ಮೀಸಲಾತಿ ಹೋರಾಟದ ನಾಯಕನಿಗೇ ಗೇಟ್ ಪಾಸ್;  ಜಯಮೃತ್ಯುಂಜಯ ಸ್ವಾಮೀಜಿ ಪೀಠದಿಂದ ಔಟ್
x

ಮೀಸಲಾತಿ ಹೋರಾಟದ ನಾಯಕನಿಗೇ ಗೇಟ್ ಪಾಸ್; ಜಯಮೃತ್ಯುಂಜಯ ಸ್ವಾಮೀಜಿ ಪೀಠದಿಂದ ಔಟ್

ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಭಾನುವಾರ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಕಾರ್ಯಕಾರಣಿ ಸಭೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಪಂಚಮಸಾಲಿ ಪೀಠದಿಂದ ಉಚ್ಚಾಟಿಸುವ ನಿರ್ಣಯ ಕೈಗೊಳ್ಳಲಾಗಿದೆ.


ಮಹತ್ವದ ಬೆಳವಣಿಗೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಭಾನುವಾರ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಕಾರ್ಯಕಾರಣಿ ಸಭೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟಿಸುವ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಅವರು, ಟ್ರಸ್ಟ್‌ನ ಕಾರ್ಯಕಾರಣಿ ಸಭೆಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟಿಸಲು ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಸ್ವಾಮೀಜಿಗೂ, ಪೀಠ ಹಾಗೂ ಟ್ರಸ್ಟ್‌ಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತರ ಸಭೆಯಲ್ಲಿ ಧರ್ಮ ಕಾಲಂನಲ್ಲಿ ‘ಹಿಂದೂ’ ಮತ್ತು ಜಾತಿ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಯಲು ಸ್ವಾಮೀಜಿ ಕರೆ ನೀಡಿರುವುದು ಟ್ರಸ್ಟ್ ನಿಯಮ ಹಾಗೂ ಪಂಚಮಸಾಲಿ ಲಿಂಗಾಯತರ ಆದರ್ಶಗಳಿಗೆ ವಿರುದ್ಧವಾಗಿತ್ತು. ಬಸವ ತತ್ವದ ಮಾರ್ಗದಲ್ಲಿ ಟ್ರಸ್ಟ್ ನಡೆಯುತ್ತಿದೆ. ಆದರೆ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಸಮುದಾಯದವರನ್ನು ದಿಕ್ಕು ತಪ್ಪಿಸುವ ರೀತಿ ಹೇಳಿಕೆ ನೀಡಿದ್ದರು. ಹಾಗಾಗಿ ಅವರನ್ನು ಪೀಠದಿಂದ ಉಚ್ಚಾಟಿಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.

ಪಂಚಮಸಾಲಿ ಸಮುದಾಯದವರು ಧರ್ಮ ಕಾಲಂನಲ್ಲಿ ಹಿಂದೂ ಎಂದು ಬರೆಸಿ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಅಥವಾ ವೀರಶೈವ ಪಂಚಮಸಾಲಿ ಎಂದು ಬರೆಸಲು ಜಾಗೃತಿ ಮೂಡಿಸಲಾಗಿತ್ತು. ಆದರೆ, ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಜಾತಿ ಕಾಲಂ ನಲ್ಲಿ ಲಿಂಗಾಯತ ಎಂದು ಬರೆಸುವಂತೆ ಕರೆ ನೀಡಿರುವುದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.

ಸ್ವಾಮೀಜಿ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ

ಪಂಚಮಸಾಲಿ ಪೀಠದ ಸ್ವಾಮೀಜಿಗಳು ವೈಯಕ್ತಿಕವಾಗಿ ಯಾವುದೇ ಆಸ್ತಿ ಹೊಂದಿರಬಾರದು ಎಂಬ ನಿಯಮವಿದೆ. ಆದರೆ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಬೆಳಗಾವಿ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಮನೆಗಳನ್ನು ಹೊಂದಿದ್ದಾರೆ. ಅವರ ಹೆಸರಿನಲ್ಲಿ ಆಸ್ತಿಗಳನ್ನು ಸೃಜಿಸಿಕೊಂಡಿದ್ದಾರೆ. ಇದನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸಲಾಗುವುದು ಎಂದು ಟ್ರಸ್ಟ್‌ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್‌ ತಿಳಿಸಿದರು.

ಮೀಸಲಾತಿ ಹೋರಾಟವನ್ನು ದುರ್ಬಲಗೊಳಿಸಲು ಕೆಲವರು ಸ್ವಾಮೀಜಿಯನ್ನೇ ಅಸ್ತ್ರ ಮಾಡಿಕೊಂಡಿದ್ದರು. ಈಗ ಜಾತಿಗಣತಿಯಲ್ಲಿ ಹಿಂದೂ ಎಂದು ಬರೆಸಲು ಹೇಳಿರುವುದು ಮೀಸಲಾತಿ ಹೋರಾಟ ಹತ್ತಿಕ್ಕುವ ತಂತ್ರ ಎಂದು ಟೀಕಿಸಿದರು.

ಮೀಸಲಾತಿ ಹೋರಾಟ ನಿಂತಿಲ್ಲ

ಪಂಚಮಸಾಲಿ ಮೀಸಲಾತಿ ಹೋರಾಟ ನಿಂತಿದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ಹೋರಾಟ ನಿಂತಿಲ್ಲ. ಹಾರೂಗೇರಿಯಿಂದಲೇ ಮತ್ತೆ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ರಥಯಾತ್ರೆ ಆರಂಭಿಸಲಾಗುವುದು ಎಂದು ವಿಜಯಾನಂದ ಕಾಶಪ್ಪನವರ್‌ ಘೋಷಿಸಿದರು.

ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಪಂಚಮ ಸಾಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿಕೊಂಡ ಬಳಿಕ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದರು. ಬೆಳಗಾವಿ ವಿಧಾನಮಂಡಲ ಅಧಿವೇಶನ ಸಮಯದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದಾಗ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.

Read More
Next Story