ಅವನತಿಯ ಹಾದಿಯಲ್ಲಿ ಎಡಪಂಥೀಯ ನಕ್ಸಲ್ ಚಳವಳಿ
x

ಅವನತಿಯ ಹಾದಿಯಲ್ಲಿ ಎಡಪಂಥೀಯ ನಕ್ಸಲ್ ಚಳವಳಿ

ಛತ್ತೀಸಗಢ, ಜಾರ್ಖಂಡ್, ಮಹಾರಾಷ್ಟ್ರ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆ ಈಗ ನಿರ್ಣಾಯಕ ಹಂತ ತಲುಪಿದೆ. 2026ರ ಮಾರ್ಚ್ ಕೊನೆಯೊಳಗೆ ನಕ್ಸಲ್ ಚಳವಳಿಗೆ ಅಂತ್ಯ ಹಾಡಬೇಕು ಎಂದು ಕೇಂದ್ರ ಸರ್ಕಾರವೇ ಗಡುವು ವಿಧಿಸಿದೆ.


ನಕ್ಸಲೀಯರಿಗೆ ಬಹಳ ಕಾಲದಿಂದ ಸಿಗುತ್ತಿದ್ದ ಬೆಂಬಲದ ನೆಲೆ ಕಾಲಕ್ರಮೇಣ ದುರ್ಬಲಗೊಳ್ಳುತ್ತ ಸಾಗಿದೆ. ಆದ್ದರಿಂದಲೇ ಎಡಪಂಥೀಯ ಉಗ್ರವಾದ ಅವನತಿಯ ಅಂಚಿನಲ್ಲಿದೆ. ಹಾಗಿದ್ದೂ ಸರ್ಕಾರದ ಈ ಯಶಸ್ಸು ಮಾನವ ಹಕ್ಕುಗಳ ಉಲ್ಲಂಘನೆಗೆ ದಾರಿಮಾಡಿಕೊಟ್ಟಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ಒಂದು ಕಾಲದಲ್ಲಿ ನಗರದ ಯುವಕರು ಮತ್ತು ನಿರ್ಗತಿಕ ಬುಡಕಟ್ಟು ಜನಾಂಗದವರ ಪಾಲಿಗೆ ಸ್ಪೂರ್ತಿಯಾಗಿದ್ದ, ಅವರ ಕಲ್ಪನೆಯನ್ನು ಕೆರಳಿಸಿದ್ದು 'ನಗರ ನಕ್ಸಲ್'. ಅದು ಕಾಲಾನುಕಾಲದಲ್ಲಿ ಅನೇಕ ರೂಪಾಂತರಗಳನ್ನು ಪಡೆದುಕೊಂಡಿತ್ತು. ಇಂತಹ ಉಗ್ರಗಾಮಿ ಎಡಪಂಥೀಯ ಚಳವಳಿಗೆ ಈಗ ಅಂತ್ಯ ಸನ್ನಿಹಿತವಾಗಿದೆಯೇ?

ಪೂರ್ವ ಮತ್ತು ಮಧ್ಯ ಭಾರತದ ಮಾವೋವಾದಿಗಳ ವಲಯದಲ್ಲಿ ನಡೆಸಲಾಗಿರುವ ನಕ್ಸಲ್ ನಿಗ್ರಹದ ದಟ್ಟಡವಿಯ ಕಾರ್ಯಾಚರಣೆಯು ಎಡಪಂಥೀಯ ಉಗ್ರಗಾಮಿ ಚಳವಳಿಯ ಅಂತ್ಯಕ್ಕೆ ಹಾಕಿದ ಮುನ್ನುಡಿ. ಹಾಗೆಂದು ಹೇಳುತ್ತಾರೆ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ ಸಿ.ಆರ್.ಪಿ.ಎಫ್ ನ ಮುಖ್ಯಸ್ಥ ಜ್ಞಾನೇಂದ್ರ ಪ್ರತಾಪ್ ಸಿಂಗ್.

