಿವಾದಗಳು

2007ರಲ್ಲಿ ರಚಿಸಿದ ʼಆವರಣʼ ಕಾದಂಬರಿ ಧಾರ್ಮಿಕ ಪರಿವರ್ತನೆ, ಅಂತರಧರ್ಮ ವಿವಾಹದ ಕುರಿತು ತೀಕ್ಷ್ಣವಾಗಿ ಬರೆದಿದ್ದರು. ಇದನ್ನು ಕೆಲವರು ಧಾರ್ಮಿಕ ದ್ವೇಷ ಪ್ರಚೋದನೆ ಎಂದಿದ್ದರು. ʼಸಾರದಾರʼ ಮತ್ತು ʼಧಾರಾʼ ಕೃತಿಗಳಲ್ಲೂ ಸಮಾಜ-ಧರ್ಮದ ಕುರಿತು ನಿರ್ದಾಕ್ಷಿಣ್ಯ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ವಿವಾದಗಳು ಉಂಟಾಗಿದ್ದವು.

ಅರಸಿ ಬಂದ ಪ್ರಶಸ್ತಿಗಳು

'ದಾಟು' ಕಾದಂಬರಿಗೆ 1975ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2014ರಲ್ಲಿ ಪಂಪ ಪ್ರಶಸ್ತಿ, 2010ರಲ್ಲಿ 'ಮಂದ್ರ' ಕಾದಂಬರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ, 2017ರಲ್ಲಿ ನೃಪತುಂಗ ಪ್ರಶಸ್ತಿ, 2020ರಲ್ಲಿ ಪದ್ಮಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.

Read More
Next Story