
ಕನ್ನಡ ಸಾರಸ್ವತ ಲೋಕದ ಎಸ್.ಎಲ್.ಭೈರಪ್ಪ ನಿಧನಕ್ಕೆ ಪ್ರಧಾನಿ, ಸಿಎಂ ಸೇರಿ ಗಣ್ಯರ ಸಂತಾಪ
ಇಹಲೋಕ ತ್ಯಜಿಸಿದ ಹಿರಿಯ ಸಾಹಿತಿ ಹಾಗೂ ಕನ್ನಡದ ಸಾಕ್ಷಿಪ್ರಜ್ಞೆ ಎಸ್.ಎಲ್. ಭೈರಪ್ಪನವರ ಸಾಧನೆ ನಿಜಕ್ಕೂ ಅನನ್ಯ. ನಾಡು-ನುಡಿ, ಸಮಾಜ-ಜನಜೀವನಗಳ ನಡುವೆ ದಶಕಗಳವರೆಗೆ ಸಾಕ್ಷಿಭೂತರಾಗಿ ನಿಂತವರು.
ಇಹಲೋಕ ತ್ಯಜಿಸಿದ ಕನ್ನಡದ ಹಿರಿಯ ಸಾಹಿತಿ ಹಾಗೂ ಕನ್ನಡದ ಸಾಕ್ಷಿಪ್ರಜ್ಞೆ ಎಸ್.ಎಲ್. ಭೈರಪ್ಪನವರ ಸಾಧನೆ ನಿಜಕ್ಕೂ ಅನನ್ಯ. ನಾಡು-ನುಡಿ, ಸಮಾಜ-ಜನಜೀವನಗಳ ನಡುವೆ ದಶಕಗಳವರೆಗೆ ಸಾಕ್ಷಿಭೂತರಾಗಿ ನಿಂತವರು. ಕನ್ನಡದ ಸಾರಸತ್ವಲೋಕದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಾಹಿತಿ ಎಸ್.ಎಲ್.ಭೈರಪ್ಪ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ, ಆತ್ಮಸಾಕ್ಷಿಯನ್ನು ಕಲಕಿ ಭಾರತದ ಆತ್ಮವನ್ನು ಆಳವಾಗಿ ಅಧ್ಯಯನ ಮಾಡಿದ ಒಬ್ಬ ಮಹಾನ್ ಧೀಮಂತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ನಿರ್ಭೀತ ಮತ್ತು ಕಾಲಾತೀತ ಚಿಂತಕರಾಗಿದ್ದ ಅವರು ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಆಳವಾಗಿ ಶ್ರೀಮಂತಗೊಳಿಸಿದರು. ಅವರ ಬರಹಗಳು ಪೀಳಿಗೆಗಳನ್ನು ಸಮಾಜವನ್ನು ಪ್ರತಿಬಿಂಬಿಸಲು, ಪ್ರಶ್ನಿಸಲು ಮತ್ತು ಅದರೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿ ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರ ಎಸ್.ಎಲ್.ಭೈರಪ್ಪ ನಿಧನವು ನೋವು ತಂದಿದೆ. ತಮ್ಮ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿ, ಕನ್ನಡದ ಶ್ರೇಷ್ಠ ಕಾದಂಬರಿಕಾರ, ಪದ್ಮಭೂಷಣ ಪುರಸ್ಕೃತ, ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಡಾ. ಎಸ್.ಎಲ್. ಭೈರಪ್ಪನವರು ವಿಧಿವಶರಾಗಿದ್ದು ಬಹಳ ನೋವು ತಂದಿದೆ. ಸಾಹಿತ್ಯಾಭಿಮಾನಿಗಳು ಹಾಗೂ ಅವರ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, 'ಪರ್ವ' ಮತ್ತು 'ಉತ್ತರಕಾಂಡ' ಕಾದಂಬರಿಗಳ ಮೂಲಕ ಮಹಾಭಾರತ ಹಾಗೂ ರಾಮಾಯಣವನ್ನು ನೋಡುವ ಮತ್ತು ಓದುವ ಕ್ರಮವನ್ನೇ ಬದಲಿಸಿದ ಅಭಿಜಾತ ಕಾದಂಬರಿಕಾರ ಪದ್ಮಭೂಷಣ ಎಸ್.ಎಲ್. ಭೈರಪ್ಪನವರು ನಿಧನರಾದರೆಂಬ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ಭೈರಪ್ಪನವರ ಕಾದಂಬರಿಗಳನ್ನು ನಾನು ನಿಕಟವಾಗಿ ಓದಿದ್ದೇನೆ. ಅವರ ಕಥನ ಶೈಲಿ, ಪಾತ್ರ ಸೃಷ್ಟಿಯ ಪ್ರತಿಭೆಗೆ ಮಾರು ಹೋಗಿದ್ದೇನೆ. ಅವರು ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡದಲ್ಲೇ ಬರೆದ ಅಪ್ಪಟ ಭಾರತೀಯ ಕಾದಂಬರಿಕಾರರು. ಮೇಲಾಗಿ ಹಾಸನ ಜಿಲ್ಲೆಯಲ್ಲಿ ಹುಟ್ಟಿದ್ದ 'ಅಮರ ಪ್ರತಿಭೆ' ಎಂಬ ಹೆಮ್ಮೆ ನನ್ನದು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸಂತಾಪ ಸೂಚಿಸಿ, ಕನ್ನಡದ ಸಾರಸ್ವತ ಲೋಕದ ದಿಗ್ಗಜ ಬರಹಗಾರರಲ್ಲಿ ಒಬ್ಬರು ಎನಿಸಿಕೊಂಡಿದ್ದ ಡಾ. ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಆಘಾತ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಟ್ಟ ಕನ್ನಡದ ಅದ್ಭುತ ಲೇಖಕ, ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರ ನಿಧನದ ಸುದ್ದಿ ಆಘಾತ ಉಂಟುಮಾಡಿದೆ. ಪ್ರಪಂಚದಾದ್ಯಂತ ಅಸಂಖ್ಯಾತ ಓದುಗರನ್ನು ಹೊಂದಿರುವ ಎಸ್.ಎಲ್. ಭೈರಪ್ಪ ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಅದ್ಭುತವಾದದ್ದು. ಭಾರತದ ಅತ್ಯಂತ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಎಸ್.ಎಲ್. ಭೈರಪ್ಪ ಕನ್ನಡದ ಅತ್ಯಂತ ವಿಶಿಷ್ಟ ಬರಹಗಾರರು. ಯಾವುದೇ ಒಂದು ನಿರ್ಧಿಷ್ಟ ಪ್ರಕಾರಕ್ಕೆ ಸೀಮಿತರಾಗದ ಭೈರಪ್ಪನವರ ಕಾದಂಬರಿಗಳು ತಮ್ಮ ಅನನ್ಯ ನಿರೂಪಣಾ ಶೈಲಿಯಿಂದ ದೇಶ ವಿದೇಶಗಳಲ್ಲಿ ಅಪಾರ ಜನಪ್ರೀತಿ ಗಳಿಸಿದೆ. ಪದ್ಮಭೂಷಣ, ಪದ್ಮಶ್ರೀ, ಸರಸ್ವತಿ ಸಮ್ಮಾನ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಜೊತೆಗೆ ಲೆಕ್ಕವಿಲ್ಲದಷ್ಟು ಗೌರವ ಸನ್ಮಾನಗಳನ್ನು ಪಡೆದಿರುವ ಭೈರಪ್ಪ ಅವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ಆದ ಅತಿದೊಡ್ಡ ನಷ್ಟ ಎಂದು ಅವರು ಬಣ್ಣಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಟ್ವಿಟರ್‌ನಲ್ಲಿ, ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕ, ಸರಸ್ವತಿ ಸಮ್ಮಾನ್ ಪುರಸ್ಕೃತರಾದ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪರವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಉತ್ಕೃಷ್ಟ ಕಾದಂಬರಿಗಳ ನೀಡಿ, ಲಕ್ಷಾಂತರ ಓದುಗರ ಮನಗೆದ್ದಿದ್ದ, ಭೈರಪ್ಪನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಅದ್ವಿತೀಯ ಸಾಹಿತಿ, ಕನ್ನಡ ಸಾರಸ್ವತ ಲೋಕಕ್ಕೆ 'ಸರಸ್ವತಿ ಸಮ್ಮಾನ್' ಗೌರವವನ್ನು ತಂದುಕೊಟ್ಟ, ಪದ್ಮಭೂಷಣ ಡಾ. ಎಸ್.ಎಲ್.ಭೈರಪ್ಪನವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ. ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ, ದೇಶ ವಿದೇಶಗಳ ಸಾಹಿತ್ಯಾಸಕ್ತರ ನೆಚ್ಚಿನ ಸಾಹಿತಿಗಳಾಗಿದ್ದ, ಆ ಹಿರಿಯ ಸಾಹಿತಿಯನ್ನು ಕಳೆದುಕೊಂಡು ಕನ್ನಡ ನಾಡು, ನುಡಿ ಅನಾಥವಾದಂತಾಗಿದೆ, ಒಬ್ಬ ದಿಗ್ಗಜ ಸಾಹಿತಿಯನ್ನು, ಸಾಧಕ ಶ್ರೇಷ್ಠರನ್ನು ನಾವು ಕಳೆದುಕೊಂಡಿದ್ದೇವೆ. ಡಾ.ಭೈರಪ್ಪನವರು ತಮ್ಮ ಅಗಾಧ ಪಾಂಡಿತ್ಯಪೂರ್ಣ ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿ, ಇತಿಹಾಸ, ತತ್ವಶಾಸ್ತ್ರ ಮತ್ತು ಮಾನವ ಸಂಬಂಧಗಳನ್ನು ಅತ್ಯಂತ ಆಳವಾಗಿ ವಿಶ್ಲೇಷಿಸುವ ಅಪೂರ್ವ ಕೃತಿಗಳನ್ನು ರಚಿಸಿ, ನಾಡಿನ ಸಾರಸ್ವತ ಪ್ರಪಂಚವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ವಂಶವೃಕ್ಷ, ಪರ್ವ, ಸಾರ್ಥ, ಆವರಣದಂತಹ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನ್ನೇ ನೀಡಿವೆ. ಅಗಲಿದ ಮಹಾನ್ ಚೇತನಕ್ಕೆ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಾ, ಅವರ ಕುಟುಂಬದವರಿಗೆ, ಅಪಾರ ಅಭಿಮಾನಿಗಳಿಗೆ ಆ ಮೇರು ವ್ಯಕ್ತಿತ್ವದ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂಬುದಾಗಿ ಕೋರುತ್ತೇನೆ ಎಂದು ಹೇಳಿದ್ದಾರೆ.