ಛತ್ತೀಸಗಢ ಮತ್ತು ತೆಲಂಗಾಣ ಗಡಿಪ್ರದೇಶದ ಅತ್ಯಂತ ಆಯಕಟ್ಟಿನ ತಾಣವಾದ ಕರೇಗಟ್ಟ ಪರ್ವತ ಶ್ರೇಣಿಗಳಲ್ಲಿ ನಡೆಸಿದ 21 ದಿನಗಳ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಸಿಕ್ಕ ಯಶಸ್ಸು ಬಹಳ ದೊಡ್ಡದು. ಇದನ್ನು ಇಡೀ ರಾಷ್ಟ್ರದಲ್ಲಿ ನಡೆದ ಬೃಹತ್ ನಕ್ಸಲ್ ನಿಗ್ರಹ ಕಾರ್ಯಾಚರಣೆ ಎಂದು ಬಣ್ಣಿಸಲಾಗುತ್ತಿದೆ.

ಇದಕ್ಕಾಗಿ ಸಿ.ಆರ್.ಪಿ.ಎಫ್ ಮತ್ತು ಛತ್ತೀಸಗಢ ಪೊಲೀಸರು ನಡೆಸಿದ್ದು ಅತ್ಯಂತ ನಿಖರ ಕಾರ್ಯಾಚರಣೆ. ಕಗ್ಗತ್ತಲ ದಂಡಕಾರಣ್ಯವೆಂದೇ ಹೆಸರಾಗಿರುವ, ಯಾರೂ ಭೇದಿಸಲು ಸಾಧ್ಯವಿಲ್ಲವೆಂದೇ ಭಾವಿಸಿರುವ ಕರೇಗಟ್ಟ ಬೆಟ್ಟ ಸಾಲುಗಳಲ್ಲಿ ಮಾವೋವಾದಿಗಳು ತಮ್ಮದೇ ಭದ್ರಕೋಟೆ ಕಟ್ಟಿಕೊಂಡಿದ್ದರು. ಆ ಕೋಟೆಯಲ್ಲಿ ನಕ್ಸಲರು ಯಾವತ್ತೆಂದರೆ ಯಾವತ್ತೂ ಸುರಕ್ಷಿತರು. ಹಾಗೆಂದು ಸ್ಥಳೀಯರೂ ನಂಬಿದ್ದರು. ಆದರೆ ಭದ್ರತಾ ಪಡೆಯ ಈ ಆಪರೇಷನ್ ಎಲ್ಲವನ್ನೂ ಹುಸಿಗೊಳಿಸಿ ಭರ್ಜರಿ ಯಶಸ್ಸನ್ನು ಸಾಧಿಸಿದೆ.

ಈ ಆಪರೇಷನ್ ನಲ್ಲಿ ಸತ್ತಿದ್ದು 31 ಮಾವೋವಾದಿ ಉಗ್ರರು. ವಶಪಡಿಸಿಕೊಂಡಿದ್ದು 450ಕ್ಕೂ ಹೆಚ್ಚು ಸ್ಪೋಟಕಗಳು ಮತ್ತು 40 ಆಯುಧಗಳನ್ನು. ಇನ್ನೊಂದು ಮೂಲದ ಪ್ರಕಾರ ಎನ್ಕೌಂಟರ್ ನಡೆದ ಜಾಗದಲ್ಲಿ ಸಿಕ್ಕ ಮದ್ದುಗುಂಡುಗಳು, ಸ್ಫೋಟಕ ಸಾಧನಗಳು ಅಪಾರ ಪ್ರಮಾಣದ್ದು. ಇಷ್ಟಲ್ಲದೆ 12 ಸಾವಿರ ಕೆಜಿ ಇತರ ಸಾಮಗ್ರಿಗಳೂ ಇದ್ದವು. ಅವುಗಳಲ್ಲಿ ಔಷಧಿಗಳು, ಎಲೆಕ್ಟ್ರಿಕ್ ಸಾಧನಗಳು ಸೇರಿವೆ.

ಭಾರೀ ಹಿನ್ನೆಡೆ

ಈ ಕಾರ್ಯಾಚರಣೆಯೂ ಸೇರಿದಂತೆ ಕಳೆದ ಒಂದು ವರ್ಷದಲ್ಲಿ ಮಾವೋವಾದಿ ಉಗ್ರ ಸಂಘಟನೆಯ ಬೆನ್ನುಮೂಳೆ ಮುರಿಯುವ ಕೆಲಸವನ್ನು ಭದ್ರತಾಪಡೆ ಮಾಡುತ್ತ ಬಂದಿದೆ. 2024ರಲ್ಲಿ 159 ಮಾವೋವಾದಿ ಕೇಡರ್ ಗಳನ್ನು ಹತ್ಯೆಮಾಡಲಾಗಿದೆ. ಇದನ್ನು ಭಾರತದಲ್ಲಿ ಮಾವೋವಾದಿ ಉಗ್ರಗಾಮಿ ಸಂಘಟನೆಗೆ ಆಗಿರುವ ಬಹಳ ದೊಡ್ಡ ಹಿನ್ನಡೆ ಎಂದೇ ಭಾವಿಸಲಾಗಿದೆ.

ದೇಶದ ಉಳಿದ ಭಾಗಗಳಲ್ಲಿ ನಕ್ಸಲರ ಸಂಖ್ಯೆ ಕಡಿಮೆಯಾಗುತ್ತ ಸಾಗಿದ್ದರೂ ಛತ್ತೀಸಗಢದ ದಕ್ಷಿಣ ಭಾಗದಲ್ಲಿ ಅವರ ಕೋಟೆ ಭದ್ರವಾಗಿತ್ತು. ಅದಕ್ಕೆ ಕಾರಣ ಸಂಘಟನೆಯ ಹಿಂದೆ ಇದ್ದ ಪ್ರಭಾವಿ ಹಾಗೂ ಸೈದ್ಧಾಂತಿಕ ಹಿನ್ನೆಲೆಯ ನಾಯಕರು. ಛತ್ತೀಸಗಢದಲ್ಲಿಯೂ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಅದು ಇತ್ತೀಚೆಗೆ ನಾಲ್ಕಕ್ಕೆ ಇಳಿದಿತ್ತು. ಜಾರ್ಖಂಡ್ ಮತ್ತು ಮಹಾರಾಷ್ಟ್ರದಲ್ಲಂತೂ ಅದೂ ತಲಾ ಒಂದು ಜಿಲ್ಲೆಗೆ ಸೀಮಿತವಾಗಿತ್ತು ಎಂದು ಕಳೆದ ತಿಂಗಳು ಕೇಂದ್ರ ಸರ್ಕಾರ ಹೊರಡಿಸಿದ್ದ ಪ್ರಕಟಣೆಯಲ್ಲಿ ತಿಳಿಸಿತ್ತು.

1960ರ ದಶಕದ ಕೊನೆಯ ಭಾಗದಲ್ಲಿ ಬಂಗಾಲದಲ್ಲಿ ಹುಟ್ಟಿಕೊಂಡ ಈ ಎಡಪಂಥೀಯ ತೀವ್ರಗಾಮಿ ಸಂಘಟನೆ ಇತ್ತೀಚಿನ ದಿನಗಳಲ್ಲಿ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಹಾವಳಿಯನ್ನು 2026ರ ಮಾರ್ಚ್ 31ರೊಳಗೆ ಸಂಪೂರ್ಣವಾಗಿ ಹತ್ತಿಕ್ಕಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡುವು ವಿಧಿಸಿದ್ದಾರೆ.

ಅಂತಿಮ ಗಡುವು

ಸರ್ಕಾರದ ಒತ್ತಡ ಹೆಚ್ಚುತ್ತ ಹೋದ ಹಾಗೆ ಇತ್ತೀಚಿನ ವರ್ಷಗಳಲ್ಲಿ ನಕ್ಸಲರ ಶರಣಾಗತಿಯ ಸಂಖ್ಯೆಯೂ ಹೆಚ್ಚಿದೆ. ಕಳೆದ ವರ್ಷ 928ರಷ್ಟು ನಕ್ಸಲರು ಶಸ್ತ್ರತ್ಯಾಗ ಮಾಡಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು. ಈ ಬಾರಿ ಏಪ್ರಿಲ್ ತನಕ 718 ಮಾವೋವಾದಿಗಳು ಶರಣಾಗಿದ್ದಾರೆ ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಇವೆಲ್ಲ ಬೆಳವಣಿಗೆಯನ್ನು ಗಮನಿಸಿದರೆ 2026ರ ಮಾರ್ಚ್ 31ರ ಗಡುವಿನ ಹೊತ್ತಿಗೆ ದೇಶದಲ್ಲಿ ನಕ್ಸಲ್ ಚಳವಳಿಯ ಅಂತ್ಯಕ್ಕೆ ಕೊನೆಯ ಮೊಳೆ ಹೊಡೆಯುವುದು ನಿಶ್ಚಿತವೆಂದು ಕಾಣುತ್ತದೆ.

ಇವೆಲ್ಲದ ನಡುವೆ ಇತ್ತೀಚಿನ ದಿನಗಳಲ್ಲಿ ಕದನ ವಿರಾಮ ಮತ್ತು ಮಾತುಕತೆಗೆ ಮುಂದಾಗುವಂತೆ ಮಾವೋವಾದಿ ಗುಂಪುಗಳಿಗೆ ಐದಾರು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಹಾಗಿದ್ದೂ ನಕ್ಸಲ್ ವಿರೋಧಿ ಕಾರ್ಯಾಚರಣೆ ಮಾತ್ರ ನಿಂತಿಲ್ಲ. ಅದು ಛತ್ತೀಸಗಢ, ಒಡಿಶಾ, ಜಾರ್ಖಂಡ್, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಈಗಲೂ ಚಾಲ್ತಿಯಲ್ಲಿದೆ.

ಸುದೀರ್ಘ ಇತಿಹಾಸ

ಎಡಪಂಥೀಯ ಉಗ್ರವಾದಕ್ಕೆ ಉಜ್ವಲವಾದ ಭವಿಷ್ಯವೇನೋ ಇಲ್ಲದೇ ಇರಬಹುದು, ಆದರೆ ಅದಕ್ಕೆ ಸುದೀರ್ಘವಾದ ಇತಿಹಾಸವಂತೂ ಇದ್ದೇ ಇದೆ.

ಕಮ್ಯುನಿಸ್ಟ್ ಮುಖ್ಯವಾಹಿನಿಯಲ್ಲಿನ ಮಾವೋವಾದಿ ಹಿಂಸಾತ್ಮಕ ಪ್ರವಾಹವು ಕಳೆದ ಕೆಲವು ದಶಕಗಳ ಅವಧಿಯಲ್ಲಿ ಅನೇಕ ಬಾರಿ ತನ್ನ ದಿಕ್ಕನ್ನೂ, ಸ್ವರೂಪವನ್ನೂ ಬದಲಿಸಿಕೊಂಡಿದೆ. ಬುಡಕಟ್ಟು ಸಮುದಾಯಗಳು ಮತ್ತು ರೈತರಿಂದ ಸೆಳೆಯಲ್ಪಟ್ಟ ಹಲವಾರು ಗುಂಪುಗಳು ಒಗ್ಗಟ್ಟಾಗಿದ್ದವು ಎಂಬುದು ನಿಜವಾದರೂ ಅವುಗಳಿಗೆ ಸುಸಂಬದ್ಧ ಸಿದ್ಧಾಂತಗಳಿಂದ ಒಂದುಗೂಡಿರಲಿಲ್ಲ. ಬದಲಾಗಿ ತಮ್ಮ ಸಶಸ್ತ್ರ ಹೋರಾಟ ಮತ್ತು ಅಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಗುರಿಗಳಿಂದ ಒಂದಾಗಿದ್ದವು.

2014ರಲ್ಲಿ ಮಾವೋವಾದಿ ಉಗ್ರಗಾಮಿ ಸಂಘಟನೆಯ ಹಿರಿಯ ಕಮಾಂಡರ್ ಸಂಬಾಲ್ ರವೀಂದರ್ ಸರ್ಕಾರದ ಮುಂದೆ ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಮರಳಿದ್ದ. ಯಾಕೆಂದರೆ ಕಮ್ಯುನಿಸ್ಟ್ ದಂಗೆಯ ಬಗ್ಗೆ ತನಗೆ ಭ್ರಮನಿರಸನವಾಗಿದೆ ಎಂದು ಆತ ಹೇಳಿಕೊಂಡಿದ್ದು ವರದಿಯಾಗಿತ್ತು.

ಈ ಕ್ರಾಂತಿಗೆ ಅರ್ಥವಿಲ್ಲ

“ಭಾರತದಲ್ಲಿ ಮಾವೋವಾದಿ ಮಾದರಿಯ ಕ್ರಾಂತಿ ಇನ್ನು ಮುಂದೆ ಸಾಧ್ಯವಿಲ್ಲದ ಕೆಲಸ ಎಂಬುದನ್ನು ಅರ್ಥಮಾಡಿಕೊಂಡ ಆತ ಸರ್ಕಾರ ಕೊಟ್ಟ ಸುಮಾರು 25ಲಕ್ಷ ರೂ.ಗಳಷ್ಟು ಭಾರೀ ಪುನರ್ವಸತಿ ಪ್ಯಾಕೇಜ್ ಸ್ವೀಕರಿಸಿ ತೆಲಂಗಾಣದ ಥಮಡಪೆಲ್ಲಕ್ಕೆ ಮರಳಿದ್ದ. 2016ರಲ್ಲಿ ಆತನನ್ನು ಆತನ ಮೂರು ಎಕರೆ ಹತ್ತಿ ಬೆಳೆಯುವ ಕೃಷಿಭೂಮಿಯಲ್ಲಿ ಸಂದರ್ಶನ ಮಾಡಿದ್ದೆ. ತನ್ನ 50ರ ವಯಸ್ಸಿನಲ್ಲಿ ಬದುಕನ್ನು ಪುನರಾರಂಭಿಸಲು ಅವಕಾಶ ಮಾಡಿಕೊಟ್ಟ ತನ್ನ ಕುಟುಂಬ ಮತ್ತು ರಾಜ್ಯ ಸರ್ಕಾರಕ್ಕೆ ಚಿರಋಣಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದ” ಎಂಬುದನ್ನು ಟಿ.ಆರ್.ಟಿ ವರ್ಲ್ಡ್ ಪತ್ರಿಕೆಯಲ್ಲಿ ಸುವೋಜಿತ್ ಬಗ್ಚಿ ಬರೆದುಕೊಂಡಿದ್ದರು.

ಎಡಪಂಥೀಯ ತೀವ್ರಗಾಮಿ ಚಳವಳಿಗಳನ್ನು ಹತ್ತಿಕ್ಕಲು ಸರ್ಕಾರ ಮುಂದಾದಾಗಲೆಲ್ಲ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಹುಯಿಲೆಬ್ಬಿಸುತ್ತಾರೆ. ಇಂತಹ ಆರೋಪಗಳಲ್ಲಿ ಹಿಂಸೆ, ಕಿರುಕುಳ, ಕಾನೂನುಬಾಹಿರ ಹತ್ಯೆಗಳನ್ನು ಕೈಗೊಂಡಿರುವುದು ಸೇರಿದೆ.

Read More
Next Story